ಧ್ವನಿ,ಬೆಳಕು,ಶಾಮಿಯಾನ ಡೆಕೋರೇಷನ್ ಮಾಲಕರ ಸಂಘದ ಮಹಾಸಭೆ

0

ಸಂಘಟನೆ ಸದೃಢವಾದಾಗಲೇ ಸಮಸ್ಯೆ ಸೋಲುತ್ತದೆ – ಧನ್ ರಾಜ್ ಶೆಟ್ಟಿ

ಪುತ್ತೂರು: 119 ಸದಸ್ಯರನ್ನೊಳಗೊಂಡಿರುವ ತಾಲೂಕಿನ ಈ ಸಂಘಟನೆಯಲ್ಲಿ ಆಸೀನರಾಗಿರುವ ಸದಸ್ಯರ ಸಂಖ್ಯೆಯೇ ಅತೀ ವಿರಳವಾಗಿ ಕಾಣುತ್ತಿರುವುದನ್ನು ಯೋಚಿಸಿದಾಗ , ಈ ಸಂಘಟನೆಯೇ ಅಧ್ಯಕ್ಷರಿಗೆ ಅಥವಾ ಕಾರ್ಯದರ್ಶಿಯವರಿಗೆ ಇಲ್ಲವೇ ಕೋಶಾಧಿಕಾರಿಗೆ ಮಾತ್ರವೇ ಅನ್ವಯಿಸುತ್ತದೆಯೆಂಬ ಭಾವನೆ ಮೂಡುತ್ತದೆ. ಸಂಘಟನೆ ಇರುವುದು ನಮಗೆಲ್ಲರಿಗೂ ಯಾವದೇ ರೀತಿಯ ತೊಂದರೆ ,ಸಮಸ್ಯೆಗಳು ಎದುರಾದಾಗ ಸ್ಪಂಧಿಸಿ, ಧೈರ್ಯ ತುಂಬಲು.ಇದನ್ನು ಪ್ರತಿಯೊಬ್ಬ ಸದಸ್ಯ ಅರಿತಿರಬೇಕೆಂದು ಸೌಂಡ್ಸ್ ಆ್ಯಂಡ್ ಲೈಟಿಂಗ್ಸ್ ಮಾಲೀಕರ ಜಿಲ್ಲಾ ಸಂಘದ ಅಧ್ಯಕ್ಷ ಧನ್ ರಾಜ್ ಶೆಟ್ಟಿ ಅಭಿಪ್ರಾಯಪಟ್ಟರು.

ಪಡೀಲ್ ಎಂ.ಡಿ.ಎಸ್ ಟ್ರಿನಿಟಿ ಸಭಾಂಗಣದಲ್ಲಿ ತಾಲೂಕು ಧ್ವನಿ , ಬೆಳಕು , ಶಾಮಿಯಾನ ಹಾಗೂ ಡೆಕೋರೇಷನ್ ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆ ಮತ್ತು ರಕ್ತದಾನ ಶಿಬಿರವು , ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದೊಂದಿಗೆ ಆ.10 ರಂದು ಇಲ್ಲಿನ ಪಡೀಲ್ ಎಂ.ಡಿ.ಎಸ್ ನ ಟ್ರಿನಿಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ಮಾತನಾಡಿ , ತಮ್ಮ ಸ್ವಂತ ಹಣದಲ್ಲೇ ಸಂಘದ ಕೆಲವೊಂದು ಖರ್ಚುಗಳನ್ನು ಭರಿಸುತ್ತಿರುವುದೆಲ್ಲಾವೂ ಸಂಘದ ಏಳಿಗೆಗಾಗಿಯೆಂಬುದನ್ನು ತಿಳಿಯಬೇಕೆಂದ ಅವರು , ರಾತ್ರಿ ವೇಳೆ ಡಿ.ಜೆ , ಧ್ವನಿವರ್ದಕ ಬಳಕೆಗೆ ಸುಪ್ರೀಂ ಕೋರ್ಟ್ ಸಮಯದ ನಿಗದಿ ಹಾಗೂ ಶಬ್ದದ ವೇಗಕ್ಕೂ ಮಿತಿಯನ್ನು ಹೇರಿದ್ದು , ಇವನ್ನೆಲ್ಲ ತುಸು ಸಡಿಲಿಸುವಂತೆ ಜನಪ್ರತಿನಿಧಿಗಳು , ಅಧಿಕಾರಿಗಳಿಗೆ ಮನವಿ ನೀಡುವ ಕಾರ್ಯವಾಗಬೇಕು. ಇವಕ್ಕೆಲ್ಲ ಸಂಘಟನೆ ಸಧೃಢವಾಗಿದ್ದರೇ ಸಮಸ್ಯೆಗಳ ವಿರುಧ್ಧ ಹೋರಾಡಲು ಸಾಧ್ಯವೆಂದು ಹೇಳಿದರು.


ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಇದರ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ದೀಪ ಪ್ರಜ್ವಲನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು , ಸುಮಾರು 28 ವರುಷಗಳಿಂದ ಬ್ಲಡ್ ಬ್ಯಾಂಕ್ ಪುತ್ತೂರಿನಲ್ಲಿ ಕಾರ್ಯಚರಿಸುತ್ತಿದೆ. ರಕ್ತದಾನಕ್ಕೆ 18 ರಿಂದ 60 ವಯಸ್ಸಿನವರು ಅರ್ಹರಾಗಿದ್ದು , ವರ್ಷಕ್ಕೆ 4 ಬಾರಿ ರಕ್ತದಾನ ಮಾಡಲು ಅರ್ಹರು.60 ರಿಂದ 65 ವಯಸ್ಸಿನವರೂ ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಬಹುದು.ಒಮ್ಮೆ ಸಂಗ್ರಹಿಸಿದ ರಕ್ತವನ್ನು 35 ದಿನಗಳೊಳಗೆ ಮುಗಿಸಬೇಕಾಗಿದ್ದು , ವರ್ಷ ಪೂರ್ತಿ ಸೇವೆಯನ್ನು ನೀಡುತ್ತಿರುವ ಏಕೈಕ ಸಂಸ್ಥೆಯೆಂದರೆ ಅದು ಬ್ಲಡ್ ಬ್ಯಾಂಕ್ ಎಂದು ಹೇಳಿದ ಅವರು , ಬಡವರಿಗೆ ರಕ್ತವನ್ನು ಉಚಿತವಾಗಿ ನೀಡುತ್ತೇವೆ ಎಂದು ಮಾಹಿತಿ ನೀಡಿದರು.


ದ.ಕ.ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷ ಬಾಬು ಕೆ ವಿಟ್ಲ , ದ.ಕ. ಧ್ವನಿ ಮತ್ತು ಬೆಳಕು ಸಂಘದ ಗೌರವಾಧ್ಯಕ್ಷರಾದ ರಾಜಶೇಖರ್ ಶೆಟ್ಟಿ ಇವರುಗಳು ಕೂಡ ಮಾತನಾಡಿ , ಹಾರೈಸಿದರು.


ಅಂಚೆ ಇಲಾಖೆಯ ಉದ್ಯೋಗಿ ಆನಂದ ಗೌಡ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ಅಥವಾ ಕುಟುಂಬದ ಸದಸ್ಯರಿಗೆ ಯಾವುದೇ ಆರೋಗ್ಯ ಸಮಸ್ಯೆ , ಅವಘಡ ಅಥವಾ ಅಪಘಾತ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ಆರಂಭಗೊಂಡಿರುವ ವಿಮೆ ಬಗ್ಗೆ ವಿವರಣೆ ನೀಡಿ , ಅತೀ ಕಡಿಮೆ ಅಂದರೇ , ರೂ.749 ಮತ್ತು 550 ಪಾವತಿಗೆ ಕ್ರಮವಾಗಿ 15 ಲಕ್ಷ ಮತ್ತು 10 ಲಕ್ಷ ರೂಪಾಯಿವರೆಗಿನ ವಿಮಾ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು. ಪುತ್ತೂರು ತಾಲೂಕು ಸಂಘಟನೆಯ ಗೌರವಾಧ್ಯಕ್ಷ ಶ್ಯಾಮ್ ಮಂಜುನಾಥ ಪ್ರಸಾದ್ , ಸವಣೂರು ಪದ್ಮಾಂಬ ಶಾಮಿಯಾನ ಮಾಲೀಕ ಸುರೇಶ್ ರೈ ಸೂಡಿಮುಳ್ಳು , ಕಾರ್ಯದರ್ಶಿ ಅನೀಶ್ ಶೆಟ್ಟಿ ಸಹಿತ ಹಲವರು ಅತಿಥಿಗಳು ವೇದಿಕೆಯಲ್ಲಿ ಹಾಜರಿದ್ದರು.


ಎಲ್ಲಾ ಅತಿಥಿಗಳನ್ನು ಹಾಗೂ ಸುಳ್ಯ , ಬೆಳ್ತಂಗಡಿ ,ಬಂಟ್ವಾಳ ಹಾಗೂ ಮಂಗಳೂರಿನ ವಿವಿಧ ಸಂಘಟನೆಯ ಪದಾಧಿಕಾರಿಗಳನ್ನು ಮತ್ತು ಸದಸ್ಯರುಗಳನ್ನು ಅಧ್ಯಕ್ಷ ರಾಮಕೃಷ್ಣರವರು ಗುರುತಿಸಿ , ಗೌರವಿಸಿದರು. ಈ ನಡುವೆಯೇ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ರಕ್ತದಾನ ಕೂಡ ನೆರವೇರಿತು. ಕೋಶಾಧಿಕಾರಿ ಹರ್ಷ ರೈ ಕೆ ಪ್ರಸ್ತಾವನೆಗೈದರು.
ಸವಣೂರು ಪದ್ಮಾಂಬ ಶಾಮಿಯಾನ ಮಾಲೀಕ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ , ಮಾನ್ವಿ ಡಿ ಭಟ್ ಬಳಗ ಪ್ರಾರ್ಥನೆ ನೆರವೇರಿಸಿ , ಕಾರ್ಯದರ್ಶಿ ಅನೀಶ್ ಶೆಟ್ಟಿ ವಂದಿಸಿ , ವಿನೋದ್ ಆಚಾರ್ಯ ನಿರೂಪಿಸಿದರು. ಬಳಿಕ ಸಹ ಭೋಜನ ನಡೆದು , ತದನಂತರ ಜಿಲ್ಲಾ ಸಂಘಟನೆಯ ಸಭೆಯು ನಡೆಯಿತು. ಸಂಘದ ಎಲ್ಲಾ ಪದಾಧಿಕಾರಿಗಳು , ಸರ್ವ ಸದಸ್ಯರು ವಿವಿಧ ರೀತಿ ಸಹಕಾರ ನೀಡಿದರು.

ಸಾಮಾನ್ಯ ಸದಸ್ಯನಿಗೂ ಕೂಡ ಅಧ್ಯಕ್ಷ ಸ್ಥಾನ ನೀಡಿದ್ದೀರಿ. ಎಲ್ಲರಲ್ಲೂ ಅಭಿಪ್ರಾಯ ಕೇಳಿದಾಗ ಎಲ್ಲರೂ ಬೆಂಬಲ , ಉತ್ತಮ ಮಾರ್ಗದರ್ಶನ ಕೊಟ್ಟು , ಪೂರಕ ಸ್ಪಂದನೆ ನೀಡಿದ್ದಾರೆ.ಯಾವುದೇ ಮತ ,ದರ್ಮ ನೋಡದೇ ಅತ್ಯುತ್ತಮ ಕಾರ್ಯವೈಖರಿ ನಿಮ್ಮೆಲ್ಲರ ಸಹಕಾರದಿಂದ ಸಾಗಿದೆ. ಇದಕ್ಕಾಗಿ ಜಿಲ್ಲಾ ಮತ್ತು ತಾಲೂಕಿನ ಎಲ್ಲಾ ಸದಸ್ಯರಿಗೂ ಧನ್ಯವಾದ.
ರಾಮಕೃಷ್ಣ , ತಾ. ಸಂಘದ ಅಧ್ಯಕ್ಷರು.

LEAVE A REPLY

Please enter your comment!
Please enter your name here