ಗ್ರಾಮೀಣ ಯುವಜನತೆಯನ್ನು ಸಶಕ್ತಗೊಳಿಸುವ ಉದಾತ್ತ ಚಿಂತನೆಯಿಂದ “ನಂಬಿಕೆ ಮತ್ತು ಸೇವೆ” ಎಂಬ ಧ್ಯೇಯವಾಕ್ಯದೊಂದಿಗೆ 1958ರಲ್ಲಿ ಮಾಯ್ ದೆ ದೇವುಸ್ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಮೊನ್ಸಿಂಜೊರ್ ಆಂಟನಿ ಪತ್ರಾವೋರವರಿಂದ ಸ್ಥಾಪಿತಗೊಂಡ ಸಂತ ಫಿಲೋಮಿನಾ ಕಾಲೇಜು 2024ರಲ್ಲಿ ಸ್ವಾಯತ್ತ ಸ್ಥಾನಮಾನ ಹೊಂದಿ ಅಭಿವೃದ್ಧಿಪಥದಲ್ಲಿ ಮುನ್ನಡೆಯುತ್ತಿದೆ.
ಪ್ರಥಮ ಹೆಜ್ಜೆಯಿಂದ ತೊಡಗಿ ಕ್ರಮಿಸಿದ ಹಾದಿಯಲ್ಲಿ ಅನೇಕ ಶೈಕ್ಷಣಿಕ ಸಾಧಕರನ್ನು, ಅಪ್ರತಿಮ ಕ್ರೀಡಾಪಟುಗಳನ್ನು, ಬಲಿಷ್ಠ ನಾಯಕರನ್ನು ಹಾಗೂ ಶ್ರೇಷ್ಠ ಕಲಾವಿದರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಫಾ| ಪತ್ರಾವೊ ಅವರ ಮಹತ್ವಾಕಾಂಕ್ಷೆಯ ದೃಷ್ಟಿಕೋನ ಮತ್ತು ಧ್ಯೇಯವನ್ನು ಮುಂದುವರಿಸುತ್ತಾ, ಪದವಿ ಶಿಕ್ಷಣದೊಂದಿಗೆ ಸ್ನಾತಕೋತ್ತರ ಕಾರ್ಯಕ್ರಮಗಳು ಫಿಲೋ ಕ್ಯಾಂಪಸ್ಗೆ ಪಾದಾರ್ಪಣೆಗೈದವು. ಈ ಮೂಲಕ ಸಂಸ್ಥೆಯು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯಿಂದ ನಿರ್ವಹಿಸಲ್ಪಡುವ ಕಾಲೇಜುಗಳಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮೊದಲ ಕಾಲೇಜು ಎಂಬ ಹೆಗ್ಗಳಿಕೆ ಪಾತ್ರವಾಯಿತು. ಪ್ರಸ್ತುತ ಕಾಲೇಜಿನ ಅಧ್ಯಯನ ಕೇಂದ್ರದಲ್ಲಿ ಸಮಾಜ ಕಾರ್ಯ, ವಾಣಿಜ್ಯಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ ಹಾಗೂ ಗಣಕವಿಜ್ಞಾನದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಲು ಅವಕಾಶವಿದೆ.
ಕಾಲೇಜಿನ ಸುವರ್ಣ ಮಹೋತ್ಸವ ವರ್ಷವಾದ 2007ರಲ್ಲಿ ಸ್ನಾತಕೋತ್ತರ ಸಮಾಜಕಾರ್ಯ ಆಫ್ ಸೋಶಿಯಲ್ ವರ್ಕ್ (MSW) ಕಾರ್ಯಕ್ರಮ ಪ್ರಾರಂಭವಾಯಿತು. 57 ವಿದ್ಯಾರ್ಥಿಗಳು ಮತ್ತು ನಾಲ್ವರು ಅಧ್ಯಾಪಕರ ತಂಡದೊಂದಿಗೆ ಪ್ರಾರಂಭವಾಯಿತು. ಸುಸಜ್ಜಿತ ಅಧ್ಯಯನ ವಿಭಾಗವು ವಿದ್ಯಾರ್ಥಿಗಳಿಗಾಗಿ ಸಾಮಾಜಿಕ ಕಳಕಳಿಯುಳ್ಳ ಹಲವಾರು ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುತ್ತಿದೆ. ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲ ನಿರ್ವಹಣೆ (ಹೆಚ್ಆರ್ಎಂ) ಮತ್ತು ಮನೋವೈದ್ಯಕೀಯ ಸಮಾಜಕಾರ್ಯ ಎಂಬ ವಿಷಯಗಳಲ್ಲಿ ವಿಶೇಷ ಪರಿಣತಿ (ಸ್ಪೆಶಲೈಸೇಶನ್) ಪಡೆಯಲು ಅವಕಾಶವಿದೆ. ವಿಭಾಗವು ಜನಸಾಮಾನ್ಯರಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳು ಮುಂತಾದ ವಿವಿಧ ಸಾಮಾಜಿಕ ಪಿಡುಗುಗಳ ಕುರಿತು ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಾತ್ರವಲ್ಲದೆ ವಿಭಾಗದ ವತಿಯಿಂದ ಗ್ರಾಮೀಣ ಶಿಬಿರಗಳು ಮತ್ತು ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಲ್ಪಡುತ್ತಿವೆ.
2011ರಲ್ಲಿ ಸುಸಜ್ಜಿತ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ವಿಭಾಗವು ಅತಿಥಿ ಉಪನ್ಯಾಸಗಳು ಮತ್ತು ತಜ್ಞರ ಜೊತೆ ಸಂವಾದ ಕಾರ್ಯಕ್ರಮಗಳು, ವಿವಿಧ ಕಾರ್ಯಾಗಾರಗಳು ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ, ಕೈಗಾರಿಕಾ ಭೇಟಿಗಳು ಮತ್ತು ಕ್ಷೇತ್ರ ಅಧ್ಯಯನಗಳು, ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳು, ಸಂವಹನ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ವಿದ್ಯಾರ್ಥಿಗಳು ನೈಜ ವ್ಯವಹಾರ ಚಟುವಟಿಕೆಗಳನ್ನು ಅರ್ಥೈಸಲೆಂದು ನಿರ್ಮಿಸಿದ ವಾಣಿಜ್ಯ ಪ್ರಯೋಗಾಲಯವು ಪ್ರಾಯೋಗಿಕ ಕಲಿಕಾ ವಾತಾವರಣವನ್ನು ಒದಗಿಸುತ್ತದೆ. ದೇಶದ ಅಮೂಲ್ಯ ಸಂಪತ್ತಾದ ಯುವಜನತೆಯನ್ನು ಪ್ರಗತಿಪಥದೆಡೆ ಗಮಿಸುವಂತೆ ವ್ಯಕ್ತಿತ್ವ ನಿರ್ಮಾಣದ ಮಹತ್ಕಾರ್ಯದಲ್ಲಿ ಸಂಸ್ಥೆಯು ತೊಡಗಿಸಿಕೊಂಡಿದೆ.
2012ರಲ್ಲಿ ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ವಿಭಾಗದ ಹಲವಾರು ವಿದ್ಯಾರ್ಥಿ-ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಭಾಗವು ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದ್ದು ಇಲ್ಲಿನ ವಿದ್ಯಾರ್ಥಿಗಳು ಐಐಟಿ, ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಮುಂತಾದ ಸಂಸ್ಥೆಗಳಲ್ಲಿ ಹಾಗೂ ಇತರ ಸಂಶೋಧನಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ ಹಲವಾರು ನಿದರ್ಶನಗಳಿವೆ.
ಭೌತಶಾಸ್ತ್ರ ವಿಭಾಗವು ಮಂಗಳೂರು ವಿಶ್ವವಿದ್ಯಾನಿಯಲದ ಮನ್ನಣೆಗೊಳಪಟ್ಟ ಸಂಶೋಧನಾ ಕೇಂದ್ರವನ್ನು ಹೊಂದಿರುತ್ತದೆ ಮಾತ್ರವಲ್ಲದೆ ಕೇಂದ್ರ ಸರಕಾರದ ಬಿಆರ್ಎನ್ಎಸ್ ಅನುದಾನಿತ ಪ್ರಯೋಗಾಲಯ, ಕರ್ನಾಟಕ ಸರಕಾರದ ಅನುದಾನಿತ ವಿಜಿಎಸ್ಟಿ ಪ್ರಯೋಗಲಾಯ ಮುಂತಾದ ಮೂರು ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ. ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊರವರು ಮಂಗಳೂರು ವಿಶ್ವಿವಿದ್ಯಾನಿಲಯದಿಂದ ಗುರುತಿಸಲ್ಪಟ್ಟ ರಿಸರ್ಚ್ ಗೈಡ್ ಆಗಿರುತ್ತಾರೆ.
ಖಗೋಳಶಾಸ್ತ್ರ ಆಸಕ್ತರಿಗೆ ಆಕಾಶವೀಕ್ಷಣೆಗಾಗಿ ಸಂತ ಫಿಲೋಮಿನಾ ಅಮೆಚೂರ್ ಆಸ್ಟ್ರಾನಾಮಿಕಲ್ ಕ್ಲಬ್ ಸ್ಥಾಪಿಸಲಾಗಿದೆ. ಅಸ್ಟ್ರಾನಾಮಿಕಲ್ ಟೆಲಿಸ್ಕೋಪ್ ಸಹಾಯದಿಂದ ಸೂರ್ಯಗ್ರಹಣ, ಚಂದ್ರಗ್ರಹಣ, ಸೂಪರ್ಮೂನ್ ಮುಂತಾದ ಅಪರೂಪದ ಘಟನೆಗಳನ್ನು ವಿದ್ಯಾರ್ಥಿಗಳು ಮಾತ್ರವಲ್ಲದೆ ಸಾರ್ವಜನಿಕರಿಗೂ ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತದೆ.
ಗಣಿತದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸುವ ಬಲವಾದ ಬಯಕೆಯನ್ನು ಹೊಂದಿರುವ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು 2013-14ನೇ ಶೈಕ್ಷಣಿಕ ವರ್ಷದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಪಠ್ಯಕ್ರಮದೊಂದಿಗೆ ಲ್ಯಾಟೆಕ್ಸ್ ಹಾಗೂ ಇನ್ನಿತರ ಗಣಿತ ಸಂಬಂಧಿ ಸಾಫ್ಟ್ವೇರ್ಗಳ ಬಳಕೆಗೆ ಕಾರ್ಯಗಾರಗಳು ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಭಾಗವು ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣವನ್ನು ಒದಗಿಸುತ್ತಿದೆ.
ಗಣಕ ವಿಜ್ಞಾನ ವಿಭಾಗದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಎಂಸಿಎ) ಸ್ನಾತಕೋತ್ತರ ಪದವಿಯು ಎಐಸಿಟಿಇಯ ಮಾನ್ಯತೆ ಹೊಂದಿದ್ದು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಸೆಕ್ಯುರಿಟಿ ಎಂಬ ಎರಡು ವಿಷಯಗಳನ್ನು ವಿಶೇಷ ವಿಷಯಗಳಾಗಿ ಅಧ್ಯಯನ ನಡೆಸಲು ಅನುವುಮಾಡಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಸಂಶೋಧನೆ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸಲು ಕಾರ್ಯಾಗಾರಗಳನ್ನು, ಉದ್ಯಮ ತಜ್ಞರಿಂದ ಪ್ರಾಯೋಗಿಕ ತರಗತಿಗಳನ್ನು ನಿಯಮಿತವಾಗಿ ಆಯೋಜಿಸುತ್ತದೆ. ಸೈಬರ್ ಭದ್ರತಾ ತಜ್ಞರು ಹಾಗೂ ಎಐ ಮತ್ತು ಉದ್ಯಮಶೀಲತಾ ತಜ್ಞರು ವಿಭಾಗಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಭಾಗವು ಹವಾನಿಯಂತ್ರಿತವಾದ ಸುಸಜ್ಜಿತ ಪ್ರಯೋಗಾಲಯ ಮತ್ತು ಐಸಿಟಿ ಸೌಲಭ್ಯಗಳನ್ನು ಹೊಂದಿರುವ ತರಗತಿ ಕೊಠಡಿಗಳನ್ನು ಹೊಂದಿರುತ್ತದೆ.
ಸ್ನಾತಕೋತ್ತರ ಶಿಕ್ಷಣವು ಒಂದು ವಿಷಯದ ಕುರಿತು ಆಳವಾದ ಜ್ಞಾನ, ವೃತ್ತಿಯಲ್ಲಿ ಪ್ರಗತಿ ಮತ್ತು ಸಂಶೋಧನಾ ದೃಷ್ಟಿಕೋನದೆಡೆಗಿನ ಸೋಪಾನವಾಗಿದೆ. ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ನೀಡುತ್ತಿರುವ ಸ್ನಾತಕೋತ್ತರ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕತೆ, ಸೃಜನಶೀಲತೆ ಮತ್ತು ಸ್ಪರ್ಧಾತ್ಮಕ ಜಗತ್ತಿಗೆ ಅಗತ್ಯವಿರುವ ಕೌಶಲ್ಯ ಹಾಗೂ ಆತ್ಮವಿಶ್ವಾಸಗಳನ್ನು ತುಂಬಿ ಅವರನ್ನು ಮುಂದಿನ ಜೀವನಕ್ಕೆ ಸಜ್ಜುಗೊಳಿಸುತ್ತದೆ. ಕಾಲೇಜಿನಲ್ಲಿ ಅನುಭವಿ ಅಧ್ಯಾಪಕರು, ಉತ್ತಮವಾಗಿ ರಚನಾತ್ಮಕ ಪಠ್ಯಕ್ರಮ ಮತ್ತು ಸಂಶೋಧನಾ ಅವಕಾಶಗಳಿಗೆ ಉತ್ತಮ ಕಲಿಕಾ ವಾತಾವರಣವನ್ನು ನಿರ್ಮಿಸಲಾಗಿದೆ. ಸುಸಜ್ಜಿತ ವಾಚನಾಲಯ, ಪ್ರಯೋಗಾಲಯಗಳು, ಸೆಮಿನಾರ್ ಹಾಲ್ ಹಾಗೂ ಕಾನ್ಫರೆನ್ಸ್ ರೂಮ್ಗಳು ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಹಕಾರಿಯಾಗಿವೆ. ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಇಂಟರ್ನ್ಶಿಪ್ಗಳು ಮತ್ತು ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ವಿಶ್ಲೇಷಣಾತ್ಮಕ ಸಾಮರ್ಥ್ಯ, ವಿಷಯ ಪರಿಣತಿ ಮತ್ತು ವೃತ್ತಿಪರ ಸಿದ್ಧತೆಯನ್ನು ಹೆಚ್ಚಿಸಲು ವಿಶೇಷ ಗಮನ ನೀಡಲಾಗುತ್ತದೆ.
ಸಂತ ಫಿಲೋಮಿನಾ ಕಾಲೇಜು ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣಕ್ಕಾಗಿ ಪುತ್ತೂರು ಹಾಗೂ ಹತ್ತೂರಲ್ಲಿ ಖ್ಯಾತಿಯನ್ನು ಗಳಿಸಿದೆ. ಪ್ರಾಯೋಗಿಕ ಹಾಗೂ ಗುಣಮಟ್ಟದ ಸ್ನಾತಕೋತ್ತರ ಶಿಕ್ಷಣವನ್ನು ಬಯಸುವವರಿಗೆ ಸಂತ ಫಿಲೋಮಿನಾ ಕಾಲೇಜು ವಿಶ್ವಾಸಾರ್ಹ ಆಯ್ಕೆಯಾಗಿದೆ.
ಶಿಕ್ಷಣವು ಜೀವನವನ್ನು ಪರಿವರ್ತಿಸಲು ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ ಎಂಬ ಆಳವಾದ ನಂಬಿಕೆಯಿಂದ ಮೊನ್ಸಿಂಜೊರ್ ಆಂಟನಿ ಪತ್ರಾವೋರವರು ವಿಶೇಷವಾಗಿ ಉನ್ನತ ಶಿಕ್ಷಣಕ್ಕೆ ಅವಕಾಶಗಳಿಲ್ಲದ ಈ ಪ್ರದೇಶದಲ್ಲಿ ಸಾವಿರಾರು ಗ್ರಾಮೀಣ ಯುವಜನರ ಜೀವನದಲ್ಲಿ ಭರವಸೆಯನ್ನು ಬೆಳಗಿಸುತ್ತಿರುವ ಈ ವಿದ್ಯಾಸಂಸ್ಥೆಯನ್ನು ನಿರ್ಮಿಸಿದರು. ಅಂದಿನಿಂದ ಇಂದಿನವರೆಗೂ ಸಂಸ್ಥೆಯು ತನ್ನ ಧ್ಯೇಯದಿಂದ ಕಿಂಚಿತ್ ಸಹ ವಿಚಲಿತಗೊಳ್ಳದೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸ್ವಲ್ಪವೂ ರಾಜಿಮಾಡಿಕೊಳ್ಳದೆ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿ ವಿಕಸನಗೊಂಡಿದೆ. ಒಂದೇ ಆವರಣದೊಳಗೆ ಪ್ರಾಥಮಿಕ ವಿದ್ಯಾಭ್ಯಾಸದಿಂದ ಮೊದಲ್ಗೊಂಡು ಸ್ನಾತಕೋತ್ತರ ಪದವಿ ಶಿಕ್ಷಣದವರೆಗಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುತ್ತಿರವ ಸಂಸ್ಥೆಗಳ ಪೃಕಿ ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು. ಗ್ರಾಮೀಣ ವಿದ್ಯಾರ್ಥಿಗಳ ಸಬಲೀಕರಣ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಕಾಲೇಜು ತೋರುತ್ತಿರುವ ಬದ್ಧತೆಯು ಅಪಾರ ಜನಮನ್ನಣೆ ಗಳಿಸಿರುತ್ತದೆ. ಅನುಭವಿ ಶಿಕ್ಷಕವೃಂದ ಹಾಗೂ ಆಧುನಿಕ ಸೌಲಭ್ಯಗಳೊಂದಿಗೆ ಕಾಲೇಜಿನಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಅನುವುಮಾಡಿಕೊಡಲಾಗಿದೆ.
ಅತಿ ವಂ| ಲಾರೆನ್ಸ್ ಮಸ್ಕರೇನಸ್
ಸಂಚಾಲಕರು

ಸಂತ ಫಿಲೋಮಿನಾ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಜಗತ್ತಿನ ಸವಾಲುಗಳನ್ನೆದುರಿಸಲು ಹಾಗೂ ಹೊಸ ಕೌಶಲ್ಯಗಳನ್ನು ಹೊಂದಲು ತರಬೇತಿ ನೀಡಲಾಗುತ್ತದೆ. ಸ್ನಾತಕೋತ್ತರ ಶಿಕ್ಷಣದಲ್ಲಿ ಒಂದು ವಿಷಯದ ಮೇಲೆ ಆಳವಾದ ಪಾಂಡಿತ್ಯ ಹೊಂದುವುದು ಮಾತ್ರವಲ್ಲದೆ ವಿಮರ್ಶಾತ್ಮಕ ಚಿಂತನೆ ಹಾಗೂ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕೆ-ಸೆಟ್, ಎನ್ಇಟಿ ಮುಂತಾದ ಪರೀಕ್ಷೆಗಳಿಗೆ ಹಾಗೂ ಸಂಶೋಧನೆಗೆ ಸಂಬಂಧಿಸಿದ ಇನ್ನಿತರ ಪರೀಕ್ಷೆಗಳಿಗೆ ತಜ್ಞರ ಸಹಾಯದಿಂದ ತರಬೇತಿ ನೀಡಲಾಗುತ್ತಿದೆ ಈ ಮೂಲಕ ಶೈಕ್ಷಣಿಕ ಸಮಗ್ರತೆಯ ಸಂಸ್ಕೃತಿಯನ್ನು ಬೆಳೆಸಲಾಗುತ್ತಿದೆ. ಇಲ್ಲಿ ದಾಖಲಾತಿ ಹೊಂದಿದ ಪ್ರತಿಯೋರ್ವ ವಿದ್ಯಾರ್ಥಿಯೂ ಉದ್ಯೋಗಾರ್ಹ ಪದವೀಧರನಾಗಿ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಜವಾಬ್ದಾರಿಯುತ ನಾಗಿರಕನಾಗಿ ಪರಿವರ್ತನೆ ಹೊಂದುವಲ್ಲಿ ಎಲ್ಲಾ ಸಿಬ್ಬಂದಿವರ್ಗದವರೂ ಮುತುವರ್ಜಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿರಿಸಿಕೊಂಡು ಸಮಂಜಸವಾದ ಶುಲ್ಕವನ್ನು ವಿಧಿಸಲಾಗಿದೆ. ಆದರೆ ಪದವಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವನಾಯಿತಿ ನೀಡಲಾಗುತ್ತಿದೆ.
ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೊ
ಪ್ರಾಂಶುಪಾಲರು
