





ಚಳಿಗಾಲ ಹತ್ತಿರ ಬರುತ್ತಿದೆ, ಇನ್ನೇನು ಆರೋಗ್ಯ ಜೋಪಾನ ಮಾಡುವ ಸಮಯ ಬರುತ್ತಿದೆ. ಚಳಿಗಾಲ ಮೆಲ್ಲಗೆ ಮೈಯನ್ನು ಆವರಿಸುತ್ತಿದೆ. ಸುಳಿಗಾಳಿ ತ್ವಚೆಯನ್ನು ಒಣಗಿಸುತ್ತಿದೆ. ಈ ಕಾಲದಲ್ಲಿ ಯಾವ ವಯೋಮಾನದವರು ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು, ಯಾವುದನ್ನು ತಿಂದರೆ ದೇಹಕ್ಕೆ ಅನುಕೂಲ, ಅನನುಕೂಲ ಎನ್ನುವ ಗೊಂದಲ ಶುರುವಾಗುತ್ತದೆ. ಈ ಋತುಮಾನದಲ್ಲಿ ಸಿಗುವ ಎಲ್ಲ ಬಗೆಯ ಹಣ್ಣುಗಳನ್ನೂ, ಆಹಾರ ಪದಾರ್ಥಗಳನ್ನು ಧಾರಾಳವಾಗಿ ಸೇವಿಸಬಹುದು. ಹಾಗೆ ಸೇವಿಸುವಾಗ ಇತಿ– ಮಿತಿ ಇರಲಿ ಎನ್ನುವರು ಆಹಾರ ತಜ್ಞರು.



ಚಳಿಗಾಲದಲ್ಲಿ ವಾತಾವರಣದ ತಾಪಮಾನ ಇಳಿಕೆಯಾಗುವಂತೆ, ದೇಹದ ತಾಪಮಾನವೂ ಇಳಿಯುತ್ತದೆ. ಇದನ್ನು ಸರಿದೂಗಿಸಿಕೊಳ್ಳಲು ಶರೀರವು ಚಯಾಪಚಯ ಕ್ರಿಯೆಯನ್ನು ಏರಿಸಿಕೊಳ್ಳುವ ಮೂಲಕ ಉಷ್ಣವನ್ನು ಉತ್ಪಾದಿಸಿಕೊಳ್ಳುತ್ತದೆ. ಆಹಾರದಲ್ಲಿ ಕೊಬ್ಬಿನ ಅಂಶವನ್ನು ಕರಗಿಸುತ್ತ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಹೆಚ್ಚು ಆಹಾರ ದೇಹಕ್ಕೆ ಬೇಕೆನಿಸುತ್ತದೆ. ಹೆಚ್ಚು ಹಸಿವು ಉಂಟಾಗುತ್ತದೆ. ಹಸಿವು ಎಂದು ಏನೇನೊ ತಿನ್ನುವ ಬದಲು ಸಮತೋಲಿತ ಆಹಾರ ಸೇವಿಸಬೇಕು ಎನ್ನುವುದು ಆಹಾರ ತಜ್ಞರ ಸಲಹೆ. ಋತುವಿಗೆ ಅನುಸಾರ ನಮ್ಮ ಆಹಾರ ಬದಲಾವಣೆ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತ.





ಬಿಸಿ ಸೂಪ್, ಕಿಚಡಿ ಬೌಲ್ಸ್, ಬಿಸಿ ಅನ್ನ, ತರಕಾರಿ, ಮೊಟ್ಟೆ, ಮೀನು ಹಾಗೂ ಪ್ರೋಟೀನ್ ಇರುವ ಪದಾರ್ಥಗಳನ್ನು ಸೇವಿಸಿ. ಇನ್ನು ಡ್ರೈ ಫ್ರೂಟ್ಸ್ ಹಾಗೂ ಎಣ್ಣೆ ಇರುವ ಕಾಳುಗಳನ್ನು ತಪ್ಪದೇ ಡಯಟ್ನಲ್ಲಿ ಸೇರಿಸಿಕೊಳ್ಳಿ. ನಿಮ್ಮ ತಟ್ಟೆಯಲ್ಲಿ ಹಸಿರು ಸೊಪ್ಪು, ಹಸಿರು ತರಕಾರಿಗಳು ಧಾರಾಳವಾಗಿರಲಿ. ಮೆಂತೆ, ಪಾಲಕ್ನಿಂದ ಹಿಡಿದು ದಂಟು, ಹೊನಗನ್ನೆಯವರೆಗೆ ಎಲ್ಲಾ ರೀತಿಯ ಸೊಪ್ಪುಗಳನ್ನು ತಿನ್ನಿ. ಕ್ಯಾಪ್ಸಿಕಂ, ಬೆಂಡೆಕಾಯಿಯಿಂದ ಹಿಡಿದು, ಎಲೆಕೋಸು, ಬ್ರೊಕೊಲಿಯವರೆಗೆ ಹಸಿರು ತರಕಾರಿಗಳನ್ನು ಭರಪೂರ ಸೇವಿಸಿ.
ಚಳಿಗಾಲವೆಂದರೆ ಬಹಳಷ್ಟು ಗಡ್ಡೆಗಳು ಬೆಳೆದು-ಕೀಳುವ ದಿನಗಳು. ಅದರಲ್ಲೂ ಗಿಡಗಳ ಬೇರು ಮತ್ತು ಗಡ್ಡೆಗಳು ಪೋಷಕಾಂಶಗಳ ಖಜಾನೆಯಂತೆ ವರ್ತಿಸುತ್ತವೆ. ಈರುಳ್ಳಿ, ಅರಿಶಿನ, ಶುಂಠಿ, ಸುವರ್ಣ ಗಡ್ಡೆ, ಗೆಣಸು, ಬೀಟ್ರೂಟ್, ಗಜ್ಜರಿ ಗಡ್ಡೆ, ಟರ್ನಿಪ್ ಮುಂತಾದವುಗಳನ್ನು ಧಾರಾಳವಾಗಿ ಬಳಸಿ. ದೇಹಕ್ಕೆ ಉತ್ತಮ ಗುಣಮಟ್ಟದ ಪೋಷಕಾಂಶಗಳನ್ನು ಈ ಗಡ್ಡೆ-ಗೆಣಸುಗಳು ಒದಗಿಸಬಲ್ಲವು. ಜೋಳ, ಸಜ್ಜೆ, ರಾಗಿ ಮುಂತಾದ ಸಿರಿ ಧಾನ್ಯಗಳೆಲ್ಲಾ ಆಹಾರದಲ್ಲಿ ಇರಬೇಕು. ಇವು ಜೀರ್ಣವಾಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಂಡು, ದೀರ್ಘ ಕಾಲದವರೆಗೆ ಶರೀರಕ್ಕೆ ಅಗತ್ಯವಾದ ಶಕ್ತಿಯನ್ನು ಪೂರೈಸುತ್ತಲೇ ಇರುತ್ತವೆ.









