ಹಿರಿಯರ ಕಷ್ಟದ ಬದುಕನ್ನು ತೋರಿಸುವ ತಿಂಗಳು ಆಟಿ-ಸತೀಶ್ ಕೆಡೆಂಜಿ
ಪುತ್ತೂರು: ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಪಾಶ್ಚಾತ್ಯ ಸಂಸ್ಕೃತಿಯ ತಿಂಡಿ, ತಿನಸುಗಳಿಗೆ ದಾಸರಾಗಿ ಆರೋಗ್ಯದ ಏರುಪೇರಿಗೆ ಕಾರಣರಾಗುತ್ತಾನೆ. ಆದರೆ ಹಿಂದಿನ ಹಿರಿಯರು ಕಷ್ಟದ ಆಟಿ ತಿಂಗಳಿನಲ್ಲಿ ಆರೋಗ್ಯಪೂರಿತ ತಿಂಡಿ, ತಿನಿಸುಗಳನ್ನು ಸೇವಿಸುವ ಮೂಲಕ ತಮ್ಮ ಆರೋಗ್ಯವನ್ನು ಸದೃಢರಾಗಿಸುತ್ತಿದ್ದರು. ಆದ್ದರಿಂದ ಹಿರಿಯರು ಅಂದಿನ ಕಷ್ಟದ ಬದುಕನ್ನು ತೋರಿಸುವ ತಿಂಗಳು ಆಟಿ ಆಗಿದೆ ಎಂದು ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು.
ಆ.೧೦ ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ಸಭಾಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಪುತ್ತೂರು ಹಾಗೂ ಬಿಲ್ಲವ ಮಹಿಳಾ ವೇದಿಕೆ ಪುತ್ತೂರು ಇದರ ಆಶ್ರಯದಲ್ಲಿ ಜರಗಿದ ‘ಆಟಿದ ಪೊಲಪು’ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ, ಕಲ್ಪವೃಕ್ಷದ ಕೊಂಬನ್ನು ಅರಳಿಸಿ ಮಾತನಾಡಿದರು.
ಪ್ರಕೃತಿ ವಿಕೃತಿ ಆಗಬಾರದು-ಸರಿತಾ ಜನಾರ್ದನ:
ಆಟಿ ಸಂದೇಶ ನೀಡಿದ ಸಂಪನ್ಮೂಲ ವ್ಯಕ್ತಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಶಾಲೆಯ ಗುರು ಸರಿತಾ ಜನಾರ್ದನರವರು ಮಾತನಾಡಿ, ಆಟಿ ತಿಂಗಳು ಅದು ಮಾಂತ್ರಿಕ ತಿಂಗಳು, ಕಷ್ಟದ ತಿಂಗಳು, ವೈಜ್ಞಾನಿಕ ತಿಂಗಳು, ಸತ್ತವರ ತಿಂಗಳು ಎಂದೆಲ್ಲಾ ಕರೆಯಲಾಗುತ್ತದೆ. ಪ್ರಕೃತಿ ಎಂಬ ವಿಜ್ಞಾನದಲ್ಲಿ ಮನುಷ್ಯನಿಗೆ ಮೂಲ ಸತ್ವ ಕೊಡುವ ತಿಂಗಳು ಆಟಿ ಆಗಿತ್ತು. ಆಟಿ ಆಚರಣೆ, ಹಬ್ಬ ಅಲ್ಲ, ಅದು ಹಿರಿಯರು ಅಂದು ಬದುಕಿದ ನೆನಪನ್ನು ಬಿಂಬಿಸುವುದಾಗಿತ್ತು. ಇಂದು ಅಲ್ಲಲ್ಲಿ ಆಟಿ ತಿಂಗಳ ಕುರಿತು ಒಳ್ಳೆಯ ಉದ್ಧೇಶ ಸಾರುವುದು ನೋಡುತ್ತೇವೆ. ಆದರೆ ಪ್ರಕೃತಿ ಸತ್ಯ ಅದು ವಿಕೃತಿ ಆಗಬಾರದು. ಅದು ಕೆಲವು ಕಡೆ ನಡೆಯುತ್ತಿರುವುದು ವಿಪರ್ಯಾಸ ಎಂದರು.
ಬಿಲ್ಲವ ಸಮುದಾಯಕ್ಕೆ ಸರಕಾರದಿಂದ ಸ್ವಂತ ಜಾಗಕ್ಕೆ ಪ್ರಯತ್ನಿಸಿ-ವಿಜಯಕುಮಾರ್ ಸೊರಕೆ:
ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೊರಕೆ ಮಾತನಾಡಿ, ಸಂಪನ್ಮೂಲ ವ್ಯಕ್ತಿಯು ಆಟಿ ಕುರಿತು ನುಡಿಗಟ್ಟು ಅನ್ನು ಮನೋಜ್ಞವಾಗಿ ವಿವರಿಸಿದ್ದು ಇದು ಇಲ್ಲಿ ಸೇರಿದ ಹಿರಿಯ-ಕಿರಿಯರಿಗೆ ಹಿಂದಿನ ಹಿರಿಯರು ಆಟಿ ತಿಂಗಳಲ್ಲಿ ಹೇಗೆ ಬದುಕಿದ್ದರು, ಅವರ ತಿಂಡಿ ತಿನಿಸುಗಳು ಹೇಗಿದ್ದವು ಎಂಬುದನ್ನು ತೋರಿಸಿದಂತಾಗಿದೆ. ಇಂದು ಸಮಾಜದ ವಿವಿಧ ಸಮಾಜ ಬಾಂಧವರು ಆಟಿ ತಿಂಗಳ ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನು ಆಚರಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನಮ್ಮ ಸಮಾಜದವರು ಅನೇಕರು ಉನ್ನತ ಹುದ್ದೆಯಲ್ಲಿದ್ದು ಬಿಲ್ಲವ ಸಮುದಾಯಕ್ಕೆ ಸರಕಾರದಿಂದ ಸ್ವಂತ ಜಾಗ ಹೊಂದಿದ್ದಲ್ಲಿ ಅಲ್ಲಿ ಶಿಕ್ಷಣ ಕೇಂದ್ರವನ್ನು ತೆರೆಯಬಹುದಾಗಿದೆ ಎಂದರು.
ಜಗತ್ತು ನೋಡುವಂತಹ ವೈಶಿಷ್ಟ್ಯತೆಗಳು ಈ ತುಳುನಾಡಿನಲ್ಲಿದೆ-ಜಯಂತ್ ನಡುಬೈಲು:
ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ತುಳುನಾಡು ಎಂಬುದೇ ಒಂದು ವೈಶಿಷ್ಟ್ಯ. ಜಗತ್ತು ನೋಡುವಂತಹ ವೈಶಿಷ್ಟ್ಯತೆಗಳು ಈ ತುಳುನಾಡಿನಲ್ಲಿದೆ. ಆಟಿ ಕೂಟ ಎನ್ನುವುದು 2002ರಲ್ಲಿ ಮೂಲ್ಕಿಯಲ್ಲಿ ಆರಂಭಗೊಂಡಿದ್ದು ಪುತ್ತೂರಿನಲ್ಲಿ 2008ರಲ್ಲಿ ಆರಂಭಗೊಂಡಿತು. ಪುತ್ತೂರು ಬಿಲ್ಲವ ಸಂಘದ ೫೫ ಗ್ರಾಮ ಸಮಿತಿಗಳು ಒಟ್ಟಾಗಿ ಈ ಆಟಿಕೂಟವನ್ನು ಯಶಸ್ವಿಯಾಗಿ ಆಚರಿಸುತ್ತಿರುವುದು ಹೆಗ್ಗಳಿಕೆಯಾಗಿದೆ ಮಾತ್ರವಲ್ಲ ಆಟಿ ತಿಂಗಳು ಏನು ಎಂಬುದು ಮುಂದಿನ ಪೀಳಿಗೆಗೆ ಪ್ರಚುರಪಡಿಸಬೇಕು ಎಂದರು.
ಒಗ್ಗಟ್ಟು ಪ್ರದರ್ಶಿಸುತ್ತಾ ಇತರ ಸಮಾಜ ಬಾಂಧವರಿಗೆ ಮಾದರಿಯಾಗೋಣ-ಪುಷ್ಪಾವತಿ ಕೇಕುಡೆ:
ಅಧ್ಯಕ್ಷತೆ ವಹಿಸಿದ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ ಮಾತನಾಡಿ, ಹಿರಿಯರು ಹಾಕಿದ ಹೆಜ್ಜೆಯೊಂದಿಗೆ ಮುಂದೆ ಸಾಗುತ್ತಾ ನಮ್ಮ ಬಿಲ್ಲವ ಸಮುದಾಯವನ್ನು ಬಲಪಡಿಸೋಣ ಜೊತೆಗೆ ನಮ್ಮೊಳಗೆ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಇತರ ಸಮಾಜ ಬಾಂಧವರಿಗೆ ಮಾದರಿಯಾಗೋಣ. ವರಮಹಾಲಕ್ಷ್ಮೀ ವೃತ ಪೂಜೆ, ಆಟಿ ಕೂಟದ ಯಶಸ್ಸಿನ ಹಿಂದೆ ಶ್ರಮಿಸಿರುವ ಎಲ್ಲರಿಗೂ ಕೃತಜ್ಞತೆಗಳು ಎಂದರು.
ಆಟಿ ತಿನಸುಗಳ ಮಹತ್ವ ಇಂದಿನ ಪೀಳಿಗೆಗೆ ಅರಿವಾಗಬೇಕು-ಅಜಿತ್ ಪಾಲೇರಿ:
ಕುಕ್ಕೆಶ್ರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಕುಮಾರ್ ಪಾಲೇರಿ ಮಾತನಾಡಿ, ಹಿರಿಯರು ಆಟಿ ತಿಂಗಳಲ್ಲಿ ಸೇವಿಸಿದಂತಹ ತಿಂಡಿ-ತಿನಸುಗಳನ್ನು ಇಂದಿನ ಪೀಳಿಗೆಯ ಮಕ್ಕಳೇ ತರುವಂತಾದಾಗ ಮಾತ್ರ ಆಟಿ ತಿನಸುಗಳ ಮಹತ್ವ ಗೊತ್ತಾಗುತ್ತದೆ. ಬಿಲ್ಲವ ಸಮುದಾಯಕ್ಕೆ ಸರಕಾರದಿಂದ ಶಾಶ್ವತ ಜಾಗ ಹೊಂದಲು ಸಂಘದ ಮಾಜಿ ಅಧ್ಯಕ್ಷರಾದ ವಿಜಯಕುಮಾರ್ ಸೊರಕೆ, ಜಯಂತ್ ನಡುಬೈಲು, ಪ್ರಸ್ತುತ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಒಗ್ಗೂಡಿ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಬೇಕು ಎಂದರು.
ನೂತನ ಪದಾಧಿಕಾರಿಗಳಿಗೆ ಅಭಿನಂದನೆ:
೨೦೨೫-೨೮ನೇ ಸಾಲಿನ ಬಿಲ್ಲವ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ಪ್ರಥಮ ಉಪಾಧ್ಯಕ್ಷ ಚಿದಾನಂದ ಸುವರ್ಣ, ದ್ವಿತೀಯ ಉಪಾದ್ಯಕ್ಷೆ ಪುಷ್ಪಾವತಿ ಕೇಕುಡೆ, ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ, ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೆಂಬೆಟ್ಟು, ನಾರಾಯಣ ಗುರುಮಂದಿರದ ಸಂಚಾಲಕ ಅಶೋಕ್ ಕುಮಾರ್ ಪಡ್ಪು, ಸದಸ್ಯರಾದ ಮಾಧವ ಸಾಲಿಯಾನ್ ಕುರೆಮಜಲು, ಮೋಹನ್ ತೆಂಕಿಲ, ವಿಮಲ ಸುರೇಶ್, ನಿರ್ಗಮಿತ ಜೊತೆ ಕಾರ್ಯದರ್ಶಿ ದಯಾನಂದ ಮಡ್ಯೊಟ್ಟು, ನಿರ್ಗಮಿತ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ನಿರ್ಗಮಿತ ಸದಸ್ಯರಾದ ಸಜ್ಜನ್ ಕುಮಾರ್ ಕರ್ನೂರ್ ನೂಜೆ, ರಾಜೇಶ್ ಆರ್ಲಪದವು, ಉಮೇಶ್ ಬಾಯಾರು, ವಿದ್ಯಾನಿಧಿ ಸಂಚಾಲಕ ಉಲ್ಲಾಸ್ ಕೋಟ್ಯಾನ್, ಸದಸ್ಯರಾದ ರವಿ ಕಲ್ಕಾರ್, ಗಿರೀಶ್ ಸಾಲ್ಯಾನ್ ಬದನೆ, ರಾಜೇಶ್ ನೆಲ್ಲಿತ್ತಡ್ಕ ನಿಡ್ಪಳ್ಳಿ ಹಾಗೂ ಪುತ್ತೂರು, ಕಡಬ ತಾಲೂಕಿನ ಬಿಲ್ಲವ ಮಹಿಳಾ ವೇದಿಕೆಯ 55 ಗ್ರಾಮ ಸಮಿತಿಗಳ ಅಧ್ಯಕ್ಷರುಗಳನ್ನು ಅಭಿನಂದಿಸಲಾಯಿತು.

ಮಿಥಾಲಿ ಮುಂಡೂರು ಪ್ರಾರ್ಥಿಸಿದರು. ಬಿಲ್ಲವ ಮಹಿಳಾ ವೇದಿಕೆಯ ಕಾರ್ಯದರ್ಶಿ ಗೀತಾ ರಮೇಶ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶಕುಂತಲಾ ವಂದಿಸಿದರು. ಸಂಚಾಲಕ ಚಂದಪ್ಪ ಪೂಜಾರಿ ಕಾಡ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶ ಸಜ್ಜನ್ ಕುಮಾರ್, ವಿಮಲ ಸುರೇಶ್, ಬೇಬಿ ತಿಂಗಳಾಡಿ, ಶ್ವೇತ ಕಡಬ, ಜ್ಯೋತಿ ಹರೀಶ್, ಪ್ರೇಮಲತಾ ದೇವದಾಸ್, ಯಶೋಧ ಮಜ್ಜರ್‌ರವರು ಅತಿಥಿಗಳಿಗೆ ಶಾಲು ಹೊದಿಸಿ, ಪೂಲು ಬಚ್ಚಿರೆ ನೀಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಪ್ರೀತಿಕಾ ಸನ್ಮಾನಿತರ ಸನ್ಮಾನ ಪತ್ರ ಓದಿದರು. ನಿಶಾ ತಾರಾನಾಥ್ ನೆಲ್ಯಾಡಿ ಹಾಗೂ ಸುಪ್ರೀತಾ ಚರಣ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಮುದಾಯ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕಾರ್ಯಕ್ರಮದಲ್ಲಿ ಪುತ್ತೂರು ಬಿಲ್ಲವ ಸಂಘ, ಬಿಲ್ಲವ ಗ್ರಾಮ ಸಮಿತಿ, ಯುವವಾಹಿನಿ ಪುತ್ತೂರು, ಕಡಬ, ಉಪ್ಪಿನಂಗಡಿ ಘಟಕ, ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸಹಕರಿಸಿದರು.
ಆಟಿದ ಆಟಿಲ್..
ಕಾರ್ಯಕ್ರಮದ ಆರಂಭದಲ್ಲಿ ಆಗಮಿಸಿದವರಿಗೆ ಬೆಲ್ಲ ನೀರು, ರಾಗಿದ ಕಾಫಿ, ಆಟಿದ ಆಟಿಲ್ ನಲ್ಲಿ ಆಟಿದ ಪೊರಿ, ಮುಡಿ ಕುಕ್ಕುದ ಉಪ್ಪಡ್, ಮರಚೇವುದ ಪತ್ರೋಡೆ, ಪೆಲಕಾಯಿದಡ್ಡೆ, ಮುಡಿ ಅರಿತ ನುಪ್ಪು ಬೊಕ್ಕ ಊರುದ ಕೋರಿದ ಸಾರ್, ಕಣಿಲೆ ಪದೆಂಜಿ ಆಜಯಿನ, ತೇಟ್ಲ, ಅಂಬಡೆ, ಪೆಲತ್ತರಿ ಪುಳಿಮುಂಚಿ ಗಸಿ, ಕುಡು ಬಾರೆದಂಡ್ ಆಜಯಿನ, ಉಪ್ಪಡಚ್ಚಿಲ್ ಪೆಲತ್ತರಿ ಗಸಿ, ತೊಪ್ಪು ತಜಂಕ್ ಉಪ್ಪುಕರಿ, ಕೋರಿ ಸುಕ್ಕ, ಸೋನೆ ತೊಪ್ಪು, ಸೇರೆಕೊಡಿ ಪಸೆಂಗ್ರಿ, ಕಡಲೆ ಬಲ್ಯಾರ್ ಆಜಯಿನ, ಪದೆಂಗಿದ ಚಿಯಾನ, ರಾಗಿದ ಮಣ್ಣಿ, ಪತ್ತ್ ಬಗೆತ ಚಟ್ನಿಲು, ಸೆಂಡಿಗೆ ಉಣಬಡಿಸಲಾಗಿತ್ತು.
ಸನ್ಮಾನ..
ಬಡತನದ ಬೆಹುದಿಯಲ್ಲಿ ಜನಿಸಿ, ಅನನ್ಯವಾದ ದೈವಭಕ್ತಿ, ಹೆತ್ತವರ ಆಶೀರ್ವಾದದಿಂದ ಬಿಲ್ಲವರ ಆರಾಧ್ಯ ಮೂರ್ತಿ ಕೋಟಿ-ಚೆನ್ನಯರಿಗೆ ಕೆಲಂಬೀರಿಯಲ್ಲಿ ಗರಡಿ ನಿರ್ಮಾಣ, ಕೃಷಿ ಬದುಕಿನೊಂದಿಗೆ ನಾಟಿ ವೈದ್ಯವನ್ನು ಪ್ರವೃತ್ತಿಯನ್ನಾಗಿಸಿ ಮಾತ್ರವಲ್ಲ ವೈದ್ಯ ವೃತ್ತಿಯನ್ನು ವ್ಯಾಪಾರೀಕರಣಗೊಳಿಸದೆ ಆರೋಗ್ಯ ಇಲ್ಲದವರೆಗೆ ಆಯುರ್ವೇದ ಮದ್ದು ನೀಡಿ ರೋಗಗ್ರಸ್ಥರಿಗೆ ಪುನರ್ಜನ್ಮ ನೀಡಿದ ನಾಟಿವೈದ್ಯ ಬಾಬು ಪೂಜಾರಿ ಕೆಲಂಬೀರಿರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.