ಬಿದ್ದು ಸಿಕ್ಕಿದ ಚಿನ್ನಾಭರಣ ವಾರೀಸುದಾರರಿಗೆ ಹಸ್ತಾಂತರ

0

ಉಪ್ಪಿನಂಗಡಿ: ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಬಿದ್ದು ಸಿಕ್ಕಿದ್ದ ನಾಲ್ಕು ಪವನ್ ತೂಕದ ಚಿನ್ನಾಭರಣವನ್ನು ಅದರ ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಉಪ್ಪಿನಂಗಡಿ ವನಿತಾ ಸಮಾಜದ ಸದಸ್ಯೆಯರು ಪ್ರಾಮಾಣಿಕತೆ ಮೆರೆದಿದ್ದಾರೆ.


ಮುಂಬರುವ ವರಮಹಾಲಕ್ಷ್ಮೀ ವ್ರತದ ಆಮಂತ್ರಣ ಪತ್ರವನ್ನು ವಿತರಿಸುವ ಕಾರ್ಯದಲ್ಲಿ ತೊಡಗಿದ್ದ ಉಪ್ಪಿನಂಗಡಿ ವನಿತಾ ಸಮಾಜದ ಪದಾಧಿಕಾರಿಗಳಾದ ಉಷಾಚಂದ್ರ ಮುಳಿಯ, ಪುಷ್ಪಲತಾ ಜನಾರ್ದನ್ , ಜ್ಯೋತಿ ಹೇರಂಭ ಶಾಸ್ತ್ರಿ, ಸುಗಂಧಿ ಎಂಬವರಿಗೆ ಚಿನ್ನಾಭರಣವೊಂದು ರಸ್ತೆಯಲ್ಲಿ ಬಿದ್ದು ಸಿಕ್ಕಿತ್ತು. ಕೂಡಲೇ ಅವರು ಪತ್ರಿಕಾ ವರದಿಗಾರರನ್ನು ಸಂಪರ್ಕಿಸಿ ಚಿನ್ನಾಭರಣ ಬಿದ್ದು ಸಿಕ್ಕಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ರವಾನಿಸಲು ಮನವಿ ಮಾಡಿದ್ದರು. ಅಂತೆಯೇ ಮಾಹಿತಿಯನ್ನು ಹಂಚಲಾಗಿತ್ತು. ಈ ಮಧ್ಯೆ ಅದೇ ಪರಿಸರದಲ್ಲಿ ಮಹಿಳೆಯೋರ್ವರು ಹುಡುಕಾಟ ನಡೆಸುತ್ತಿರುವುದನ್ನು ಕಂಡ ಇವರು, ವಿಚಾರಿಸಿದಾಗ ತಾನು ಚಿನ್ನಾಭರಣವೊಂದನ್ನು ಕಳೆದುಕೊಂಡಿರುವುದಾಗಿ ತಿಳಿಸುತ್ತಾರೆ. ಕಳೆದುಕೊಂಡ ಚಿನ್ನಾಭರಣದ ಮಾಹಿತಿ ಕೇಳಿದಾಗ, ಆಕೆ ತನ್ನ ಮೊಬೈಲ್ ನಲ್ಲಿರುವ ಪೋಟೋದಲ್ಲಿ ಸೊಂಟಕ್ಕೆ ಧರಿಸಿದ್ದ ಚಿನ್ನದ ಆಭರಣವನ್ನು ತೋರಿಸಿದ್ದಾರೆ. ಸಿಕ್ಕಿದ ಆಭರಣಕ್ಕೂ, ಆಕೆಯ ಪೋಟೋದಲ್ಲಿನ ಆಭರಣಕ್ಕೂ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಆಭರಣವನ್ನು ಹಸ್ತಾಂತರಿಸಲಾಯಿತು.

ವನಿತಾ ಸಮಾಜದ ಪದಾಧಿಕಾರಿಗಳ ಪ್ರಾಮಾಣಿಕತೆಯನ್ನು ಕಂಡು ಚಿನ್ನದ ವಾರೀಸುದಾರೆ ಹಿರೇಬಂಡಾಡಿ ಗ್ರಾಮದ ನುಶ್ರಾ ಅವರು ಆನಂದ ಭಾಷ್ಪದ ಧನ್ಯವಾದವನ್ನು ತಿಳಿಸಿದರು.

LEAVE A REPLY

Please enter your comment!
Please enter your name here