ಅಂದು ಪುತ್ತೂರು ಬಂದ್ಗೆ ಕಾರಣವಾಗಿದ್ದ ಯೋಜನೆ
ಈಗ ಕೇಂದ್ರ ತಂಡದಿಂದಲೂ ಆಕ್ಷೇಪಣೆ
ಬರಹ:ರಾಘವ ಶರ್ಮ ನಿಡ್ಲೆ
ಪಶ್ಚಿಮ ಘಟ್ಟಗಳಿಂದ ಹರಿದು ಬರುವ ನೇತ್ರಾವತಿ ನದಿ ನೀರನ್ನು ತಿರುಗಿಸಿ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ ಸೇರಿ ರಾಜ್ಯದ ಬಯಲು ಸೀಮೆಗಳಿಗೆ ಸರಬರಾಜು ಮಾಡುವ ಎತ್ತಿನಹೊಳೆ ಯೋಜನೆ ಕಾರ್ಯಸಾಧುವಲ್ಲ ಎಂದು ಪರಿಸರವಾದಿಗಳು ವಾದಿಸಿದ್ದರೂ, ರಾಜ್ಯ ಸರ್ಕಾರಗಳು (ಬಿಜೆಪಿ, ಕಾಂಗ್ರೆಸ್ ಎರಡೂ) ಹಠಕ್ಕೆ ಬಿದ್ದು ಈ ಯೋಜನೆ ಜಾರಿಗೆ ಮುಂದಾದವು. ಯೋಜನೆ ವಿರೋಧಿಸಿದ್ದ ದಕ್ಷಿಣ ಕನ್ನಡದ ಜನಪ್ರತಿನಿಧಿಗಳಲ್ಲಿ ಹಲವರು ಉಲ್ಟಾ ಹೊಡೆದರು, ಮತ್ತೆ ಕೆಲವರು ಮೌನಕ್ಕೆ ಜಾರಿದರು. ಈ ಯೋಜನೆ ಖಂಡಿಸಿ ಪುತ್ತೂರು ತಾಲೂಕು ಸೇರಿ ದ.ಕ ಜಿಲ್ಲೆಯಾದ್ಯಂತ ಪ್ರತಿಭಟನೆ, ಮೆರವಣಿಗೆ ಮತ್ತು ಬಂದ್ ನಡೆದಿತ್ತು. ಇದೀಗ ಕೇಂದ್ರದ ತಂಡ ಕೂಡ ಈ ಯೋಜನೆ ಜಾರಿಯಲ್ಲಿ ಆಗಿರುವ ನಿಯಮೋಲ್ಲಂಘನೆ ಹಾಗೂ ಪರಿಸರ ನಾಶದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಎತ್ತಿನಹೊಳೆ ಯೋಜನೆಯಲ್ಲಿ ಅಕ್ರಮಗಳ ವಾಸನೆ ಹೊಸದೇನಲ್ಲ. ಈಗ ಮತ್ತೊಂದಿಷ್ಟು ನಿಯಮೋಲ್ಲಂಘನೆ, ಅಕ್ರಮ ನಡೆದಿರುವ ಅಂಶಗಳು ಬೆಳಕಿಗೆ ಬಂದಿವೆ. ಯೋಜನೆ ಹಾದು ಹೋಗುವ ತುಮಕೂರು, ಹಾಸನ ಅರಣ್ಯ ಪ್ರದೇಶಗಳಿಗೆ ಏಪ್ರಿಲ್ 7ರಿಂದ 9ರ ತನಕ ಭೇಟಿ ನೀಡಿದ್ದ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ವ್ಯಾಪಕ ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ. ರಾಜ್ಯ ಸರ್ಕಾರ ವಿವಿಧ ನಿಯಮಗಳ ಉಲ್ಲಂಘನೆ ಮಾಡಿ, ಕೇಂದ್ರ ಪರಿಸರ, ಅರಣ್ಯ ಇಲಾಖೆ ಒಪ್ಪಿಗೆ ಪಡೆಯದೆಯೇ ಯೋಜನೆ ಮುಂದುವರಿಸಿದೆ ಎಂಬುದು ಗೊತ್ತಾಗಿದೆ. ಇದನ್ನು ಕೇಂದ್ರ ತಂಡವೇ ತನ್ನ ವರದಿಯಲ್ಲಿ ಹೇಳಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಈ ಯೋಜನೆಯ ಕಾರ್ಯಸಾಧ್ಯತೆಯ ಕುರಿತ ಆಕ್ಷೇಪಣೆಗಳನ್ನು ಉಲ್ಲೇಖಿಸಿರುವ ಕೇಂದ್ರ ತಂಡ, ಯೋಜನೆ ಹಂತ-1ರಿಂದಾಗಿ ಈ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದಲ್ಲದೆ, ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳು ನಾಶವಾಗಿವೆ. ಸರ್ಕಾರದ ಹೇಳಿಕೊಂಡಿರುವ ಬಯಲು ಸೀಮೆಯ ವಿವಿಧ ಭಾಗಗಳಿಗೆ ವಾಸ್ತವದಲ್ಲಿ ಇಲ್ಲಿಂದ ನೀರು ಪೂರೈಸಲು ಸಾಧ್ಯವಿದೆಯೇ ಎಂಬ ಪ್ರಶ್ನೆಗೂ ಸರ್ಕಾರದಿಂದ ಉತ್ತರ ಬಂದಿಲ್ಲ ಎಂದು ಒತ್ತಿಹೇಳಿದೆ.
ಕೇಂದ್ರ ಅರಣ್ಯ ಸಚಿವಾಲಯದ ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡದ ವರದಿಯನ್ನು ಅನುಮೋದಿಸಿ ಕೇಂದ್ರಕ್ಕೆ ಶಿಫಾರಸು ಸಲ್ಲಿಸಿರುವ ಕೇಂದ್ರ ಅರಣ್ಯ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿಯ ಡಿಡಿಜಿಎಫ್ (ಡೆಪ್ಯುಟಿ ಡೈರೆಕ್ಟರ್ ಜನರಲ್ ಆಫ್ ಫಾರೆಸ್ಟ್) ಸೆಂಥಿಲ್ ಕುಮಾರ್, ನೀರು ತಿರುಗಿಸುವಿಕೆಗೆ ಬಳಸಲು ಉದ್ದೇಶಿಸಲಾದ ಒಟ್ಟು 173.30 ಹೆಕ್ಟೇರ್ ಭೂಮಿಯಲ್ಲಿ ಹಾಸನ ವಿಭಾಗದ 108 ಹೆಕ್ಟೇರ್ ಅರಣ್ಯ ಭೂಮಿಯನ್ನು ಕಾಲುವೆ ನಿರ್ಮಾಣಕ್ಕೆ ಬಳಸಲಾಗಿದೆ. ಆದರೆ, ಇದು 1980ರ ಸಂರಕ್ಷಣ ಮತ್ತು ಸಂವರ್ಧನೆ ಅಧಿನಿಯಮದ ಪೂರ್ಣ ಉಲ್ಲಂಘನೆ ಎಂದಿದ್ದಾರೆ.
ಕೇಂದ್ರ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳುವ ಮುನ್ನವೇ ಕಾಲುವೆ ನಿರ್ಮಾಣದ ಕಾಮಗಾರಿ ಆರಂಭಿಸಲಾಗಿದೆ ಎಂದು ಕೇಂದ್ರ ತಂಡದದ ಸ್ಥಳ ಪರಿಶೀಲನಾ ವರದಿಯಲ್ಲಿ ದಾಖಲಿಸಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ 13.93 ಹೆಕ್ಟೇರ್ ಅರಣ್ಯ ಪ್ರದೇಶವನ್ನೂ ನೀರು ತಿರುಗಿಸುವ ಯೋಜನೆಗೆ ಬಳಸಿಕೊಳ್ಳಲಾಗಿದೆ. ಇಲ್ಲೂ ಕೇಂದ್ರ ಅರಣ್ಯ ಇಲಾಖೆಯ ಷರತ್ತುಗಳನ್ನು ಗಾಳಿಗೆ ತೂರಲಾಗಿದೆ ಎನ್ನುವುದು ಸ್ಥಳ ಶೋಧನೆಯಲ್ಲಿ ಕಂಡುಬಂದಿದೆ ಎಂದು ದೂರಲಾಗಿದೆ.
ಹಾಸನ ಭಾಗದ ಅರಣ್ಯ ಭೂಮಿಯಲ್ಲೇ ಯೋಜನೆಯ ಅವಶೇಷಗಳನ್ನು ಡಂಪ್ ಮಾಡಲಾಗಿದೆ. ವಾಸ್ತವದಲ್ಲಿ ಇದಕ್ಕಾಗಿ 2000 ಹೆಕ್ಟೇರ್‌ಗಿಂತಲೂ ಅರಣ್ಯೇತರ ಭೂಮಿಯ ಅವಶ್ಯಕತೆಯಿದೆ. ನೀರು ತಿರುಗಿಸುವುದಕ್ಕಾಗಿ ಅರಣ್ಯ ಪ್ರದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ, ಉದ್ದದ, ಸಂರಕ್ಷಣೆಯಿಲ್ಲದ ಕಾಲುವೆ ನಿರ್ಮಾಣ ಮಾಡುವುದು ವನ್ಯಜೀವಿಗಳ ಸಂಚಾರ ಹಾಗೂ ಬದುಕಿಗೆ ಸಂಚಕಾರ ತರಬಹುದು. ಹೀಗಾಗಿ, ಇದಕ್ಕೆ ವಿವರವಾದ ವನ್ಯಜೀವಿ ಉಪಶಮನ ಯೋಜನೆಯನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಸ್ಥಳ ಪರಿಶೀಲನಾ ವರದಿಯಲ್ಲಿ ತಪಾಸಣಾ ಅಽಕಾರಿಯ ಶಿಫಾರಸು, ಆಕ್ಷೇಪಣೆಗಳಿಗೆ ರಾಜ್ಯ ಸರ್ಕಾರ ತೃಪ್ತಿಕರ ಸಮರ್ಥನೆ ನೀಡಿದ ನಂತರವೇ ಅರಣ್ಯ ಭೂಮಿ ಬಳಕೆಯ ಪ್ರಸ್ತಾವನೆಯನ್ನು ಸರ್ಕಾರ ಪರಿಗಣಿಸಬೇಕು. ಇಲ್ಲವಾದಲ್ಲಿ, ಅರಣ್ಯ ರಕ್ಷಣೆ ಅಧಿನಿಯಮದ ಅಡಿಯಲ್ಲಿ ಸೂಕ್ತ ಕ್ರಮ ಮತ್ತು ದಂಡ ಸಹ ವಿಧಿಸಬೇಕು ಎಂದು ಉನ್ನತಾಧಿಕಾರಿ ಸೆಂಥಿಲ್ ದಾಖಲಿಸಿದ್ದಾರೆ.
ಹಾಸನದಲ್ಲಿ ನೇತ್ರಾವತಿ ನೀರು ತಿರುಗಿಸುವ ಕಾಲುವೆ ನಿರ್ಮಾಣ ಸ್ಥಳ ಕಲ್ಲುಬಂಡೆಗಳಿಂದ ಕೂಡಿದೆ. ಇದಕ್ಕಾಗಿ ಸೋಟಗಳನ್ನು ನಡೆಸಬೇಕಿದೆ. ಆದರೆ, ಕಾಮಗಾರಿ ನಡೆಸುವ ಏಜೆನ್ಸಿಯಾದ ವಿಶ್ವೇಶ್ವರಯ್ಯ ಜಲ ನಿಗಮವು ಪರಿಸರ ಸಮ್ಮತಿಯನ್ನು ಈವರೆಗೆ ಪಡೆದುಕೊಂಡಿಲ್ಲ. ತುಮಕೂರು ವಿಭಾಗದಲ್ಲಿ ಕಾಲುವೆ ನಿರ್ಮಾಣದ ಸ್ಥಳ ಮರಶೆಟ್ಟಿ ಹಳ್ಳಿ ಮೀಸಲು ಅರಣ್ಯದಲ್ಲಿ ಹಾದು ಹೋಗುತ್ತದೆ. ಯೋಜನೆಗೆ 7500 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಆದರೆ, ಈ ಮರ ಕಡಿಯುವಿಕೆಯಿಂದ ಮರಗಳನ್ನು ಅವಲಂಬಿಸಿದ ವಿಶಿಷ್ಟ ಜೀವ ಪ್ರಬೇಧಗಳಿಗೆ ಹಾನಿಯಾಗುವುದಲ್ಲದೆ, ಒಟ್ಟಾರೆ ವನ್ಯಜೀವಿ ಸಂಪತ್ತಿಗೆ ತೊಂದರೆಯಾಗಲಿದೆ. ಅಲ್ಲದೆ, ಯೋಜನೆಯಿಂದ ಸೃಷ್ಟಿಯಾಗುವ ಅವಶೇಷಗಳು ಅರಣ್ಯ ನಾಶಕ್ಕೆ ದಾರಿ ಮಾಡಲಿದೆ. ಹೀಗಾಗಿ, ಜಲ ನಿಗಮ ಭೂಮಿಯ ಅಡಿಯಲ್ಲಿ ಸುರಂಗ ನಿರ್ಮಾಣ ಮಾಡುವ ಅಥವಾ ಪೈಪ್‌ಲೈನ್ ಹಾಕುವ ಬಗ್ಗೆ ಯೋಚನೆ ಮಾಡಬೇಕು ಎಂದು ಕೇಂದ್ರ ತಂಡ ಶಿಫಾರಸು ಮಾಡಿದೆ.
ಇದು ಕುಡಿಯಲೋ ನೀರಾವರಿಗೋ? ನೇತ್ರಾವತಿ ನದಿ ನೀರು ತಿರುವು ಯೋಜನೆ ಕುಡಿಯುವ ನೀರಿನ ಯೋಜನೆಯೇ ಅಥವಾ ನೀರಾವರಿ ಮತ್ತು ಕುಡಿಯುವ ಎರಡನ್ನೂ ಒಳಗೊಂಡ ಯೋಜನೆಯೇ ಎಂಬ ಬಗ್ಗೆ ಇದುವರೆಗೂ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿಲ್ಲ ಎಂದು ಕೇಂದ್ರ ತಂಡ ಅಭಿಪ್ರಾಯಪಟ್ಟಿದೆ. ನೀರಾವರಿಗಾಗಿ ಯೋಜನೆ ಬಳಸಿಕೊಳ್ಳಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮ ತಿಳಿಸಿದ್ದನ್ನು ಕೇಂದ್ರ ತಂಡ ಉಲ್ಲೇಖಿಸಿದೆ.
ಪುನರುಜ್ಜೀವನ ಪ್ರಸ್ತಾವವಿಲ್ಲ:
ಯೋಜನೆಯಿಂದ ಭೂಮಿ ಕಳೆದುಕೊಂಡ ಜನರ ಪುನರುಜ್ಜೀವನದ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಪ್ರಸ್ತಾವನೆ ಮಾಡಿಲ್ಲ. ಆದರೆ, ತೊಂದರೆಗೊಳಗಾದ, ಸ್ಥಳಾಂತರಗೊಂಡ ಜನರಿಗೆ ಪರಿಹಾರ ಹಣ ನಗದಲ್ಲಿ ನೀಡಲಾಗಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮ ತಿಳಿಸಿದ್ದರೂ, ಈ ಬಗ್ಗೆ ಹೆಚ್ಚಿನ ವಿವರಣೆಯನ್ನು ನೀಡಲಾಗಿಲ್ಲ ಎಂದು ಕೇಂದ್ರ ಶೋಧನಾ ತಂಡ ಹೇಳಿದೆ.
ನಿರ್ದೇಶನಗಳ ಪಾಲನೆಯಾಗಿಲ್ಲ:
ಬಂಡೆಗಳ ಸೋಟದಿಂದಾಗಿ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದೆ. ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡಿಲ್ಲ. ಪಶ್ಚಿಮ ಘಟ್ಟಗಳ ಮೇಲಿನ ಯೋಜನೆಯ ಪರಿಣಾಮಗಳ ಕುರಿತು ನವೀಕರಿಸಿದ ಮಾಹಿತಿ ನೀಡಲಾಗಿಲ್ಲ. 2023ರ ಜೂನ್ ತಿಂಗಳಲ್ಲಿ ಮೇಲ್ವಿಚಾರಣಾ ಸಮಿತಿಯ ನಿರ್ದೇಶನಗಳ ಬಹುಪಾಲು ನಿರ್ದೇಶನಗಳನ್ನು ಪಾಲಿಸಲಾಗಿಲ್ಲ. ಆದ್ದರಿಂದ, ವಿಶ್ವೇಶ್ವರಯ್ಯ ಜಲ ನಿಗಮ ಹಂತ 2 ಮತ್ತು ಮೇಲ್ವಿಚಾರಣಾ ಸಮಿತಿಯ ಎಲ್ಲಾ ನಿರ್ದೇಶನಗಳನ್ನು ಪಾಲಿಸಿದ ನಂತರವೇ ನದಿ ನೀರು ನಿರುವಿನ ಹೊಸ ಪ್ರಸ್ತಾವವನ್ನು ಪರಿಗಣಿಸಬಹುದು ಎಂದು ಶಿಫಾರಸು ಮಾಡಲಾಗಿದೆ.
ಅವಶೇಷಗಳ ವಿಲೇವಾರಿಯಾಗಲಿ:
ನದಿ ನೀರು ತಿರುಗಿಸುವ ಯೋಜನೆಗೆ 173 ಹೆಕ್ಟೇರ್ ಅರಣ್ಯ ಭೂಮಿ ಬೇಕೆಂದು ಹೇಳಿದ್ದರೂ, 103 ಹೆಕ್ಟೇರ್ ಭೂಪ್ರದೇಶವನ್ನು ಯೋಜನೆಯ ಅವಶೇಷ ಡಂಪ್ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಅಂದರೆ, ನದಿ ನೀರು ತಿರುಗಿಸುವ ಕಾಲುವೆಗೆ ಬೇಕಾಗಿರುವುದು 69 ಹೆಕ್ಟೇರ್ ಭೂಪ್ರದೇಶ ಮಾತ್ರ. ಯೋಜನೆಯ ಅವಶೇಷಗಳನ್ನು ಅರಣ್ಯೇತರ ಪ್ರದೇಶದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು ಎಂದು ಕರ್ನಾಟಕ ಅರಣ್ಯ ಇಲಾಖೆ ಈ ಹಿಂದೆ ಹೇಳಿತ್ತು. ಹೀಗಾಗಿ, ಕರ್ನಾಟಕ ಸರ್ಕಾರ ಇಡೀ ಯೋಜನಾ ವರದಿಯನ್ನು ಮರು ಪರಿಶೀಲಿಸಿ ಹೊಸದಾಗಿ ವರದಿ ಸಲ್ಲಿಸಬೇಕು ಮತ್ತು ಕಾಲುವೆ ನಿರ್ಮಾಣಕ್ಕೆ ಬಳಸುವ ಭೂಪ್ರದೇಶವನ್ನು ಆದಷ್ಟು ತಗ್ಗಿಸಬೇಕು. ಈಗಾಗಲೇ ಅರಣ್ಯದಲ್ಲಿ ಡಂಪ್ ಮಾಡಿರುವ ಅವಶೇಷಗಳನ್ನು ಬೇರೆಡೆಗೆ ವಿಲೇವಾರಿ ಮಾಡಬೇಕು ಎಂದು ಕೇಂದ್ರ ತಂಡದ ವರದಿಯಲ್ಲಿ ಸೂಚಿಸಲಾಗಿದೆ.
ವೆಚ್ಚ ರೂ. 23000 ಕೋಟಿ:
ಎತ್ತಿನಹೊಳೆ ಯೋಜನೆಗೆ ಈಗಿನ ಮಾರುಕಟ್ಟೆ ದರದ ಪ್ರಕಾರ ಸುಮಾರು ರೂ. 23000 ಕೋಟಿ ಖರ್ಚಾಗಲಿದೆ. ಮುಂದಿನ ದಿನಗಳಲ್ಲಿ ಈ ವೆಚ್ಚ ಇನ್ನೂ ಹೆಚ್ಚಾಗಬಹುದು. ಕೇಂದ್ರ ತಂಡದ ವರದಿ ಹಿನ್ನೆಲೆಯಲ್ಲಿ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಲ್ಲಿ ಭವಿಷ್ಯದಲ್ಲಿ ಯೋಜನಾ ವೆಚ್ಚ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ ಎನ್ನಲಾಗಿದೆ.
ಕಾಡಾನೆಗಳು ಕಾಲುವೆಗೆ ಬೀಳುವ ಆತಂಕ
ಹಾಸನ ಭಾಗದಲ್ಲಿ ಕಾಡಾನೆಗಳು ಹೆಚ್ಚಿವೆ. ಕಾಲುವೆಗೆ ಫೆನ್ಸಿಂಗ್ ಮಾಡುವ ಬಗ್ಗೆ ಯೋಜನೆ ಪ್ರಸ್ತಾವದಲ್ಲಿ ದಾಖಲಾಗಿಲ್ಲ. ಫೆನ್ಸಿಂಗ್ ಇಲ್ಲದಿದ್ದರೆ ಕಾಡಾನೆಗಳು ಕಾಲುವೆಗೆ ಬಿದ್ದು ಸಾಯುವ ಸಾಧ್ಯತೆಗಳಿವೆ. ಹೀಗಾಗಿ, ಇದನ್ನು ತಡೆಯಲು ಕಾಡಾನೆ ರಕ್ಷಣೆ ಯೋಜನೆಯನ್ನು ಸ್ಥಳೀಯ ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿ ರೂಪಿಸಬೇಕು ಎಂದು ಸಲಹೆ ನೀಡಲಾಗಿದೆ.
ನೇತ್ರಾವತಿ ನೀರು ಹಾಸನ, ತುಮಕೂರಿಗೆ ಮಾತ್ರವೇ?
ರಾಜ್ಯ ಸರ್ಕಾರದ ಯೋಜನೆಯ ಸಮಗ್ರ ಪ್ರಸ್ತಾವನೆಯನ್ನು ಸಲ್ಲಿಸಲು ಜಲ ನಿಗಮ ವಿಫಲವಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಹಾಸನ ಜಿಲ್ಲೆಗಳಿಗೆ ನೀರು ಪೂರೈಸುವ ಬಗ್ಗೆ ತಿಳಿಸಲಾಗಿದ್ದರೂ, ವಿವರವಾದ ಪ್ರಸ್ತಾವನೆಯಲ್ಲಿ ತುಮಕೂರು ಮತ್ತು ಹಾಸನ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡುವ ಬಗ್ಗೆಯಷ್ಟೇ ತಿಳಿಸಲಾಗಿದೆ.
ಭೂಕುಸಿತ ತಡೆಗೆ ಕ್ರಮವಿಲ್ಲ ಎಂದ ಕೇಂದ್ರ ತಂಡ
ಯೋಜನೆಯಲ್ಲಿ ತಿಳಿಸಿದಂತೆ 24.01 ಟಿಎಂಸಿ ನೀರನ್ನು ತಿರುಗಿಸಲು ಪಶ್ಚಿಮ ಘಟ್ಟಗಳ ವಿವಿಧ ತೊರೆಗಳಲ್ಲಿ ಎಂಟು ವಿಭಿನ್ನ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಎರಡನೇ ಹಂತದ ಯೋಜನೆಗೆ 33 ಷರತ್ತುಗಳನ್ನು ಮುಂದಿಟ್ಟು ಒಪ್ಪಿಗೆ ನೀಡಲಾಗಿತ್ತು. ಆದರೆ, ಸ್ಥಳ ಪರಿಶೀಲನೆ ವೇಳೆ ಬಹುತೇಕ ಷರತ್ತುಗಳನ್ನು ಪಾಲಿಸದಿರುವುದು ಕಂಡುಬಂದಿದೆ. 2019ರ ಮೇ ತಿಂಗಳಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದ ಅನ್ವಯ ರಚನೆಯಾಗಿದ್ದ ಮೇಲ್ವಿಚಾರಣಾ ಸಮಿತಿಯು ತನ್ನ ವರದಿಯಲ್ಲಿ ಭೂಕುಸಿತ ಮತ್ತು ಮಣ್ಣಿನ ಸವೆತ ಸಂಭವಿಸುವಿಕೆಯನ್ನು ಉಲ್ಲೇಖಿಸಿತ್ತು. ಇದು ಕೇಂದ್ರ ತಂಡದ ಸ್ಥಳ ಪರಿಶೀಲನೆಯ ಸಮಯದಲ್ಲಿಯೂ ಪತ್ತೆಯಾಗಿದೆ. ಆದರೆ, ಇದನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಅನುಮತಿ ನೀಡಲ್ಪಟ್ಟ ಪ್ರಮಾಣಕ್ಕಿಂತ ಹೆಚ್ಚು ಅರಣ್ಯ ಭೂಮಿಯನ್ನು ಯೋಜನೆಗೆ ಬಳಸಿಕೊಳ್ಳಲಾಗಿದೆ. ಹೀಗಾಗಿ, ಈ ಪ್ರದೇಶಗಳ ವಿವರವಾದ ಡಿಜಿಪಿಎಸ್ ಸಮೀಕ್ಷೆ ಮಾಡುವುದು ಅತ್ಯಗತ್ಯ ಎಂದು ಕೇಂದ್ರ ತಂಡ ಶಿಫಾರಸು ಮಾಡಿದೆ.