ಪುತ್ತೂರು: ಪೊಲೀಸ್ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕ ಪುರಸ್ಕೃತರಾಗಿರುವ ಸುರತ್ಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್‌ಪ್ರಸಾದ್ ಅವರು ಮಣಿಪಾಲ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪುತ್ತೂರು ಮೂಲದವರಾಗಿರುವ ಮಹೇಶ್‌ಪ್ರಸಾದ್ ಅವರು ಹಾವೇರಿ, ಬೆಂಗಳೂರು, ಹಿರಿಯಡ್ಕ, ಕೋಟ, ಬಂಟ್ವಾಳ ಮತ್ತು ಶೃಂಗೇರಿಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು.ಇ ನ್ಸ್‌ಪೆಕ್ಟರ್ ಆಗಿ ಭಡ್ತಿ ಹೊಂದಿದ ಬಳಿಕ ಕಾರವಾರ, ಮಣಿಪಾಲ, ಪುತ್ತೂರು ಮತ್ತು ಕಾಪು ಠಾಣೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಸುರತ್ಕಲ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಮಂಗಳೂರು ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಮಹೇಶ್ ಪ್ರಸಾದ್‌ರವರು ಉಳ್ಳಾಲದಲ್ಲಿ ಕಾರ್ಯಾಚರಣೆ ನಡೆಸಿ, ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಬಂಽಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವೃತ್ತಿಯಲ್ಲಿನ ಇವರ ಕಾರ್ಯದಕ್ಷತೆಯನ್ನು ಗಮನಿಸಿ ಉಗ್ರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದಿಂದ ನೀಡಲಾಗುವ ಪುರಸ್ಕಾರಕ್ಕೆ ಇವರು ಪಾತ್ರರಾಗಿದ್ದರು. ಇತ್ತೀಚೆಗೆ ನಡೆದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಿದ ಸಾಧನೆಗಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದರು.
ಪುತ್ತೂರು ಮೂಲದವರಾಗಿರುವ ಮಹೇಶ್‌ಪ್ರಸಾದ್‌ರವರು ಪೊಲೀಸ್ ಇಲಾಖೆಯಲ್ಲಿದ್ದ ರಘು ನಾಯ್ಕ್ ಮತ್ತು ಪುಷ್ಪಲತಾ ದಂಪತಿಯ ಪುತ್ರ. ಪ್ರಸ್ತುತ ಇವರು ಉಡುಪಿ ಜಿಲ್ಲೆಯ ಬ್ರಹ್ಮಾವರದ ಚೆರ್ಕಾಡಿ ನಿವಾಸಿಯಾಗಿದ್ದಾರೆ. ಸುರತ್ಕಲ್ ಠಾಣೆಯಿಂದ ಬೀಳ್ಕೊಡುವ ವೇಳೆ ಮಹೇಶ್ ಪ್ರಸಾದ್ ಅವರಿಗೆ ಹೂಮಳೆ ಸುರಿಸಿ ಗೌರವಿಸಲಾಗಿದೆ.