ನಿಡ್ಪಳ್ಳಿ: ಇಲ್ಲಿಯ ಕುಕ್ಕುಪುಣಿಯಿಂದ ನಾಕುಡೇಲು, ಶ್ರೀ ಶಾಂತದುರ್ಗಾ ದೇವಸ್ಥಾನ, ಹನುಮಗಿರಿ ಹೋಗುವ ಲೋಕೋಪಯೋಗಿ ರಸ್ತೆಯ ಬೊಳುಂಬುಡೆ ಎಂಬಲ್ಲಿ ರಸ್ತೆ ಬದಿ ಕಟ್ಟಿದ ತಡೆಗೋಡೆ ಜು.16 ರಂದು ರಾತ್ರಿ ಸುರಿದ ಭಾರಿ ಮಳೆಗೆ ಕುಸಿದು ಬಿದ್ದ ಘಟನೆ ನಡೆದಿದೆ.

ಬೊಳುಂಬುಡೆ ಸೀತಾ ಗೋವಿಂದ ಮಣಿಯಾಣಿ ಎಂಬವರ ಮನೆಯ ಹಿಂಬದಿ ಅವರ ವೆಚ್ಚದಲ್ಲಿ ರಸ್ತೆ ಬದಿಗೆ ಕಟ್ಟಿದ ತಡೆ ಗೋಡೆ ಕುಸಿದ ಪರಿಣಾಮ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪು ಲೈನ್ ತಡೆ ಗೋಡೆ ಬದಿಯಲ್ಲಿ ಹಾಗು ಹೋಗಿದ್ದು ನೀರು ಅದರಲ್ಲಿ ಹರಿದ ಪರಿಣಾಮ ತಡೆ ಗೋಡೆ ಕುಸಿದಿರ ಬಹುದು. ರಸ್ತೆ ಅಲ್ಲಿ ಬಹಳ ತಿರುವು ಇರುವ ಕಾರಣ ಎರಡು ವಾಹನಗಳು ಎದುರಾದರೆ ಸೈಡ್ ಕೊಡಲು ಬಹಳ ಇಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತದೆ. ಈ ರಸ್ತೆಯಲ್ಲಿ ಶಾಲಾ ಬಸ್ಸುಗಳು ಸೇರಿದಂತೆ ದಿನದಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ.ಅಲ್ಲಿ ನೀರು ಹರಿದು ಇನ್ನಷ್ಟು ಕುಸಿದರೆ ರಸ್ತೆಗೆ ಅಪಾಯಕಾರಿ ಪರಿಸ್ಥಿತಿ ಉಂಟಾಗಿ ವಾಹನ ಸಂಚಾರಕ್ಕೆ ಮುಂದೆ ತೊಡಕಾಗಬಹುದು ಎಂಬ ಆತಂಕ ಎದುರಾಗಿದೆ.
ಆದುದರಿಂದ ಲೋಕೋಪಯೋಗಿ ಇಲಾಖೆ ಈ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳ ಬೇಕಾಗಿದ್ದು, ತಕ್ಷಣ ಸ್ಪಂದನೆ ನೀಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಿಡಿಒ ಸಂಧ್ಯಾಲಕ್ಷ್ಮೀ, ಸಿಬ್ಬಂದಿ ಜಯಕುಮಾರಿ ಹಾಗೂ ಗ್ರಾಮ ಆಡಳಿತಾಧಿಕಾರಿ ಕಚೇರಿ ಸಹಾಯಕಿ ಜಯಶ್ರೀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.