ಪುತ್ತೂರು: ತುಳುನಾಡಿನ ಆಟಿ ತಿಂಗಳ ವಿಶೇಷತೆ, ಆಟಿ ತಿಂಗಳ ಮಹತ್ವ ಹಾಗೇ ಆಟಿ ತಿಂಗಳಲ್ಲಿ ಬರುವ ಪರ್ವಗಳು ಈ ಬಗ್ಗೆ ವಿಶೇಷ ಮಾಹಿತಿ ಕಾರ್ಯಕ್ರಮ ಮತ್ತು ಆಟಿ ತಿಂಗಳ ತಿನಿಸುಗಳ ಉಣಬಡಿಸುವ `ಆಟಿದ ನೆಂಪು’ ವಿಶೇಷ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಓಜಾಲದಲ್ಲಿ ಆ.2 ರಂದು ನಡೆಯಿತು.

ಸಭಾಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಗಣೇಶ್ ಪಾಂಡೇಲುರವರು ಮಾತನಾಡಿ, ಒಂದು ಒಳ್ಳೆಯ ಕಾರ್ಯಕ್ರಮ ಇದಾಗಿದ್ದು ವಿದ್ಯಾರ್ಥಿಗಳು ಆಟಿ ತಿಂಗಳ ಮಹತ್ವವನ್ನು ತಿಳಿದುಕೊಳ್ಳುವುದು ಅತೀ ಅವಶ್ಯ ಎಂದು ಹೇಳಿದರು. ಎಸ್ಡಿಎಂಸಿ ಮಾಜಿ ಅಧ್ಯಕ್ಷರಾದ ಸುಂದರ ಗೌಡ ಪಾಂಡೆಲುರವರು ಮಾತನಾಡಿ, ಓಜಾಲ ಶಾಲೆಯು ಒಂದು ಕಾಲದಲ್ಲಿ ಎಲ್ಲಾ ವಿಧದಲ್ಲೂ ಹಿಂದೆ ಬಿದ್ದಿತ್ತು ಆದರೆ ಇಂದು ಎಲ್ಲರ ಸಹಕಾರದಿಂದ ಸರಕಾರಿ ಶಾಲೆಗಳಿಗೆ ಒಂದು ಮಾದರಿ ಶಾಲೆಯಾಗಿ ರೂಪುಗೊಂಡಿರುವುದು ಖುಷಿ ಕೊಟ್ಟಿದೆ ಎಂದರು. ಆಟಿದ ನೆಂಪು ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ ಸಿಶೇ ಕಜೆಮಾರ್ರವರು ಮಾತನಾಡಿ, ಆಟಿ ಒಂದು ವಿಶೇಷತೆಗಳ ಆಗರವಾಗಿದೆ. ಒಂದು ಕಾಲದಲ್ಲಿ ಆಟಿ ಎಂದರೆ ಕಷ್ಟದ ತಿಂಗಳು ಎಂದೇ ಕರೆಯಲ್ಪಡುತ್ತಿತ್ತು ಆದರೆ ಇಂದು ಆ ಕಷ್ಟಗಳು ಇಲ್ಲ ಆದರೂ ಆಟಿ ಅಂದಿಗೂ ಇಂದಿಗೂ ಎಲ್ಲರ ಇಷ್ಟದ ತಿಂಗಳು ಆಗಿರುವುದು ವಿಶೇಷತೆಯಾಗಿದೆ ಎಂದರು. ಆಟಿ ತಿಂಗಳಿನ ಆಚರಣೆಗಳನ್ನು ನಾವೆಲ್ಲರೂ ತಿಳಿದುಕೊಂಡು ಮುಂದಿನ ಜನಾಂಗಕ್ಕೆ ತಿಳಿಸಿಕೊಡುವಲ್ಲಿ ಇಂತಹ ಆಟಿದ ನೆಂಪು ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿವೆ. ವಿಶೇಷವಾಗಿ ಮಕ್ಕಳಿಗೆ ನಮ್ಮ ತುಳುನಾಡಿನ ಸಂಸ್ಕೃತಿ, ಸಂಸ್ಕಾರ, ಆಚರಣೆಗಳು ಅರ್ಥವಾಗಬೇಕಿದೆ, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಪ್ರಯತ್ನ ಪಡಬೇಕಾಗಿದೆ ಎಂದರು.
ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಏಳನೇ ತರಗತಿಯ ತೃಶ್ಯಾ, ೬ನೇ ತರಗತಿಯ ಹಂಸಿಕಾ, ಏಳನೇ ತರಗತಿಯ ಸಮರ್ಥ್ ಮತ್ತು ಶಫೀರ್ರವರುಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಸುಮಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ನೀಲಪ್ಪ ಗೌಡ ಉಪಸ್ಥಿತರಿದ್ದರು. ಶಿಕ್ಷಕಿ ಜೆಸಿಂತಾ ಲೋಬೊ ಸ್ವಾಗತಿಸಿದರು. ಶಿಕ್ಷಕಿ ರೇಖಾ ವಂದಿಸಿದರು.ಶಿಕ್ಷಕಿ ವಿಲ್ಮಾ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿಯರಾದ ಕುಶಲ ಕುಮಾರಿ, ನವ್ಯಶ್ರೀ, ಚಂದ್ರಕಲಾ, ಅಡುಗೆ ಸಿಬ್ಬಂದಿಗಳಾದ ಕುಸುಮ, ಹರಿಣಾಕ್ಷಿ ಮತ್ತು ವನಿತಾ ಸಹಕರಿಸಿದ್ದರು. ಶಾಲಾ ಮುಖ್ಯಗುರು ಸಂಜೀವ ಮಿತ್ತಳಿಕೆ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಆಟಿದ ನೆಂಪು ಕಾರ್ಯಕ್ರಮದಲ್ಲಿ ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳೇ ಆಟಿ ತಿಂಗಳಲ್ಲಿ ಬರುವ ವಿವಿಧ ಆಚರಣೆಗಳನ್ನು ನೆನಪು ಮಾಡಿಕೊಂಡರು. ಮನೆಯಲ್ಲಿ ಆಚರಿಸಿದ ಆಟಿದ ತಿನಿಸುಗಳು, ಆಚರಣೆಗಳನ್ನು ನೆನಪಿಸಿಕೊಂಡರು. ಮಧ್ಯಾಹ್ನ ಆಟಿಯ ವಿಶೇಷ ಖಾದ್ಯಗಳ ಭೋಜನ ನಡೆಯಿತು. ಎಸ್ಡಿಎಂಸಿ ಸದಸ್ಯರುಗಳು, ಪೋಷಕರು, ಶಿಕ್ಷಕ ವೃಂದದವರು ಸಹಕರಿಸಿದ್ದರು.