ಪುತ್ತೂರು: ಬಸ್ಸು ಚಲಾಯಿಸುತ್ತಿದ್ದ ವೇಳೆಯೇ ಚಾಲಕನ ಶುಗರ್ ಡೌನ್ ಆಗಿದ್ದು ತಕ್ಷಣವೆ ಚಾಲಕ ಬಸ್ಸನ್ನು ನಿಲ್ಲಿಸುವ ಮೂಲಕ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಘಟನೆ ಕುಂಬ್ರದಲ್ಲಿ ಜು.7 ರಂದು ಮಧ್ಯಾಹ್ನ ನಡೆದಿದೆ.
ಪುತ್ತೂರಿನಿಂದ ಸುಳ್ಯಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಸನ್ನು ದಯಾನಂದ ಎಂಬವರು ಚಾಲನೆ ಮಾಡುತ್ತಿದ್ದರು. ಕುಂಬ್ರಕ್ಕೆ ತಲುಪುತ್ತಿದ್ದಂತೆ ದಯಾನಂದರವರ ದೇಹದ ಶುಗರ್ನಲ್ಲಿ ಏರಿಳಿತ ಕಂಡಿದ್ದು ತಕ್ಷಣವೇ ಅವರು ಕುಂಬ್ರ ಜಂಕ್ಷನ್ನಲ್ಲಿ ಬಸ್ಸನ್ನು ನಿಲ್ಲಿಸುತ್ತಿದ್ದಂತೆ ಸ್ಟೇರಿಂಗ್ ಮೇಲೆ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯರು ಅವರನ್ನು ಹತ್ತಿರದ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದಾರೆ. ದಯಾನಂದರವರನ್ನು ಪರೀಕ್ಷಿಸಿದ ವೈದ್ಯರು ಅವರ ಶುಗರ್ ಕಡಿಮೆಯಾಗಿದ್ದು ಇದಕ್ಕೆ ಔಷಧಿ ನೀಡಿದ್ದಾರೆ. ಬಳಿಕ ಚೇತರಿಸಿಕೊಂಡ ದಯಾನಂದರವರನ್ನು ಅವರ ಮನೆಗೆ ಕಳುಹಿಸಿಕೊಡಲಾಯಿತು. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬದಲಿ ಬಸ್ಸಲ್ಲಿ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.