ಬದುಕಿನ ಕೊರಗು ನಿವಾರಿಸುವ ಶಕ್ತಿ ಕೊರಗಜ್ಜ ದೈವಕ್ಕಿದೆ; ಒಡಿಯೂರು ಶ್ರೀ
ಹಿರೇಬಂಡಾಡಿ: ಜೀರ್ಣೋದ್ಧಾರಗೊಂಡಿರುವ ಹಿರೇಬಂಡಾಡಿ ಗ್ರಾಮದ ನೆಹರುತೋಟ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ಧಾರ್ಮಿಕ ಸಭೆ ಮೇ.21ರಂದು ನಡೆಯಿತು.
ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ನ ಶ್ರೀ ಗುರುದೇವಾನಂದ ಸ್ವಾಮೀಜಿ, ಬದುಕಿನ ಕೊರಗು ನಿವಾರಿಸುವ ಶಕ್ತಿ ಕೊರಗಜ್ಜ ದೈವಕ್ಕಿದೆ. ನಂಬಿದವರಿಗೆ ಶೀಘ್ರದಲ್ಲೇ ಇಂಬು ಕೊಡುವ ದೈವ ಕೊರಗಜ್ಜ. ನೆಹರುತೋಟದ ಕೊರಗಜ್ಜ ಕ್ಷೇತ್ರ ಶಕ್ತಿಕೇಂದ್ರವಾಗಿ ಬೆಳೆಯಲಿ. ಸನಾತನ ಹಿಂದೂ ಧರ್ಮದ ಮೇಲೆ ಪ್ರೀತಿ ತೋರಿಸಿದ ಕೀರ್ತಿ ಈ ಊರಿನಲ್ಲಿದೆ ಎಂದು ನುಡಿದರು. ದೈವ, ದೇವರ ಬಗ್ಗೆ ಭಕ್ತರಲ್ಲಿ ನಂಬಿಕೆ ಮುಖ್ಯ. ಮೂಲನಂಬಿಕೆ ಇರಬೇಕು. ಸನಾತನದ ಹಿಂದೂ ಧರ್ಮ ಉತ್ಕೃಷ್ಟವಾದದ್ದು, ಅವಿನಾಶಿಯಾಗಿದೆ. ಸನಾತನ ಹಿಂದೂ ಧರ್ಮದ ಉಳಿವಿಗೆ ಎಲ್ಲರೂ ಒಟ್ಟಾಗುವ ಎಂದು ಒಡಿಯೂರು ಸ್ವಾಮೀಜಿ ನುಡಿದರು.

ಅಖಂಡ ಭಾರತಕ್ಕೆ ಮುನ್ನುಡಿ:
ತಮ್ಮ ಆಶೀರ್ವಚನದಲ್ಲಿ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಹಾಗೂ ಆ ಬಳಿಕ ನಡೆದ ಸಿಂಧೂರ ಕಾರ್ಯಾಚರಣೆ ಕುರಿತು ವಿಶ್ಲೇಷಿಸಿದ ಒಡಿಯೂರು ಸ್ವಾಮೀಜಿ, ಇದೊಂದು ಅಖಂಡ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದಂತಿದೆ. ದೇಶದ ಅನ್ನ, ನೀರು ಸೇವಿಸಿ ದೇಶದ ವಿರುದ್ಧವೇ ಮಾತನಾಡುವವರ ಹಾಗೂ ಲೆಕ್ಕ ಕೇಳುವವರ ಬಗ್ಗೆ ಜಾಗೃತಿ ಉಂಟು ಮಾಡುವ ಅವಶ್ಯಕತೆ ಇದೆ. ದೇಶದ ಉಳಿವಿಗಾಗಿ ಜಾತಿ, ಮತ ಬಿಟ್ಟು ಒಟ್ಟಾಗಬೇಕಿದೆ. ನಮಗೆ ಶಾಂತಿ ಮುಖ್ಯ. ಯುದ್ಧವೇ ನಮ್ಮ ಅವಶ್ಯಕತೆ ಇಲ್ಲ. ಅನಿವಾರ್ಯವಾದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಉಗ್ರರ ಸಂಹಾರ ಕೆಲಸ ಆದಷ್ಟೂ ಶೀಘ್ರ ಮುಗಿಯಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ನಾಗರಾಧನೆ, ದೈವರಾಧನೆಯಂತಹ ವಿಶಿಷ್ಠ ಆರಾಧನೆಗಳನ್ನು ಕರಾವಳಿ ಭಾಗದಲ್ಲಿ ನೋಡುತ್ತಿದ್ದೇವೆ. ಯಕ್ಷಗಾನ, ಭಜನೆ ಸೇವೆಯ ಮೂಲಕ ಹರಕೆ ಒಪ್ಪಿಸುವಂತಹ ಆಚರಣೆಗಳೂ ಕರಾವಳಿ ಭಾಗದಲ್ಲಿವೆ. ಕರಾವಳಿಯಲ್ಲಿ ನಡೆಯುವ ಆರಾಧನೆಯ ಹಿಂದೆ ಪರಂಪರೆ ಇದೆ. ಇಂತಹ ಆಚರಣೆಗಳಿಂದ ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಕೆಲಸ ಆಗುತ್ತಿದೆ. ಸಾಮಾನ್ಯ ವ್ಯಕ್ತಿಯೂ ದೈವ ಆಗಲು ಸಾಧ್ಯವಿದೆ ಎಂಬುದಕ್ಕೆ ಕೊರಗಜ್ಜ, ಕೋಟಿ ಚೆನ್ನಯರೇ ಸಾಕ್ಷಿಯಾಗಿದ್ದಾರೆ. ಪರವೂರಿನಲ್ಲಿಯೂ ಕೊರಗಜ್ಜ ದೈವದ ಭಕ್ತರಿದ್ದಾರೆ. ಈ ಕ್ಷೇತ್ರ ಇನ್ನಷ್ಟೂ ಬೆಳಗಲಿ. ಇದಕ್ಕೆ ಸಹಕಾರ ನೀಡುವುದಾಗಿ ಹೇಳಿದರು. ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಧರ್ಮ ಕೇಳಿಯೇ ಹಿಂದೂಗಳ ಹತ್ಯೆ ಮಾಡಿದ್ದಾರೆ. ಸಿಂಧೂರ ಕಾರ್ಯಾಚರಣೆ ಮೂಲಕ ಉಗ್ರರ ಮಟ್ಟ ಹಾಕುವ ಕೆಲಸ ನಡೆದಿದೆ. ಹಿಂದೂ ಧರ್ಮದ ಪಾವಿತ್ರ್ಯತೆ, ಹಿಂದೂ ಧರ್ಮದ ಉಳಿವಿಗಾಗಿ ನಾವು ಕಟಿಬದ್ಧರಾಗಿ ದೇಶದ ಸೈನಿಕರಿಗೆ, ಪ್ರಧಾನಿಗಳಿಗೆ ಸಹಕಾರ ನೀಡಬೇಕೆಂದು ಹೇಳಿದರು.
ಅತಿಥಿಯಾಗಿದ್ದ ಉಪ್ಪಿನಂಗಡಿ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುನೀಲ್ ದಡ್ಡು ಮಾತನಾಡಿ, ಕೊರಗಜ್ಜನ ಕ್ಷೇತ್ರ ಜೀರ್ಣೋದ್ದಾರಗೊಂಡು ಇದರಲ್ಲಿ ನಾವೆಲ್ಲರೂ ಪಾಲ್ಗೊಳ್ಳುತ್ತಿರುವುದು ಪುಣ್ಯದ ಕೆಲಸ. ಕೊರಗಜ್ಜನ ಅನುಗ್ರಹ ಎಲ್ಲರಿಗೂ ಸಿಗಲಿ. ಲೋಕ ಕಲ್ಯಾಣವೂ ಆಗಲಿ ಎಂದರು. ಇನ್ನೋರ್ವ ಅತಿಥಿ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ಕುಮಾರ್ ರೈ ಅರುವಾರ ಮಾತನಾಡಿ, ಕ್ಷೇತ್ರ ಒಳ್ಳೆಯ ರೀತಿಯಲ್ಲಿ ಬೆಳೆಯಲು ಪರಿಸರದಲ್ಲಿ ಆಚಾರ, ವಿಚಾರದೊಂದಿಗೆ ಒಳ್ಳೆಯ ಮನೋಭಾವದವರೂ ಇರಬೇಕು. ಕರಾವಳಿಯ ಜನರಿಗೆ ಕೊರಗಜ್ಜ ದೈವದ ಮೇಲೆ ಅಪಾರ ನಂಬಿಕೆ ಇದೆ. ಕೊರಗಜ್ಜನ ಆರಾಧನೆಯೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ. ಈ ಕ್ಷೇತ್ರವು ಉತ್ತರೋತ್ತರ ಬೆಳಗಲಿ ಎಂದರು.
ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಶಾಂತಿತ್ತಡ್ಡ ಮಾತನಾಡಿ, ದುರಭ್ಯಾಸ ಬಿಟ್ಟು ಸಂಸ್ಕಾರ, ಸಂಸ್ಕೃತಿಯಿಂದ ನಡೆದುಕೊಳ್ಳಬೇಕು. ದೇವಸ್ಥಾನಗಳಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ದೇಹಶುದ್ಧಿ ಮಾಡಿಕೊಳ್ಳಬೇಕು. ತಂದೆ-ತಾಯಿ ದೇವರಿಗೆ ಸಮಾನ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಭಜನೆ, ಮಹಾಪುರುಷರ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಮೂಲಕ ಸಂಸ್ಕಾರ ನೀಡಬೇಕೆಂದು ಹೇಳಿದರು. ಹಿರೇಬಂಡಾಡಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಶೆಟ್ಟಿ ಮಾತನಾಡಿ, ಕೊರಗಜ್ಜ ಕಾರ್ಣಿಕದ ದೈವ. ಈ ದೈವಕ್ಕೆ ನಂಬಿದವರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವ ಶಕ್ತಿ ಇದೆ. ಧರ್ಮ ಉಳಿಯಬೇಕು. ಇದಕ್ಕಾಗಿ ಹಿಂದೂ ಬಾಂಧವರೆಲ್ಲರೂ ಒಟ್ಟಾಗಿರಬೇಕೆಂದು ಹೇಳಿದರು.
ವಿನೋದ್ ಅಡೆಕ್ಕಲ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನೆಹರುತೋಟದ ಈ ಕ್ಷೇತ್ರಕ್ಕೆ 150ವರ್ಷಗಳ ಇತಿಹಾಸವಿದೆ. ಕಾಡಿನ ಮಧ್ಯೆ ನಿರ್ಜನ ಪ್ರದೇಶದಲ್ಲಿ ಹಲಸಿನ ಮರದ ಬುಡದಲ್ಲಿ ಕಲ್ಲಿನ ರೂಪದಲ್ಲಿ ದೈವವನ್ನು ಆರಾಧನೆ ಮಾಡಿಕೊಂಡು ಬರಲಾಗಿದೆ. ಇದರ ಆರಾಧನೆ ಮಾಡಿದವರಿಗೆ, ಊರಿನವರಿಗೆ ಸುಭಿಕ್ಷೆ ದೊರೆತಿದೆ. ಹಿರಿಯರು ಮಾಡಿದ ಪುಣ್ಯದ ಸೇವೆಯಿಂದ ಈಗ ಕ್ಷೇತ್ರ ಜೀರ್ಣೋದ್ದಾರಗೊಂಡಿದೆ ಎಂದರು. ಕ್ಷೇತ್ರದ ಆಡಳಿತ-ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಆದಿರಾಜ ಶಾಂತಿತ್ತಡ್ಡ, ಕಲಶೋತ್ಸವ ಸಮಿತಿ ಅಧ್ಯಕ್ಷರಾದ ಹೊನ್ನಪ್ಪ ಖಂಡಿಗ ಶಾಖೆಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಶಾಂತ್ ಕರೆಂಕಿ ದಂಪತಿ ಸ್ವಾಮೀಜಿಗೆ ಫಲತಾಂಬೂಲ ನೀಡಿ ಗೌರವಿಸಿದರು. ಚಂದ್ರಾವತಿ ನೆಹರುತೋಟ, ನಾರಾಯಣ ಕನ್ಯಾನ, ಹರಿಶ್ಚಂದ್ರ ಮಾಳ, ಕೇಶವ ವಳಕಡಮ, ಚೇತನ್ ನೆಹರುತೋಟ ಅತಿಥಿಗಳಿಗೆ ಹೂ, ಶಾಲು ಹಾಕಿ ಸ್ವಾಗತಿಸಿದರು. ಪ್ರಸನ್ನ ನೆಹರುತೋಟ, ಪ್ರವೀಣ್ ನೆಹರುತೋಟ, ನಿತಿನ್ ತಾರಿತ್ತಡಿ, ವಿನಯ ರೈ ಕೊಲಪಟ್ಟೆ, ಪ್ರಶಾಂತ್ದಾಸ್ ಕೊನೆಮಜಲು ಅತಿಥಿಗಳಿಗೆ ಸ್ಮರಣಿಕೆ ನೀಡಿದರು.
ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಹಾಗೂ ಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರಶಾಂತ್ ಕರೆಂಕಿ ವಂದಿಸಿದರು. ದೀಪ್ತಿ, ಪೂರ್ವಿ, ಯಶ್ವಿನಿ ಪ್ರಾರ್ಥಿಸಿದರು. ಆಡಳಿತ-ಜೀರ್ಣೋದ್ಧಾರ ಸಮಿತಿ, ಕಲಶೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿ ಸದಸ್ಯರು ಸಹಕರಿಸಿದರು.
ಪ್ರತಿಷ್ಠೆ, ಕಲಶಾಭಿಷೇಕ;
ಮೇ 20ರಂದು ಸಂಜೆ ದೇವತಾ ಪ್ರಾರ್ಥನೆ, ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮಿಸಿದ ಆಚಾರಿ, ಮೇಸ್ತ್ರಿಯವರಿಗೆ ಗೌರವ ಸಮರ್ಪಣೆ ನಡೆಯಿತು. ಬಳಿಕ ದೈವಜ್ಞ ಹರಿಪ್ರಸಾದ್ ವೈಲಾಯರ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ಪೂಜೆ, ವಾಸ್ತುಹೋಮ, ರಕ್ಷೋಘ್ನ ಹೋಮ, ಶಾಂತಿಹೋಮ, ಪ್ರಾಕಾರ ಬಲಿ, ಬಿಂಬಶುದ್ಧಿ, ಶಯ್ಯಧಿವಾಸ, ಪ್ರಸಾದ ವಿತರಣೆ ನಡೆಯಿತು. ಮೇ.21ರಂದು ಬೆಳಿಗ್ಗೆ ಸ್ವಸ್ತಿ ಪುಣ್ಯಾಹ, ಗಣಯಾಗ ಪ್ರತಿಷ್ಠೆ, ಪ್ರಧಾನ ಹೋಮ, 8.52ರ ಮಿಥುನ ಲಗ್ನದಲ್ಲಿ ದೈವ ಪ್ರತಿಷ್ಠೆ, ಪಂಚವಿಂಶತಿ ಕಲಶಾಭಿಷೇಕ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.