ಉಪ್ಪಿನಂಗಡಿ: ಗಾಳಿಗೆ ಅಲ್ಲಲ್ಲಿ ಹಾನಿ

0

ಉಪ್ಪಿನಂಗಡಿ: ಶುಕ್ರವಾರ ಅಪರಾಹ್ನ ಬೀಸಿದ ಗಾಳಿಗೆ ಕೆಲವು ಕಡೆಗಳಲ್ಲಿ ಹಾನಿಯಾಗಿದ್ದು, ಉಪ್ಪಿನಂಗಡಿ ಪರಿಸರದಲ್ಲಿ 12 ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿವೆ.
34 ನೆಕ್ಕಿಲಾಡಿ ಗ್ರಾಮದಲ್ಲಿ ಗಾಳಿಯ ಹೊಡೆತಕ್ಕೆ ಮಾವಿನ ಮರವೊಂದು ಧರೆಗುರುಳಿದೆ. ಬೆಳ್ತಂಗಡಿ ತಾಲೂಕಿನ ಬಾಜಾರ ಎಂಬಲ್ಲಿನ ಲಲಿತಾ ಎಂಬವರ ಹಂಚಿನ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಹಾನಿಗೀಡಾಗಿದೆ. ಮರ ಬಿದ್ದ ವೇಳೆ ಮನೆಯಲ್ಲಿದ್ದ ಲಲಿತಾ ರವರಿಗೆ ಮತ್ತು ಅವರ ತಂಗಿ ಮಗಳಾದ ಗಾಯತ್ರಿ ಎಂಬವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆಂದು ತಿಳಿದು ಬಂದಿದೆ. ತೆಕ್ಕಾರು ಬಾಜಾರ ಪರಿಸರದಲ್ಲಿ ಅಲ್ಲಲ್ಲಿ ಮರಗಳು ಬಿದ್ದು ಸಮಸ್ಯೆಗಳು ಉಂಟಾಗಿದ್ದರೆ, ಹಲವೆಡೆ ಅಡಕೆ ಮರಗಳು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಹಾನಿಗೀಡಾಗಿದೆ ಎಂಬ ಮಾಹಿತಿ ಲಭಿಸಿದೆ.


ಉಪ್ಪಿನಂಗಡಿ ಪರಿಸರದಲ್ಲಿ ಮರಗಳು ಬಿದ್ದ ಪರಿಣಾಮ 12 ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲು ಕಾರಣವಾಯಿತು. ಮಾತ್ರವಲ್ಲದೆ ಅಲ್ಲಲ್ಲಿ ಮರದ ಗೆಲ್ಲುಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ಅಲ್ಲಲ್ಲಿ ತುಂಡರಿಸಲ್ಪಟ್ಟಿದೆ ಎಂದು ಮೆಸ್ಕಾಂ ಇಂಜಿನಿಯರ್ ನಿತಿನ್ ತಿಳಿಸಿದ್ದಾರೆ. ಈ ವಿದ್ಯಾಮಾನದ ನಡುವೆಯೂ ಮೆಸ್ಕಾಂನವರು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ವಿದ್ಯುತ್ ಸರಬರಾಜನ್ನು ಪುನರಾಂಭಿಸುವಲ್ಲಿ ಸಫಲರಾದರು.

LEAVE A REPLY

Please enter your comment!
Please enter your name here