ಪುತ್ತೂರಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಲೈಫ್ ಸ್ಕಿಲ್ ತರಬೇತಿ

0

ಪಠ್ಯವಷ್ಟೇ ಅಲ್ಲ, ಇಲ್ಲಿದೆ ಜೀವನಪಾಠ – ಸ್ವಾವಲಂಬಿ ಬದುಕಿಗೆ ತಳಹದಿಯಾದ ಶಿಕ್ಷಣ ಸಂಸ್ಥೆ

ಪುತ್ತೂರು: ಶಿಕ್ಷಣ ಸಂಸ್ಥೆಗಳಲ್ಲಿ ಪಾಠ ಪ್ರವಚನಗಳು ನಡೆಯುವುದು ಸರ್ವೇಸಾಮಾನ್ಯ. ಆದರೆ ಪಠ್ಯಶಿಕ್ಷಣದ ಜತೆಜತೆಗೆ ಜೀವನ ಪಾಠವನ್ನು ತಿಳಿದುಕೊಳ್ಳದಿದ್ದರೆ ಬದುಕು ಸಾಗಿಸುವುದು ಕಷ್ಟ. ಹಾಗಾಗಿ ಮಕ್ಕಳಿಗಿಂದು ಜೀವನಕಲೆಯನ್ನು ಕಲಿಸಿಕೊಡುವ ಅವಶ್ಯಕತೆ ಇದೆಯೆಂದು ಗುರುತಿಸಿರುವ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ ಪಠ್ಯದೊಂದಿಗೆ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ.



ಈ ಯೋಜನೆಯನ್ವಯ ಮಕ್ಕಳು ಯಾರನ್ನೂ ಆಶ್ರಯಿಸದೆ ತಮ್ಮ ದಿನನಿತ್ಯದ ಬದುಕನ್ನು ಸಾಗಿಸಲು ಅಗತ್ಯವಿರುವ ಕಲೆಗಳನ್ನು ಕರಗತ ಮಾಡಿಸಲಾಗುತ್ತದೆ. ಒಂದನೆಯಿಂದಲೇ ಇಂತಹ ತರಬೇತಿ ತರಗತಿಗಳು ಆರಂಭಗೊಂಡು ವಿದ್ಯಾರ್ಥಿಯೊಬ್ಬ ಹತ್ತನೇಯ ತರಗತಿಗೆ ತಲಪುವ ವೇಳೆಗೆ ಸ್ವಂತ ಉದ್ಯಮ ನಡೆಸುವವರೆಗಿನ ಜ್ಞಾನವನ್ನೂ ಈ ಲೈಫ್ ಸ್ಕಿಲ್ ತರಗತಿಗಳಲ್ಲಿ ಒದಗಿಸಿಕೊಡಲಾಗುತ್ತದೆ.


ಸಣ್ಣ ಸಣ್ಣ ತರಗತಿಗಳಲ್ಲಿ ಮಕ್ಕಳಿಗೆ ಕೈ ಕಾಲು ತೊಳೆಯುವುದು, ಹಲ್ಲುಜ್ಜುವುದು, ಬೀಗ ಹಾಕುವುದು ಹಾಗೂ ತೆಗೆಯುವುದು, ನೀರಿನ ಬಾಟಲ್‌ಗೆ ನೀರು ತುಂಬುವುದು, ಕಸ ಗುಡಿಸುವುದು, ಹೊದ್ದು ಮಲಗಿ ಎದ್ದ ನಂತರ ಹೊದಿಕೆಯನ್ನು ಮಡಚಿಡುವ ವಿಧಾನ, ಮನೆಗೆ ಬಂದವರನ್ನು ಸ್ವಾಗತಿಸುವ ಕ್ರಮ, ದೀಪದ ಬತ್ತಿ ತಯಾರಿ, ಗಾಯಕ್ಕೆ ತಕ್ಷಣದ ಮದ್ದು ಹಾಗೂ ಬ್ಯಾಂಡೇಜ್, ಸಂವಹನ ಕಲೆ, ಹಣ ಎಣಿಸುವ ರೀತಿಯೇ ಮೊದಲಾದ ಸಂಗತಿಗಳನ್ನು ತಿಳಿಸಿಕೊಡಲಾಗುತ್ತದೆ.


ಮಕ್ಕಳು ದೊಡ್ಡ ತರಗತಿಗಳಿಗೆ ಅಡಿಯಿಡುತ್ತಿದ್ದಂತೆ ಬಟ್ಟೆಗೆ ಇಸ್ತ್ರಿ ಹಾಕುವುದು, ಹರಿದ ಬಟ್ಟೆಯನ್ನು ಹೊಲಿಯುವುದು, ಜಡೆ ಹೆಣೆಯುವುದು, ತೋರಣ ಕಟ್ಟುವುದು, ತೆಂಗಿನಕಾಯಿ ಸುಲಿಯುವುದು, ವಾಹನದ ಚಕ್ರದಿಂದ ಗಾಳಿ ಹೊರಹೋಗಿದ್ದರೆ ಅದಕ್ಕೆ ಪಂಕ್ಷರ್ ಹಾಕುವುದು, ಗಾಳಿಯನ್ನೇ ಬದಲಾಯಿಸುವುದು, ಬ್ಯಾಂಕ್ ವ್ಯವಹಾರ, ಹಾರೆ – ಪಿಕ್ಕಾಸುಗಳಲ್ಲಿ ಕಾರ್ಯನಿರ್ವಹಣೆಯೇ ಮೊದಲಾದ ಹತ್ತು ಹಲವು ಜೀವನಾವಶ್ಯಕ ವಿಚಾರಗಳನ್ನು ಕಲಿಸಿಕೊಡಲಾಗುತ್ತದೆ. ಜತೆಗೆ ಕಾನೂನು ಜ್ಞಾನ ಹಾಗೂ ನ್ಯಾಯಾಲಯ ಭೇಟಿ, ಪೋಲೀಸ್ ಸ್ಟೇಷನ್ ಭೇಟಿ, ಕೈಗಾರಿಕಾ ಭೇಟಿಯನ್ನೂ ಆಯೋಜಿಸಿ ಅಲ್ಲಿನ ಕಾರ್ಯವಿಧಾನಗಳನ್ನು ತಿಳಿಸಿಕೊಡಲಾಗುತ್ತದೆ.


ಮಕ್ಕಳು ಪರಾವಲಂಬಿಯಾಗದೆ ತಮ್ಮ ಕೆಲಸಗಳನ್ನು ತಾವೇ ಮಾಡುವಂತಾಗಬೇಕು. ಸಣ್ಣ ತರಗತಿಯಿಂದಲೇ ಒಂದೊಂದನ್ನೇ ಕಲಿಸುತ್ತಾ ಬರುತ್ತೇವೆ. ಪ್ರತಿ ತರಗತಿಗೆ ಲೈಫ್ ಸ್ಕಿಲ್ ತರಬೇತಿಗೆಂದೇ ವಾರಕ್ಕೆ ಎರಡು ಅವಧಿಯನ್ನು ನಿಗದಿಪಡಿಸಿದ್ದೇವೆ. ಕೆಲವೊಂದು ಸಂದರ್ಭದಲ್ಲಿ ಅರ್ಧ ದಿನದಷ್ಟು ಹೊತ್ತನ್ನು ಇದಕ್ಕಾಗಿ ಮೀಸಲಿಡುತ್ತೇವೆ. ಹೆತ್ತವರಿಂದ ಹಾಗೂ ಮಕ್ಕಳಿಂದ ಸಾಕಷ್ಟು ಮೆಚ್ಚುಗೆ ಬರುತ್ತಿದೆ ಎನ್ನುವುದು ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಅವರ ಮಾತು.


ಹೀಗೆ ಜೀವನ ಕಲೆಗಳ ಬಗೆಗೆ ಮಕ್ಕಳಿಗೆ ಕಲಿಸಿಕೊಡುವ ಪುತ್ತೂರಿನ ಮೊದಲ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಪಾತ್ರವಾಗಿದೆ. ಇಲ್ಲಿ ಕಲಿಸುವ ಈ ಜೀವನಪಾಠಗಳಿಂದಾಗಿ ಹೆತ್ತವರಿಗೆ ತಮ್ಮ ಮಕ್ಕಳ ನಿರ್ವಹಣೆ ಸುಲಭವಾಗತೊಡಗಿದೆ. ಹಾಗಾಗಿ ಗುಣಮಟ್ಟದ ಶಿಕ್ಷಣದೊಂದಿಗೆ ಇಲ್ಲಿ ಇಂತಹ ಜೀವನಾವಶ್ಯಕ ಪಾಠ ದೊರಕುತ್ತದೆ ಎಂಬುದು ಅನೇಕ ಹೆತ್ತವರಿಗೆ ಮತ್ತಧಿಕ ಖುಷಿಕೊಡುತ್ತಿದೆ. ತಮ್ಮ ಮಕ್ಕಳನ್ನು ಅಂಬಿಕಾಕ್ಕೆ ದಾಖಲಾತಿ ಮಾಡಿಸುವಲ್ಲಿ ಈ ಲೈಫ್ ಸ್ಕಿಲ್ ತರಬೇತಿಯೂ ಮತ್ತೊಂದು ಕಾರಣವಾಗಿ ಕಾಣಿಸುತ್ತಿದೆ. ಒಮ್ಮೆ ಅಂಬಿಕಾ ವಿದ್ಯಾಲಯಕ್ಕೆ ಸೇರಿಸಿಬಿಟ್ಟರೆ ನಂತರ ಶಿಕ್ಷಣ ಹಾಗೂ ಮಕ್ಕಳ ನಿರ್ವಹಣೆ ಎರಡರ ಬಗೆಗೂ ಆತಂಕವಿಲ್ಲ ಎಂಬ ಭಾವನೆ ಹೆತ್ತವರಲ್ಲಿ ಮೂಡತೊಡಗಿದೆ.


ನಿಗದಿತ ಪಾಠಗಳ ಮಧ್ಯೆ ಇಂತಹ ಪ್ರಾಯೋಗಿಕ ತರಬೇತಿಗಳೂ ದೊರಕಿದಾಗ ಮಕ್ಕಳಿಗೆ ಒಂದು ರೀತಿಯ ಹೊಸ ಹುಮ್ಮಸ್ಸು ಹಾಗೂ ಆಸಕ್ತಿ ಮೂಡುವುದಲ್ಲದೆ ಬದುಕಿಗೆ ಅವಶ್ಯವಾದ ಮೂಲಭೂತ ಜ್ಞಾನವೂ ಬೆಳೆಯುತ್ತದೆ. ಶಾಲೆಯಲ್ಲಿ ಕಲಿಸಿಕೊಟ್ಟದ್ದು ಮನೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಾಗುತ್ತಿದೆ. ಅಂಬಿಕಾ ವಿದ್ಯಾಲಯ ಊಹೆಗೂ ಮೀರಿ ಮಕ್ಕಳ ಬೆಳವಣಿಗೆಗೆ ಶ್ರಮಿಸುತ್ತಿದೆ. ಈ ಸಂಸ್ಥೆಗೆ ನನ್ನ ಮಗನನ್ನು ಸೇರಿಸಿದ್ದಕ್ಕೆ ನನಗೆ ಹೆಮ್ಮೆ ಇದೆ ಎನ್ನುತ್ತಾರೆ ಹೆತ್ತವರಾದ ಸಂಧ್ಯಾ ಎಂ. ಅಡಿಕೆ ಹಿತ್ಲು.


ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ ಲೈಫ್ ಸ್ಕಿಲ್ ತರಬೇತಿಗಾಗಿಯೇ ಒಬ್ಬರು ಶಿಕ್ಷಕರನ್ನು ನೇಮಿಸಿದೆ. ಅವರು ವರ್ಷ ಪೂರ್ತಿ ವಿದ್ಯಾರ್ಥಿಗಳಿಗೆ ಇಂತಹ ಕಲೆಗಳನ್ನು ಕಲಿಸಿಕೊಡುತ್ತಿರುತ್ತಾರೆ. ಅವರಿಗೆ ಸಾಧ್ಯವಿಲ್ಲದ ಕೆಲವು ಕಲೆಗಳನ್ನು ಆಯಾ ಕ್ಷೇತ್ರದ ತಜ್ಞರನ್ನು ಕರೆಸಿ ಮಕ್ಕಳಿಗೆ ತರಬೇತಿಕೊಡುವ ಕಾರ್ಯವೂ ಇಲ್ಲಿ ನಡೆಯುತ್ತದೆ.


ಅಂಬಿಕಾದಿಂದ ಹೊರಬರುವ ಮಕ್ಕಳು ಹೆಚ್ಚು ಆತ್ಮಿವಿಶ್ವಾಸದಿಂದ ಜೀವನ ಸಾಗಿಸುವಂತಾಗಬೇಕು. ನಾಳಿನ ಸಮಾಜಕ್ಕೆ ಉತ್ಕೃಷ್ಟ ವ್ಯಕ್ತಿತ್ವಗಳನ್ನು ಸಮರ್ಪಿಸಬೇಕೆಂಬ ಮನೋಭಾವದಿಂದ, ಪಠ್ಯಕ್ರಮದಲ್ಲಿ ಹೇಳಿರದಿದ್ದರೂ ಹಲವು ಉಪಯುಕ್ತ ಸಂಗತಿಗಳನ್ನು ನಮ್ಮ ಸಂಸ್ಥೆಯಲ್ಲಿ ಜಾರಿಗೊಳಿಸಿದ್ದೇವೆ. ಈ ಲೈಫ್ ಸ್ಕಿಲ್ ತರಬೇತಿ ಮಕ್ಕಳ ಮೇಲೆ ಸಕಾರಾತ್ಮಕವಾಗಿ ಪರಿಣಾಮವಾಗುತ್ತಿರುವುದನ್ನು ಕಾಣುವಾಗ ನಮ್ಮ ಪ್ರಯತ್ನ ಸಾರ್ಥಕ ಎನಿಸುತ್ತಿದೆ.
ಸುಬ್ರಮಣ್ಯ ನಟ್ಟೋಜ,
ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು

LEAVE A REPLY

Please enter your comment!
Please enter your name here