ಕ್ಷೇತ್ರವು, ಸೀಮೆಯ ಪ್ರಮುಖ ದೈವಸ್ಥಾನವಾಗಿ ಬೆಳಗಲಿದೆ- ಬಾಲಕೃಷ್ಣನ್ ಸಜೀಶ್ ದೖೆವಜ್ಞರು
ಪುತ್ತೂರು: ಸುಳ್ಯಪದವು ಶಬರಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಜು.7ರಂದು ನಡೆದ ಪ್ರಶ್ನೆ ಚಿಂತನೆಯಲ್ಲಿ ಕೊರಗಜ್ಜ ಕ್ಷೇತ್ರದಲ್ಲಿ ಗ್ರಾಮ ದೇವಸ್ಥಾನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಭಕ್ತರ ಮನೋ ಇಷ್ಟಗಳು ಶೀಘ್ರದಲ್ಲಿ ಪರಿಹಾರವಾಗುತ್ತಿದೆ. ಅದರಿಂದ ಕ್ಷೇತ್ರದ ಬಗ್ಗೆ ಭಕ್ತರಲ್ಲಿ ನಂಬಿಕೆ ಹೆಚ್ಚಿದೆ. ಮುಂದಿನ ದಿನದಲ್ಲಿ ಸೀಮೆಯ ಪ್ರಮುಖ ದೈವಸ್ಥಾನವಾಗಿ ಕೊರಗಜ್ಜ ಕ್ಷೇತ್ರ ಬೆಳಗಲಿದೆ ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿದೆ.
ಜ್ಯೋತಿಷ್ಯರಾದ ಬಾಲಕೃಷ್ಣನ್, ಸಜೀಶ್ ಮುಳ್ಳೇರಿಯ ಇವರ ನೇತೃತ್ವದಲ್ಲಿ ತಾಂಬೂಲ ಪ್ರಶ್ನಾಚಿಂತನೆ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದು ಜೋತಿಷ್ಯರು ಹೇಳಿದರು.

ಕ್ಷೇತ್ರದ ಪ್ರಧಾನ ದೈವ ಕೊರಗಜ್ಜನ ಭಂಡಾರದಲ್ಲಿ ಯಾವುದೇ ದೋಷಗಳು ಇಲ್ಲ. ಗುಳಿಗ ದೈವಸ್ಥಾನವನ್ನು ಕಟ್ಟೆಯ ಒಳಗಡೆ ಇರಲು ಸಮ್ಮತಿ ಇದೆ ಎಂದು ಕಂಡು ಬಂತು. ಕಟ್ಟೆ ಒಳಗಡೆ ಪ್ರವೇಶ ಮಾಡಲು ಪ್ರಧಾನ ಪೂಜಾ ಕರ್ಮಿಯವರ ಜೊತೆ ಸಹಾಯಕರಿಗೆ, ಹಾಗೂ ಅನಿವಾರ್ಯ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷರಿಗೆ ಅವಕಾಶ ಇರುವುದು ಹಾಗೂ ಭಕ್ತರು ಕಟ್ಟೆ ಹೊರಗಡೆ ನಿಂತು ಪೂಜಾ ಕರ್ಮಿ ಮುಖಾಂತರ ಪ್ರಾರ್ಥನೆ ಸಲ್ಲಿಸುವುದು. ಪ್ರಸಾದವನ್ನು ಕಛೇರಿಯಿಂದ ಪಡೆದುಕೊಳ್ಳಬೇಕು ಎಂದು ಜೋತಿಷ್ಯರು ತಿಳಿಸಿದರು.
ಇಬ್ಬರು ದೈವ ನರ್ತಕರು ಸಮಾನ ಅಂಶಗಳು ಕಂಡು ಬಂದಿರುವುದರಿಂದ ಸಮಿತಿಯವರ ಸಲಹೆಯಂತೆ ಒಬ್ಬೊಬ್ಬರಿಗೆ ಒಂದೊಂದು ವರ್ಷ ಸೇವೆ ನೀಡಲು ಸಾಧ್ಯವೇ? ಎಂದು ಪ್ರಶ್ನೆಚಿಂತನೆಯಲ್ಲಿ ನೋಡಿದಾಗ ಸಾಧ್ಯ ಎಂದು ತಿಳಿದು ಬಂದಿದೆ. ಸಂಚಾರಿ ಬ್ರಹ್ಮರಾಕ್ಷಸನ ಬಾಧೆ ಕಂಡು ಬರುವ ಸಾಧ್ಯತೆ ಇರುವುದರಿಂದ ಕ್ಷೇತ್ರದಲ್ಲಿ ಲಘು ಸುದರ್ಶನ ಹೋಮ ನಡೆಸುವುದು ಸೂಕ್ತ ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂತು. ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಒಗ್ಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಧರ್ಮ, ಪ್ರಾಮಾಣಿಕತೆಯಿಂದಾಗಿ ಯಾವುದೇ ಆರ್ಥಿಕ ಸಮಸ್ಯೆ ಕಾಣ ಬರುವುದಿಲ್ಲ, ಹಣದ ದುರುಪಯೋಗವಾಗಲಿ, ಕೊರತೆಯಾಗಲಿ ಕಾಣುವುದಿಲ್ಲ ಎಂದು ಪ್ರಶ್ನೆಯಲ್ಲಿ ಕಂಡು ಬಂತು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು ಮುಖ್ಯ ಪ್ರವೇಶ ದ್ವಾರ, ಮದುವೆ ಹಾಲ್ ಗಳು ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂತು. ಊರಿನ ದೈವ ದೇವಸ್ಥಾನಕ್ಕೆ ಪ್ರಶ್ನೆ ಚಿಂತನೆ ಸಲುವಾಗಿ ಕಾಣಿಕೆ, ಪೂಜಾ ಸೇವೆಯನ್ನು ಸಲ್ಲಿಸುವಂತೆ ಜೋತಿಷ್ಯರು ತಿಳಿಸಿದರು.
ಸೇವಾ ಸಮಿತಿಯ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿನಗರ, ಉಪಾಧ್ಯಕ್ಷ ಸದಾನಂದ ರೈ ಬೋಳಂಕೂಡ್ಲು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಜತೆ ಕಾರ್ಯದರ್ಶಿ ವಿನಯ್ ದೇವಸ್ಯ,ಕೋಶಾಧಿಕಾರಿ ಭಾಸ್ಕರ್ ಹೆಗ್ಡೆ, ಪೂಜಾ ಕರ್ಮಿ ಮಾಧವ ಸಾಲಿಯಾನ್ ಮರದಮೂಲೆ ಹಾಗೂ ಶಿವರಾಂ ಮಣಿಯಾಣಿ ಕುಳ ಮತ್ತು ಸೇವಾ ಸಮಿತಿಯ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.