ಹಸಿರು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು: ಎಸ್.ಐ ಜಂಬೂರಾಜ್

ಪುತ್ತೂರು: ಒಂದು ಕಾಲದಲ್ಲಿ ಭೂಮಿ ಮೇಲೆ ಹಸಿರು ತುಂಬಿ ತುಳುಕುತ್ತಿತ್ತು ಮಲೆನಾಡು ಮರ ಗಿಡಗಳಿಂದ ಕಂಗೊಳಿಸುತ್ತಿತ್ತು. ಆದರೆ ಮಾನವನ ಸ್ವಾರ್ಥದಿಂದಾಗಿ ಮರ ಗಿಡಗಳು ನಾಶವಾಗುತ್ತಾ ಬಂದಿದ್ದು, ಹಸಿರಿಗೆ ಕಂಟಕ ಬಂದಿದೆ. ಆದ್ದರಿಂದ ಇಂದಿನ ಜನಾಂಗ ಗಿಡ ಬೆಳೆಸುವ ಮೂಲಕ ಈ ಭೂಮಿಗೆ ಮತ್ತೆ ಹಸಿರು ಹೊದಿಸುವ ಕೆಲಸವನ್ನು ಮಾಡಬೇಕಾಗಿದೆ. ವರ್ತಕರ ಸಂಘದ ಈ ನಾಳೆಗೊಂದು ನೆರಳು ಒಂದು ಉತ್ತಮ ಕಾರ್ಯವಾಗಿದೆ ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಬ್ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಹೇಳಿದರು.
ಇವರು ಜು.6ರಂದು ಕುಂಬ್ರ ವರ್ತಕರ ಸಂಘದ ವತಿಯಿಂದ ಕುಂಬ್ರ ಜಂಕ್ಷನ್ನಲ್ಲಿ ನಡೆದ ನಾಳೆಗೊಂದು ನೆರಳು’ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಸಸಿ ವಿತರಿಸಿ ಮಾತನಾಡಿದರು. ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಬಿ.ಕೆಯವರು ಮಾತನಾಡಿ, ಮರಗಳನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.ಮರಗಳಿದ್ದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲಿನ ಮರಗಳ ರಕ್ಷಣೆ ನಮ್ಮ ಕೈಯಲ್ಲಿದೆ. ನಾಳೆಗೊಂದು ನೆರಳು ಹಾಗೂ ಆರೋಗ್ಯ ಬೇಕಿದ್ದರೆ ಇಂದು ಮರಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕುಂಬ್ರ ವರ್ತಕರ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ ಮಹಮ್ಮದ್ ಕೂಡುರಸ್ತೆ, ಸಂಘದ ಗೌರವ ಸಲಹೆಗಾರ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳರವರುಗಳು ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರ ದುರ್ಗಾಪ್ರಸಾದ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಉಪಾಧ್ಯಕ್ಷ ಸದಾಶಿವ ನಾಯ್ಕ ಕುಂಬ್ರ, ಸದಸ್ಯರುಗಳಾದ ರಮೇಶ್ ಆಳ್ವ ಕಲ್ಲಡ್ಕ, ದಿವಾಕರ ಶೆಟ್ಟಿ, ಉದಯ ಆಚಾರ್ಯ ಕೃಷ್ಣನಗರ, ರಾಜೇಶ್ ರೈ ಪರ್ಪುಂಜ, ಸಂಶುದ್ದೀನ್ ಎ.ಆರ್, ಚರಿತ್ ಕುಮಾರ್, ಹನೀಫ್, ರೇಷ್ಮಾ ಮೆಲ್ವಿನ್, ಪ್ರದೀಪ್ ಶಾಂತಿವನ, ಲಕ್ಷ್ಮಣ್, ಭಾರತೀಯ ಮಾನವ ಹಕ್ಕು ಆಯೋಗದ ತಾ.ಅಧ್ಯಕ್ಷ ಅಬ್ಬಾಸ್ ಗೂನಡ್ಕ, ರಾಧಾಕೃಷ್ಣ, ಶುತಿಚಂದ್ರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ಸ್ವಾಗತಿಸಿದರು. ರಮೇಶ್ ಆಳ್ವ ಕಲ್ಲಡ್ಕ ವಂದಿಸಿದರು.
300 ಸಸಿ ವಿತರಣೆ
ನಾಳೆಗೊಂದು ನೆರಳು’ ಎಂಬ ಧ್ಯೇಯದೊಂದಿಗೆ ವರ್ತಕರ ಸಂಘದ ವತಿಯಿಂದ ಹಣ್ಣು ಹಂಪಲು ಸೇರಿದಂತೆ ವಿವಿಧ ಜಾತಿಯ ಸುಮಾರು 300 ಸಸಿಗಳನ್ನು ವಿತರಿಸಲಾಯಿತು. ಗಿಡಗಳನ್ನು ಸಾರ್ವಜನಿಕರಿಗೆ, ಸಂಘದ ಸದಸ್ಯರುಗಳಿಗೆ ವಿತರಿಸಲಾಯಿತು.