ಪುತ್ತೂರು:ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಕರೆ ಮಾಡಿ ಜು.1ಕ್ಕೆ ಭೇಟಿಯಾಗುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಶಾಸಕರು ಬೆಂಗಳೂರುಗೆ ತೆರಳಿದ್ದಾರೆ.
ಜೂ.30ರಂದು ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲ ಅವರೇ ಖುದ್ದು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕರೆ ಮಾಡಿ ಬುಲಾವ್ ನೀಡಿದ್ದಾರೆ.ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ವಿರುದ್ಧ ಸ್ವಪಕ್ಷೀಯ ಕೆಲ ಶಾಸಕರೇ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಇದರ ಶಮನಕ್ಕಾಗಿ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಜೂನ್ 30ರಿಂದ ಮೂರು ದಿನ ಕಾಂಗ್ರೆಸ್ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ.
ಪಕ್ಷದ ಸಂಘಟನೆ ಅವರವರ ಕ್ಷೇತ್ರಗಳಲ್ಲಿ ಯಾವ ರೀತಿ ನಡೆಯುತ್ತಿದೆ.ಪಕ್ಷದ ಮುಂಚೂಣಿ ಘಟಕಗಳ ಕಾರ್ಯವೈಖರಿಯ ಬಗ್ಗೆ ಹಾಗು ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಯಾವ ಮಟ್ಟದಲ್ಲಿ ಆಗುತ್ತಿವೆ ಮತ್ತು ಸರಕಾರದ ಮಟ್ಟದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆಯೂ ಶಾಸಕರಿಂದ ಮಾಹಿತಿ ಪಡೆಯಲು ತಾನು ರಾಜ್ಯಕ್ಕೆ ಬಂದಿರುವುದಾಗಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಮಾಧ್ಯಮಕ್ಕೆ ತಿಳಿಸಿದ್ದಾರೆ.ಈ ನಡುವೆ ಜೂ.30ರಂದು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಉಸ್ತುವಾರಿಯವರೇ ಖುದ್ದು ಕರೆ ಮಾಡಿ ಜು.1ಕ್ಕೆ ಭೇಟಿಯಾಗುವಂತೆ ತಿಳಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದು ಚರ್ಚೆಗೆ ಕಾರಣವಾಗಿದೆ.
‘ಯೂ ಆರ್ ಲಯನ್ ಆಫ್ ಸೌತ್ ಕೆನರಾ’ ಎಂದಿದ್ದ ಸುರ್ಜೇವಾಲ
ಕಾಂಗ್ರೆಸ್ ಉಸ್ತುವಾರಿ ರಣಜೀತ್ ಸಿಂಗ್ ಸುರ್ಜೇವಾಲ ಅವರು ಈ ಹಿಂದೆ ಮಂಗಳೂರು ಆಗಮಿಸಿದ್ದ ಸಂದರ್ಭ ‘ಮಿಸ್ಟರ್ ಎಂಎಲ್ಎ ಅಶೋಕ್ ರೈ, ಯೂ ಆರ್ ಲಯನ್ ಆಫ್ ಸೌತ್ ಕೆನರಾ.ಯೂ ಆರ್ ಗ್ರೇಟ್ ಪರ್ಸನ್’ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರ ಕಾರ್ಯವೈಖರಿ ಕುರಿತು ಪ್ರಶಂಸಿಸಿದ್ದನ್ನು ಇಲ್ಲಿ ನೆನಪಿಸಬಹುದು.