ನೆಲ್ಯಾಡಿ : ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ಮತ್ತು ಕ್ರೀಡಾ ಸ್ಪರ್ಧೆ ಮೇ.22ರಂದು ನಡೆಯಿತು.
ಸಭಾ ಕಾರ್ಯಕ್ರಮವು ಕಾಲೇಜಿನ ಸಂಯೋಜಕ ಡಾ. ಸುರೇಶ್ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿ ನೆಲ್ಯಾಡಿ ಪಿಎಂ ಶ್ರೀ ಉನ್ನತೀಕರಿಸಿದ ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಜನಾರ್ಧನ ಗೌಡ ಇವರು ಉದ್ಘಾಟಿಸಿ, “ಜೀವನದ ಯಶಸ್ಸಿಗೆ ಕ್ರೀಡಾ ಚಟುವಟಿಕೆಗಳು ಪೂರಕವಾಗಿದೆ. ಆರೊಗ್ಯಯುತ ದೇಹದಲ್ಲಿ ಆರೋಗ್ಯಯುತ ಮನಸ್ಸಿರುತ್ತದೆ. ದೈಹಿಕ, ಮಾನಸಿಕ, ಸಾಮಾಜಿಕ ಸ್ವಾಸ್ಥ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ಓಟದಲ್ಲಿ ಹೇಗೆ ಟ್ರ್ಯಾಕ್ ತಪ್ಪದೇ ಓಡಿದರೆ ಮಾತ್ರ ಯಶಸ್ಸಿನ ಗುರಿ ತಲುಪಲು ಸಾಧ್ಯವೊ ಹಾಗೆಯೇ ಜೀವನದಲ್ಲೂ ಟ್ರ್ಯಾಕ್ ತಪ್ಪದೇ ನೀತಿ ನಿಯಮಾವಳಿಯೊಂದಿಗೆ ಬದುಕಿದರೆ ಜೀವನ ಯಶಸ್ವಿಗೊಳ್ಳುತ್ತದೆ” ಎಂದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು,ಇತಿಹಾಸ ವಿಭಾಗದ ಪ್ರಾಧ್ಯಪಕ ಡಾ. ಸೀತಾರಾಮ ಪಿ. ಸ್ವಾಗತಿಸಿದರು. ದ್ವಿತೀಯ ಬಿಕಾಂ ವಿದ್ಯಾರ್ಥಿ, ಕ್ರೀಡಾ ಕಾರ್ಯದರ್ಶಿ ರಾಹುಲ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ವೆರೋನಿಕಾ ಪ್ರಭಾ ವಂದಿಸಿದರು. ಪಾವನ ಹಾಗೂ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ವಿವಿ ನೆಲ್ಯಾಡಿ ದೈಹಿಕ ಉಪನ್ಯಾಸಕ ಪಾವನಕೃಷ್ಣ, ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.