ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀವರಮಹಾಲಕ್ಷ್ಮೀ ಪೂಜೆ

0

ಪೂಜೆಯ ಜತೆಗೆ ಸಮಾಜಮುಖಿ ಕಾರ್ಯ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿ- ಬ್ರಹ್ಮಶ್ರೀ ವಾಸುದೇವ ತಂತ್ರಿ
ಹಿಂದೂ ಧರ್ಮದ ಸಂಪ್ರದಾಯ, ಸಂಸ್ಕೃತಿಯನ್ನು ಪಾಲಿಸಿ ಬೆಳೆಸಬೇಕು – ಕೃಷ್ಣವೇಣಿ ಪ್ರಸಾದ್ ಮುಳಿಯ

ಪುತ್ತೂರು: ಯಾವುದೇ ಫಲಾಪೇಕ್ಷೆ ಇಲ್ಲದೆ ದೇವರನ್ನು ಪೂಜಿಸುವುದು ನಮ್ಮ ಕರ್ತವ್ಯ. ಫಲ ನೀಡುವುದು ದೇವರ ಕರ್ತವ್ಯವಾಗಿದೆ. ಪೂಜೆಯ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಇದರಿಂದ ದೇವರ ಅನುಗ್ರಹವೂ ಪ್ರಾಪ್ತಿಯಾಗುತ್ತದೆ ಎಂದು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರು ಹೇಳಿದರು.

ಶ್ರೀಪಂಚಲಿಂಗೇಶ್ವರ ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿಯ ವತಿಯಿಂದ ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ 12ನೇ ವರ್ಷದ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಧಾರ್ಮಿಕ ಜ್ಞಾನ ಅರಿಯ ಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನಮ್ಮ ಕರ್ತವ್ಯವನ್ನು ಶ್ರದ್ಧಾ ಭಕ್ತಿಯಿಂದ ಮಾಡಬೇಕು. ದೇವಾಲಯದಲ್ಲಿ ಚೈತನ್ಯ ನಿರಂತರ ಪ್ರವಹಿಸುವ ಕಾಲ 12 ವರ್ಷ. ಅದೇರೀತಿ 12 ವರ್ಷ ಶ್ರೀವರಮಹಾಲಕ್ಷ್ಮಿ ಪೂಜಾ ಕೈಂಕರ್ಯ ಮಾಡಿದ್ದೀರಿ. ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲಿದೆ ಎಂದ ಅವರು ಸಮಾಜದ ಅಶಕ್ತರಿಗೆ, ಬಡವರಿಗೆ ಸಹಾಯ ಹಸ್ತ ನೀಡುವುದು ಸಮಾಜಮುಖಿ ಕೆಲಸವಾಗಿದೆ. ನಮಗೆ ಕಷ್ಟ ಬಂದಾಗ ಅದನ್ನು ಎದುರಿಸಬೇಕು ಆಗ ನಮಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅತಿಥಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಮಾತನಾಡಿ ಒಂದೇ ಮನಸಿನಿಂದ ನಾವು ಭಗವಂತನನ್ನು ಆರಾಧಿಸಬೇಕು. ತೋರಿಕೆಗೆ ಆರಾಧನೆ ಸಲ್ಲದು. ಅಷ್ಟಲಕ್ಷ್ಮಿಯರಲ್ಲಿ ಒಂದೊಂದು ಗುಣವಿದೆ. ಅಷ್ಟಲಕ್ಷ್ಮಿಯರನ್ನು ಆರಾಧಿಸಿದಾಗ ನಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂದರು. ಜಗತ್ತಿನ ಆದಿಶಕ್ತಿಯೇ ಮಹಿಳೆ. ಆದುದರಿಂದ ಮಹಿಳೆಯರಿಗೆ ವಿಶೇಷ ಶಕ್ತಿ ಇದೆ. ಇಂತಹ ಶಕ್ತಿಯನ್ನು ಇಲ್ಲಿ ನೋಡಿದೆ. ಮಹಿಳೆಯರ ಉತ್ತಮ ತಂಡ ಅಚ್ಚುಕಟ್ಟಾಗಿ ಕೆಲಸ ಕಾರ್ಯಗಳನ್ನು ಮಾಡಿದೆ. ತುಂಬಾ ಸಂತೋಷವಾಯಿತು. ನಾಯಕತ್ವ ತೆಗೆದುಕೊಳ್ಳುವವರು ಮುಂದೆ ಬರಬೇಕು. ಉತ್ತಮ ನಾಯಕತ್ವದಿಂದ ಎಲ್ಲಾ ಕಾರ್ಯಗಳು ಯಶಸ್ಸಾಗುತ್ತದೆ ಎಂದರು. ಹಿಂದೂ ಸಮಾಜ ಬಹಳ ಶ್ರೇಷ್ಟ ಧರ್ಮವಾಗಿದೆ. ಹಿಂದೂ ಧರ್ಮದ ಸಂಪ್ರದಾಯ, ಸಂಸ್ಕೃತಿಯನ್ನು ಪಾಲಿಸಬೇಕು, ಬೆಳೆಸಬೇಕು. ನಮ್ಮ ಸಂಪ್ರದಾಯಗಳಿಗೆ ವಿಶೇಷ ಶಕ್ತಿಯಿದೆ. ಭರತ ದೇಶ ಉಳಿಯಬೇಕಾದರೆ ಹಿಂದೂ ಸಮಾಜ ಬೇಕು. ಇಂದಿನ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿದೆ. ಅದಕ್ಕಾಗಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ಕಲಿಸಿಕೊಡಬೇಕು ಎಂದು ಹೇಳಿ ಶಿಕ್ಷಣದ ಮಹತ್ವ ತಿಳಿಸಿ ಈಶ್ವರಮಂಗಲ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ಆರಂಭಿಸಲು ಸಹಕಾರ ನೀಡುವುದಾಗಿ ತಿಳಿಸಿದರು.

ಶ್ರೀವರಮಹಾಲಕ್ಷ್ಮಿ ಪೂಜಾ ಸಮಿತಿ ಗೌರವ ಸಲಹೆಗಾರ ರವಿಕಿರಣ್ ಶೆಟ್ಟಿ ಬೆದ್ರಾಡಿ ಮಾತನಾಡಿ 12 ವರ್ಷದಿಂದ ನಡೆಯುತ್ತಿರುವ ಶ್ರೀವರಮಹಾಲಕ್ಷ್ಮಿ ಪೂಜೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ನಮ್ಮ ಮಾತಿಗೆ ಬೆಲೆ ನೀಡಿ ಕಾರ್ಯಕ್ರಮ ಮಾಡುತ್ತಿದ್ದಾರೆ. 12 ವರ್ಷದಲ್ಲಿ ಪೂಜಾ ಸಮಿತಿಗೆ ಬ್ರಹ್ಮಕಲಶ ನಡೆದ ಹಾಗೆ ಆಗಿದೆ. ಮುಂದೆಯೂ ಈ ಸಮಿತಿ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದರು. ಶ್ರೀವರಮಹಾಲಕ್ಷ್ಮಿ ಪೂಜಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ವಿ. ನಾಗಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮವನ್ನು ಪಾಲಿಸುವ ಹಬ್ಬ ಶ್ರೀವರಮಹಾಲಕ್ಷ್ಮಿ ಹಬ್ಬ. 2014ರಲ್ಲಿ ದೇವಾಲಯದ ಆಗಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿದ್ದ ರವಿಕಿರಣ್ ಶೆಟ್ಟಿ ಬೆದ್ರಾಡಿ ಹಾಗೂ ಸಮಿತಿ ಸದಸ್ಯರ ಸಹಕಾರ ಬೆಂಬಲದೊಂದಿಗೆ ಪೂಜೆ ಆರಂಭವಾಯಿತು. ಬಳಿಕ ದಶಮಾನೋತ್ಸವ ನಡೆದು ಇಂದು 12 ವರ್ಷದ ಪೂಜಾ ಕಾರ್ಯದಲ್ಲಿದ್ದೇವೆ. ಸಮಿತಿಯಿಂದ ಧಾರ್ಮಿಕ ಕಾರ್ಯವಲ್ಲದೆ ಸಮಾಜಮುಖಿ ಕಾರ್ಯಗಳನ್ನು ಕೂಡ ನಡೆಸುತ್ತಿದ್ದೇವೆ ಎಂದು ಹೇಳಿದರು. ಅಧ್ಯಕ್ಷೆ ರತಿ ರಮೇಶ್ ಪೂಜಾರಿ ಮುಂಡ್ಯ ಸಂದರ್ಭೋಚಿತವಾಗಿ ಮಾತನಾಡಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಗೌರವಾರ್ಪಣೆ: ನೂರಕ್ಕಿಂತ ಪೂಜಾ ರಶೀದಿ ವಿತರಣೆ ಮಾಡಿದ ಸಮಿತಿ ಕಾರ್ಯಾಧ್ಯಕ್ಷೆ ರತಿ ಕೊರಗಪ್ಪ ರೈ ಸುರುಳಿಮೂಲೆ ಹಾಗೂ ಸದಸ್ಯೆ ವಸಂತಿ ಕುಶಾಲಪ್ಪ ಗೌಡ ಪಟ್ರೋಡಿರವರನ್ನು ಗೌರವಿಸಲಾಯಿತು.

ಪುರೋಹಿತರಾದ ನಾಗರಾಜ ಭಟ್, ಕಾರ್ಯದರ್ಶಿ ಅರುಣ ಸತೀಶ ಶೆಟ್ಟಿ ಮುಂಡ್ಯ, ಖಜಾಂಜಿ ಮೋಹನಾಂಗಿ ಬೀಜಂತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಕಾರ್ಯಾಧ್ಯಕ್ಷೆ ರತಿ ಕೊರಗಪ್ಪ ರೈ ಸುರುಳಿಮೂಲೆ ದಂಪತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರನ್ನು ಫಲಪುಷ್ಪ ನೀಡಿ ಸ್ವಾಗತಿಸಿದರು. ಮುಖ್ಯ ಅತಿಥಿ ಕೃಷ್ಣವೇಣಿ ಪ್ರಸಾದ್ ಮುಳಿಯರವರನ್ನು ಅರಿಶಿನ ಕುಂಕುಮ, ಲಕ್ಷ್ಮೀದೇವಿಯ ವಿಗ್ರಹ ನೀಡಿ ಗೌರವಿಸಲಾಯಿತು. ಸಮಿತಿ ಉಪಾಧ್ಯಕ್ಷೆ ಮೇಘಾಯತೀಶ್ ವರದಿ ವಾಚಿಸಿದರು. ಅಧ್ಯಕ್ಷೆ ರತಿ ರಮೇಶ್ ಪೂಜಾರಿ ಮುಂಡ್ಯ ಸ್ವಾಗತಿಸಿ ಕಾರ್ಯದರ್ಶಿ ಅರುಣ ಸತೀಶ ಶೆಟ್ಟಿ ಮುಂಡ್ಯ ವಂದಿಸಿದರು. ಸಮಿತಿ ಗೌರವ ಸಲಹೆಗಾರ ರಾಮ ಮೇನಾಲ ಮತ್ತು ಗಾಯತ್ರಿ ಕತ್ರಿಬೈಲು ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಪೂಜಾ ಸಂಕಲ್ಪ ವ್ರತಧಾರಣೆ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಪೂಜಾ ಸಮಿತಿ ಪದಾಧಿಕಾರಿಗಳು, ಗೌರವಸಲಹೆಗಾರರು, ಸದಸ್ಯರು ಉಪಸ್ಥಿತರಿದ್ದರು.

ಶೈಕ್ಷಣಿಕ, ಕ್ರೀಡಾ, ಆರೋಗ್ಯ ಸಾಧಕರಿಗೆ ಸನ್ಮಾನ
ಶೈಕ್ಷಣಿಕ, ಕ್ರೀಡಾ ಹಾಗೂ ಆರೋಗ್ಯ ಕ್ಷೇತ್ರದ ಸಾಧಕರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 610 ಅಂಕ ಗಳಿಸಿದ ಹನುಮಗಿರಿ ಶ್ರೀಗಜಾನನ ಆ.ಮಾ.ಶಾಲಾ ವಿದ್ಯಾರ್ಥಿನಿ ಬಿಂದಿಯಾ ಕೆ.ರವರನ್ನು ಸನ್ಮಾನಿಸಲಾಯಿತು. ಚೆಸ್ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತ ವಲಯ ಮಟ್ಟಕ್ಕೆ ಆಯ್ಕೆಯಾದ ಅನಘ ಭಟ್‌ರವರನ್ನು ಸನ್ಮಾನಿಸಲಾಯಿತು.

ಆರೋಗ್ಯ ಇಲಾಖೆಯ ಆಶಾಕಾರ್ಯಕರ್ತೆಯರಾದ ವೇದಾವತಿ ಉಮೇಶ್ ಆಚಾರ್ಯ ಸಾಂತ್ಯ, ಶಾರದಾ ಸಾಂತಪ್ಪ ನಾಯ್ಕ ಮೇನಾಲ, ಉಮಾವತಿ ಗೋಪಾಲ ಅಜಿಲ ನೀರಳಿಕೆ, ಲೀಲಾವತಿ ನಾರಾಯಣ ಗೌಡ ಮೇನಾಲ, ಪದ್ಮಾವತಿ ತೇಜಕುಮಾರ್ ಕರ್ನೂರು, ಬಿಂದು ಚಂದ್ರಶೇಖರ ಎನ್. ಪಳ್ಳತ್ತೂರು ಹಾಗೂ ಪುಷ್ಪಲತಾ ಅಪ್ಪಯ್ಯ ಪಾಟಾಳಿ ಪಂಚೋಡಿರವರನ್ನು ಅರಿಶಿನ ಕುಂಕುಮ, ಶಾಲು, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಚಿತ್ರ: ಜ್ಯೋತಿ ಈಶ್ವರಮಂಗಲ

ಅಧ್ಯಕ್ಷೆ ರತಿ ರಮೇಶ್ ಪೂಜಾರಿಯವರಿಗೆ ಸನ್ಮಾನ
ಪೂಜಾ ಸಮಿತಿಯ ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಬಳಿಕ ಹಲವು ಬಾರಿ ಅಧ್ಯಕ್ಷರಾಗಿ, ಖಜಾಂಜಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ೧೨ನೇ ವರ್ಷದ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ರತಿ ರಮೇಶ್ ಪೂಜಾರಿ ಮುಂಡ್ಯರವರನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಪೂಜಾ ಸಮಿತಿಯ ಗೌರವ ಸಲಹೆಗಾರ ರವಿಕಿರಣ್ ಶೆಟ್ಟಿ ಬೆದ್ರಾಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಹಾಗೂ ಪೂಜಾ ಸಮಿತಿಯ ಗೌರವ ಸಲಹೆಗಗಾರ ರಾಮ ಮೇನಾಲ ಮತ್ತು ಪೂಜಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ವಿ. ನಾಗಪ್ಪಯ್ಯರವರ ವತಿಯಿಂದ ಶಾಲು, ಪೇಟ, ಫಲಪುಷ್ಪ, ಲಕ್ಷ್ಮಿದೇವಿಯ ವಿಗ್ರಹ, ಸೀರೆ ನೀಡಿ ಸನ್ಮಾನಿಸಿದರು. ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸಂದೀಪ್ ಕಾರಂತ ಉಪಸ್ಥಿತರಿದ್ದರು

ಲಕ್ಷ್ಮೀ ಕಟಾಕ್ಷ ಡ್ರಾ ಯೋಜನೆ
ಪೂಜಾ ರಶೀದಿ ಮಾಡಿದ ಸೇವಾದಾರರಿಗೆ ಲಕ್ಷ್ಮೀ ಕಟಾಕ್ಷ ಡ್ರಾ ಯೋಜನೆ ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಕೃಷ್ಣವೇಣಿ ಪ್ರಸಾದ್ ಮುಳಿಯರವರು ಡ್ರಾ. ನಡೆಸಿ ವಿಜೇತರನ್ನು ಆಯ್ಕೆ ಮಾಡಿದರು. ಡ್ರಾ ವಿಜೇತರಾದ ಮಮತಾ ಹೇಮಂತ್ ಸುಳ್ಯ(284 ನಂಬ್ರ)ರವರಿಗೆ ಬಾಗಿನದೊಂದಿಗೆ ಅರಿಶಿನ ಕುಂಕುಮ, ಚಿನ್ನದ ಮೂಗುತಿ ಹಾಗೂ ಸೀರೆ ಬಹುಮಾನವಾಗಿ ನೀಡಲಾಯಿತು.

LEAVE A REPLY

Please enter your comment!
Please enter your name here