ನೆಲ್ಯಾಡಿ: 39 ವರ್ಷದ ಹಿಂದೆ ನಡೆದ ಧರ್ಮಸ್ಥಳ ಗ್ರಾಮದ ಬೊಳಿಯಾರ್ ನಿವಾಸಿ ಪದ್ಮಲತಾ(17ವ.) ಸಾವಿನ ಪ್ರಕರಣದ ಮರು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಕೆಯ ಅಕ್ಕ, ನೆಲ್ಯಾಡಿ ಗ್ರಾಮದ ಪಾದೆಕೊಪ್ಪ ನಿವಾಸಿ ಇಂದ್ರಾವತಿ ಅವರು ಆ.11ರಂದು ಬೆಳಿಗ್ಗೆ ಬೆಳ್ತಂಗಡಿಯಲ್ಲಿ ಎಸ್‌ಐಟಿಗೆ ದೂರು ನೀಡಿದ್ದಾರೆ.
ಸಿಪಿಎಂ ಮುಖಂಡರೊಂದಿಗೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿದ ಇಂದ್ರಾವತಿ ಅವರು ಸಹೋದರಿ ಪದ್ಮಲತಾ ಸಾವಿನ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ದೂರು ನೀಡಿದ್ದಾರೆ. ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದ 17ರ ಹರೆಯದ ಪದ್ಮಲತಾ ಅವರು 1986ರ ಡಿಸೆಂಬರ್ 22ರಂದು ಸಂಜೆ ಉಜಿರೆಯಿಂದ ಧರ್ಮಸ್ಥಳ ಬಸ್ಸು ನಿಲ್ದಾಣಕ್ಕೆ ಬಸ್ಸಿನಲ್ಲಿ ಬಂದ ಬಳಿಕ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಸುಮಾರು 56 ದಿನಗಳ ಬಳಿಕ ಅಂದರೆ ಫೆಬ್ರವರಿ 17, 1987ರಂದು ಪದ್ಮಲತಾ ಅವರ ಶವ ಕುದ್ರಾಯ ಬಳಿ ನದಿ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದಲ್ಲಿದ್ದ ಬಟ್ಟೆ ಹಾಗೂ ಕೈಯಲ್ಲಿದ್ದ ವಾಚ್‌ನ ಆಧಾರದಲ್ಲಿ ಆಕೆಯ ತಂದೆ ಎಂ.ಕೆ.ದೇವಾನಂದನ್ ಅವರು ಮೃತದೇಹ ಪದ್ಮಲತಾ ಅವರದ್ದೇ ಎಂದು ಗುರುತು ಪತ್ತೆ ಹಚ್ಚಿದ್ದರು. ಆರಂಭದಲ್ಲಿ ಬೆಳ್ತಂಗಡಿ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದು ರಾಜ್ಯದಾದ್ಯಂತ ನಡೆದ ಹೋರಾಟದ ಹಿನ್ನೆಲೆಯಲ್ಲಿ ಆಗಿನ ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಪೊಲೀಸರು ತನಿಖೆ ನಡೆಸಿ ಇದೊಂದು ಪತ್ತೆ ಹಚ್ಚಲಾಗದ ಪ್ರಕರಣ ಎಂದು ಪದ್ಮಲತಾ ಮನೆಯವರಿಗೆ ಹಿಂಬರಹ ನೀಡಿದ್ದರು. ಆ ಬಳಿಕ ಪ್ರಕರಣ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಇದೀಗ ಧರ್ಮಸ್ಥಳದಲ್ಲಿ ನೂರಾರು ಶವಹೂತಿಟ್ಟಿರುವುದಾಗಿ ಅನಾಮಿಕ ವ್ಯಕ್ತಿಯೋರ್ವ ದೂರು ನೀಡಿರುವ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ರಚನೆ ಮಾಡಿರುವ ಎಸ್‌ಐಟಿಗೆ ಪದ್ಮಲತಾ ಅಕ್ಕ ಇಂದ್ರಾವತಿ ಅವರು ದೂರು ನೀಡಿದ್ದು, ಪದ್ಮಲತಾ ಸಾವಿನ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದ್ದಾರೆ.
ಎಸ್‌ಐಟಿಗೆ ದೂರು ನೀಡಿರುವ ನೆಲ್ಯಾಡಿ ನಿವಾಸಿ ಇಂದ್ರಾವತಿ ಅವರು ಧರ್ಮಸ್ಥಳ ಗ್ರಾಮದ ಬೊಳಿಯಾರು ದಿ| ಎಂ.ಕೆ.ದೇವಾನಂದನ್ ಹಾಗೂ ತಂಗಮ್ಮ ದಂಪತಿಯ ಪುತ್ರಿ. ಈ ದಂಪತಿಗೆ ರವೀಂದ್ರ, ಇಂದ್ರಾವತಿ, ಚಂದ್ರಾವತಿ, ಪದ್ಮಲತಾ ಹಾಗೂ ರಮಣಿ ಐವರು ಮಕ್ಕಳು. ಇವರಲ್ಲಿ ರವೀಂದ್ರ ಮೃತಪಟ್ಟಿದ್ದು ಪದ್ಮಲತಾ ಸಾವು ನಿಗೂಢವಾಗಿದೆ. ಇಂದ್ರಾವತಿಯವರನ್ನು 35 ವರ್ಷದ ಹಿಂದೆ ನೆಲ್ಯಾಡಿ ಗ್ರಾಮದ ಪಾದೆಕೊಪ್ಪ ನಿವಾಸಿ, ಕೃಷಿಕ ವಿಜಯನ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು.
ದೂರು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ;
ತಂಗಿ ಪದ್ಮಲತಾ ಸಾವು ಪ್ರಕರಣದ ಮರು ತನಿಖೆಗೆ ಎಸ್‌ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ದೂರು ಸ್ವೀಕರಿಸಿ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತಿಳಿಸುತ್ತೇವೆ ಎಂದು ಹಿಂಬರಹ ನೀಡಿದ್ದಾರೆ. ಪದ್ಮಲತಾ ಸಾವು ಪ್ರಕರಣದ ತನಿಖೆ ಈ ಹಿಂದೆ ಸರಿಯಾದ ರೀತಿಯಲ್ಲಿ ನಡೆದಿಲ್ಲ. ಎಸ್‌ಐಟಿ ಸರಿಯಾಗಿ ತನಿಖೆ ನಡೆಸಿದಲ್ಲಿ ತಪ್ಪಿಸ್ಥರು ಸಿಕ್ಕೇ ಸಿಗುತ್ತಾರೆ. ತನಿಖೆ ಸಂಬಂಧ ಎಸ್‌ಐಟಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದು ಇಂದ್ರಾವತಿ ಅವರು ಸುದ್ದಿಗೆ ತಿಳಿಸಿದ್ದಾರೆ.