ಭಾರತೀಯ ಸೇನೆಯಲ್ಲಿ ಅನೇಕ ಉದ್ಯೋಗಾವಕಾಶಗಳಿವೆ : ಕರ್ನಲ್ ರಾಜೇಶ್ ಹೊಳ್ಳ
ಪುತ್ತೂರು: ಸೈನ್ಯಕ್ಕೆ ಸೇರುವುದೆಂದರೆ ಯುದ್ಧಕ್ಕೆ ಹೋಗುವುದು, ಹೋರಾಟ ಮಾಡುವುದು ಎಂದಷ್ಟೇ ತಿಳಿದುಕೊಂಡವರು ಹಲವರಿದ್ದಾರೆ. ಆದರೆ ಯುದ್ಧಕ್ಕೆ ಅಡಿಯಿಡುವ ಸೈನಿಕನ ಹೊರತಾಗಿಯೂ ಅನೇಕ ಹುದ್ದೆಗಳು ಸೈನ್ಯದಲ್ಲಿದೆ. ವೈದ್ಯರಾಗಿ, ಇಂಜಿನಿಯರ್ ಆಗಿ, ಇಲೆಕ್ಟ್ರಿಷನ್ – ಚಾಲಕರಾಗಿ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸಬಹುದು. ಅಂತಹ ಹುದ್ದೆಗಳಿಗೆ ಸೇರುವ ಬಗೆಗೂ ಯುವಸಮುದಾಯ ಆಲೋಚನೆ ನಡೆಸಬಹುದು ಎಂದು ವಿಶ್ರಾಂತ ಯೋಧ ಕರ್ನಲ್ ರಾಜೇಶ್ ಹೊಳ್ಳ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಎನ್.ಡಿ.ಎ. ತರಗತಿಗಳನ್ನು ಉದ್ಘಾಟಿಸಿ, ಅಂಬಿಕಾ ಸಂಸ್ಥೆಯ ಜೆಇಇ ಹಾಗೂ ನೀಟ್ ಪರೀಕ್ಷಾ ಉಪನ್ಯಾಸಕರು ರಚಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು.
ಸೈನಿಕರಿಗೆ ಎಲ್ಲಾ ಬಗೆಯ ಸವಲತ್ತುಗಳನ್ನು ಸರ್ಕಾರ ನೀಡುತ್ತದೆ. ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರವಲ್ಲದೆ ಸೈನಿಕರ ನಿವೃತ್ತಿಯ ನಂತರವೂ ಅವರ ಕುಟುಂಬಕ್ಕೆ ನೆರವು ನೀಡುತ್ತದೆ. ಈ ಸಮಾಜದಲ್ಲಿ ಪೊಲೀಸರನ್ನು ನೋಡುವಾಗ ಭಯ ಮೂಡಿದರೆ ಸೈನಿಕರನ್ನು ಕಾಣುವಾಗ ಗೌರವ ಭಾವ ಮೂಡಿಬರುತ್ತದೆ. ಜೀವನದಲ್ಲಿ ಶಿಸ್ತನ್ನು ಹಾಗೂ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಕರೆನೀಡಿದರು.
ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕದ ಬಗೆಗೆ ಮಾಹಿತಿ ನೀಡಿದ ಎನ್‌ಡಿಎ ತರಗತಿಗಳ ಸಂಯೋಜಕ ಕಿಶೋರ್ ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಚ್ಚಿನದಾದ ಅನುಭವ ಮತ್ತು ಜ್ಞಾನ ದೊರಕಿಸಿ ಕೊಡುವಲ್ಲಿ ಮತ್ತು ಎನ್‌ಡಿಎ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವಲ್ಲಿ ಬಿಡುಗಡೆಯಾದ ಪುಸ್ತಕ ಸಾಮಾಗ್ರಿ ಪ್ರಯೋಜನಕಾರಿಯಾಗಿದೆ. ಅಂಬಿಕಾ ಸಂಸ್ಥೆಯ ಉಪನ್ಯಾಸಕ ವೃಂದ ಜೊತೆ ಸೇರಿ ಈ ಹೊತ್ತಗೆಯನ್ನು ಹೊರ ತಂದಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆಯುವಂತಾಗಬೇಕು ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ನಮ್ಮ ಸನಿಹದ ಕೊಡಗು ಜಿಲ್ಲೆಯ ಮಡಿಕೇರಿ ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾ?ಲ್ ಕಾರ್ಯಪ್ಪ ಎಂಬ ಎರಡು ಅಮೂಲ್ಯ ರತ್ನಗಳನ್ನು ಈ ದೇಶಕ್ಕೆ ನೀಡಿದೆ. ಅವರೀರ್ವರೂ ಜನರ ನೆನಪಲ್ಲಿ ಅಚ್ಚಳಿಯದೆ ಉಳಿಯುವಂತವರು. ಅವರನ್ನು ಆದರ್ಶವಾಗಿರಿಸಿಕೊಂಡು ಪ್ರತಿಯೊಬ್ಬರೂ ಸೈನ್ಯಕ್ಕೆ ಸೇರುವ ಪ್ರಯತ್ನ ನಡೆಸಬೇಕು. ಪ್ರತಿಯೊಂದು ಮನೆಯಲ್ಲೂ ಶಿವಾಜಿಯಂತಹ ವೀರರು ಹುಟ್ಟಬೇಕು. ದೇಶರಕ್ಷಣೆ ನಮ್ಮೆಲ್ಲರ ಹೊಣೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ನೂತನ ಶೈಕ್ಷಣಿಕ ವರ್ಷದ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಹರ್ಷಕುಮಾರ್ ಅವರಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ. ಎಚ್ ಮಾಧವ ಭಟ್ ಹಾಗೂ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಅಂಬಿಕಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ನೆಲ್ಲಿಕಟ್ಟೆ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಬಪ್ಪಳಿಗೆ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ವಂದಿಸಿದರು.