ಗರ್ಭಸಂಸ್ಕಾರದಿಂದ ಅಂತ್ಯ ಸಂಸ್ಕಾರದ ತನಕ ಉತ್ತಮ ವ್ಯಕ್ತಿತ್ವ ನಮ್ಮದಾಗಲಿ: ಕಡಮಜಲು ಸುಭಾಷ್ ರೈ
ಪುತ್ತೂರು: ಉತ್ತಮ ವಿಚಾರಗಳನ್ನು ತಿಳಿದುಕೊಳ್ಳುವುದೇ ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡಲು ಸಾಧ್ಯ ಈ ನಿಟ್ಟಿನಲ್ಲಿ ಗರ್ಭಸಂಸ್ಕಾರದಿಂದ ಅಂತ್ಯ ಸಂಸ್ಕಾರದ ತನಕ ನಾವು ಒಳ್ಳೆಯ ವಿಚಾರಗಳನ್ನು, ಸಂಸ್ಕಾರಗಳನ್ನು ಕಲಿತುಕೊಂಡು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ಖ್ಯಾತ ಚಿಂತಕರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ, ಸಾಹಿತಿ ಕಡಮಜಲು ಸುಭಾಷ್ ರೈ ಹೇಳಿದರು.

ಅವರು ಸ್ಪಂದನಾ ಸೇವಾ ಬಳಗ ಕುಂಬ್ರ ಇವರು ಏರ್ಪಡಿಸಿದ್ದ ಧರ್ಮ ಜಾಗೃತಿಗಾಗಿ ಸನಾತನ ಹಿಂದೂ ಧರ್ಮದ ಆಚಾರ, ವಿಚಾರ, ನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ನಂಬಿಕೆಗಳು ಮತ್ತು ಅದರ ಅರ್ಥ ವಿವರಣೆಯ’ ಮೌಲ್ಯಮಾಪನ ಉದ್ದೇಶ ಹೊಂದಿರುವ ಗ್ರಂಥ ‘ ಸುಜ್ಞಾನ ದೀಪಿಕೆ’ ವಿತರಣಾ ಕಾರ್ಯಕ್ರಮವನ್ನು ಜು.೬ ರಂದು ಬೆಳಿಗ್ಗೆ ಕುಂಬ್ರ ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸುಜ್ಞಾನ ದೀಪಿಕೆಯಲ್ಲಿ ಜೀವನಕ್ಕೆ ಬೇಕಾದ ಬಹಳಷ್ಟು ವಿಷಯಗಳಿದ್ದು ಎಲ್ಲವನ್ನು ಓದಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಸುಭಾಷ್ ರೈಯವರು, ಈ ಪುಸ್ತಕವನ್ನು ಓದಿ ಮುಂದೆ ಬರುವ ಮೌಲ್ಯಮಾಪನ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಬಹುಮಾನ ಪಡೆದುಕೊಳ್ಳುವ ಮೂಲಕ ಜೀವನದಲ್ಲೂ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಒಳ್ಳೆಯ ವ್ಯಕ್ತಿಯಾಗಿ ಬಾಳಬೇಕು ಎಂದು ಹೇಳಿ ಶುಭ ಹಾರೈಸಿದರು.

ಧರ್ಮದಿಂದ ದೂರ ಸರಿದಿದ್ದರಿಂದ ನೆಮ್ಮದಿ ಕಾಣೆಯಾಗಿದೆ: ವಿಜಯ ಕುಮಾರ್
ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜನ ಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕಾರರಾದ ವಿಜಯ ಕುಮಾರ್ರವರು ಮಾತನಾಡಿ, ಇಂದಿನ ದಿನಗಳಲ್ಲಿ ಹಣ, ಐಶ್ವರ್ಯ, ಒಡವೆ, ಕಾರು ಬಂಗಲೆ ಎಲ್ಲಾ ಇದ್ದರೂ ನೆಮ್ಮದಿ ಒಂದಿರುವ ಮನೆಯನ್ನು ಹುಡುಕುವುದು ತುಂಬಾ ಕಷ್ಟ ಏಕೆಂದರೆ ನಾವು ಧರ್ಮದಿಂದ ದೂರವಾಗುತ್ತಿದ್ದೇವೆ ಆದ್ದರಿಂದಲೇ ನಮ್ಮಿಂದ ನೆಮ್ಮದಿ ಎನ್ನುವುದು ದೂರವಾಗುತ್ತಿದೆ. ನಮ್ಮಲ್ಲಿ ಸಂಸ್ಕಾರ, ಸಂಸ್ಕೃತಿ ಯಾವಾಗ ದೂರವಾಗುತ್ತದೋ ಆಗ ನೆಮ್ಮದಿ,ಶಾಂತಿ ದೂರವಾಗುತ್ತದೆ ಅದಕ್ಕಾಗಿಯೇ ನಾವು ಸನಾತನ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಆದಿ ಮತ್ತು ಅಂತ್ಯವಿಲ್ಲದ ಸನಾತನ ಹಿಂದೂ ಧರ್ಮವನ್ನು ನಾವೇ ಹಾಳು ಮಾಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ ಅವರು ನಮ್ಮ ಧರ್ಮದ ಬಗ್ಗೆ ನಮಗೆ ಗೌರವ ಇರಬೇಕು, ಧರ್ಮದ ಆಳ ಅರಿವುಗಳನ್ನು ತಿಳಿದುಕೊಂಡು ಜೀವನ ಮಾಡಬೇಕು ಈ ನಿಟ್ಟಿನಲ್ಲಿ ಸ್ಪಂದನಾ ಸೇವಾ ಬಳಗದವರು ಒಂದು ಉತ್ತಮ ಕೆಲಸವನ್ನು ಆರಂಭಿಸಿದ್ದಾರೆ. ಇದು ಸಮಾಜಕ್ಕೆ ಮಾದರಿಯಾದ ಕಾರ್ಯಕ್ರಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರರವರು ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮ ಜಾಗೃತಿಗಾಗಿ ಹಮ್ಮಿಕೊಂಡಿದ್ದ ರಾಮಲೀಲೋತ್ಸವದ ಬಳಿಕ ಪ್ರಥಮ ಕಾರ್ಯಕ್ರಮವಾಗಿ ಸುಜ್ಞಾನ ದೀಪಿಕೆ ವಿತರಣೆ ಮಾಡುತ್ತಿದ್ದೇವೆ. ಅರಿಯಡ್ಕ, ಕೆದಂಬಾಡಿ ಮತ್ತು ಒಳಮೊಗ್ರು ಗ್ರಾಮದ 100 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುತ್ತಿದ್ದೇವೆ. ಮುಂದಿನ ನವರಾತ್ರಿ ಸಂದರ್ಭದಲ್ಲಿ ಪುಸ್ತಕದ ಮೌಲ್ಯಮಾಪನ ಪರೀಕ್ಷೆಯನ್ನು ಮಾಡಿ ಅದರಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಸೇರಿದಂತೆ ಬಹುಮಾನ ಕೊಡುವ ಕೆಲಸ ಆಗಲಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ ಉಪಸ್ಥಿತರಿದ್ದರು. ರಕ್ಷಾ ಮತ್ತು ಶ್ರೇಯಾ ಪ್ರಾರ್ಥಿಸಿದರು. ಸೇವಾ ಬಳಗದ ಸಂಚಾಲಕ ಸುಧಾಕರ ರೈ ಕುಂಬ್ರ ಸ್ವಾಗತಿಸಿದರು. ಸೇವಾ ಬಳಗದ ಕಾರ್ಯಾಧ್ಯಕ್ಷ ಅಶೋಕ್ ತ್ಯಾಗರಾಜೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ರೈ ಜಾರತ್ತಾರು ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕೋಶಾಧಿಕಾರಿ ಚಂದ್ರ ಇದ್ಪಾಡಿ, ಸಂಚಾಲಕರುಗಳಾದ ಶರತ್ ಗೌಡ ಗುತ್ತು, ಸುಕುಮಾರ ಮಡ್ಯಂಗಳ ಮಹೇಶ್ ರೈ ಕೇರಿ, ಸದಸ್ಯರುಗಳಾದ ಅಮರನಾಥ್, ಉದಯ ಮಡಿವಾಳ, ಪದ್ಮನಾಭ ಮುಡಾಲ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಸಲಹೆಗಾರರುಗಳಾದ ತಿಲಕ್ ರೈ ಕುತ್ಯಾಡಿ, ತ್ರಿವೇಣಿ ಪಲ್ಲತ್ತಾರು, ನಿತೀಶ್ ಕುಮಾರ್ ಶಾಂತಿವನ, ಉಪಾಧ್ಯಕ್ಷ ಸಂತೋಷ್ ಮಣಿಯಾಣಿ, ಕಾರ್ಯದರ್ಶಿ ಹರೀಶ್ ಬಿಜತ್ರೆ, ಸದಸ್ಯ ಅರುಣ್ ರೈ ಬಿಜಳ, ಹರೀಶ್ ರೈ ಮುಗೇರು, ಪ್ರಮೋದ್ ಶೇಖಮಲೆ, ನೇಮಿರಾಜ್ ರೈ, ರಾಜ್ಪ್ರಕಾಶ್ ರೈ, ಜನಾರ್ದನ್ ಗೌಡ ಕೊಡಂಕೀರಿ, ನಾರಾಯಣ ಪೂಜಾರಿ ಕುರಿಕ್ಕಾರ, ಪ್ರದೀಪ್ ಸೇರ್ತಾಜೆ, ಹರಿಪ್ರಸಾದ್ ಕೌಡಿಚ್ಚಾರ್, ಸುರೇಶ್ ಕುಮಾರ್ ಸುಶಾ, ಸೇವಾ ಬಳಗದ ಸಹ ಸಂಚಾಲಕಿ ಉಷಾ ನಾರಾಯಣ್, ಮಲ್ಲಿಕಾ ಸುಂದರ ರೈ, ತೃಪ್ತಿ ರತನ್ ರೈ, ಪುಷ್ಪಾ ಬೋಳೋಡಿ, ಪ್ರೀತಾ ಎನ್.ರೈ, ಭಾರತಿ ರೈ ಅರಿಯಡ್ಕ, ರೇಖಾ ಯತೀಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
3 ಗ್ರಾಮದ 100 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸುಜ್ಞಾನ ದೀಪಿಕೆ
ಅರಿಯಡ್ಕ, ಒಳಮೊಗ್ರು ಮತ್ತು ಕೆದಂಬಾಡಿ ಗ್ರಾಮದ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ‘ಸುಜ್ಞಾನ ದೀಪಿಕೆ’ ಗ್ರಂಥವನ್ನು ವಿತರಿಸಲಾಯಿತು. ಪುಸ್ತಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ನವರಾತ್ರಿ ಸಂದರ್ಭದಲ್ಲಿ ಮೌಲ್ಯಮಾಪನ ಪರೀಕ್ಷೆ ನಡೆಯಲಿದ್ದು ಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ಮತ್ತು ಪರೀಕ್ಷೆಯಲ್ಲಿ ಭಾಗವಹಿಸಿದವರಿಗೆ ‘ಧರ್ಮ ಶಿಕ್ಷಣ ಪ್ರಮಾಣ ಪತ್ರ’ ನೀಡಲಾಗುತ್ತದೆ ಅಲ್ಲದೆ ಅಧಿಕ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.9611695408 ಅಥವಾ 9449773818 ಗೆ ಸಂಪರ್ಕಿಸಬಹುದಾಗಿದೆ.
ರಾತ್ರಿ 8 ಗಂಟೆಗೆ ವಾಟ್ಸಫ್ನಲ್ಲಿ ‘ಧಾರ್ಮಿಕ ರಸಪ್ರಶ್ನೆ’
ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣದ ಅರಿವನ್ನು ಹೆಚ್ಚಿಸುವ ಸಲುವಾಗಿ ಸ್ಪಂದನಾ ಸೇವಾ ಬಳಗ ಒಂದು ವಿಶೇಷ ಯೋಚನೆಯನ್ನು ಮಾಡಿದ್ದು ಈಗಾಗಲೇ ನೋಂದಾವಣೆ ಮಾಡಿಕೊಂಡು 100 ಕ್ಕೂ ಅಧಿಕ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ರಚಿಸಿಕೊಂಡು ರಾತ್ರಿ 8 ಗಂಟೆಗೆ ಈ ಗ್ರೂಪ್ಗೆ ಧಾರ್ಮಿಕ ರಸಪ್ರಶ್ನೆ ಕಳುಹಿಸಲಾಗುತ್ತದೆ. ಗ್ರೂಪ್ 8 ರಿಂದ 8.15 ರ ತನಕ ಓಪನ್ ಇರುತ್ತದೆ. ಈ ವೇಳೆ ಉತ್ತರ ಕಳುಹಿಸಬೇಕು, ಯಾರು ಹೆಚ್ಚು ಸರಿ ಉತ್ತರ ಕಳುಹಿಸುತ್ತಾರೋ ಅವರಿಗೆ ಕೊನೆಯಲ್ಲಿ ಬಹುಮಾನ ಕೂಡ ನೀಡಲಾಗುತ್ತದೆ ಎಂದು ರತನ್ ರೈ ಕುಂಬ್ರ ತಿಳಿಸಿದರು.
‘ ಧರ್ಮ ಜಾಗೃತಿಗಾಗಿ ಸನಾತನ ಹಿಂದೂ ಧರ್ಮದ ಆಚಾರ, ವಿಚಾರ, ನಂಬಿಕೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ನಂಬಿಕೆಗಳು ಮತ್ತು ಅದರ ಅರ್ಥ ವಿವರಣೆಯ’ ಮೌಲ್ಯಮಾಪನ ಉದ್ದೇಶ ಹೊಂದಿರುವ ಗ್ರಂಥ ‘ ಸುಜ್ಞಾನ ದೀಪಿಕೆ’ಯನ್ನು ವಿತರಣೆ ಮಾಡಿದ್ದೇವೆ. ಮುಂದೆ ಮೌಲ್ಯ ಮಾಪನ ಕೂಡ ಮಾಡಲಿದ್ದೇವೆ. ಎಲ್ಲವೂ ಧರ್ಮ ಜಾಗೃತಿಗಾಗಿ ಸ್ಪಂದನಾ ಸೇವಾ ಬಳಗದ ಅಳಿಲು ಸೇವೆಯಾಗಿದೆ. ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.’
-ರತನ್ ರೈ ಕುಂಬ್ರ,
ಅಧ್ಯಕ್ಷರು ಸ್ಪಂದನಾ ಸೇವಾ ಬಳಗ ಕುಂಬ್ರ