ಪುತ್ತೂರು: ವಿಟ್ಲ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಾಗಿರುವುದು ಮಾಧ್ಯಮದ ಮೂಲಕ ತಿಳಿದು ಬಂತು. ಇದೊಂದು ಸುಳ್ಳು ಆರೋಪವಾಗಿದ್ದು ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣಕ್ಕೆ ಸಿದ್ಧನಿದ್ದೇನೆ ಎಂದು ಹಿಂದೂ ಸಂಘಟನೆ ಮುಖಂಡ ಮುರಳಿಕೃಷ್ಣ ಹಸಂತಡ್ಕ ಹೇಳಿದ್ದಾರೆ.
ನಾನು ಮತ್ತು ಬಂಟ್ವಾಳ ತಾಲೂಕಿನ ಪುಣಚದ ನಡ್ಸಾರ್ ಹರೀಶ್ ಭಟ್ ಅವರ ಜೊತೆಯಲ್ಲಿ ಪೆಟ್ರೋಲ್ ಪಂಪ್ ಒಂದು ವರ್ಷದ ಹಿಂದೆ ಆರಂಭ ಮಾಡಿದ್ದೆ. ಅದರಲ್ಲಿ ಹಣಕಾಸಿನ ವಿಚಾರದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಅವರ ವೈಯುಕ್ತಿಕ ನಡವಳಿಕೆ ಸರಿ ಹೊಂದದ ಕಾರಣ ಆ ಪೆಟ್ರೋಲ್ ಪಂಪ್ ಅನ್ನು ಬಂದ್ ಮಾಡುವ ನಿಟ್ಟಿನಲ್ಲಿ ಏ.15ರಂದು ನಾನು ಮತ್ತು ನನ್ನ ವಾಹನ ಚಾಲಕ ಮನೋಜ್ ಜೊತೆ ಹರೀಶ್ ಭಟ್ ಅವರ ಮನೆಗೆ ತೆರಳಿದ್ದು ಹೌದು. ಅಲ್ಲಿ ಅವರಲ್ಲಿ ಉತ್ತಮ ಬಾಂಧವ್ಯದಿಂದ ಮಾತನಾಡಿ ಅವರು ಕೊಟ್ಟ ಬಾಯಾರಿಕೆ ಕುಡಿದು, ಅವರ ತಂದೆ, ಪತ್ನಿಯಲ್ಲಿ ಚೆನ್ನಾಗಿ ಮಾತನಾಡಿ ಬಂದಿದ್ದೆ. ಸಂಜೆ ಹರೀಶ್ ಭಟ್ ಅವರು ಸಹ ಪುತ್ತೂರಿಗೆ ಬಂದಿದ್ದು 4 ಗಂಟೆಯಿಂದ 7.30ರ ತನಕ ನಮ್ಮ ವ್ಯವಹಾರದ ವಿಚಾರವಾಗಿ ಮಾತುಕತೆ ಮಾಡಿದ್ದೇವೆ. ಇದೀಗ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ನಾನು ತಲುವಾರು ಹಿಡಿದು ಬೆದರಿಕೆಯೊಡ್ಡಿರುವುದು ಸತ್ಯ ಎಂದಾದರೆ ಅವರು ಹೇಳಿದ ಜಾಗಕ್ಕೆ ಬಂದು ಪ್ರಮಾಣ ಮಾಡಲು ಸಿದ್ದನಿದ್ದೇನೆ. ನೀವು ಒಳ್ಳೆಯ ಮನುಷ್ಯರು ಅಂತಾದರೆ ನೀವು ಒಳ್ಳೆಯ ಜಾಗಕ್ಕೆ ಬಂದು ಪ್ರಮಾಣ ಮಾಡಿ. ಇವತ್ತು ಈ ಘಟನೆಗೆ ಸಂಬಂಧಿಸಿ ವಿಘ್ನ ಸಂತೋಷಿಗಳು ಸಾಮಾಜಿಕ ಜಾಲತಾಣದಲ್ಲಿ ಏನೆಲ್ಲಾ ಬರೆಯುತ್ತಿದ್ದಾರೆ. ನಾನು 29 ವರ್ಷಗಳಿಂದ ಹಿಂದೂ ಸಂಘಟನೆಯಲ್ಲಿ ಅನೇಕ ಕಾರ್ಯ ಮಾಡುತ್ತಾ ಬಂದಿದ್ದೇನೆ. 29 ವರ್ಷಗಳಿಂದ ಈ ತನಕ ವ್ಯವಹಾರಿಕ ಹಾಗೂ ಸಾಮಾಜಿಕ ಸಂಘಟನೆಯಲ್ಲಿ ನೂರಕ್ಕೆ ನೂರು ಸ್ವಚ್ಚವಾಗಿದ್ದೇನೆ. ಪೆಟ್ರೋಲ್ ಪಂಪ್ನ ವಿಚಾರವಾಗಿ ಯಾರಿಗಾದರೂ ಪ್ರಶ್ನೆ ಇದ್ದರೆ ನೇರವಾಗಿ ನನ್ನನ್ನು ಕೇಳಲಿ ಎಂದು ಮುರಳಿಕೃಷ್ಣ ಹಸಂತಡ್ಕ ಅವರು ಸ್ಪಷ್ಟನೆ ನೀಡಿದ್ದಾರೆ.