ಗ್ರಾಮಸ್ಥರ ಆಕ್ರೋಶ-‘ನ್ಯಾಯಬೇಕು ಘೋಷಣೆ ‘, ಗದ್ದಲ
ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆಯಲ್ಲಿ ಮನೆ ನಿವೇಶನಕ್ಕೆ ಕಾಯ್ದಿರಿಸಿದ ಸರಕಾರಿ ಜಮೀನು ಅತಿಕ್ರಮಿಸಿ ವ್ಯಕ್ತಿಯೋರ್ವರು ಅಡಿಕೆ ಗಿಡ ನಾಟಿ ಮಾಡಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಅತಿಕ್ರಮಣ ತಕ್ಷಣ ತೆರವುಗೊಳಿಸುವಂತೆ ಒತ್ತಾಯಿಸಿ, ನ್ಯಾಯಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಆ.13ರಂದು ನಡೆದ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ನಡೆದಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ಸವಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಕಡಬ ತಾ.ಪಂ.ಸಹಾಯಕ ನಿರ್ದೇಶಕ ಯಶವಂತ ಬೆಳ್ಚಡ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಮಹಮ್ಮದ್ ಸಮೀರ್ ಅರ್ಶಾದಿ ಅವರು, ಕೊಣಾಲು ಗ್ರಾಮದ ಕೋಲ್ಪೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕ ಕೇರಳ ಮೂಲದ ಸೆಬಾಸ್ಟಿನ್ ಎಂಬವರು ಜಾಗ ಖರೀದಿಸಿದ್ದು ಅದರ ಪಕ್ಕದಲ್ಲೇ ಮನೆ ನಿವೇಶನಕ್ಕೆ ಕಾದಿರಿಸಿದ್ದ ಸರ್ವೆ ನಂಬ್ರ 29/1ರಲ್ಲಿನ 59 ಸೆಂಟ್ಸ್ ಸರಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಅಡಿಕೆ ಗಿಡ ನಾಟಿ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಹೆದ್ದಾರಿ ಗಸ್ತು ಪೊಲೀಸರಿಗೆ ಸರಕಾರಿ ಜಮೀನು ಅತಿಕ್ರಮಿಸಿ ಅಡಿಕೆ ಗಿಡ ನಾಟಿ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರೂ ಅವರು ಏನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಪೊಲೀಸರು ಸಭೆಗೆ ಬಂದು ಮಾಹಿತಿ ನೀಡಬೇಕೆಂದು ಒತ್ತಾಯಿಸಿದರು.
ಮನೆ ನಿವೇಶನಕ್ಕೆ ಕಾಯ್ದಿರಿಸಿದ ಜಾಗ ಅತಿಕ್ರಮಣವಾಗುತ್ತಿದ್ದರೂ ಗ್ರಾಮ ಪಂಚಾಯತ್ ಮೌನ ವಹಿಸಿದೆ ಎಂದು ಆರೋಪಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಕೋಲ್ಪೆ ನಿವಾಸಿಗಳಾದ ಹಮೀದ್, ಜಾಬೀರ್, ರಹಿಮಾನ್, ಹಂಝ, ಉಸ್ಮಾನ್, ಸಂಶುದ್ದೀನ್, ಜುಬೈರ್, ಇರ್ಪಾನ್, ರಫೀಕ್, ಸಿದ್ದೀಕ್, ರಶೀದ್ ಮತ್ತಿತರರು, ಸದ್ರಿ ವ್ಯಕ್ತಿ 500ಮೀ. ಕಾಂಕ್ರಿಟೀಕರಣ ಆಗಿದ್ದ ರಸ್ತೆಯನ್ನು ಅಗೆದುಹಾಕಿ, ತನ್ನ ಪಟ್ಟಾ ಜಾಗದಲ್ಲಿ ಸಾರ್ವಜನಿಕ ರಸ್ತೆ ಮಾಡಿಕೊಟ್ಟಿದ್ದಾರೆ. ಇದು ಗ್ರಾ.ಪಂ.ನಲ್ಲಿ ದಾಖಲೀಕರಣ ಆಗಿದೆಯೇ ಎಂದು ಪ್ರಶ್ನಿಸಿದರು. ಈ ಮಧ್ಯೆ ಸದ್ರಿ ಜಾಗದ ವಿಚಾರದ ಕುರಿತು ಸದಸ್ಯ ವಿ.ಸಿ.ಜೋಸೆಫ್ರವರು ಮಾತನಾಡಲು ಮುಂದಾದರಾದರೂ ಗ್ರಾಮಸ್ಥರು ಆಕ್ಷೇಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚರ್ಚೆಯಾಗುತ್ತಿದ್ದಂತೆ ಮಧ್ಯಪ್ರವೇಶಿಸಿ ಮಾತನಾಡಿದ ಮಾರ್ಗದರ್ಶಿ ಅಧಿಕಾರಿ ಯಶವಂತ ಅವರು, ಒತ್ತುವರಿ ತೆರವಿಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.
ಸಮಾಧಾನಗೊಳ್ಳದ ಗ್ರಾಮಸ್ಥರು
ಅತಿಕ್ರಮಣ ತೆರವಿಗೆ ನಿರ್ಣಯ ಕೈಗೊಳ್ಳುವುದಾಗಿ ಮಾರ್ಗದರ್ಶಿ ಅಧಿಕಾರಿಯವರು ಭರವಸೆ ನೀಡಿದರೂ ಸಮಾಧಾನಗೊಳ್ಳದ ಗ್ರಾಮಸ್ಥರು ಹಿಂದಿನ ಗ್ರಾಮಸಭೆಗಳಲ್ಲೂ ಚರ್ಚೆಯಾಗಿ ತೆರವಿಗೆ ನಿರ್ಣಯವಾಗಿದೆ. ಆದರೂ ಇದೀಗ ಸದ್ರಿ ಜಾಗ ಅತಿಕ್ರಮಿಸಿ ಅಡಿಕೆ ಗಿಡ ನಾಟಿ ಮಾಡಿದರೂ ಏನೂ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ಅತಿಕ್ರಮಣ ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಈ ವಿಚಾರವಾಗಿ ಸಭೆಯಲ್ಲಿ ಗದ್ದಲ, ಕೋಲಾಹಲವೇ ನಡೆಯಿತು. ಗ್ರಾಮಸ್ಥರು ‘ನ್ಯಾಯ ಬೇಕು, ನ್ಯಾಯ ಬೇಕು’ ಹಾಗೂ ದಿಕ್ಕಾರ ಎಂದು ಏರುಧ್ವನಿಯಲ್ಲಿ ಘೋಷಣೆ ಕೂಗಿ ತಕ್ಷಣವೇ ಅತಿಕ್ರಮಣ ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಮಾರ್ಗದರ್ಶಿ ಅಧಿಕಾರಿ ಯಶವಂತ ಬೆಳ್ಚಡ ಅವರು ಮಾತನಾಡಿ, ಸದ್ರಿ ಜಾಗ ಮೊದಲು ಗ್ರಾ.ಪಂ.ಗೆ ಹಸ್ತಾಂತರ ಆಗಬೇಕು. ಆ ಮೇಲೆ ಅದರಲ್ಲಿ ಕಟ್ಟಡವಿದ್ದರೂ ತೆರವುಗೊಳಿಸಲು ಗ್ರಾ.ಪಂ.ಗೆ ಅಧಿಕಾರ ಇದೆ. ಸಾರ್ವಜನಿಕ ರಸ್ತೆ ತೆರವುಗೊಳಿಸಿರುವ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಎಂದು ಭರವಸೆ ನೀಡಿದರು. ಅಂತಿಮವಾಗಿ ಸರಕಾರಿ ಅಗ ಅತಿಕ್ರಮಣವನ್ನು ನಿಯಮಾನುಸಾರ ತೆರವುಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಕೊನೆಯಲ್ಲಿ ಗ್ರಾಮಸ್ಥರ ಆರೋಪದ ಕುರಿತು ಪ್ರತಿಕ್ರಿಯಿಸಿದ ನೆಲ್ಯಾಡಿ ಹೊರಠಾಣೆ ಹೆಡ್ಕಾನ್ಸ್ಟೇಬಲ್ ಪ್ರವೀಣ್ರವರು, ಜನ ಗುಂಪು ಸೇರಿರುವ ಬಗ್ಗೆ ಮೇಲಾಧಿಕಾರಿಗಳಿಂದ ಬಂದ ಸೂಚನೆಯಂತೆ ಸ್ಥಳಕ್ಕೆ ಬಂದಿದ್ದೇವೆ. ಗಲಾಟೆಗೆ ಆಸ್ಪದ ಆಗದಂತೆ ನೋಡಿಕೊಂಡಿದ್ದೇವೆ. ಅದು ಸಿವಿಲ್ ವಿಚಾರವಾಗಿರುವುದರಿಂದ ನಾವು ನಿಲ್ಲಿಸುವಂತೆಯೂ ಹೇಳಿಲ್ಲ, ಕೆಲಸ ಮಾಡುವಂತೆಯೂ ಹೇಳಿಲ್ಲ. ನಾವು ಸ್ಥಳದಿಂದ ಹೋದ ಬಳಿಕ ಹೆದ್ದಾರಿ ಗಸ್ತು ಪೊಲೀಸರು ಬಂದಿರುವ ವಿಚಾರ ನಮಗೆ ಗೊತ್ತಿಲ್ಲ ಎಂದರು.
ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ
ಆಲಂತಾಯ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣಗೊಂಡಿದೆ. 3 ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಹೇಳಿ ಈಗ ಆರು ತಿಂಗಳು ಕಳೆದಿದೆ. ಇದರಿಂದ ಕುಡಿಯುವ ನೀರಿನ ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಗುತ್ತಿಗೆದಾರರಿಗೆ ಒತ್ತಡ ತಂದು ಆದಷ್ಟೂ ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥ ರಘು ಪಾಲೇರಿ ಹೇಳಿದರು. ಸದಸ್ಯ ಶಿವಪ್ರಸಾದ್ ಮಾತನಾಡಿ, ನಾಲ್ಕು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮಸ್ಥರು ಸದಸ್ಯರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದರು. ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ ಅವರು ಪ್ರತಿಕ್ರಿಯಿಸಿ, ಜೆಜೆಎಂಗೆ ಸಂಬಂಧಿಸಿದ ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ಅವರಿಗೆ ಚುನಾವಣಾ ಕರ್ತವ್ಯದ ಹಿನ್ನೆಲೆಯಲ್ಲಿ ಬಂದಿಲ್ಲ. ಗೋಳಿತ್ತೊಟ್ಟು,ಕೊಣಾಲು ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದ್ದು, ಆಲಂತಾಯ ಗ್ರಾಮದ್ದು ಸೆಪ್ಟಂಬರ್, ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ ಎಂದರು.
ಹೆಚ್ಚುವರಿ ಪವರ್ಮೇನ್ ನೇಮಿಸಿ
ಗೋಳಿತ್ತೊಟ್ಟು ಗ್ರಾಮದ 110 ಟಿ.ಸಿ.ಗಳಿಗೆ ಒಬ್ಬರೇ ಪವರ್ಮೇನ್ ಇದ್ದಾರೆ. ಗ್ರಾಮಕ್ಕೆ ಹೆಚ್ಚುವರಿಯಾಗಿ ಇಬ್ಬರು ಪವರ್ಮೇನ್ಗಳ ನೇಮಕ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಪವರ್ಮೇನ್ ಹುದ್ದೆಗೆ ನೇಮಕಾತಿ ವೇಳೆ ಸ್ಥಳೀಯ ಮಟ್ಟದಲ್ಲೇ ನೇಮಕ ಮಾಡಬೇಕೆಂದೂ ಗ್ರಾಮಸ್ಥರು ಒತ್ತಾಯಿಸಿದರು. ಗೋಳಿತ್ತೊಟ್ಟು ಗ್ರಾಮದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಪ್ರಸ್ತಾವ ಇದೆ ಎಂದು ಮೆಸ್ಕಾಂ ಸಹಾಯಕ ಇಂಜಿನಿಯರ್ ನಿತಿನ್ಕುಮಾರ್ ಈ ವೇಳೆ ತಿಳಿಸಿದರು.
ಆಸ್ಪತ್ರೆ ಮೇಲ್ದರ್ಜೆಗೇರಿಸಿ
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವಂತೆ ಪ್ರತಿ ಗ್ರಾಮಸಭೆಯಲ್ಲೂ ಮನವಿ ಮಾಡುತ್ತಿದ್ದೇವೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥ ಮಹಮ್ಮದ್ ರಫೀಕ್ ಕೊಣಾಲು ಪ್ರಶ್ನಿಸಿದರು. ಆದಷ್ಟು ಶೀಘ್ರ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕೆಂದು ಮಹಮ್ಮದ್ ರಫೀಕ್ ಒತ್ತಾಯಿಸಿದರು. ಈ ಬಗ್ಗೆ ಮತ್ತೆ ನಿರ್ಣಯ ಕೈಗೊಂಡು ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಶೇ.75ಕ್ಕಿಂತ ಹೆಚ್ಚು ವಿಕಲಚೇತನರ ಆರೈಕೆದಾರರಿಗೂ 1 ಸಾವಿರ ರೂ.ಪ್ರೋತ್ಸಾಹಧನ ನೀಡಬೇಕೆಂದು ಇಸ್ಮಾಯಿಲ್ ಕೋಲ್ಪೆ ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.
ಹೊಸ ಶಾಲಾ ಕಟ್ಟಡಕ್ಕೆ ಮನವಿ
ಇಲಾಖೆಯ ಆದೇಶದಂತೆ ಕೊಣಾಲು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಳೆಯ ಕಟ್ಟಡ ನೆಲಸಮಗೊಳಿಸಲಾಗಿದೆ. ಆದರೆ ಹೊಸ ಕಟ್ಟಡಕ್ಕೆ ಅನುದಾನ ಬಂದಿಲ್ಲ. ಈಗ ತರಗತಿ ಕೊಠಡಿಗಳ ಕೊರತೆ ಇದೆ. ಆದ್ದರಿಂದ ಆದಷ್ಟೂ ಬೇಗ ಹೊಸ ಕಟ್ಟಡಕ್ಕೆ ಅನುದಾನ ನೀಡಬೇಕೆಂದು ಇಸ್ಮಾಯಿಲ್ ಕೋಲ್ಪೆ, ಮಹಮ್ಮದ್ ರಫೀಕ್ ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು. ಕೊಣಾಲು ಶಾಲಾ ಆಟದ ಮೈದಾನದಲ್ಲಿ ನೀರು ನಿಲ್ಲುತ್ತಿದ್ದು ಮಕ್ಕಳಿಗೆ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕೆಂದು ಇಸ್ಮಾಯಿಲ್ ಕೋಲ್ಪೆ ಒತ್ತಾಯಿಸಿದರು. ಗ್ರಾಮಸಭೆಗೆ ಶಿಕ್ಷಣ ಇಲಾಖೆಯ ಕ್ಲಸ್ಟರ್ ಮಟ್ಟದ ಅಧಿಕಾರಿಗಳ ಬದಲು ಹಿರಿಯ ಅಧಿಕಾರಿಗಳೇ ಬರಬೇಕೆಂದು ಮಹಮ್ಮದ್ ರಫೀಕ್ ಒತ್ತಾಯಿಸಿದರು.
ಸ್ಮಶಾನ ಜಾಗ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ
ಸ್ಮಶಾನಕ್ಕೆ ಮೀಸಲಿರಿಸಿದ ಜಾಗದ ಅಭಿವೃದ್ಧಿ ಕಾಮಗಾರಿ ಹಂತದಲ್ಲಿ ಅರಣ್ಯ ಇಲಾಖೆ ಅಡ್ಡಿ ಪಡಿಸಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕೆಂದು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕೆ.ಪಿ.ಪ್ರಸಾದ್ ಹೇಳಿದರು. ಸದ್ರಿ ಜಾಗದ ಅಭಿವೃದ್ಧಿಗಾಗಿ ನಾನು ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಬಹಳಷ್ಟು ಪ್ರಯತ್ನ ಮಾಡಿದ್ದೇನೆ. ಆದರೂ ಅರಣ್ಯ ಇಲಾಖೆ ತಕರಾರಿನಿಂದ ಸಾಧ್ಯವಾಗಿಲ್ಲ ಎಂದು ಮಾಜಿ ಅಧ್ಯಕ್ಷೆ ಶಾಲಿನಿ ಹೇಳಿದರು. ಈ ಬಗ್ಗೆ ಚರ್ಚೆ ನಡೆದು ಸದ್ರಿ ಸ್ಮಶಾನ ಅಭಿವೃದ್ಧಿ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ ಆಕ್ಷೇಪ ತೆರವುಗೊಳಿಸುವಂತೆ ಮನವಿ ಮಾಡಲು ನಿರ್ಣಯಿಸಲಾಯಿತು. ಗ್ರಾ.ಪಂ.ಜಾಗದಲ್ಲಿರುವ ಗಾಳಿಮರ ಕಟಾವಿಗೂ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಇದರಿಂದ ಆ ಜಾಗದಲ್ಲಿ ಗ್ರಾ.ಪಂ.ಗೆ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಗ್ರಾಮಸ್ಥ ಅಬ್ದುಲ್ಲಾಕುಂಞಿ ಕೊಂಕೋಡಿ ಹೇಳಿದರು. ಈ ವಿಚಾರವಾಗಿ ಗ್ರಾಮಸ್ಥರಾದ ಕೊರಗಪ್ಪ ಗೌಡ, ನೋಣಯ್ಯ ಗೌಡ ಅನಿಲ ಮತ್ತಿತರರು ಪ್ರಸ್ತಾಪಿಸಿದರು.
ಹಕ್ಕುಪತ್ರವಿದ್ದರೂ ಜಾಗ ತೋರಿಸಿಲ್ಲ
16ವರ್ಷದ ಹಿಂದೆ ಆಗಿನ ಶಾಸಕರು ಗೋಳಿತ್ತೊಟ್ಟು ಗ್ರಾಮದ ನಿವೇಶನ ರಹಿತ 16 ಮಂದಿಗೆ ನಿವೇಶನದ ಹಕ್ಕುಪತ್ರ ನೀಡಿದ್ದಾರೆ. ಆದರೆ ಜಾಗ ತೋರಿಸಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಅಬ್ದುಲ್ಲಾಕುಂಞಿ ಅವರು ಮಲ್ಲಿಕಾಪ್ರಸಾದ್ ಶಾಸಕರಾಗಿರುವಾಗ ಹಕ್ಕುಪತ್ರ ನೀಡಿದ್ದಾರೆ. ಆದರೆ ಯಾರಿಗೂ ಈ ತನಕ ಜಾಗ ಸಿಕ್ಕಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಉಪಾಧ್ಯಕ್ಷ ಕೆ.ಪಿ.ಪ್ರಸಾದ್ ಅವರು, 10 ವರ್ಷದ ಹಿಂದೆ ಸಣ್ಣಂಪಾಡಿಯಲ್ಲಿ ಜಾಗ ಕ್ಲೀನ್ ಮಾಡಿ ಕೊಟ್ಟಿದ್ದೇವೆ. ಆದರೆ ಅಲ್ಲಿ ಮೂಲಭೂತ ಸೌಕರ್ಯವಿಲ್ಲ ಎಂದು ಯಾರೂ ಬಂದಿಲ್ಲ. ಈಗ ಅಲ್ಲಿ ರಸ್ತೆ,ನೀರಿನ ಸೌಕರ್ಯ ಆಗಿದೆ ಎಂದರು.
ಜಿಪಿಎಸ್ ಮಾಡದೆ ಆಹಾರಪದಾರ್ಥ ನೀಡಿ
ಬಾಣಂತಿಯರಿಗೆ ಅಂಗನವಾಡಿ ಮೂಲಕ ಪೌಷ್ಠಿಕ ಆಹಾರಪದಾರ್ಥ ನೀಡುವ ವೇಳೆ ಜಿಪಿಎಸ್ ಮಾಡಬೇಕಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಅಂಗನವಾಡಿಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಬಾಣಂತಿಯರು ಒಂದೆರಡು ಗಂಟೆ ಕಾಯಬೇಕಾಗುತ್ತದೆ. ಆದ್ದರಿಂದ ಅಂಗನವಾಡಿಗಳಲ್ಲಿ ಜಿಪಿಎಸ್ ಸಿಸ್ಟಮ್ ಕೈಬಿಡಬೇಕೆಂದು ಇಸ್ಮಾಯಿಲ್ ಕೋಲ್ಪೆ ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿ
ಗೋಳಿತ್ತೊಟ್ಟು ಜಂಕ್ಷನ್ನಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿದೆ ಎಂಬ ವಿಚಾರವೂ ಚರ್ಚೆಗೆ ಬಂತು. ಆದ್ದರಿಂದ ಬೀದಿನಾಯಿಗಳಿಗೆ ಗ್ರಾ.ಪಂ.ನಿಂದ ಸಂತಾನಹರಣ ಚಿಕಿತ್ಸೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯಿಸಲಾಯಿತು.
ಗೋದಾಮುನಲ್ಲಿ ಸಿಮೆಂಟ್-ಆಕ್ಷೇಪ
ಗೋಳಿತ್ತೊಟ್ಟಿನಲ್ಲಿರುವ ಗ್ರಾ.ಪಂ. ಗೋದಾಮು ಕಟ್ಟಡ ಏಲಂ ಮಾಡದೆ ಗುತ್ತಿಗೆದಾರರಿಗೆ ಸಿಮೆಂಟ್ ಹಾಕಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಗ್ರಾಮಸ್ಥ ರಘು ಪಾಲೇರಿ ಆಕ್ಷೇಪ ಸೂಚಿಸಿ, ತಕ್ಷಣ ತೆರವುಗೊಳಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ರಸ್ತೆ ದುರಸ್ತಿಗೊಳಿಸಿ
ಕೊಣಾಲು ಗ್ರಾಮದ ಕೋಲ್ಪೆ ರಸ್ತೆ ದುರಸ್ತಿಗೆ 3 ಸಲ ಅರ್ಜಿ ನೀಡಿದ್ದೇನೆ. ಆದರೆ ಈ ತನಕ ದುರಸ್ತಿಯಾಗಿಲ್ಲ. ಈಗ ಸದ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಆಗುತ್ತಿಲ್ಲ. ತಕ್ಷಣ ದುರಸ್ತಿಗೊಳಿಸಬೇಕೆಂದು ಯು.ಕೆ.ಹಮೀದ್ ಕೋಲ್ಪೆ ಒತ್ತಾಯಿಸಿದರು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಸವಿತಾ ಭರವಸೆ ನೀಡಿದರು.
ಕೋಲ್ಪೆಯಲ್ಲಿ ಯು ಟರ್ನ್ ಕೊಡಿ
ಕೋಲ್ಪೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಸರಿಪಡಿಸುವಂತೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಯು ಟರ್ನ್ ಕೊಡಬೇಕೆಂದು ಇಸ್ಮಾಯಿಲ್ ಕೋಲ್ಪೆ ಒತ್ತಾಯಿಸಿದರು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಪಾಂಡಿಬೆಟ್ಟು-ಕೋಲ್ಪೆ ರಸ್ತೆ ಡಾಮರೀಕರಣಗೊಳಿಸುವಂತೆಯೂ ಇಸ್ಮಾಯಿಲ್ ಒತ್ತಾಯಿಸಿದರು.
9/11 ಸಮಸ್ಯೆ ಬಗೆಹರಿಸಿ
ಮನೆ ನಿರ್ಮಾಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಜಾಗದ ಭೂಪರಿವರ್ತನೆ ಮಾಡಿದರೂ 9/11 ಸಿಗದೇ ಇರುವುದರಿಂದ ಮನೆ ನಿರ್ಮಾಣ ಮಾಡುವವರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ತಕ್ಷಣ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥ ಕೊರಗಪ್ಪ ಗೌಡ ಕಲ್ಲಡ್ಕ ಒತ್ತಾಯಿಸಿದರು.
ಸೋಲಾರ್ಲೈಟ್ ಅಳವಡಿಸಿ
ಗೋಳಿತ್ತೊಟ್ಟು ಮಸೀದಿ ಬಳಿ ಇದ್ದ ಸೋಲಾರ್ ಲೈಟ್ ತೆರವುಗೊಳಿಸಿ ಪಂಚಾಯತಿಯಲ್ಲಿ ತಂದು ಇಡಲಾಗಿದೆ. ಅದನ್ನು ಅಲ್ಲಿ ಅಳವಡಿಸಬೇಕೆಂದು ಗ್ರಾಮಸ್ಥ ಅಬ್ದುಲ್ಲಾಕುಂಞಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಕೆ.ಬಾಬು ಪೂಜಾರಿ ಹಾಗೂ ಸದಸ್ಯ ಜನಾರ್ದನ ಗೌಡ ಅವರು, ಸದ್ರಿ ಸೋಲಾರ್ ಲೈಟ್ ಕೆಟ್ಟುಹೋಗಿರುವುದರಿಂದ ಅಲ್ಲಿಂದ ತೆಗೆಯಲಾಗಿದೆ. ಈಗ ಅಳವಡಿಸಲು ಗ್ರಾ.ಪಂ.ನಲ್ಲಿ ಅನುದಾನವಿಲ್ಲ ಎಂದರು. ಸಣ್ಣಂಪಾಡಿಯಲ್ಲಿ ಸೋಲಾರ್ ಲೈಟ್ ಅಳವಡಿಸಿದ ವಿಚಾರವನ್ನು ಅಬ್ದುಲ್ಲಾಕುಂಞಿ ಪ್ರಸ್ತಾಪಿಸಿದರು. ಇದು ಅಂಗವಿಕಲ ಕೋಟದಲ್ಲಿ ಅಳವಡಿಸಲಾಗಿದೆ ಎಂದು ಉಪಾಧ್ಯಕ್ಷರು ಸ್ಪಷ್ಟಪಡಿಸಿದರು. ಗೋಳಿತ್ತೊಟ್ಟು ಕಾಲೋನಿಯಲ್ಲೂ ಅಂಗವಿಕಲರೊಬ್ಬರಿದ್ದು ಅವರ ಮನೆ ಸಮೀಪ ಸೋಲಾರ್ ಲೈಟ್ ಅಳವಡಿಸಿ ಎಂದು ಅಬ್ದುಲ್ಲಾ ಒತ್ತಾಯಿಸಿದರು. ಆ ಮನೆಗೆ ರಸ್ತೆಗೆ ಅನುದಾನ ಇಡಲಾಗಿದೆ ಎಂದು ಗ್ರಾ.ಪಂ.ಸದಸ್ಯ ಜನಾರ್ದನ ಪಟೇರಿ ಹೇಳಿದರು. ಸೋಲಾರ್ ಲೈಟ್ ಅಳವಡಿಸುವ ವಿಚಾರದಲ್ಲೂ ಗ್ರಾಮಸ್ಥರು ಹಾಗೂ ಸದಸ್ಯರ ನಡುವೆ ಪರ, ವಿರೋಧ ಚರ್ಚೆ ಜೋರಾಗಿಯೇ ನಡೆಯಿತು.
ಇಂಜಿನಿಯರ್ ಹೊಳೆಬಸಪ್ಪ ಕರಕಲಮಟ್ಟ, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್ಕುಮಾರ್, ನೆಲ್ಯಾಡಿ ಶಾಖಾಧಿಕಾರಿ ರಾಮಣ್ಣ, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಅನ್ನಮ್ಮ ಕೆ.ಸಿ., ಸಿಆರ್ಪಿ ಮಂಜುನಾಥ್, ಗಸ್ತು ಅರಣ್ಯಪಾಲಕ ಜಗದೀಶ ಎಂ.ಎಂ., ಗ್ರಾಮ ಆಡಳಿತಾಧಿಕಾರಿ ಸುನಿಲ್, ಕಿರಿಯ ಪಶುವೈದ್ಯ ಪರೀಕ್ಷಕ ಹನುಮಂತ ಪವಿ, ಪೊಲೀಸ್ ಕಾನ್ಸ್ಸ್ಟೇಬಲ್ ಪ್ರವೀಣ್ ಕೆ.ಎಲ್. ಇಲಾಖಾವಾರು ಮಾಹಿತಿ ನೀಡಿದರು.
ಪಿಡಿಒ ಜಗದೀಶ ನಾಯ್ಕ್, ಗ್ರಾ.ಪಂ.ಉಪಾಧ್ಯಕ್ಷ ಕೆ.ಬಾಬು ಪೂಜಾರಿ, ಸದಸ್ಯರಾದ ನೋಣಯ್ಯ ಗೌಡ, ವಿ.ಸಿ.ಜೋಸೆಫ್, ವಾರಿಜಾಕ್ಷಿ, ಜನಾರ್ದನ ಗೌಡ, ಹೇಮಲತ, ಬಾಲಕೃಷ್ಣ ಬಿ., ಗುಲಾಬಿ ಕೆ., ಜಾನಕಿ, ಪದ್ಮನಾಭ ಪೂಜಾರಿ, ಸಂಧ್ಯಾ, ಶಿವಪ್ರಸಾದ್ ಎಸ್.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಾವತಿ ಸ್ವಾಗತಿಸಿ, ವರದಿ ವಾಚಿಸಿದರು. ಸಿಬ್ಬಂದಿ ಪುಷ್ಪಾಜಯಂತ್ ವಂದಿಸಿದರು. ಇತರೇ ಸಿಬ್ಬಂದಿಗಳು ಸಹಕರಿಸಿದರು.
ಕರ್ತವ್ಯ ಲೋಪ,ನಿರ್ಣಯ
ಸಭೆ ಆರಂಭದಲ್ಲೇ ಅಧಿಕಾರಿಗಳ ಗೈರು ಹಾಜರಿ ವಿಚಾರವನ್ನು ಅಬ್ದುಲ್ಲಾ ಕುಂಞಿ ಕೊಂಕೋಡಿ, ಕೊರಗಪ್ಪ ಗೌಡ ಮತ್ತಿತರರು ಪ್ರಸ್ತಾಪಿಸಿದರು. ಈ ಬಗ್ಗೆ ಚರ್ಚೆ ನಡೆದು ಗ್ರಾಮಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಗ್ರಾ.ಪಂ.ವತಿಯಿಂದ ನೋಟಿಸ್ ನೀಡಿದ್ದರೂ ಗೈರು ಹಾಜರಿಯಾಗಿರುವ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ ನಿರ್ಣಯ ಕೈಗೊಳ್ಳುತ್ತೇವೆ ಎಂದು ಮಾರ್ಗದರ್ಶಿ ಅಧಿಕಾರಿ ಯಶವಂತ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.