ನೆಲ್ಯಾಡಿ: ಅಪ್ರಾಪ್ತೆಯ ಮೃತದೇಹವನ್ನು ಪೊಲೀಸ್ ಅಧಿಕಾರಿ ಕಾನೂನು ಬಾಹಿರವಾಗಿ ಹೂತು ಹಾಕಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕಲಮೆತಡ್ಕ ನಿವಾಸಿ ಜಯಂತ್ ಟಿ.ಎಂಬವರು ಧರ್ಮಸ್ಥಳ ಠಾಣೆಗೆ ನೀಡಿದ್ದ ದೂರು ಅರ್ಜಿಯನ್ನು ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸುವಂತೆ ರಾಜ್ಯದ ಡಿ.ಜಿ.ಪಿ ಮತ್ತು ಐ.ಜಿ.ಪಿ ಆದೇಶಿಸಿದ್ದಾರೆ.
2002 ಮತ್ತು 2003ರ ಅವಧಿಯಲ್ಲಿ ಸುಮಾರು 13 ರಿಂದ 15 ವರ್ಷದ ಹೆಣ್ಣು ಮಗುವಿನ ಮೃತದೇಹವನ್ನು ರಾಜ್ಯ ಹೆದ್ದಾರಿ 37ರ ರಸ್ತೆ ಬದಿಯ ಅರಣ್ಯದಲ್ಲಿ ಎಸೆದು ಹೋಗಿರುವ ವಿಷಯವನ್ನು ಸ್ಥಳೀಯ ನಿವಾಸಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ವ್ಯಾಪ್ತಿಯಲ್ಲಿರುವ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದರೂ ಅವರು 1 ವಾರದ ನಂತರ ಆಟೋದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದು, ಇದು ಸುಮಾರು 35 ರಿಂದ 40 ವರ್ಷದ ಹೆಂಗಸ್ಸಿನ ಮೃತದೇಹವಾಗಿದ್ದು ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿ, 1 ರಿಂದ 2 ಫೀಟ್ ಆಳದ ಹೊಂಡ ತೋಡಿ ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಶವ ಹೂತು ಹಾಕಿದ್ದಾರೆ ಎಂದು ಆರೋಪಿಸಿ ಇಚ್ಲಂಪಾಡಿಯ ಜಯಂತ್ ಟಿ.ಅವರು ಎಸ್‌ಐಟಿಗೆ ದೂರು ನೀಡಿದ್ದರು.
ಈ ದೂರು ಪರಿಶೀಲಿಸಿದ ಎಸ್‌ಐಟಿ(ಧರ್ಮಸ್ಥಳ ಪ್ರಕರಣ)ಯ ಪೊಲೀಸ್ ಅಧೀಕ್ಷಕರು ನೀವು ಸ್ಥಳೀಯ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುವುದು. ಸದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿಂಬರಹ ನೀಡಿದ್ದರು. ಅದರಂತೆ ಜಯಂತ್ ಟಿ.ಅವರು ಆ.4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಅರ್ಜಿಯನ್ನು 200/ ಡಿಪಿಎಸ್/2025ರಂತೆ ಧರ್ಮಸ್ಥಳ ಪೊಲೀಸರು ಸ್ವೀಕರಿಸಿಕೊಂಡಿದ್ದರು. ಇದೀಗ ಈ ದೂರು ಅರ್ಜಿಯನ್ನು ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸುವಂತೆ ಡಿ.ಜಿ.ಪಿ ಮತ್ತು ಐ.ಜಿ.ಪಿ. ಆದೇಶಿಸಿದ್ದಾರೆ ಎಂದು ದ.ಕ.ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.