ಮಂಗಳೂರು ವಲಯ ಅಂಡರ್ 16 ಅಂತರ್ ಕ್ಲಬ್ ಟೂರ್ನಮೆಂಟ್ – ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ಗೆ ಅದ್ಭುತ ಜಯ- ಕ್ರಿಸ್ ಏಂಜೆಲೊ, ವಚನ್ ರಾವ್ ಭರ್ಜರಿ ಶತಕ

0

ಪುತ್ತೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(ಕೆ.ಎಸ್.ಸಿ‌ಎ) ವತಿಯಿಂದ ಮಂಗಳೂರು ವಲಯದ ಅಂಡರ್ 16 ವಯೋಮಿತಿಯ ಅಂತರ್-ಕ್ಲಬ್ ಟೂರ್ನಮೆಂಟ್ ಇತ್ತೀಚೆಗೆ ಪಣಂಬೂರಿನ ಎನ್‌.ಎಂ.ಪಿ.ಟಿ.ಕೆ ಮೈದಾನದಲ್ಲಿ ಜರಗಿದ್ದು, ಪುತ್ತೂರಿನ ಯುವ ಪ್ರತಿಭೆಗಳಾದ ಕ್ರಿಸ್ ಏಂಜೆಲೊ ಪಿಂಟೊ ಹಾಗೂ ವಚನ್ ರಾವ್ ರವರು ಆಕರ್ಷಕ ಹಾಗೂ ಬಿರುಸಿನ ಶತನ ಬಾರಿಸಿ ಮಿಂಚಿದ್ದಾರೆ.

ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ಹಾಗೂ ಪಿಪಿಸಿ ಮಂಗಳೂರು ಇವುಗಳ ನಡುವೆ ನಡೆದ 50 ಓವರ್ ಗಳ ಏಕದಿನ ಪಂದ್ಯಾಟದಲ್ಲಿ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ಬರೋಬ್ಬರಿ 147 ರನ್ ಗಳ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡದ ಆರಂಭಿಕ ಬ್ಯಾಟರ್ ಗಳಾದ ಎಡಗೈ ಬ್ಯಾಟರ್ ಕ್ರಿಸ್ ಏಂಜೆಲೊ ಪಿಂಟೊ ಹಾಗೂ ಪ್ರಥಮ್ ಶೆಟ್ಟಿರವರು ಬ್ಯಾಟಿಂಗ್ ಆರಂಭಿಸಿದರು. ಆದರೆ ಆರಂಭಿಕ ಬ್ಯಾಟರ್ ಪ್ರಥಮ್ ಶೆಟ್ಟಿ( 4 ರನ್)ರವರು ಬೇಗನೇ ಔಟಾಗಿ ಉತ್ತಮ ಆರಂಭಿಕ ಅಡಿಪಾಯ ಹಾಕುವಲ್ಲಿ ವಿಫಲರಾದರು. ಬಳಿಕ ವನ್ ಡೌನ್ ಬ್ಯಾಟರ್ ಆಗಿ ಆಗಮಿಸಿದ ದರ್ಶನ್ ಪೈ ಆರು ರನ್, ಕೆ.ಶಮಂತ್ ಎಚ್.ಎರವರು 34 ರನ್ ಗಳನ್ನು ಗಳಿಸಿ ಬೇಗನೇ ನಿರ್ಗಮಿಸಿದರು.

ಕ್ರಿಸ್ ಏಂಜೆಲೊ, ವಚನ್ ರಾವ್ ಬಿರುಸಿನ ಶತಕ:
93 ರನ್ ಅಂತರದಲ್ಲಿ ಮೂರು ವಿಕೆಟ್ ಕಳಕೊಂಡ ಯೂನಿಯನ್ ಕ್ರಿಕೆಟರ್ಸ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ವಚನ್ ರಾವ್ ರವರು ಆರಂಭಿಕ ಕ್ರಿಸ್ ಏಂಹೆಲೊರವರೊಡಗೂಡಿ ತಂಡವನ್ನು ಆಧರಿಸಿದರು. ಇವರೀರ್ವರ ಸಮಯೋಚಿತ ಹಾಗೂ ಬಿರುಸಿನ ಆಟದಿಂದ ನಾಲ್ಕನೇ ವಿಕೆಟಿಗೆ 169 ರನ್ ಗಳ ಶತಕದ ಜೊತೆಯಾಟ ನಡೆಸಿದ್ದು, ಈ ಸಂದರ್ಭದಲ್ಲಿ ಆರಂಭಿಕ ಪುತ್ತೂರಿನ ಕ್ರಿಸ್ ಏಂಜೆಲೋ(110 ರನ್) ಗಳಿಸಿ ಔಟಾದರು. ಬಳಿಕ ಆಗಮಿಸಿದ ಬ್ಯಾಟರ್ ಗಳು ಬ್ಯಾಟರ್ ವಚನ್ ರಾವ್ ಮಂಗಳೂರು(102 ಅಜೇಯ) ರವರಿಗೆ ಸೂಕ್ತ ಬೆಂಬಲ ನೀಡದೆ ವಿಕೆಟ್ ಕಳೆದುಕೊಂಡರೂ ತಂಡವು ಎಂಟು ವಿಕೆಟ್ ನಷ್ಟಕ್ಕೆ 301 ರನ್ ಗಳ ಗರಿಷ್ಟ ಮೊತ್ತವನ್ನು ಎದುರಾಳಿಗೆ ನೀಡಿತ್ತು.

ಪಿಪಿಸಿ 154 ಕ್ಕೆ ಅಲೌಟ್:
ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಿಪಿಸಿ ಮಂಗಳೂರು ತಂಡವು ಯಾವುದೇ ಪ್ರತಿರೋಧ ತೋರದೆ ಎದುರಾಳಿ ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡದ ಬೌಲರ್ ಗಳ ಕರಾರುವಾಕ್ ಬೌಲಿಂಗ್ ನಿಂದ ತತ್ತರಿಸಿ ಕೇವಲ 154 ರನ್ ಗಳಿಗೆ ಅಲೌಟಾಗಿ ಸೋಲೊಪ್ಪಿಕೊಂಡಿತು.ಪುತ್ತೂರು ಯೂನಿಯನ್ ಕ್ರಿಕೆಟರ್ಸ್ ತಂಡಕ್ಕೆ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಲ್ಯಾಸ್ ಪಿಂಟೊರವರು ತರಬೇತಿ ನೀಡಿರುತ್ತಾರೆ ಎಂದು ಯೂನಿಯನ್ ಕ್ರಿಕೆಟರ್ಸ್ ಪುತ್ತೂರು ಇದರ ಕಾರ್ಯದರ್ಶಿ ವಿಶ್ವನಾಥ ನಾಯಕ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲಿನ ಪೊಟೊ ಕ್ರಿಸ್ ಏಂಜಲೊ

ಸೆಕೆಂಡ್ ವಚನ್ ರಾವ್

LEAVE A REPLY

Please enter your comment!
Please enter your name here