ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ಗೆ ಸೇರಿದ ಆದರ್ಶನಗರದಲ್ಲಿರುವ ಗ್ರಾ.ಪಂ. ವಸತಿ ಗೃಹವು ನಿರ್ವಹಣೆ ಕೊರತೆಯಿಂದ ಬೀಳುವ ಸ್ಥಿತಿ ತಲುಪಿದೆ. ಗ್ರಾ.ಪಂ. ಆಡಳಿತಗಾರರ ಇಚ್ಛಾ ಶಕ್ತಿಯ ಕೊರತೆಯಿಂದ ಗ್ರಾಮದ ಜನರ ಆಸ್ತಿಯೊಂದು ಧರೆಗುರುಳುವ ದಿನಗಳನ್ನು ಎದುರು ನೋಡುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸುಮಾರು 25ರಿಂದ 30 ವರ್ಷದ ಹಿಂದೆ ಗ್ರಾಮ ಪಂಚಾಯತ್ಗೆ ಆದಾಯ ತರುವ ಕನಸಿನೊಂದಿಗೆ ಆಗಿನ ಆಡಳಿತಗಾರರು ಆದರ್ಶನಗರ ಎಂಬಲ್ಲಿ ಶಾಲೆಯಂತೆ ಉದ್ದವಿರುವ ವಸತಿ ಗೃಹವೊಂದನ್ನು ನಿರ್ಮಿಸಿದ್ದರು. ಒಂದೇ ಹಾಲ್ನಂತಿರುವ ಈ ಹಂಚಿನ ಕಟ್ಟಡದಲ್ಲಿ ವಸತಿಗೆ ಯೋಗ್ಯವಾದ ಐದು ಮನೆಗಳಿದ್ದು, ಶಿಕ್ಷಕರು, ಮನೆಯಿಲ್ಲದವರು, ಸರಕಾರಿ ಸಿಬ್ಬಂದಿಗಳು ಅದರಲ್ಲಿ ಬಾಡಿಗೆಗೆ ಇದ್ದರು. ಬಾಡಿಗೆ ಕಡಿಮೆಯಿದ್ದರೂ, ತಿಂಗಳಿಗೆ ಸ್ವಲ್ಪವಾದರೂ ಆದಾಯ ಗ್ರಾ.ಪಂ.ಗೆ ಬರುತ್ತಿತ್ತು. ಆದರೆ ಬರುಬರುತ್ತಾ ಈ ಕಟ್ಟಡದ ಮೇಲ್ಛಾವಣಿ ಶಿಥಿಲಾವಸ್ಥೆ ತಲುಪಿತ್ತು. ಮೇಲ್ಚಾವಣಿಯ ರೀಪುಗಳು ಮುರಿದು ಹಂಚುಗಳು ಕೆಳಗೆ ಬೀಳತೊಡಗಿದವು. ಬಳಿಕ ಇಲ್ಲಿ ಬಾಡಿಗೆಗೆ ಇದ್ದವರು ಅಲ್ಲಿಂದ ಬಿಟ್ಟು ಬೇರೆ ಕಡೆ ವಾಸ್ತವ್ಯ ಕಂಡು ಕೊಂಡರು. ಇದೀಗ ಇದರ ಮೇಲ್ಛಾವಣಿ ಮುಕ್ಕಾಲು ಭಾಗ ಕುಸಿದಿದ್ದು, ಮಳೆ ನೀರೆಲ್ಲಾ ಕಟ್ಟಡದೊಳಗೆ ಬೀಳುತ್ತಿದೆ. ಈ ಕಟ್ಟಡದ ಮೇಲ್ಛಾವಣಿಯ ರೀಪು ಮತ್ತು ಹಂಚುಗಳಿಗೆ ಹೆಚ್ಚಿನ ಹಾನಿಯಾಗಿರುವುದು ಬಿಟ್ಟರೆ ಮೇಲ್ಛಾವಣಿಯ ಕೆಲವು ಪಕ್ಕಾಸುಗಳು ಇನ್ನೂ ಗಟ್ಟಿಮುಟ್ಟಾಗಿವೆ. ಆದರೆ ಈಗ ಮಳೆ- ಗಾಳಿ- ಬಿಸಿಲಿಗೆ ಈ ಕಟ್ಟಡ ಮೈದೆರೆದು ನಿಂತಿದ್ದರಿಂದ ಇದರ ಗೋಡೆಗಳಿಗೂ ಹಾನಿಯಾಗಿ ಈ ಕಟ್ಟಡವೇ ಸಂಪೂರ್ಣ ಕುಸಿದು ಬೀಳುವ ಭೀತಿಯಿದೆ.
ಅಪಾಯಕಾರಿ ಕಟ್ಟಡದಲ್ಲಿ ಒಂದು ಬಿಡಾರ: ಈ ಕಟ್ಟಡದ ಮೇಲ್ಚಾವಣಿ ಅಲ್ಲಲ್ಲಿ ಕುಸಿದು ಬಿದ್ದು ನೇತಾಡುತ್ತಿದ್ದು, ಅಪಾಯಕಾರಿಯಾಗಿ ಕಾಣುತ್ತಿದೆ. ಆದರೂ ಇಲ್ಲೊಂದು ಕುಟುಂಬವಿದ್ದು, ಈ ಅಪಾಯಕಾರಿಯೆನಿಸಿದ ಕಟ್ಟಡದಲ್ಲೇ ವಾಸಿಸುತ್ತಿದೆ.
ಕೂಸಿನ ಮನೆಗೂ ಹಾನಿ: ಈ ಕಟ್ಟಡ ಅಪಾಯಕಾರಿಯಾಗಿದ್ದರೂ ಕೂಸಿನ ಮನೆಗಾಗಿ ಇದರ ಒಂದು ಕೋಣೆಯ ಮೇಲ್ಚಾವಣಿಯನ್ನು ಗ್ರಾ.ಪಂ. ಸರಿ ಮಾಡಿತ್ತು. ಇದರಲ್ಲಿ 2024ರ ಜನವರಿ ತಿಂಗಳಲ್ಲಿ ಕೂಸಿನ ಮನೆಯೂ ಉದ್ಘಾಟನೆಗೊಂಡಿತು. ಕೂಸಿನ ಮನೆಗೆ ಬರುವ ಮಕ್ಕಳಿಗೆ ಆಡಲೆಂದು ಸರಕಾರದ ಸಾವಿರಾರು ರೂಪಾಯಿ ಅನುದಾನದಲ್ಲಿ ಆಟಿಕೆಗಳನ್ನು ಖರೀದಿಸಲಾಯಿತು. ಇನ್ನು ಕೆಲವು ದಾನಿಗಳು ಕಪಾಟು, ಕುರ್ಚಿ, ಫೇನ್ ಹೀಗೆಲ್ಲಾ ಹಲವು ಕೊಡುಗೆಗಳನ್ನು ಇದಕ್ಕೆ ನೀಡಿದ್ದರು. ಆದರೆ ಒಂದೆರಡು ತಿಂಗಳಲ್ಲೇ ಕೂಸಿನ ಮನೆಯು ಬಂದ್ ಆಗಿದ್ದು, ಅದರ ಬಾಗಿಲಿಗೆ ಬೀಗ ಬಿದ್ದಿದೆ. ಅಲ್ಲಿಗೆ ನೀಡಲಾದ ಸಾವಿರಾರು ರೂಪಾಯಿಯ ಆಟಿಕೆಗಳು, ದಾನಿಗಳು ಕೊಟ್ಟ ಕೊಡುಗೆಗಳು ಏನಾದವು ಎಂಬ ಬಗ್ಗೆ ಪ್ರಶ್ನೆ ಕೇಳಿ ಬರುತ್ತಿದೆ. ಕೂಸಿನ ಮನೆಯ ಮೇಲ್ಭಾಗದ ಹಂಚುಗಳು ಈಗ ಒಡೆದಿದ್ದು, ಇದರಿಂದಾಗಿ ಆ ಕೋಣೆಗೂ ಮಳೆ ನೀರು ಬೀಳುವ ಸಾಧ್ಯತೆಗಳಿವೆ.
ನಿರ್ವಹಣೆಯ ಅಗತ್ಯ: ಈ ಕಟ್ಟಡದ ಮೇಲ್ಛಾವಣಿಯನ್ನು ಶೀಘ್ರವೇ ದುರಸ್ತಿ ಮಾಡಿಸಲು ಗ್ರಾ.ಪಂ. ಮುಂದಾಗದಿದ್ದರೆ ಕಟ್ಟಡದ ಗೋಡೆಗಳಿಗೂ ಹಾನಿಯಾಗಿ ಇಡೀ ಕಟ್ಟಡವೇ ಕುಸಿದು ಬೀಳುವ ಭೀತಿಯಿದೆ. ಆದ್ದರಿಂದ ಗ್ರಾ.ಪಂ. ಈ ಬಗ್ಗೆ ತುರ್ತು ಗಮನಹರಿಸಿ ಈ ಕಟ್ಟಡವನ್ನು ಉಳಿಸುವ ಕೆಲಸ ಮಾಡಬೇಕಿದೆ. ಇದು ಸುಸ್ಥಿತಿಯಲ್ಲಿದ್ದರೆ ಗ್ರಾ.ಪಂ.ಗೂ ಆದಾಯದ ಮೂಲವಾಗಿದ್ದು, ಗ್ರಾ.ಪಂ.ಗೆ ಆದಾಯ ತರುವ ಯೋಜನೆಯನ್ನು ಗ್ರಾ.ಪಂ. ಹಾಕಿಕೊಳ್ಳಬೇಕಿದೆ.ಈ ಕಟ್ಟಡದ ಮೇಲ್ಚಾವಣಿಗೆ ಹಾನಿಯಾಗಿದ್ದು, ಕಟ್ಟಡ ಈಗ ಅಪಾಯಕಾರಿ ಸ್ಥಿತಿಯಲ್ಲಿದೆ. ನಾನು ಅಧ್ಯಕ್ಷೆಯಾದ ಬಳಿಕ ಈ ಕಟ್ಟಡದ ಬಗ್ಗೆ ತಾ.ಪಂ. ಕಾರ್ಯನಿರ್ವಾಹಕಾಧಿಕಾರಿಯವರ ಗಮನಕ್ಕೆ ತಂದಿದ್ದು, ದುರಸ್ತಿಗೆ ಅನುದಾನ ನೀಡುವಂತೆ ಕೇಳಿದ್ದೇನೆ. ಅದಕ್ಕವರು ಸಕಾರಾತ್ಮಕ ಸ್ಪಂದನೆ ನೀಡಿದ್ದು, ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅನುದಾನ ಬಂದ ಕೂಡಲೇ ಇದರ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು.
ಸುಜಾತ ರೈ ಅಲಿಮಾರ್, ಅಧ್ಯಕ್ಷರು, 34 ನೆಕ್ಕಿಲಾಡಿ ಗ್ರಾ.ಪಂ.
34 ನೆಕ್ಕಿಲಾಡಿ ಗ್ರಾ.ಪಂ.ನಲ್ಲಿ ನಮ್ಮ ಆಡಳಿತವಿರುವಾಗ ನಾವು ಈ ಕಟ್ಟಡವನ್ನು ನಿರ್ವಹಣೆ ಮಾಡಿದ್ದೇವೆ. ಆ ಸಂದರ್ಭದಲ್ಲಿ ಈ ವಸತಿ ಗೃಹವನ್ನು ಕೆಲವು ಕುಟುಂಬಗಳು ಬಾಡಿಗೆಗೆ ಪಡೆದು ವಾಸ್ತವ್ಯ ಮಾಡುತ್ತಿದ್ದರು. ಈಗ ಅದು ಬೀಳುವ ಸ್ಥಿತಿಯಲ್ಲಿದೆ. ಇಲ್ಲಿದ್ದ ಕುಟುಂಬಗಳು ಬಳಿಕ ಬೇರೆ ಕಡೆ ತೆರಳಿದ್ದಾರೆ. ಆದರೆ ಇನ್ನೂ ಅಲ್ಲಿ ಒಂದು ಕುಟುಂಬ ವಾಸವಾಗಿದೆ. ಈ ಅಪಾಯಕಾರಿ ಕಟ್ಟಡದಲ್ಲಿ ಅವರಿಗೆ ವಾಸ್ತವ್ಯಕ್ಕೆ ಗ್ರಾ.ಪಂ. ಯಾಕೆ ಅನುವು ಮಾಡಿಕೊಟ್ಟಿದೆ? ನಾಳೆ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ? ಎಂಬುದಕ್ಕೆ ಗ್ರಾ.ಪಂ. ಉತ್ತರಿಸಬೇಕು. ಈ ಕಟ್ಟಡದ ಮೇಲ್ಚಾವಣಿಗೆ ಮಾತ್ರ ಹಾನಿಯಾಗಿರುವಂತದ್ದು. ಗೋಡೆಗಳು ಗಟ್ಟಿಯಿವೆ. ಇದನ್ನು ದುರಸ್ತಿ ಮಾಡದೇ ಹಾಗೆ ಬಿಡುವುದಲ್ಲ. ಇದು ಗ್ರಾ.ಪಂ.ನ ಆಸ್ತಿ. ಆದ್ದರಿಂದ ಈ ಕಟ್ಟಡವನ್ನು ಕೂಡಲೇ ದುರಸ್ತಿ ಮಾಡಿ ಬಾಡಿಗೆಗೆ ನೀಡಬೇಕು. ಈ ಮೂಲಕ ಇದರಲ್ಲಿ ಗ್ರಾ.ಪಂ. ಆದಾಯ ಕಂಡುಕೊಳ್ಳಬೇಕು.
ಅಸ್ಕರ್ ಅಲಿ, ಮಾಜಿ ಅಧ್ಯಕ್ಷರು, 34 ನೆಕ್ಕಿಲಾಡಿ ಗ್ರಾ.ಪಂ.
ನಾನು ಇಲ್ಲಿ ಅಧಿಕಾರ ಸ್ವೀಕರಿಸಿ ಎರಡು ತಿಂಗಳಷ್ಟೇ ಕಳೆದಿದೆ. ಈ ಅಪಾಯಕಾರಿ ಕಟ್ಟಡದಲ್ಲಿ ಕುಟುಂಬವೊಂದು ವಾಸ್ತವ್ಯವಿರುವುದರ ಬಗ್ಗೆ ತಿಳಿದು ಸ್ಥಳಕ್ಕೆ ತೆರಳಿ ಈ ಕಟ್ಟಡದಿಂದ ವಾಸ್ತವ್ಯವನ್ನು ತೆರವುಗೊಳಿಸಲು ಅವರಿಗೆ ಮೌಖಿಕವಾಗಿ ಸೂಚಿಸಿದ್ದೇನೆ. ಅಲ್ಲದೇ ಈ ಹಿಂದೆಯೂ ಆ ಕುಟುಂಬಕ್ಕೆ ನೋಟೀಸ್ ನೀಡುವ ಕೆಲಸ ಗ್ರಾ.ಪಂ.ನಿಂದ ಆಗಿದೆ. ನಾನು ಇವರಿಗೆ ನೋಟೀಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
ಪ್ರವೀಣ್ ಕುಮಾರ್, ಪಿಡಿಒ, 34 ನೆಕ್ಕಿಲಾಡಿ ಗ್ರಾ.ಪಂ.