2 ತಾಸು ರಾ.ಹೆ.ಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ | ಸವಾರರ ಪರದಾಟ
ನೆಲ್ಯಾಡಿ: ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಮೇ.18ರಂದು ಸಂಜೆ ನಡೆದಿದೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ತಾಸು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು ವಾಹನ ಸವಾರರು ಪರದಾಟ ನಡೆಸಿದ ಘಟನೆಯೂ ನಡೆದಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಮಂಗಳೂರಿನಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಗುಂಡ್ಯ ಪೇಟೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಅಪಾಯಕಾರಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದಾಗಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಬಸ್ಸಿನ ಚಾಲಕ ಧರ್ಮಸ್ಥಳ ಸಮೀಪದ ಬೆಳಾಲು ನಿವಾಸಿ ಶ್ರೀನಿವಾಸ(37ವ.), ಲಾರಿ ಚಾಲಕ ಕನಕಪುರ ನಿವಾಸಿ ಮಂಜುನಾಥ(44ವ.), ಬಸ್‌ನಲ್ಲಿದ್ದ ಪ್ರಯಾಣಿಕರಾದ ಸಕಲೇಶಪುರದ ಪ್ರಣಯ್(16ವ.), ನೆಲಮಂಗಲ ನಿವಾಸಿ ಸಿದ್ದಲಿಂಗಪ್ಪ(48ವ.) ಎಂಬವರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಶ್ರೀನಿವಾಸ ಹಾಗೂ ಪ್ರಣಯ್ ಅವರಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನಿಬ್ಬರು ಗಾಯಾಳುಗಳಾದ ಮಂಜುನಾಥ ಹಾಗೂ ಸಿದ್ದಲಿಂಗಪ್ಪ ಅವರು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಂಚಾರ ಅಸ್ತವ್ಯಸ್ತ:
ಅಪಘಾತದಿಂದಾಗಿ ಎರಡೂ ಘನ ವಹನಗಳು ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದರಿಂದಾಗಿ ಎರಡೂ ದಿಕ್ಕುಗಳಲ್ಲಿ ಸುಮಾರು 10 ಕಿ.ಮೀ. ದೂರದ ತನಕ ವಾಹನಗಳ ಸಾಲು ಕಂಡುಬಂದಿತು. ಭಾನುವಾರವೂ ಆಗಿರುವುದರಿಂದ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಹಾಗೂ ಕ್ಷೇತ್ರದಿಂದ ಹೋಗುವ ಭಕ್ತಾದಿಗಳ ವಾಹನಗಳ ಸಂಖ್ಯೆಯೂ ಅಧಿಕವಾಗಿತ್ತು. ಎರಡು ವಾಹನಗಳು ಸುಮಾರು ೩ ತಾಸು ಹೆದ್ದಾರಿಯಲ್ಲಿಯೇ ಇದ್ದುದ್ದರಿಂದ ವಾಹನ ಸವಾರರು ದಾರಿಮಧ್ಯೆಯೇ ಸಿಲುಕಿಕೊಂಡು ಪರದಾಟ ನಡೆಸಿದ ಘಟನೆಯೂ ನಡೆಯಿತು. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ತಕ್ಷಣ ಆಗಮಿಸಿ ಸುಗಮ ವಾಹನ ಸಂಚಾರಕ್ಕೆ ಸಹಕಾರ ನೀಡಿದರು.

ಕ್ರೇನ್ ವಿವಾದ, ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ:
ಶಿರಾಡಿ ಘಾಟ್ ಸಹಿತ ಶಿರಾಡಿ, ನೆಲ್ಯಾಡಿ ಅಸುಪಾಸಿನಲ್ಲಿ ಎಲ್ಲಿ ಅಪಘಾತ ನಡೆದರೂ ಗುಂಡ್ಯದ ಕ್ರೇನ್‌ನವರು ತಕ್ಷಣ ಸ್ಥಳಕ್ಕೆ ತೆರಳಿ ಹೆದ್ದಾರಿಯಿಂದ ವಾಹನ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಸಹಕರಿಸುತ್ತಿದ್ದರು. ಇದೇ ರೀತಿ ಈ ಹಿಂದೆ ನಾಲ್ಕೈದು ಸಲ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಕ್ರೇನ್ ಮೂಲಕ ಬದಿಗೆ ಸರಿಸಿದರೂ ಕೆಎಸ್‌ಆರ್‌ಟಿಸಿಯಿಂದ ಕ್ರೇನ್‌ನವರಿಗೆ ಯಾವುದೇ ಹಣ ಪಾವತಿಸಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಈ ಭಾರಿ ಕ್ರೇನ್‌ನವರೂ ಬಸ್ಸನ್ನು ಹೆದ್ದಾರಿಯಿಂದ ತೆರವುಗೊಳಿಸಲು ಹಿಂದೇಟು ಹಾಕಿದರು ಎನ್ನಲಾಗಿದೆ. ೨ ತಾಸು ಕಳೆದರೂ ಅಪಘಾತ ಸ್ಥಳದಿಂದ ಬಸ್ಸು ತೆರವುಗೊಳಿಸದೇ ಇದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರೇ ಹಣ ಸಂಗ್ರಹಿಸಿ ಕ್ರೇನ್‌ನವರಿಗೆ ನೀಡಿದ ಬಳಿಕ ಕ್ರೇನ್‌ನ ಸಹಾಯದಿಂದ ಬಸ್ಸನ್ನು ಹೆದ್ದಾರಿಯಿಂದ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ ವಿರುದ್ಧ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ದಾರಿಮಧ್ಯೆ ಸಿಲುಕಿಕೊಂಡ ದೇವೇಗೌಡರು..!
ಧರ್ಮಸ್ಥಳಕ್ಕೆ ಬರುತ್ತಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರೂ ರಸ್ತೆ ಬಂದ್ ಆಗಿದ್ದ ಹಿನ್ನಲೆಯಲ್ಲಿ ದಾರಿಮಧ್ಯೆ ಸಿಲುಕಿಕೊಂಡು ಸಂಕಷ್ಟಕ್ಕೆ ಒಳಗಾಗಿದ್ದರು ಎಂದು ವರದಿಯಾಗಿದೆ.