ಮಧ್ಯಪ್ರವೇಶಿಸಿದ ಪೊಲೀಸರು-ಪ್ರಕರಣ ಸುಖಾಂತ್ಯ
ಕಡಬ : ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಅನ್ಯಕೋಮಿನ ಯುವಕರು ಹಾಗೂ ಹಿಂದೂ ಯುವತಿಯೋರ್ವಳು ಪ್ರಯಾಣಿಸುತ್ತಿರುವ ಬಗ್ಗೆ ನಿಖರ ಮಾಹಿತಿ ಮೇರೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬದಲ್ಲಿ ಬಸ್ಸನ್ನು ತಡೆದು ನಿಲ್ಲಿಸಿದ್ದು ಈ ಸಂದರ್ಭದಲ್ಲಿ ಎರಡು ಕೋಮಿನ ಜನರು ಜಮಾಯಿಸಿ ಮಾತಿನ ಚಕಮಕಿ, ನಡೆದು ಉದ್ವಿಘ್ನ ಸ್ಥಿತಿ ನಿರ್ಮಾಣವಾದ ಘಟನೆ ಏ.30ರಂದು ಸಂಜೆ ಕಡಬದಲ್ಲಿ ನಡೆದಿದೆ.

ಸುಬ್ರಹ್ಮಣ್ಯದಿಂದ ಹೊರಟ ಬಸ್ಸಿನಲ್ಲಿ ಮುಸ್ಲಿಂ ಸಮುದಾಯದ ಯುವಕರ ಜತೆ ಹಿಂದೂ ಯುವತಿ ಜತೆಯಾಗಿ ಇರುವುದು, ಅಲ್ಲದೆ ಅವರು ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡು, ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ನಿಖರ ಮಾಹಿತಿ ಕಡಬದ ಹಿಂದೂ ಸಂಘಟನೆಗೆ ಬಂದ ಹಿನ್ನಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬಕ್ಕೆ ಬಸ್ ತಲುಪುತ್ತಿದ್ದಂತೆ ಬಸ್ ತಡೆದು ಪ್ರಶ್ನಿಸಿದ್ದಾರೆ, ಬಳಿಕ ಬಸ್ಸಿನಿಂದ ಇಳಿದು ಠಾಣೆಗೆ ಬರುವಂತೆ ಹೇಳಿದ್ದರೆನ್ನಲಾಗಿದೆ, ಇದೇ ವೇಳೆ ಬಸ್ಸಿನ ಜತೆ ಬರುತ್ತಿದ್ದ ಇನ್ನೊಂದು ಖಾಸಗಿ ವಾಹನದಲ್ಲಿ ಯುವತಿ ಜತೆ ಇದ್ದ ಯುವಕರನ್ನು ಕುಳ್ಳಿರಿಸಿ ಅದರಲ್ಲಿ ಕೊಂಡೊಯ್ಯಲು ಪ್ರಯತ್ನಿಸಿದ ವೇಳೆ ಅಲ್ಲಿಯೂ ಆ ವಾಹನವನ್ನು ತಡೆದಾಗ ಗೊಂದಲದ ವಾತಾವರಣ, ಮಾತಿನ ಚಕಮಕಿ ನಡೆದಿದೆ. ಬಳಿಕ ಪೋಲಿಸರು ಮಧ್ಯಪ್ರವೇಶಿಸಿದ್ದಾರೆ. ಬಳಿಕ ಯುವಕರು ಹಾಗೂ ಯುವತಿ ಇನ್ನುಳಿದ ಜತೆಗಾರರು ಠಾಣೆಗೆ ತೆರಳಿ ಹೇಳಿಕೆ ಕೊಟ್ಟಿದ್ದು ಬಳಿಕ ಪ್ರಕರಣ ಸುಖಾಂತ್ಯವಾಗಿದೆ.
ಸಹೋದ್ಯೋಗಿಯ ಮದುವೆಗೆ ತೆರಳಿ ಹಿಂತಿರುಗುತ್ತಿದ್ದರು:
ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಉದ್ಯೋಗದಲ್ಲಿರುವ ತಂಡ ಸುಬ್ರಹ್ಮಣ್ಯಕ್ಕೆ ತಮ್ಮ ಸಹೋದ್ಯೋಗಿಯ ಮದುವೆಗೆಂದು ಬಂದಿದ್ದು ಅದರಲ್ಲಿ ಕೆಲವರು ಖಾಸಗಿ ವಾಹನದಲ್ಲಿ ತೆರಳಿದ್ದು ಇನ್ನು ಕೆಲವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ವಿಚಾರಣೆಯ ವೇಳೆ ತಿಳಿದು ಬಂದಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗದೆ ಸುಖಾಂತ್ಯಗೊಂಡಿದೆ.
ಅಸಭ್ಯ ವರ್ತನೆಯ ಬಗ್ಗೆ ನಿಖರ ಮಾಹಿತಿ ಬಂದಿತ್ತು-ಪ್ರಮೋದ್ ರೈ:
ಘಟನೆಯ ಬಗ್ಗೆ ಹಿಂದೂ ಸಂಘಟನೆಯ ಪ್ರಮುಖ ಪ್ರಮೋದ್ ರೈ ನಂದುಗುರಿ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಂ ಯುವಕರ ಜತೆ ಹಿಂದೂ ಹುಡುಗಿಯೋರ್ವಳು ಜತೆಯಾಗಿ ಇರುವುದು ಮತ್ತು ಸೆಲ್ಫಿ ತೆಗೆದುಕೊಂಡು ಅಸಭ್ಯವಾಗಿ ವರ್ತಿಸಿರುವ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ನಾವು ತಡೆದು ನಿಲ್ಲಿಸಿದ್ದೇವೆ, ಸಹೋದ್ಯೋಗಿಯ ಮದುವೆಗೆ ಹೋದರೂ ಅಸಭ್ಯವಾಗಿ ವರ್ತನೆ ಮಾಡಿರುವುದು ಸರಿಯೇ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳಿಂದ ಹಿಂದೂ ಹೆಣ್ಮಕ್ಕಳು ಇನ್ನೂ ಪಾಠ ಕಲಿಯದಿರುವುದು ದುರದೃಷ್ಟಕರ, ಇಂತ ಘಟನೆಗಳು ನಡೆದರೆ ಇನ್ನೂ ಮುಂದೆಯೂ ನಾವು ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.