ಮನೆಯಂಗಳದಲ್ಲಿ ಬೆಳೆಯುವ ಅದೆಷ್ಟೋ ಸಸ್ಯಗಳನ್ನು ಕಾಡು ಗಿಡಗಳು ಎಂದು ನಾವು ಕಡಿದು ಬಿಸಾಡುತ್ತೇವೆ. ಆದರೆ ನಮ್ಮ ಸುತ್ತಮುತ್ತ ಇರುವ ಅನೇಕ ಗಿಡಗಳು ಸಾವಿರಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಂತಹುದರಲ್ಲಿಯೇ ಒಂದು ನೈಸರ್ಗಿಕ, ಆರೋಗ್ಯಕರ ಗಿಡ ಅಂದ್ರೆ ಅದು ತುಂಬೆ ಗಿಡ.

ತುಂಬೆ ಗಿಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗುಣ ಹೊಂದಿದೆ. ಅಂದರೆ ಅದರಲ್ಲಿ ಅಗಾಧ ಔಷಧಿಗುಣ ಅಡಕವಾಗಿದೆ. ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಇದರ ಪರಿಚಯದ ಜೊತೆಗೆ ಇದರ ಔಷಧಿ ಗುಣಗಳನ್ನು ಕಂಡುಕೊಂಡಿರುತ್ತಾರೆ. ಗದ್ದೆಯಲ್ಲಿ, ಬಯಲಿನಲ್ಲಿ ಹೆಚ್ಚಾಗಿ ಬೆಳೆಯುವ ತುಂಬೆ ಗಿಡ ಒಂದು ಅತ್ಯುತ್ತಮವಾದ ಔಷಧೀಯ ಗಿಡವಾಗಿದೆ.
ಪುರಾಣದ ಪ್ರಕಾರ ಶಿವನ ದೇಹದಲ್ಲಿ ವಿಷ ಸೇರಿದಾಗ ಅದರ ನಿವಾರಣೆಗೆ ತುಂಬೆ ಹೂವುಗಳನ್ನು ಬಳಸಿದ್ದರಿಂದಾಗಿ ಈಗಲೂ ಕೂಡ ಶಿವನಿಗೆ ತುಂಬೆ ಪುಷ್ಪ ಅರ್ಪಿಸುವ ಪರಿಪಾಠ ರೂಢಿಯಲ್ಲಿದೆ. ಸಂಸ್ಕೃತದಲ್ಲಿ ದ್ರೋಣ ಪುಷ್ಪ ಇಲ್ಲವೇ ಚಿತ್ರಕ್ಷುಪ ಎಂದು ಕರೆಯಲ್ಪಡುವ ಈ ತುಂಬೆ ಆಯುರ್ವೇದಿಯವಾಗಿ ಹಲವು ಕಾರಣಗಳಿಂದ ಬಳಕೆಯಲ್ಲಿದೆ. ತೆಲುಗಿನವರು ಇದನ್ನು ತುಮ್ಮಿಚೆಟ್ಟು ಎಂದು ಕರೆಯುತ್ತಾರೆ. ಬಿಳಿ ಬಣ್ಣದಲ್ಲಿರುವ ಈ ಪುಷ್ಪ ನೋಡಲು ಪುಟ್ಟದಾಗಿದ್ದರು ಪರಿಣಾಮಕಾರಿಯಾಗಿದೆ. ತೀರಾ ದೊಡ್ಡದಾಗಿ ಬೆಳೆಯದ ಈ ಗಿಡ ಅತ್ಯಂತ ಶ್ರೇಷ್ಠವೆನಿಸಿದ್ದು ಔಷಧೀಯವಾಗಿ ಹೆಚ್ಚು ಬಳಕೆಯಲ್ಲಿದೆ.