





ಪುತ್ತೂರು: ಲಕ್ಷಾಂತರ ಮಂದಿ ಸೇರುವ, ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಜಾತ್ರೆ ಗದ್ದೆಯಲ್ಲಿ ಪೊಲೀಸ್ ಬಂದೋಬಸ್ತ್ ಜೊತೆಗೆ ಮೊಬೈಲ್ ಸಿಸಿ ಕ್ಯಾಮರಾ ಕಣ್ಗಾವಲು ಕೂಡಾ ಇರಲಿದೆ. ಈಗಾಗಲೇ 44ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಶೇಟ್ ಇಲೆಕ್ಟ್ರೋನಿಕ್ಸ್ ಸಂಸ್ಥೆಯಿಂದ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ನಿರ್ವಹಣೆ ನಡೆಯುತ್ತಿದೆ.


ಏ.16ರಂದು ಬಲ್ನಾಡು ಶ್ರೀ ದಂಡಾಯಕ ಉಳ್ಳಾಲ್ತಿ ದೈವಗಳ ಭಂಡಾರ ಬರುವ ಸಂದರ್ಭ ಮತ್ತು ಏ.17ರ ಶ್ರೀ ದೇವರ ದರ್ಶನ ಬಲಿ ಮತ್ತು ರಾತ್ರಿ ನಡೆಯುವ ಬ್ರಹ್ಮರಥೋತ್ಸವ ಸಂದರ್ಭ ದೇವಳದ ಗದ್ದೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರಲಿದ್ದಾರೆ. ಈ ಸಂದರ್ಭ ಸೂಕ್ತ ಭದ್ರತೆಯ ದೃಷ್ಟಿಯಿಂದ ದೇವಳದ ಮೂರು ಕಡೆಗಳಲ್ಲಿರುವ ಪ್ರವೇಶ ದ್ವಾರ, ಕೊಂಬೆಟ್ಟು ರಸ್ತೆ, ನೆಲ್ಲಿಕಟ್ಟೆ ರಸ್ತೆ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ರಸ್ತೆ, ಮಹಾಲಿಂಗೇಶ್ವರ ದೇವಳದ ಕೆರೆಯ ಬಳಿಯ ರಸ್ತೆ, ಮುಖ್ಯರಸ್ತೆ ಸಹಿತ ದೇವಳದ ಗದ್ದೆಯ ಹಲವು ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಎಲ್ಲಾ ಸಿಸಿ ಕ್ಯಾಮರಾಗಳನ್ನು ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯವರು ಮೊಬೈಲ್ ಕಂಟ್ರೋಲ್ ರೂಮ್‌ನಲ್ಲಿ ನಿಯಂತ್ರಣ ಮಾಡಿಕೊಂಡಿರುತ್ತಾರೆ. ದೇವಳದ ಬ್ರಹ್ಮರಥ ಮಂದಿರದ ಬಳಿ ವಾಹನವೊಂದರಲ್ಲಿ ಎಲ್ಲಾ ಸಿಸಿ ಕ್ಯಾಮರಾಗಳ ಕಂಟ್ರೋಲ್ ರೂಮ್ ವ್ಯವಸ್ಥೆ ಕಲ್ಪಿಸಲಾಗಿದೆ.





ಏ.16 ಮತ್ತು 17ರಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಪಟ್ಟಣದಲ್ಲಿ ಸಂಚಾರ ವ್ಯವಸ್ಥೆಗೆ ಆಯಾ ಕಡೆ ಬದಲಾವಣೆ ಮಾಡಲಾಗಿದ್ದು, ಕೆಲವು ಕಡೆ ಏಕಮುಖ ಸಂಚಾರ, ನೋ ಎಂಟ್ರಿ ಸರಿಯಾಗಿ ಪಾಲಿಸುವ ನಿಟ್ಟಿನಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಪಾರ್ಕಿಂಗ್, ವೀರಮಂಗಲಕ್ಕೂ ಸಿಸಿ ಕ್ಯಾಮರಾ
ಜಾತ್ರೆಗೆ ಬರುವ ಭಕ್ತರ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ವಿವಿಧ ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದೆ.ಅಲ್ಲಿಯೂ 9 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಶ್ರೀ ದೇವರ ಅವಭೃತ ಸ್ನಾನ ನಡೆಯಲಿರುವ ವೀರಮಂಗಲ ಕುಮಾರಧಾರ ಹೊಳೆಯ ಬಳಿಯೂ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಒಟ್ಟಿನಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಪುತ್ತೂರು ಜಾತ್ರೆ ವಿಜ್ರಂಭಣೆಯಿಂದ ನಡೆಯಬೇಕು.
ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು










