34 ವರ್ಷಗಳ ಬಳಿಕ ಸಹಪಾಠಿಗಳ ಸಮಾಗಮ

0

ಸಂತ ಫಿಲೋಮಿನಾ ಕಾಲೇಜಿನ 1991ರ ಬಿಎಸ್‌ಸಿ ಬ್ಯಾಚ್‌ನ ಪುನರ್ಮಿಲನ

ಸುದ್ದಿ ಬಿಡುಗಡೆಯಲ್ಲಿ ಪ್ರಕಟವಾಗಿದ್ದ ‘ಪುತ್ತೂರಿನ ಮುತ್ತುಗಳು’ ಅಂಕಣದಿಂದ ಸಮಾಗಮ

ಪುತ್ತೂರು: ಅಲ್ಲಿ ಸೇರಿದ್ದವರೆಲ್ಲಾ ಸುಮಾರು 55 ವರ್ಷ ವಯಸ್ಸಿನ ಆಸುಪಾಸಿನವರು. ಪರಸ್ಪರ ಪರಿಚಯವಿಲ್ಲದವರಂತೆ ಅವರು ಯಾರು.ಇವರು ಯಾರು ಎಂದು ಮುಖ ಮುಖ ನೋಡಿ ಗುರುತು ಹಿಡಿಯುವ ಪ್ರಯತ್ನ. ಗುರುತು ಹಿಡಿಯುತ್ತಿದ್ದಂತೆಯೇ ಒಂದು ಆಲಿಂಗನ. ಗೊತ್ತಾಗದ್ದಿದ್ದರೆ ಸ್ವಲ್ಪ ಹೊತ್ತು ನೋಡಿ ಪರಿಚಯ ಮಾಡಿಕೊಂಡು ಹರಟೆ ಆರಂಭ. ಇಂತಹ ಭಾವನಾತ್ಮಕ ಕಾರ್ಯಕ್ರಮ ನಡೆದದ್ದು ಆ.10ರಂದು. ಪುತ್ತೂರಿನ ದರ್ಬೆಯಲ್ಲಿರುವ ಸಂತ ಫಿಲೋಮಿನಾ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ. ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ದಲ್ಲಿ. ಹೌದು ಅವರೆಲ್ಲಾ 34 ವರ್ಷಗಳ ಸುದೀರ್ಘ ಅವಧಿಯ ಬಳಿಕ ಅಲ್ಲಿ ಸೇರಿದ್ದರು. ಕಾಲೇಜಿನ 1991ರ ಬಿಎಸ್‌ಸಿ ವಿದ್ಯಾರ್ಥಿಗಳ ಪುನರ್ ಸಮಾಗಮವದು.


ಕಾರಣ ಮೊಬೈಲ್ ಸ್ಟೇಟಸ್:
35 ವರ್ಷಗಳ ಹಿಂದೆ ಸಹಪಾಠಿಗಳು ಒಂದಾಗಿ ಸೇರಲು ಕಾರಣವಾಗಿದ್ದು ಸ್ನೇಹಿತರೊಬ್ಬರ ಮೊಬೈಲ್ ಸ್ಟೇಟಸ್. ಜುಲೈ 1ರಂದು ಪತ್ರಿಕಾ ದಿನಾಚರಣೆ ಪ್ರಯುಕ್ತ ಪುತ್ತೂರಿನ ಸುದ್ದಿ ಬಿಡುಗಡೆ ಪ್ರಕಟಿಸಿದ ಕರ್ನಾಟಕದ ಪತ್ರಿಕೋದ್ಯಮದಲ್ಲಿ ಪುತ್ತೂರಿನ ಮುತ್ತುಗಳು ಪುಟವನ್ನು ಅವರ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಅದರಲ್ಲಿ ತಮ್ಮ ಸಹಪಾಠಿ, ಹಿರಿಯ ಪತ್ರಕರ್ತರಾಗಿದ್ದು ಪ್ರಸ್ತುತ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾಗಿರುವ ಬದ್ರುದ್ದೀನ್ ಮಾಣಿ ಬಗ್ಗೆ ಸಚಿತ್ರ ವರದಿ ಇತ್ತು. ಅಲ್ಲಿಂದ ಆರಂಭವಾದ ಹುಡುಕಾಟ ಇಲ್ಲಿಗೆ ಬಂದು ನಿಂತಿತು ಎಂದು ಹೇಳಿದರು ಮಂಗಳೂರಿನ ಪದವಿ ಕಾಲೇಜಿನ ಪ್ರೊಫೆಸರ್ ಡಾ. ಕೃಷಪ್ರಭಾ.


ಸಮಾಗಮದಲ್ಲಿ ಹಲವರು ಭಾಗಿ:
ಕಾಲೇಜಿನ ಪ್ರಾಂಶುಪಾಲರುಗಳು, ಪ್ರೊಫೆಸರ್‌ಗಳು, ಉಪನ್ಯಾಸಕರು, ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಉದ್ಯಮಿಗಳು, ಪ್ರಗತಿಪರ ಕೃಷಿಕರು, ಸಹಕಾರಿ ಧುರೀಣರು, ದೇವಾಲಯದ ಧರ್ಮದರ್ಶಿಗಳು, ಸಮಾಜ ಸೇವಕರು, ಗೃಹಿಣಿಯರು, ವಿವಿಧ ಕ್ಷೇತ್ರಗಳ ಪರಿಣಿತರು ಸಹಪಾಠಿಗಳ ಸಮಾಗಮದಲ್ಲಿ ಭಾಗಿಯಾಗಿದ್ದರು. ಜುಲೈ 1ರಂದು ಸುದ್ದಿ ಬಿಡುಗಡೆಯಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರಕಟಿಸಲಾಗಿದ್ದ ಪರವೂರಿನಲ್ಲಿರುವ ಪುತ್ತೂರಿನವರ ಮಾಹಿತಿಯಲ್ಲಿ ಬದ್ರುದ್ದೀನ್ ಮಾಣಿ ಅವರ ವಿವರ ಪ್ರಕಟವಾಗಿತ್ತು. ಫಿಲೋಮಿನಾ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಬದ್ರುದ್ದೀನ್ ಮಾಣಿ ಅವರು ಪಬ್ಲಿಕ್ ಟಿ.ವಿ.ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಕುರಿತು ಸುದ್ದಿ ಬಿಡುಗಡೆಯಲ್ಲಿ ಮಾಹಿತಿ ಪ್ರಕಟವಾಗಿತ್ತು. ಪರವೂರಿನಲ್ಲಿರುವ ಪತ್ರಕರ್ತರ ಫೋಟೊ ಸಹಿತ ಮಾಹಿತಿ ಪ್ರಕಟಿಸಿದ ಸುದ್ದಿ ಬಿಡುಗಡೆ ಪ್ರಯತ್ನಕ್ಕೆ ರಾಜ್ಯಾದ್ಯಂತ ಮಾಧ್ಯಮ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು. ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮಾಹಿತಿಯಲ್ಲಿ ಬದ್ರುದ್ದೀನ್ ಮಾಣಿ ಅವರ ಫೋಟೋ ಮತ್ತು ವಿವರ ನೋಡಿದ ಅವರ ಸಹಪಾಠಿಯೊಬ್ಬರು ‘ಇದು ನಮ್ಮ ಬದ್ರು’ ಎಂದು ಗುರುತಿಸಿದ್ದರು. ಬಳಿಕ ಅವರ ಮೊಬೈಲ್ ಫೋನ್ ನಂಬರ್ ಸಂಗ್ರಹಿಸಿ ಅದೇ ಬದ್ರುದ್ದೀನ್ ಹೌದಾ ಎಂದು ಖಚಿತಪಡಿಸಿಕೊಂಡಿದ್ದರು. ಆ ಮೇಲೆ 35 ವರ್ಷಗಳ ಹಿಂದೆ ಫಿಲೋಮಿನಾದಲ್ಲಿ ತಮ್ಮ ಸಹಪಾಠಿಗಳಾಗಿದ್ದವರ ಶೋಧ ನಡೆಯಿತು. ಜುಲೈ 4ರಂದು ಕೆಲವು ಸಹಪಾಠಿಗಳು ಪರಸ್ಪರ ದೂರವಾಣಿ ಮೂಲಕ ಮಾತನಾಡಿದರು. ಸಿಗದವರ ಹುಡುಕಾಟ ನಡೆಸಿದರು. ವಾಟ್ಸಾಪ್ ಗ್ರೂಪ್ ರಚನೆಯನ್ನು ಮಾಡಿದರು. 20 ದಿನದಲ್ಲಿ 47 ಮಂದಿ ಸಂಪರ್ಕಕ್ಕೆ ಬಂದರು. ಒಮ್ಮೆ ತಕ್ಷಣಕ್ಕೆ ಸೇರೋಣ ಎಂದಾಯಿತು. ಅದರಂತೆ ದಿನಾಂಕ ನಿಗದಿ ಪಡಿಸಲಾಯಿತು. ಆ.10ರ ಭಾನುವಾರ ಎಲ್ಲರೂ ಸಂತಫಿಲೋಮಿನಾ ಕಾಲೇಜ್‌ಗೆ ಬನ್ನಿ ಎಂದು ಕರೆ ನೀಡಲಾಯಿತು. ದೂರದ ದುಬಾಯಿಯಿಂದ ಹಿಡಿದು ಮುಂಬೈ, ಕಲಬುರಗಿ, ಕೇರಳ, ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರಿನಿಂದ ಎಲ್ಲರೂ ಧಾವಿಸಿ ಬಂದರು. ಕಾಲೇಜಿನಲ್ಲಿ ಕಳೆದ ಅವಧಿ, ಆಗಿನ ಸವಿನೆನಪು, ತುಂಟಾಟಗಳ ಮೆಲುಕು, ಜೀವನ ಸಾಗಿ ಬಂದ ಹಾದಿ ಮತ್ತು ಕಷ್ಟಕಾರ್ಪಣ್ಯಗಳನ್ನು ಹಂಚಿಕೊಂಡರು. ತಮ್ಮ ಯಶೋಗಾಥೆಗಳನ್ನು ತಿಳಿಸಿ ಸಂಭ್ರಮಿಸಿದರು. ಹಾಡಿದರು. ಕುಣಿದರು. ಫೋನ್ ಗೇಮ್ಸ್ ಆಡುತ್ತಾ ಖುಷಿಪಟ್ಟರು. ತಾವು ಕಲಿತ ತರಗತಿಯಲ್ಲಿ ಕೆಲಕಾಲ ಕಳೆದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.. ಈ ಪುನರ್ ಮಿಲನ ಅವರಲ್ಲಿ ಹೊಸ ಹುರುಪು ಜೀವನೋಲ್ಲಾಸ ಮೂಡಿಸಿದಂತೆ ಭಾಸವಾಗಿತ್ತು. ಒಟ್ಟಿಗೆ ಬೆಳಗಿನ ಉಪಹಾರದೊಂದಿಗೆ ಆರಂಭವಾದ ಈ ಸಮಾಗಮ ಸಹಭೋಜನದೊಂದಿಗೆ ಮುಂದುವರಿಯಿತು.


ಮುಖದಲ್ಲಿ ಮಂದಹಾಸ:
ಕಾಲೇಜಿನ ಹಾಲಿ ಪ್ರಾಂಶುಪಾಲ ಡಾ| ಆಂಟನಿ ಪ್ರಕಾಶ್ ಮೊಂತೆರೋ ಅವರು ಹಳೆವಿದ್ಯಾರ್ಥಿಗಳೊಂದಿಗೆ ಬೆರೆತು ಸಹನುಡಿಗಳನ್ನು ಆಡಿದರು. ಕಾಲೇಜಿನೊಂದಿಗಿನ ಬೆಸುಗೆ ಮುಂದುವರಿಯಲಿ ಎಂದು ಆಶಿಸಿದರು. ಒಟ್ಟಿಗೆ ಭೋಜನ ಸವಿದು ಸಂಭ್ರಮಕ್ಕೆ ಸಾಕ್ಷಿಯಾದರು. ಉಪಪ್ರಾಂಶುಪಾಲ ವಿಜಯಕುಮಾರ್ ಮೊಳೆಯಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಭಾರತಿ ರೈ ಜೊತೆಗಿದ್ದರು. ಮತ್ತೆ ಮತ್ತೆ ಸೇರೊಣ. ಈ ಬೆಸುಗೆ ನಿರಂತರವಾಗಿರಲಿ ಎನ್ನುವುದೇ ಸಮಾಗಮದಲ್ಲಿ ಸೇರಿದ್ದ ಎಲ್ಲರ ಹಾರೈಕೆ ಮತ್ತು ಆಶಯವಾಗಿತ್ತು. ಜೀವನದಲ್ಲಿ ಏನೋ ಗಳಿಸಿದ ಹುರುಪಿನೊಂದಿಗೆ ನಿರಂತರ ಸಮ್ಮಿಲನದ ಸಂಕಲ್ಪದೊಂದಿಗೆ ತೆರಳಿದ ಎಲ್ಲರ ಮುಖದಲ್ಲಿ ಮಂದಹಾಸವಿತ್ತು.

ಜವಾಬ್ದಾರಿಯುತ ನಾಗರಿಕರ ತಯಾರಿ ಕಾಲೇಜಿನ ಆಸ್ತಿ-ಡಾ| ಆಂಟನಿ ಪ್ರಕಾಶ್ ಮೊಂತೆರೋ:
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂತ ಫಿಲೋಮಿನಾ ಪದವಿ(ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ| ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ಸಂತ ಫಿಲೋಮಿನಾ ಕಾಲೇಜು ಜವಾಬ್ದಾರಿಯುತ ನಾಗರಿಕರನ್ನು ತಯಾರಿ ಮಾಡುತ್ತಿದ್ದು, ಅದೇ ಈ ಕಾಲೇಜ್‌ನ ಆಸ್ತಿಯಾಗಿದೆ. ಇಲ್ಲಿ ಸರ್ವ ಧರ್ಮ ಸಮಭಾವವನ್ನು ಕಾಯಾ ವಾಚಾ ಮನಸಾ ಪಾಲಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು ನಮ್ಮ ವಿದ್ಯಾರ್ಥಿಗಳು ಅವರಲ್ಲಿ ಯಾವುದೇ ಭೇದವಿಲ್ಲ ಎಂದರು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಸಹಮಿಲನದ ಹೆಸರಿನಲ್ಲಿ ಅದೇ ಕಾಲೇಜಿನಲ್ಲಿ ಸೇರಿಕೊಂಡು ಮಾತುಕತೆ ನಡೆಸುವುದು ಖುಷಿಯ ವಿಚಾರವಾಗಿದೆ. ಕಾಲೇಜಿನ ಬಗ್ಗೆ ಉತ್ತಮ ಅಭಿಪ್ರಾಯ ಉಳಿಸಿಕೊಂಡು, ಅದಕ್ಕೆ ಪೂರಕವಾಗಿ ಸ್ಪಂದಿಸುವ ಸದಾಶಯ ಎಲ್ಲಾ ಹಿರಿಯ ವಿದ್ಯಾರ್ಥಿಗಳಲ್ಲಿ ಮೂಡಿ ಬರಬೇಕು ಎಂದ ಅವರು ತಾನೂ ಈ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿ ಇದೀಗ ಉಪನ್ಯಾಸಕನಾಗಿ, ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದೇನೆ. ಸುದೀರ್ಘ 18 ವರ್ಷಗಳ ಕಾಲ ಇದೇ ಪರಿಸರದಲ್ಲಿ ಬದುಕಿದ್ದೇನೆ. ಈ ಕಾಲೇಜು ಬೆಳೆಯಲು ಇಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶಿಕ್ಷಕರು ಹಾಗೂ ಹೊಸತನಕ್ಕೆ ತೆರೆದುಕೊಂಡಿರುವ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ ಕಾರಣ ಎಂದು ಹೇಳಿದರು.


ಸಂಸ್ಥೆ ಗಟ್ಟಿಯಾಗಿ ಬೆಳೆಯಲು ಹಿರಿಯ ವಿದ್ಯಾರ್ಥಿಗಳು ಜತೆಗಿರಬೇಕು-ಡಾ|ವಿಜಯ ಕುಮಾರ್ ಮೊಳೆಯಾರ್:
ಕಾಲೇಜಿನ ಉಪ ಪ್ರಾಂಶುಪಾಲ ಡಾ| ವಿಜಯ ಕುಮಾರ್ ಮೊಳೆಯಾರ್ ಮಾತನಾಡಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯುತ್ತಿರುವುದು ಉತ್ತಮ ವಿಚಾರವಾಗಿದ್ದು ಸಂಸ್ಥೆಯು ಇನ್ನಷ್ಟು ಗಟ್ಟಿಯಾಗಲು ಹಿರಿಯ ವಿದ್ಯಾರ್ಥಿಗಳಿಂದ ಇಂತಹ ಅನೇಕ ಸಮ್ಮಿಲನ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿರಬೇಕು. ನಾನು ಈ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಕಾಲೇಜು ನಮಗೆ ಎಲ್ಲವನ್ನೂ ನೀಡಿದೆ. ಆದರೆ ನಾವು ಕಲಿತ ಕಾಲೇಜಿಗೆ ಏನು ನೀಡಬಹುದು ಎಂಬ ಚಿಂತನೆ ನಮ್ಮಲ್ಲಿರಬೇಕು. ನಮ್ಮ ಕೊಡುಗೆಯಿಂದ ಸಂಸ್ಥೆಯು ಇನ್ನಷ್ಟು ಬೆಳೆಯುತ್ತದೆ. ಕಾಲೇಜು ಎತ್ತರಕ್ಕೇರಲು ಹಿರಿಯ ವಿದ್ಯಾರ್ಥಿಗಳು ಜೊತೆಗಿರಬೇಕು ಎಂದರು.


ಹಿರಿಯ ವಿದ್ಯಾರ್ಥಿಗಳಾದ ಡಾ. ಗಿರೀಶ್ ಭಟ್ ಅಜಕ್ಕಳ ಸ್ವಾಗತಿಸಿ ವಿಷ್ಣು ಭಟ್ ವಂದಿಸಿದರು. ಡಾ. ಕೃಷ್ಣಪ್ರಭ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿಗಳಾದ ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ಶಿವನಾಥ ರೈ ಮೇಗಿನಗುತ್ತು, ಲಕ್ಷ್ಮೀ ನಾರಾಯಣ ಕಡಂಬಳಿತ್ತಾಯ, ಕಾಲೇಜಿನ ವಾಣಿಜ್ಯಶಾಸ ವಿಭಾಗದ ಉಪನ್ಯಾಸಕ ತೇಜಸ್ವಿ ಭಟ್ ಮತ್ತಿತರರು ಸಹಕರಿಸಿದರು.

ವಾಟ್ಸಾಪ್ ಗ್ರೂಪ್‌ನಲ್ಲಿ ಒಟ್ಟಾಗಿ ಕಾಲೇಜಿನಲ್ಲಿ ಜತೆಯಾಗುವ ತೀರ್ಮಾನ ನಡೆಸಿದ್ದರು
1988ರಿಂದ 1991ರ 3 ವರ್ಷದಲ್ಲಿ 54 ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಕುಳಿತು ಬಿಎಸ್ಸಿ ವ್ಯಾಸಂಗ ನಡೆಸಿದ್ದರು. ಬಳಿಕ ವಿವಿಧ ಉದ್ಯೋಗಗಳನ್ನು ಅರಸಿಕೊಂಡು ಹೋಗಿ ಪರಸ್ಪರ ದೂರವಾಗಿದ್ದರು. ಇದೀಗ ಮತ್ತೊಮ್ಮೆ ತಾವು ಕಲಿತ ಕಾಲೇಜಿನಲ್ಲಿ ಒಟ್ಟು ಸೇರಿ ಹರಟೆ ಸಂವಾದ ನಡೆಸಿ ಕಾಲೇಜು ಜೀವನವನ್ನು ನೆನಪಿಸಿಕೊಂಡರು. 54 ವಿದ್ಯಾರ್ಥಿಗಳ ಪೈಕಿ ಈಗಾಗಲೇ ಮೂವರು ಮೃತಪಟ್ಟಿದ್ದಾರೆ. ಉಳಿದಂತೆ 51 ಮಂದಿಯಲ್ಲಿ 34 ಮಂದಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗ್ರೂಪ್ ಇವರೆಲ್ಲರೂ ಒಟ್ಟಾಗುವುದಕ್ಕೆ ಸಾಥ್ ನೀಡಿದೆ. ಮೊದಲಿಗೆ ವಾಟ್ಸಪ್ ಗ್ರೂಪ್ ಮಾಡಿಕೊಂಡು ಅದರಲ್ಲಿ ಒಟ್ಟಾದ ಗೆಳೆಯರು ಬಳಿಕ ಕಾಲೇಜ್‌ನಲ್ಲಿ ಸೇರುವ ತೀರ್ಮಾನ ನಡೆಸಿದ್ದರು. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರಲ್ಲಿ ವಿಚಾರ ತಿಳಿಸಿದಾಗ ಪ್ರಾಂಶುಪಾಲರು ಸೇರ್ಪಡೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದರು.

ಪ್ರಾಂಶುಪಾಲರು ಮತ್ತು ತಂಡದ ಆತ್ಮೀಯತೆ ನಮಗೆ ತುಂಬಾ ಅಪ್ಯಾಯಮಾನವಾಗಿ ಕಂಡಿತು
ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ನಮ್ಮ 1991ರ ಬಿಎಸ್‌ಸಿ ಬ್ಯಾಚ್‌ನ ಪುನರ್ಮಿಲನ ಕಾರ್ಯಕ್ರಮ ಅತ್ಯದ್ಭುತ. ಅದರಲ್ಲೂ ನಮ್ಮ ಕಾಲೇಜಿನಲ್ಲಿಯೇ ನಡೆದದ್ದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ಕಾಲೇಜಿನ ಪ್ರಾಂಶುಪಾಲರು ಹಾಗೂ ಅವರ ತಂಡ ನಮ್ಮನ್ನು ಸ್ವಾಗತಿಸಿ ಸುಂದರವಾದ ಸಭಾಂಗಣದ ವ್ಯವಸ್ಥೆ, ಕಾಲೇಜು ದಿನಗಳನ್ನು ನೆನಪಿಸಲು ತರಗತಿಗಳ ವ್ಯವಸ್ಥೆ, ಭೋಜನ ವ್ಯವಸ್ಥೆಗೆ ಹಾಲ್ ಕೊಟ್ಟು ನಮ್ಮ ಪುನರ್ಮಿಲನದ ಸಂಭ್ರಮವನ್ನು ಭಾವನಾತ್ಮಕ ಲೋಕಕ್ಕೆ ಕರೆದೊಯ್ಯುವಂತೆ ಮಾಡಿದ್ದಾರೆ. ಹಿಂದೆ ಕಾಲೇಜು ದಿನಗಳಿಗಿಂತಲೂ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟು ಕಾಲೇಜಿನೆಲ್ಲೆಡೆ ಸುತ್ತಾಡುವಂತೆ ಅವಕಾಶ ನೀಡಿದ ಪ್ರಾಂಶುಪಾಲರು ಹಾಗೂ ಅವರ ತಂಡಕ್ಕೆ ಹಿರಿಯ ವಿದ್ಯಾರ್ಥಿಗಳ ಮೇಲೆ ಅವರಿಗಿರುವ ವಿಶ್ವಾಸ, ಪ್ರೀತಿ ಶ್ಲಾಘನೀಯ. ಈ ಆತ್ಮೀಯತೆ ನಮಗೆ ತುಂಬಾ ಅಪ್ಯಾಯಮಾನವಾಗಿ ಕಂಡಿತು.
ಶಿವನಾಥ ರೈ ಮೇಗಿನಗುತ್ತು, ಹಿರಿಯ ವಿದ್ಯಾರ್ಥಿ

ಹಳೆಯ ನೆನಪು ಮೆಲುಕು ಹಾಕಲು, ಹೊಸ ಸಂಬಂಧ ಬೆಳೆಸಲು ಅವಕಾಶ ಕಲ್ಪಿಸಿದೆ
ಪುನರ್ಮಿಲನ ಕಾರ್ಯಕ್ರಮ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಮತ್ತು ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ತಮ್ಮ ವಿದ್ಯಾರ್ಥಿ ದಿನಗಳ ಪ್ರಯಾಣವನ್ನು ಪುನರುಜ್ಜೀವನಗೊಳಿಸಲು ಸೂಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
| ಪಿ.ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಹಿರಿಯ ವಿದ್ಯಾರ್ಥಿ

LEAVE A REPLY

Please enter your comment!
Please enter your name here