ಗಾಳಿಮುಖದಲ್ಲಿ ಅಮಾನವೀಯ ಘಟನೆ ; ಅಪರಿಚಿತನನ್ನು ಆಸ್ಪತ್ರೆ ಸೇರಿಸಿದ ಪೊಲೀಸರು
ಪುತ್ತೂರು: ಮಾದಕ ವಸ್ತುವಿನ ನಶೆಯ ಅಮಲೋ ಅಥವಾ ಮಾನಸಿಕ ಅಸ್ವಸ್ಥನೋ ಗೊತ್ತಿಲ್ಲ. ಆದರೆ ಸಾರ್ವಜನಿಕರಿಗೆ ಆತನ ಕಾಟ ತಾಳಲಾರದೆ ಹಗ್ಗದಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಕೇರಳ ಗಡಿ ಭಾಗದ ಗಾಳಿಮುಖದಲ್ಲಿ ಆ.3ರಂದು ನಡೆದ ಬಗ್ಗೆ ವರದಿಯಾಗಿದೆ.
ಕಾಸರಗೋಡು ಮೂಲದ ವ್ಯಕ್ತಿಯೋರ್ವ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ ಎಲ್ಲರಿಗೂ ಬೈದು ಗಲಾಟೆ ಎಬ್ಬಿಸುತ್ತಿದ್ದುದಾಗಿ ಆರೋಪಿಸಲಾಗಿದ್ದು, ಸಾರ್ವಜನಿಕರು ಆತನ ಕಾಟ ತಡೆಯಲಾರದೆ ಹಗ್ಗದಲ್ಲಿ ಕೈಕಾಲುಗಳನ್ನು ಕಟ್ಟಿ ಹಾಕಿದ್ದರು. ಈ ನಡುವೆ ವ್ಯಕ್ತಿ ಅಲ್ಲಿಂದ ಹೊರಳಾಡಿಕೊಂಡು ರಸ್ತೆ ಬದಿಗೆ ಬಂದು ಬಿದ್ದುಕೊಂಡಿದ್ದರು. ಈ ಕುರಿತು ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಕರ್ನಾಟಕ ಕೇರಳದ ಗಡಿ ಭಾಗವಾದ ಗಾಳಿಮುಖ ಕರ್ನೂರು ಮತ್ತಿತರ ಕಡೆಗಳಲ್ಲಿ ಹೇರಳವಾಗಿ ಮಾದಕ ವಸ್ತುಗಳ ಸಾಗಾಟ, ಮಾರಾಟ ನಡೆಯುತ್ತಿರುವ ಅನುಮಾನವಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕವಾಗಿ ಆಗ್ರಹ ವ್ಯಕ್ತವಾಗಿದೆ.