





ಪುತ್ತೂರು: ವರ್ಷಗಳ ಹಿಂದೆ ಪುತ್ತೂರು, ಉಪ್ಪಿನಂಗಡಿ, ಧರ್ಮಸ್ಥಳದಲ್ಲಿ ನಡೆದಿರುವ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಡಿವೈಎಸ್ಪಿ ಅವರ ವಿಶೇಷ ತಂಡ ತ್ರಿಶೂರ್ನಲ್ಲಿ ಬಂಧಿಸಿದ್ದಾರೆ.


ತ್ರಿಶೂರ್ ಜಿಲ್ಲೆಯ ಇಲ್ಯಾಸ್ ಪಿ.ಎ(455) ಬಂಧಿತ ಆರೋಪಿ. 2017ರಲ್ಲಿ ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಯಾಸ್ ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿ ಇಲ್ಯಾಸ್ ಬಳಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೆ ಹಾರಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಾನ್ಸನ್ ಡಿ ಸೋಜಾ ಮತ್ತು ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಕೌಶಿಕ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಶಾಂತ್ ರೈ, ಗಣೇಶ್ ಪ್ರಸಾದ್, ಮ್ಯಾಥ್ಯು ವರ್ಗೀಸ್, ಶ್ರೀಶೈಲರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





ಬಂಧಿತ ಆರೋಪಿಯನ್ನು ಆ.6ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿ ವಿರುದ್ದ ತ್ರಿಶೂರ್ ಮತ್ತು ಎರ್ನಾಕುಲಂ ಪೊಲೀಸ್ ಠಾಣೆಗಳಲ್ಲಿ 20 ಇತರೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.








