ವಿಟ್ಲ: ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವಕ, ಕಡೇಶಿವಾಲಯ ಗ್ರಾಮ ಕೊರತಿಗುರಿ ನಿವಾಸಿ ಹೇಮಂತ್ ಆಚಾರ್ಯ ನೇತ್ರಾವತಿ ನದಿಗೆ ಬಿದ್ದಿರಬಹುದು ಎಂದು ಶಂಕಿಸಿ ಬಂಟ್ವಾಳ ಅಗ್ನಿಶಾಮಕದಳ ಹಾಗೂ ಸ್ಥಳೀಯ ಈಜುಗಾರರು ನಿರಂತರವಾಗಿ ಕಳೆದ ಮೂರುವರೆ ದಿನಗಳಿಂದ ನದಿಯಲ್ಲಿ ಹುಡಕಾಟ ನಡೆಸುತ್ತಿದ್ದು, ಈವರೆಗೆ ಯುವಕನ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಕೊರತಿಗುರಿ ನಿವಾಸಿ ಜಗದೀಶ್ ಆಚಾರ್ಯ ರವರ ಪುತ್ರ ಹೇಮಂತ್ ರವರು ಜು.28ರಂದು ಫರಂಗಿಪೇಟೆಗೆ ಕೆಲಸಕ್ಕೆಂದು ತೆರಳಿ ಆ ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಆತನಿಗಾಗಿ ವಿವಿದೆಡೆ ಹುಡುಕಾಟ ನಡೆಸಿದ ಅವರ ಮನೆಮಂದಿ ಜು.29ರಂದು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಆತನ ಪತ್ತೆಗಾಗಿ ವಿವಿದೆಡೆ ಹುಡುಕಾಟ ಆರಂಭಿಸಿದ್ದರು.
ಈ ಮಧ್ಯೆ ಹೇಮಂತ್ ಆಚಾರ್ಯ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಆತನ ಮೊಬೈಲ್ ಪೋನ್ ರಾಷ್ಟ್ರೀಯ ಹೆದ್ದಾರಿ ಬಿಸಿರೋಡು ಧರ್ಮಸ್ಥಳ ರಸ್ತೆಯ ಬಡ್ಡಕಟ್ಟೆ ಸಮೀಪದ ಜಕ್ರಿಬೆಟ್ಟು ಡ್ಯಾಂ ಬಳಿ ಪತ್ತೆಯಾಗಿತ್ತು. ಈತನ ದ್ವಿಚಕ್ರ ವಾಹನವನ್ನು ನದಿ ಕಿನಾರೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿರುವುದರಿಂದ ಆತನ ಪತ್ತೆಗಾಗಿ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸ್ ತಂಡ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದು, ಯುವಕ ನದಿಯಲ್ಲಿ ಬಿದ್ದಿರಬಹುದೆಂದು ಶಂಕೆ ವ್ಯಕ್ತಪಡಿಸಿ ಕಳೆದ ಮೂರು ದಿನದಿಂದ ಸ್ಕೂಟರ್ ಪತ್ತೆಯಾಗಿರುವ ಕೆಳಗಿನ ಭಾಗದಿಂದ ತುಂಬೆವರೆಗೂ ಹುಡುಕಾಟ ನಡೆಸಿದ್ದಾರೆ. ಆದರೂ ಯಾವುದೇ ಸುಳಿವು ಸಿಗದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನುರಿತ ಈಜುಗಾರರ ತಂಡ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದೆ.