ಜನರಿಗೂ ಜವಾಬ್ದಾರಿಗಳಿವೆ, ಒಳ್ಳೆಯ ಕೆಲಸಗಳನ್ನು ಶ್ಲಾಘಿಸೋಣ! ಪುತ್ತೂರಿನ ಶಾಸಕ ಅಶೋಕ್ ರೈ ಸಾಧನೆ ನಿರಂತರವಾಗಿರಲಿ…

0


ನಾಕಾರು ದಿನಗಳ ಹಿಂದೆ ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನಿಂದ ಮಂಗಳೂರಿಗೆ ಶೀಘ್ರಗಾಮಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಚಾಲನೆ ನೀಡಿದ್ದಾರೆ. ಪರಿಣಾಮವಾಗಿ ಪುತ್ತೂರು ಹಾಗೂ ಮಂಗಳೂರಿನ ಮಧ್ಯೆ ನಿತ್ಯ ಸಂಚರಿಸುವ ನೂರಾರು ಮಂದಿಯ ಆಯುಷ್ಯದಲ್ಲಿ ಕೆಲವು ವರ್ಷಗಳ ಉಳಿತಾಯ ಆಗಲಾರಂಭಿಸಿದೆ. ಟ್ರಾಫಿಕ್ ಮಧ್ಯೆ ಕಳೆದು ಹೋಗುತ್ತಿದ್ದ ಬದುಕು ಇದೀಗ ರಚನಾತ್ಮಕ ಕಾರ್ಯಗಳಲ್ಲಿ ವಿನಿಯೋಗವಾಗಲಾರಂಭಿಸಿದೆ. ಇಂಥದ್ದೊಂದು ಕಲ್ಪನೆಯನ್ನು ಯೋಜಿಸಿ ಕಾರ್ಯರೂಪಕ್ಕೆ ತಂದ ಶಾಸಕರು ಖಂಡಿತವಾಗಿಯೂ ಅಭಿನಂದನಾರ್ಹರು.


ಶಾಸಕನಾದವನೋ, ಸಂಸದನಾದವನೋ ಕೆಲಸ ಮಾಡಬೇಕಾದದ್ದು ಹೀಗೆ. ತನ್ನ ಕ್ಷೇತ್ರಕ್ಕೆ ಏನು ಬೇಕು ಎಂಬುದನ್ನು ನಿರಂತರವಾಗಿ ಯೋಚಿಸುತ್ತಾ ಅದರ ಹಿಂದೆ ಬಿದ್ದು ಸಾಧಿಸಿದಾತ ಮಾತ್ರ ಇತರ ಜನಪ್ರತಿನಿಧಿಗಳಿಗಿಂತ ಭಿನ್ನ ಎನಿಸಿಕೊಳ್ಳುವುದಕ್ಕೆ ಸಾಧ್ಯ. ಒಬ್ಬ ಜನಪ್ರತಿನಿಧಿಯ ಐದು ವರ್ಷಗಳ ಅವಧಿಯಲ್ಲಿ ಸಹಜವಾಗಿ ಕ್ಷೇತ್ರಕ್ಕೆ ದಕ್ಕಿದ ಹಣವನ್ನೋ, ಸರ್ಕಾರದ ನಾನಾ ಅನುದಾನಗಳಡಿ ಆಗಿಬಿಡುವ ರಸ್ತೆಗಳನ್ನೋ ತೋರಿಸಿ ‘ನೋಡಿ ನೋಡಿ ಅಭಿವೃದ್ಧಿ’ ಎಂದರೆ ಎನೂ ಅರಿಯದವರು ಚಪ್ಪಾಳೆ ತಟ್ಟಬಹುದು ಅಷ್ಟೆ. ಆದರೆ ಸಹಜವಾಗಿ ಹರಿದುಬರುವ ಅನುದಾನವನ್ನೂ ಮೀರಿ, ನಾನಾ ಯೋಜನೆ – ಯೋಚನೆ ಹಾಕಿಕೊಂಡು ಸಚಿವರು, ಮುಖ್ಯಮಂತ್ರಿಗಳ ಬಳಿಗೆ ತೆರಳಿ, ನನ್ನ ಕ್ಷೇತ್ರಕ್ಕೆ ಇಂತಿಷ್ಟು ಕೊಡಲೇಬೇಕೆಂದು ಹಠ ಹಿಡಿದು; ಸಾಧಿಸಿ, ತದನಂತರ ಅಧಿಕಾರಿ ವರ್ಗದ ಬೆನ್ನಟ್ಟಿ ಯೋಜಿತ ಕಾರ್ಯಕ್ಕೆ ಹಣ ತರುವುದಿದೆಯಲ್ಲ, ಅದು ನಿಜವಾದ ನಾಯಕತ್ವ. ಅಶೋಕ್ ರೈಯವರಲ್ಲಿ ಅಂತಹ ನೇತೃತ್ವವನ್ನು ಪುತ್ತೂರು ಗುರುತಿಸಲಾರಂಭಿಸಿದೆ!


ಇದುವರೆಗೆ ಯಾವ ಮೆಡಿಕಲ್ ಕಾಲೇಜು ಬಾಯಿಮಾತಿಗಷ್ಟೇ ಸೀಮಿತವಾಗಿತ್ತೋ, ಯಾವ ವೈದ್ಯಕೀಯ ಶಿಕ್ಷಣಕ್ಕಾಗಿ ಹೋರಾಟ ಸಮಿತಿಯೇ ಅಸ್ತಿತ್ವಕ್ಕೆ ಬಂದಿತ್ತೋ ಅಂತಹ ಕನಸೊಂದನ್ನು ಲೀಲಾಜಾಲವಾಗಿ ಸಾಕಾರಗೊಳಿಸುವ ಭರವಸೆ ಬಂದದ್ದು ಇದೇ ಅಶೋಕ್ ರೈಯವರಿಂದ. ‘ಇದು ಮುಖ್ಯಮಂತ್ರಿಗಳು ಅಶೋಕ್ ರೈಯವರ ಬಾಯಿಮುಚ್ಚಿಸಲು ಮಾಡಿದ ತಂತ್ರಗಾರಿಕೆ,’ ‘ಅನುದಾನ ತೆಗೆದಿಟ್ಟಿಲ್ಲ, ಹಾಗಾಗಿ ಇದು ಪುತ್ತೂರಿಗರನ್ನು ಮೋಸಗೊಳಿಸುತ್ತಿರುವುದು’ ಎಂಬೆಲ್ಲಾ ವಿರೋಧಿಗಳ ಮಾತುಗಳು ಅಶೋಕ್ ರೈಯವರ ಕಾಲಮೂಲೆಯಲ್ಲಿ ಜಾರಿಹೋಗುತ್ತಿವೆ. ಯಾಕೆಂದರೆ ಬಜೆಟ್ ಪ್ರತಿಗೆ ಮೆಡಿಕಲ್ ಕಾಲೇಜು ಪ್ರಸ್ತಾವನೆ ಸೇರಿಕೊಂಡದ್ದರಿಂದ ಅಶೋಕ್ ರೈಯವರಿಗೆ ಮತ್ತಷ್ಟು ಅಧಿಕಾರಯುತವಾಗಿ ಅದನ್ನು ಫಾಲೋ ಅಪ್ ಮಾಡುವ ಅವಕಾಶ ದೊರಕಲಿದೆ. ಕಳೆದ ಎರಡು ವರ್ಷಗಳಲ್ಲಿ ಅವರ ಕಾರ್ಯವೈಖರಿ ನೋಡಿದ ಯಾರಿಗೂ ಮೆಡಿಕಲ್ ಕಾಲೇಜು ಪುತ್ತೂರಿನಲ್ಲಿ ಬರುವುದು ಕನಸೆಂಬ ಭಾವನೆ ಬರುವುದಕ್ಕೆ ಸಾಧ್ಯವಿಲ್ಲ. ಏನೂ ಇಲ್ಲದಿದ್ದಾಗಲೇ ಮುಖ್ಯಮಂತ್ರಿ ಜತೆಗೂ ಜಗಳಕ್ಕೆ ಸಿದ್ಧರಾಗಿದ್ದ ಅಶೋಕ್ ರೈ ಈಗ ಬಜೆಟ್‌ನಲ್ಲಿ ಸೇರ್ಪಡೆಗೊಂಡ ನಂತರ ಆ ವಿಷಯವನ್ನು ಅಲ್ಲಿಗೇ ಬಿಟ್ಟು ಕೈಚೆಲ್ಲಿ ಕುಳಿತಾರೆಂದು ಪುತ್ತೂರಿನ ಸಾಮಾನ್ಯ ನಾಗರಿಕರಿಗಂತೂ ಅನ್ನಿಸುವುದಿಲ್ಲ. ಜತೆಗೆ ಆಯುರ್ವೇದ ಕಾಲೇಜನ್ನೂ ಜತೆಜತೆಗೇ ಸ್ಥಾಪಿಸುವುದಕ್ಕೆ ಅಶೋಕ್ ರೈ ಸಿದ್ಧತೆ ಮಾಡಿಕೊಂಡಿದ್ದಾರೆ!


ಕೇವಲ ಮೆಡಿಕಲ್ ಕಾಲೇಜು ಅಂತಲ್ಲ, ಅನೇಕ ಹೊಸತನಗಳಿಗೆ, ಹೊಸ ಸಾಧನೆಗಳಿಗೆ ಅಶೋಕ್ ಕುಮಾರ್ ರೈ ಭಾಷ್ಯ ಬರೆಯುತ್ತಿದ್ದಾರೆ. ಸದನದಲ್ಲಿ ತುಳು ಮಾತನಾಡಿ ರಾಜ್ಯದ ಗಮನ ಸೆಳೆಯುತ್ತಿರುವುದಾಗಿರಬಹುದು, ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿ ತುಳುನಾಡಿನ ಸತ್ವವನ್ನು ರಾಜಧಾನಿಗೆ ತಲಪಿಸಿದ್ದಿರಬಹುದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯಚರಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದಾಗಿರಬಹುದು, ಮೊದಲ ಬಾರಿಗೆ ಶಾಸಕನಾಗಿದ್ದರೂ ಮುಖ್ಯಮಂತ್ರಿ ಸಹಿತವಾಗಿ ಎಲ್ಲರಿಗೂ ‘ಎಲಾ ಇವನಾ’ ಅಂತ ಅನ್ನಿಸುವಂತೆ ವಿಧಾನ ಸಭೆಯೊಳಗೆ ಹಾಗೂ ಹೊರಗೆ ವ್ಯವಹರಿಸುತ್ತಿರುವುದಿರಬಹುದು, ತನಗೆ ಮತ ಹಾಕಿದವರು, ಹಾಕದವರು ಎಂದು ವಿಭಾಗಿಸದೆ ಎಲ್ಲರಿಗೂ ಪೂರ್ಣ ಕೆಲಸ ಮಾಡಿಸಿಕೊಡುತ್ತಿರುವುದಾಗಿರಬಹುದು, ಹತ್ತಿಪ್ಪತ್ತು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿದ್ದ ಸಮಸ್ಯೆಗಳಿಗೆ ಮುಕ್ತಿ ತೋರುತ್ತಿರುವುದಿರಬಹುದು, ಮಾತುಕತೆಯ ಮೂಲಕವೇ ಹಲವು ಸವಾಲುಗಳನ್ನು ಮೀರಿ ಮುನ್ನಡೆಯುತ್ತಿರುವ ವಿಧಾನಗಳಾಗಿರಬಹುದು, ಎಲ್ಲಕ್ಕಿಂತ ಮುಖ್ಯವಾಗಿ ‘ಶಾಸಕರಲ್ಲಿ ಹೇಳಿದರೆ ಕೆಲಸ ಆಗ್ತದೆ’ ಎನ್ನುವ ಭಾವನೆಯನ್ನು ಬಡ ಜನರಲ್ಲಿ ಮೂಡಿಸಿದ್ದಿರಬಹುದು… ಇವೆಲ್ಲವೂ ಅನೇಕರನ್ನು ವಿಸ್ಮಿತರನ್ನಾಗಿಸುತ್ತಿದೆ.


ಈ ನಡುವೆ ತಾನಾಗಿ ಎಲ್ಲೂ ವಿರೋಧ ಪಕ್ಷದವರ ಮೈಮೇಲೆ ಎರಗದಿರುವುದು ಅಶೋಕ್ ರೈ ವ್ಯಕ್ತಿತ್ವವನ್ನು ಬೆಳಗಿಸುತ್ತಿದೆ. ಅಭಿವೃದ್ಧಿ ಮಾಡಲು ಹೊರಟಾಗಲೂ; ಕೊಂಕು ಮಾತನಾಡುವವರ ವಿರುದ್ಧ ತಿರುಗಿ ಹೇಳುತ್ತಿರುವುದನ್ನು ಬಿಟ್ಟರೆ ‘ನಾನು ಯಾರನ್ನೂ ಟೀಕಿಸಲು ಹೋಗುವುದಿಲ್ಲ’ ಎಂಬುದೇ ಅವರ ಮಾತಿನಲ್ಲಿನ ಪ್ರಧಾನ ವಿಷಯವಾಗಿರುತ್ತದೆ ಎಂಬುದು ಗಮನಾರ್ಹ. ವಿಪಕ್ಷಗಳನ್ನು ಟೀಕಿಸಬಹುದಾದ, ರಾಜಕೀಯ ಮಾಡಬಹುದಾದ ಸಂದರ್ಭಗಳಲ್ಲೂ ಅಶೋಕ್ ರೈ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂಬುದೂ ಉಲ್ಲೇಖಾರ್ಹ. ಈ ನಡುವೆ ಶಾಸಕನಾಗಿ ಒಂದು ವರ್ಷ ಪೂರ್ಣಗೊಂಡಾಗ ಭಾಜಪವೂ ಸೇರಿದಂತೆ ಬೇರೆ ಬೇರೆ ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕರುಗಳ ಮನೆಗೆ ಹೋಗಿ ತನ್ನ ಕಾರ್ಯವೈಖರಿ ಬಗೆಗೆ ಚರ್ಚಿಸಿ ಬಂದದ್ದು ಇಡಿಯ ರಾಜ್ಯರಾಜಕಾರಣದಲ್ಲಿ ಅಚ್ಚರಿ ಮೂಡಿಸಿದ ಮಾದರಿ ನಡೆ. ಹಾಗೆ ಮನೆಗೆ ಹೋದಾಗಲೂ ಟೀಕಿಸುವುದಕ್ಕೆ ಯಾರಲ್ಲೂ ಏನೂ ಇರಲಿಲ್ಲ ಎಂಬುದನ್ನು ಪುತ್ತೂರೇ ಕಂಡಿದೆ!


ಹಾಗೆಂದು ಅಶೋಕ್ ರೈ ತನ್ನ ‘ರಾಜಕಾರಣ’ ಮಾಡುತ್ತಿಲ್ಲ ಎನ್ನುತ್ತಿರುವುದಲ್ಲ. ಪುತ್ತೂರಿನಲ್ಲಿ ಏನೇ ಅಭಿವೃದ್ಧಿ ಮಾಡಿದರೂ ಚುನಾವಣೆ ನಡೆಯುವುದು ಹಿಂದುತ್ವದ ಆಧಾರದ ಮೇಲೆಯೇ ಎಂಬುದು ಅವರಿಗೂ ಗೊತ್ತಿದೆ. ಹಾಗಾಗಿ ಅವರ ಪಕ್ಷ ಹಿಂದೂ ವಿರೋಧಿ ಎಂದು ಆಗಾಗ ಹೇಳಿಸಿಕೊಳ್ಳುತ್ತಿದ್ದರೂ ಅಶೋಕ್ ರೈ ಮಾತ್ರ ಭಿನ್ನ ಹಾದಿಯಲ್ಲಿ ಸಾಗುತ್ತಾ ತಾನು ಎಲ್ಲರಿಗೂ ಸಲ್ಲುವವನೆಂಬುದನ್ನು ಕಾರ್ಯದಲ್ಲಿ ಕಾಣಿಸಿತೋರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುವ ಹೆಚ್ಚಿನ ಶಾಸಕರು ಇದ್ದಕ್ಕಿದ್ದ ಹಾಗೆ ತಾವು ಜಾತ್ಯಾತೀತ ನಾಯಕರೆಂಬುದನ್ನು ಬಿಂಬಿಸಿಕೊಂಡು ತಮ್ಮ ‘ಮೇಲಿನವರನ್ನು’ ಮೆಚ್ಚಿಸುವ ಪ್ರಯತ್ನಕ್ಕಿಳಿದರೆ ಇತ್ತ ಅಶೋಕ್ ರೈ ಮಾತ್ರ ಪುತ್ತೂರಿನ ರಾಜಕೀಯದಲ್ಲಿ ‘ನಿರ್ಣಾಯಕ’ರೆನಿಸುವ ಹಿಂದುತ್ವ ಆಧಾರಿತ ಜನಮಾನಸಕ್ಕೆ ಖುಷಿಕೊಡುವಂತೆ ಕೈಯಲ್ಲಿ ಹತ್ತಾರು ರಕ್ಷೆಗಳನ್ನು ಕಟ್ಟಿಕೊಂಡು, ಕೇಸರಿ ಶಾಲು ಧರಿಸಿಕೊಂಡು, ದೇವಸ್ಥಾನಗಳ ಅಭಿವೃದ್ಧಿಯೇ ಮೊದಲಾದ ‘ಹಿಂದೂಪರ’ ನಡೆಗಳೊಂದಿಗೆ ಹಿಂದುತ್ವದ ಭದ್ರ ಮತಬ್ಯಾಂಕ್‌ನೆಡೆಗೆ ದೃಢ ಹೆಜ್ಜೆ ಇಡುತ್ತಿದ್ದಾರೆ. ‘ದನದ ಕೆಚ್ಚಲು ಕಡಿಯುವವರ ಕೈ ಕಡಿಯಿರಿ, ಅತ್ಯಾಚಾರಿಗಳನ್ನು ಗುಂಡಿಟ್ಟು ಕೊಲ್ಲಿ, ಸೈನಿಕರಿಗೆ, ದೇಶಕ್ಕೆ ದ್ರೋಹಬಗೆಯುವವರನ್ನು ಎನ್‌ಕೌಂಟರ್ ಮಾಡಿ’ ಎಂಬಂತಹ ಶಾಸಕರ ಮಾತುಗಳು ವಾಸ್ತವದಲ್ಲಿ ಬಾಯಿಮಾತಿಗಷ್ಟೇ ಸೀಮಿತವಾಗುವಂತಹದ್ದಾಗಿದ್ದರೂ, ‘ಭಾಜಪದ ಹಿಂದೂ ಭದ್ರಕೋಟೆ’ಯೊಳಗೆ ಅಶೋಕ್ ರೈಯವರ ಅಶ್ವಮೇಧದ ತುರಗ ಸಂಚರಿಸುವಂತೆ ಮಾಡುತ್ತಿದೆ. ಹಾಗೆಂದು ಈ ನಡೆ ಅವರದೇ ಪಕ್ಷದ ಕೆಲವು ವ್ಯಕ್ತಿಗಳಿಗೆ, ‘ನೇತಾರ’ರಿಗೆ ಇರಿಸುಮುರುಸು ತರಬಹುದಾಗಿದ್ದರೂ ಅಶೋಕ್ ರೈಯವರ ನಾಯಕತ್ವ ಕಾಂಗ್ರೆಸ್ ಪರಿಧಿಯನ್ನೂ ಮೀರಿ ಹಿಂದುತ್ವದ ದಿಗಂತದೆಡೆಗೆ ಬೆಳೆಯುವಂತೆ ಮಾಡುತ್ತಿದೆ. ಈ ನಡುವೆ, ಕಾಂಗ್ರೆಸ್‌ನ ಪಾರಂಪರಿಕ ಮತದಾರ ಸಮುದಾಯಗಳಿಗೂ ಅನ್ಯಾಯವಾಗದಂತೆ ಅಶೋಕ್ ರೈ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಒಂದೊಡೆ ತನ್ನ ಪಕ್ಷದ ಮೂಲಮತದಾರರನ್ನು ಕಳೆದುಕೊಳ್ಳದ, ಮತ್ತೊಂದೆಡೆ ಹಿಂದುತ್ವದ ಪ್ರಭಾವಲಯದೊಳಗಿನಿಂದಲೂ ತನ್ನೆಡೆಗೆ ಬೆಳಕು ಹರಿಸಿಕೊಳ್ಳುವಂತಹ ಜಾಣ ನಡೆಯನ್ನು ಅಶೋಕ್ ರೈ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. ಆದ್ದರಿಂದಲೇ, ಈಗಲೂ ಗುಟ್ಟಾಗಿ ಕೇಳಿದರೆ ಅಶೋಕ್ ರೈಯವರನ್ನು ಟೀಕಿಸುವುದಕ್ಕೆ ಯಾರ ಬಳಿಯೂ ಸರಿಯಾದ ಒಂದು ಕಾರಣವೂ ಇಲ್ಲ ಎಂಬಂತಾಗಿರುವುದು!


ಇನ್ನು, ತಾಲೂಕಾಫೀಸಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ, ಆಡಳಿತ ಸೌಧ ನಿಸ್ತೇಜವಾಗಿದೆ, ಗುಂಡಿ ಬಿದ್ದ ರಸ್ತೆಗೆ ಪ್ಯಾಚ್ ವರ್ಕಾಗಿಲ್ಲ ಎಂಬೆಲ್ಲಾ ಟೀಕೆಗಳು ಕ್ಷಣಿಕವಾಗಿ ಬೆರಳುತೋರುವುದಕ್ಕೆ ಹೇತುಕಾರಕವಾಗುತ್ತವೆಯೇ ವಿನಃ ದೀರ್ಘಕಾಲಿಕವಾಗಿ ಉಳಿದು ಶಾಸಕಸ್ಥಾನಕ್ಕೆ ಸಂಚಕಾರ ತರುವಷ್ಟರಮಟ್ಟಿಗೆ ಬೆಳೆಯುವುದಿಲ್ಲ. ಯಾಕೆಂದರೆ ಬೆರಳೆಣಿಕೆಯ ದಿವಸಗಳೊಳಗೆ ಇಂತಹ ಸಮಸ್ಯೆಗಳು ಬರೆಹರಿದಿರುತ್ತವೆ. ಆದ್ದರಿಂದ ಈ ‘ಕ್ಷಣಿಕ’ ಟೀಕೆಗಳನ್ನೆಲ್ಲ ಆಂದೋಲನವಾಗಿ ಬೆಳೆಸಲು ಸಾಧ್ಯವಾಗುವುದಿಲ್ಲ. ಉಳಿದಂತೆ, ಮೆಡಿಕಲ್ ಕಾಲೇಜು ಮಂಜೂರಾಗಿ ಬಂದಾಗ ಮೆರವಣಿಗೆಗೆ ಜನ ಇರಲಿಲ್ಲ, ಯಾವತ್ತೋ ಪಿಸ್ತೂಲ್ ಹಿಡಿದುಕೊಂಡು ಬೆದರಿಕೆ ಹಾಕಿದ್ದಾರೆ ಎಂಬೆಲ್ಲ ಕುಹಕಗಳು ಆ ಕ್ಷಣಕ್ಕೆ ರೋಚಕ ಅನಿಸಬಹುದಾದರೂ ಮತದಾರರ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು. ಸಂಜೆ ಹೊತ್ತು ಬೈಟೂ ಕಾಫಿ ಕುಡಿಯುವಾಗ ಹಿಹಿಹಿ ಅನ್ನುವುದಕ್ಕಾದೀತು!


ತನ್ಮಧ್ಯೆ, ಶಾಸಕರು ಪ್ರಚಾರಪ್ರಿಯರು, ಹೋದದ್ದು, ಬಂದದ್ದು ಎಲ್ಲವನ್ನೂ ಫೋಟೋ, ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಹೇಳುವವರೂ ಕೆಲವರಿದ್ದಾರೆ. ಇಂಥವರನ್ನು ಕಾಣುವಾಗ ಮರುಕ ಹುಟ್ಟತ್ತದೆಯೇ ವಿನಃ ಮತ್ತೇನೂ ಅನಿಸುವುದಿಲ್ಲ. 21ನೆಯ ಶತಮಾನದಲ್ಲಿ, ವಾಟ್ಸಾಪ್ – ಫೇಸ್‌ಬುಕ್ ಯುಗದಲ್ಲಿ, ಚುನಾವಣೆಯ ಸೋಲು – ಗೆಲುವು ಸಾಮಾಜಿಕ ಮಾಧ್ಯಮದ ನೆಲೆಯಲ್ಲಿ ನಿರ್ಣಯವಾಗುತ್ತಿರುವ ಕಾಲಘಟ್ಟದಲ್ಲಿ, ಮಾಡಿದ ಕೆಲಸಕ್ಕೂ ಪ್ರಚಾರ ಕೊಡಬೇಡಿ ಎಂದರೆ ಅಂಥವರಿಗೆ ಏನು ಹೇಳಬೇಕು? ಹಾಗೆ ನೋಡಿದರೆ ದೇಶದ ಪ್ರಧಾನಿ ಮೋದೀಜಿಯವರೇ ಈ ತೆರನಾದ ಸಾಮಾಜಿಕ ಮಾಧ್ಯಮದ ಬಳಕೆಯನ್ನು ಅವ್ಯಾಹತವಾಗಿ ಬಳಸಿ. ಇತರ ರಾಜಕಾರಣಿಗಳಿಗೂ ಮಾದರಿಯೆನಿಸಿದ್ದಾರೆ, ಸಾಮಾಜಿಕ ಮಾಧ್ಯಮವನ್ನು ಸಮರ್ಥವಾಗಿ ಬಳಸುವುದಕ್ಕೆ ಸ್ವಪಕ್ಷೀಯರಿಗೆ ಪ್ರೇರಣೆ ನೀಡುತ್ತಿದ್ದಾರೆ. ಆದ್ದರಿಂದ ‘ಪ್ರಚಾರಪ್ರಿಯತೆ’ ಎಂಬ ಟೀಕೆ ಸಾಮಾಜಿಕ ಮಾಧ್ಯಮ ಬಳಸಲಾಗದ ಅಥವ ಬಳಸುವಂತಹ ಕೆಲಸವನ್ನೇನೂ ಮಾಡದ ವ್ಯಕ್ತಿಗಳ ನಡುರಾತ್ರಿಯ ಪ್ರಲಾಪವೆನಿಸೀತು! ಇನ್ನೂ ಹೇಳುವುದಾದರೆ, ಅಶೋಕ್ ರೈಯವರು ತನ್ನ ಸಾಮಾಜಿಕ ಮಾಧ್ಯಮ ನಿರ್ವಹಣೆಯನ್ನು ಇನ್ನಷ್ಟು ವಿಸ್ತೃತವಾಗಿ, ಕ್ರಮಬದ್ಧವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡಬೇಕಾದ ಅವಶ್ಯಕತೆಯಿದೆ. ಅದಕ್ಕಾಗಿ ತಮ್ಮದೇ ಪಕ್ಷದ ಉಪಮುಖ್ಯಮಂತ್ರಿ ಡಿಕೆಶಿಯವರಂತೆ ಒಂದು ಒಳ್ಳೆಯ ಸಾರ್ವಜನಿಕ ಸಂಪರ್ಕ ತಂಡವನ್ನು ರೈಗಳು ರೂಪಿಸಿಕೊಳ್ಳುವುದು ಒಳ್ಳೆಯದು. ರೈಗಳು ಮಾಡುವ ಕೆಲಸಕ್ಕೆ ಸಮನಾದ ಪ್ರಚಾರ ಅವರಿಗೀಗ ಸಾಮಾಜಿಕ ಮಾಧ್ಯಮದಲ್ಲಿ ಸಿಗುತ್ತಿಲ್ಲ ಎಂಬುದೇ ಸತ್ಯ!


ಸದ್ಯಕ್ಕಂತೂ ಅಶೋಕ್ ರೈ ತಕ್ಕಡಿ ಸಾಕಷ್ಟು ಭಾರವಿದೆ, ಸುಲಭಕ್ಕೆ ತುಲಾಭಾರ ಆಗಿಹೋದೀತೆಂದು ಅಂದುಕೊಂಡರೆ ಮೂರ್ಖತನವೆನಿಸೀತು. ಹಾಗಾಗಿ ಅವರು ಎಲ್ಲಿ ತಪ್ಪಿಬೀಳುತ್ತಾರೆ ಎಂದು ಕಾಯುವುದಷ್ಟೇ ವಿರೋಧ ಪಕ್ಷಗಳಿಗಿರುವ ದಾರಿ. ಅಂತೆಯೇ ಟೀಕಿಸುವಾಗ ಯಾವ ರೀತಿ ‘ರಾಜತಾಂತ್ರಿಕ’ ನಡೆ ಬೇಕೆಂಬುದರ ಬಗೆಗೆ ವಿಪಕ್ಷದ ನೇತಾರರು ತಮ್ಮದೇ ಪಕ್ಷದ ಕೆಲವು ಪ್ರಾಮಾಣಿಕ ನಾಯಕರಿಂದ ‘ಪಾಠ’ ಹೇಳಿಸಿಕೊಂಡರೆ ಪ್ರಯೋಜನವೂ ಆದೀತು. ಪಕ್ಷಪ್ರೇಮದೊಂದಿಗೆ ಅಗತ್ಯಬಿದ್ದಾಗ ನಿಷ್ಠುರವಾಗಿಯೂ, ಇದ್ದದ್ದನ್ನು ಇದ್ದಂತೆ ಹೇಳಬಲ್ಲ ಹಿರಿಯರ ಮಾರ್ಗದರ್ಶನವನ್ನು ಆಯಾಯ ಪಕ್ಷಗಳು ಕಾಲಕಾಲಕ್ಕೆ ಪಡೆದುಕೊಳ್ಳುವುದು ಭವಿಷ್ಯಕ್ಕೆ ಶ್ರೇಯಸ್ಕರವೆನಿಸೀತು. ಅದಲ್ಲವಾದರೆ ಬರಿಯ ಟೀಕೆ, ಟೀಕಿಸಿದವರನ್ನೇ ಮೂಲೆಗುಂಪಾಗಿಸೀತು!


ಇತ್ತ ಅಶೋಕ್ ಕುಮಾರ್ ರೈಯವರೂ ಸಾಕಷ್ಟು ಎಚ್ಚರದಿಂದ ಕಾರ್ಯನಿರ್ವಹಿಸುವುದು ಅಗತ್ಯ. ಸಾಧನೆ ಬೆಳೆದಂತೆಲ್ಲಾ ಹಿತಶತ್ರುಗಳು, ಅಹಿತಶತ್ರುಗಳಿಬ್ಬರೂ ಬೆಳೆಯುತ್ತಾರೆ. ಹಾಗಾಗಿ ಈಗಾಗಲೇ ಮಧ್ಯಪಥದಲ್ಲಿ ಮುಂದಡಿಯಿಡುತ್ತಿರುವ ಶಾಸಕರು ಇನ್ನೂ ಜಾಗ್ರತೆಯಿಂದ ಪುಟಕ್ಕಿಟ್ಟ ಚಿನ್ನದಂತೆ ಮುಂದುವರಿಯಬೇಕಿದೆ. ಎಲ್ಲಾ ಬಗೆಯ ಅಭಿವೃದ್ಧಿಯಾಚೆಗೂ ಪುತ್ತೂರಿನ ರಾಜಕಾರಣ ಅಂತಿಮವಾಗಿ ‘ಹಿಂದುತ್ವ’ದ ನೆಲೆಯಲ್ಲಿಯೇ ಸಿದ್ಧಗೊಳ್ಳಬಹುದಾದ ಎಲ್ಲಾ ಸಾಧ್ಯತೆಗಳೂ ಮುಕ್ತವಾಗಿಯೇ ಇವೆ. ಯಾಕೆಂದರೆ ಈ ಭಾಗದಲ್ಲಿ ಒಂದೊಮ್ಮೆ ಹಿಂದುತ್ವದ ಅಲೆಗಳೊಳಗಿನ ಮತಗಳು ಬೇರೆ ಪಕ್ಷೀಯರಿಗೆ(ವಿಶೇಷವಾಗಿ ಕಾಂಗ್ರೆಸ್‌ಗೆ) ದೊರಕಿದ್ದಿದ್ದರೆ ಅದು ಸ್ವಪಕ್ಷದ ಮೇಲಿನ ಆ ಕ್ಷಣದ ಆಕ್ರೋಶವಾಗಿರುತ್ತದೆಯೇ ವಿನಃ ಶಾಶ್ವತ ಸೇವೆಯಾಗಿರುವುದಿಲ್ಲ! ಹಾಗಾಗಿ, ಈಗಾಗಲೇ ಟೀಕೆಯನ್ನು ಕೊನೆಯ ಆದ್ಯತೆ ಮಾಡಿಕೊಂಡಿರುವ ರೈ ಅವರು, ಅನಿವಾರ್ಯ ಸಂದರ್ಭದಲ್ಲಿ ಟೀಕಿಸುವಾಗಲೂ ಎದುರಾಳಿಗೆ ಪ್ರತಿ ಆಡುವುದಕ್ಕೆ ಅವಕಾಶವಿಲ್ಲದಂತೆ ಮತ್ತಷ್ಟು ಬುದ್ಧಿವಂತಿಕೆ ಮೆರೆಯಬೇಕು. ಒಟ್ಟಿನಲ್ಲಿ ಎದುರಾಳಿಗಳ ಕೈ-ಬಾಯಿಗೆ ಸಿಗದಂತೆ ಕಾರ್ಯನಿರ್ವಹಿಸಬೇಕಾದದ್ದು ಅತ್ಯಂತ ಜರೂರು. ಅದಾಗಲೇ ಈ ಕಾರ್ಯವನ್ನು ಅಶೋಕ್ ರೈ ಜತನದಿಂದ ಮಾಡುತ್ತಿದ್ದಾರಾದರೂ ಕೆಲವೊಮ್ಮೆ ‘ನಮ್ಮಲ್ಲೂ ಮಸಲ್ ಪವರ್ ಇದೆ’, ‘ಇನ್ನೊಂದು ಸ್ವಲ್ಪ ಹೊತ್ತು ಪುತ್ತೂರಲ್ಲಿ ಇದ್ದು ನೋಡಬೇಕಿತ್ತು’ ಎಂಬಂತಹ ಮಾತುಗಳು ಆಗೀಗ ಕಾಣಿಸಿಕೊಳ್ಳುತ್ತಿವೆ. ಇಂಥವುಗಳನ್ನೆಲ್ಲ ಬುದ್ಧ್ಯಾಪೂರ್ವಕ ನಿಗ್ರಹಿಸಿಕೊಂಡರೆ ಅಶೋಕ್ ರೈ ಟೀಕೆಗೆ ನಿಲುಕದ ನಾಯಕನೆನಿಸುತ್ತಾರೆ.


ಒಬ್ಬ ಜನನಾಯಕ ತಪ್ಪಿ ನಡೆದಾಗ ಬುದ್ಧಿ ಹೇಳುವುದಷ್ಟೇ ಅಲ್ಲ, ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಶ್ಲಾಘಿಸುವುದೂ ಎಲ್ಲರ ಕರ್ತವ್ಯ. ಹಾಗೆ ಮಾಡದೆ ಒಳ್ಳೆಯ ಕೆಲಸ ಮಾಡುತ್ತಿದ್ದರೂ ಟೀಕೆಯನ್ನೇ ಮುಂದುವರೆಸಿದರೆ, ಹಾಗೆ ಟೀಕಿಸುವವರ ವ್ಯಕ್ತಿತ್ವ ಪೂರ್ವಾಗ್ರಹಪೀಡಿತವಾದದ್ದೆನಿಸಿಬಿಡುತ್ತದೆ. ಸದ್ಯಕ್ಕಂತೂ ಅಶೋಕ್ ರೈ ಅವರು ಕಂಡುಕೇಳರಿಯದ ತೆರನಾದ ಪುತ್ತೂರಿನ ಅಭಿವೃದ್ಧಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾರೆ. ಈಗಲೂ ನಾವವರನ್ನು ಶ್ಲಾಘಿಸಿ, ಪ್ರೋತ್ಸಾಹಿಸದಿದ್ದರೆ ನಾಳೆಯ ದಿನ, ಅಭಿವೃದ್ಧಿ ಮಾಡುವುದು ಬದಿಗಿರಲಿ, ಅಭಿವೃದ್ಧಿಯ ಕನಸು ಹೊರುವ ನೇತಾರರಿಗೂ ತತ್ವಾರ ಬಂದೀತು! ನಿಜ, ಅಶೋಕ್ ರೈ ಗೆದ್ದದ್ದು ಅದೃಷ್ಟದಿಂದ, ಆದರೆ ಪುತ್ತೂರನ್ನು ಅಭಿವೃದ್ಧಿಪಡಿಸುತ್ತಿರುವುದು ಮಾತ್ರ ತಾಕತ್ತಿನಿಂದ!
✍🏻.ರಾಕೇಶ ಕುಮಾರ್ ಕಮ್ಮಜೆ, ಪ್ರಾಂಶುಪಾಲರು, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು

LEAVE A REPLY

Please enter your comment!
Please enter your name here