ಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳ ಮಾರ್ಗದರ್ಶನ ಅಗತ್ಯ- ಚಂದ್ರಶೇಖರ್ ಕೆದ್ದೋಟೆ
ಪುತ್ತೂರು: ನೈತಿಕತೆ ಎನ್ನುವಂತದ್ದು ಒತ್ತಾಯಪೂರ್ವಕವಾಗಿ ಬರುವಂತದ್ದಲ್ಲ. ಮಕ್ಕಳು ಭಯಮುಕ್ತರಾಗಿ ಖುಷಿ ಖುಷಿಯಿಂದ ಕಲಿಯುವಂತಾಗಬೇಕು ಎಂದು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಕೆದ್ದೋಟೆ ಹೇಳಿದರು.
ಎವಿಜಿ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಕ್ಷಣದಲ್ಲಿ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾತನಾಡಿದರು. ಮಕ್ಕಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಕಾಲಕಾಲಕ್ಕೆ ಮಾರ್ಗದರ್ಶನವನ್ನು ನೀಡುತ್ತಾ ಒಳ್ಳೆಯ ಸಂಸ್ಕಾರಗಳನ್ನು ಕಲಿಯುವುದರ ಜೊತೆಗೆ ಕೆಟ್ಟ ಚಟಗಳತ್ತ ಮುಖ ಮಾಡದಂತೆ ನೋಡಿಕೊಳ್ಳುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿ ಎಂದು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮಕ್ಕಳ ಬೇಡಿಕೆಗಳಲ್ಲಿ ಒಳಿತು ಕೆಡುಕುಗಳನ್ನು ಸೂಕ್ಷ್ಮವಾಗಿ ಹೇಳಿಕೊಡುತ್ತಾ ದಿನನಿತ್ಯದ ಕೆಲಸ ಚಟುವಟಿಕೆಗಳಲ್ಲಿ ಅವರನ್ನು ನಮ್ಮ ಜೊತೆ ಸೇರಿಸಿಕೊಂಡಾಗ ಅವರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಲು ಸಾಧ್ಯ ಎಂದರು.
ಶಾಲಾ ಸಂಚಾಲಕ ಎ ವಿ ನಾರಾಯಣ್ ಮಾತನಾಡಿ, ಶಾಲೆಯನ್ನು ಸ್ಥಾಪಿಸಿದ ಉದ್ದೇಶವನ್ನು ತಿಳಿಸಿದರು. ಇನ್ನೂ ಉತ್ತಮ ರೀತಿಯಲ್ಲಿ ಶಾಲೆಯನ್ನು ನಡೆಸುವಲ್ಲಿ ಪೋಷಕರ ಸಲಹೆ ಸಹಕಾರವನ್ನು ಕೋರಿದರು. ಶಾಲಾ ಮುಖ್ಯಗುರು ಅಮರನಾಥ ಬಿ ಪಿ ಶಾಲೆಯಲ್ಲಿ ನಡೆಸುವ ಚಟುವಟಿಕೆಗಳನ್ನು ಮತ್ತು ಶಾಲಾ ನಿಯಮಗಳನ್ನು ತಿಳಿಸಿದರು. ಶಾಲಾ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯರವರು ಅತಿಥಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷಕ್ಕೆ ನೂತನ ಶಿಕ್ಷಕ ರಕ್ಷಕ ಸಂಘವನ್ನು ರಚಿಸಲಾಯಿತು. ಸೌಮ್ಯಶ್ರೀ ಹೆಗಡೆ ಸಂಘದ ನೂತನ ಅಧ್ಯಕ್ಷರಾಗಿ ಪುನರ್ ಆಯ್ಕೆಗೊಂಡರು. ವಿದ್ಯಾರ್ಥಿಯಾದ ಶ್ರೀಶ ಆಚಾರ್ಯ ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ ಚಾರ್ವಿ,ಅದ್ವಿತಿ ,ಶಿವಾನಿ ಪ್ರಾರ್ಥಿಸಿದರು.
ಶಿಕ್ಷಕಿಯರಾದ ಸವಿತಾ ಕೆ ಸ್ವಾಗತಿಸಿ, ಸುಚಿತ ವಂದಿಸಿದರು. ಸಹ ಶಿಕ್ಷಕಿ ಪ್ರಕ್ಷುತ ಕಾರ್ಯಕ್ರಮ ನಿರೂಪಿಸಿದರು.