ಪೆರಾಬೆ: ಪೆರಾಬೆ ಗ್ರಾಮದ ಸಂಕದಬಳಿ ನಿವಾಸಿ ದಿ.ಉಸ್ಮಾನ್‌ರವರ ಪುತ್ರ ಅಬ್ದುಲ್ ಮುತಾಲಿಬ್(46ವ.)ರವರು ಆ.14ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮುತಾಲಿಬ್ ಹಾಗೂ ಅವರ ಸ್ನೇಹಿತರು ಆ.13ರಂದು ರಾತ್ರಿ ಕುಂತೂರಿನಲ್ಲಿದ್ದು ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಜುನೈದ್ ಎಂಬವರಿಗೆ ಫಂಡ್ ಕಲೆಕ್ಟ್ ಮಾಡುವ ನಿಟ್ಟಿನಲ್ಲಿ ವಿಡಿಯೋ ಮಾಡಿ ಅದನ್ನು ಸ್ನೇಹಿತರಿಗೆ ಶೇರ್ ಮಾಡಿದ್ದರು. ತಡರಾತ್ರಿ ಮನೆಗೆ ಹೋಗಿದ್ದ ಮುತಾಲಿಬ್‌ರವರು ಆ.14ರಂದು ಬೆಳಿಗ್ಗೆ 10 ಗಂಟೆಯಾದರೂ ಏಳದೇ ಇದ್ದ ಹಿನ್ನೆಲೆಯಲ್ಲಿ ಪತ್ನಿ ಕರೆದಾಗ ಎಚ್ಚರಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ರಿಕ್ಷಾದಲ್ಲಿ ಆಲಂಕಾರಿನ ಕ್ಲಿನಿಕ್‌ವೊಂದಕ್ಕೆ ಕರೆತಂದರು. ಆದರೆ ಆ ವೇಳೆಗಾಗಲೇ ಮುತಾಲಿಬ್ ಅವರು ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದರು ಎಂದು ವರದಿಯಾಗಿದೆ.
ಮುತಾಲಿಬ್ ಅವರು ಹಲವು ವರ್ಷಗಳ ಹಿಂದೆ ಉಪ್ಪಿನಂಗಡಿ-ಕುಂತೂರು ಮಧ್ಯೆ ಸರ್ವೀಸ್ ಜೀಪು ಓಡಿಸುತ್ತಿದ್ದರು. ಆ ಬಳಿಕ ಸೌದಿ ಅರೇಬಿಯಾಕ್ಕೆ ಹೋಗಿದ್ದ ಅವರು ಅಲ್ಲಿ ನಾಲ್ಕೈದು ವರ್ಷ ಕೆಲಸ ನಿರ್ವಹಿಸಿ ಮತ್ತೆ ಊರಿಗೆ ಬಂದು ಹಿಟಾಚಿ, ಟಿಪ್ಪರ್ ಖರೀದಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಹಿಟಾಚಿ, ಟಿಪ್ಪರ್ ಮಾರಾಟ ಮಾಡಿ ಆ ಬಳಿಕ ಸ್ವಂತ ಲಾರಿ ಖರೀದಿಸಿ ಮಂಗಳೂರು-ಬೆಂಗಳೂರು ಮಧ್ಯೆ ಸರಕು ಸಾಗಾಟ ಮಾಡುತ್ತಿದ್ದರು. 1 ತಿಂಗಳ ಹಿಂದೆ ಲಾರಿ ಮಾರಾಟ ಮಾಡಿ ಮನೆಯಲ್ಲಿದ್ದ ಅವರು ಎರಡು ದಿನದ ಹಿಂದೆಯಷ್ಟೇ ಸೆಕೆಂಡ್‌ಹ್ಯಾಂಡ್ ಲಾರಿಯೊಂದರ ಖರೀದಿಗೆ ಸಂಬಂಧಿಸಿ ಮಾತುಕತೆ ನಡೆಸಿ ಮುಂಗಡ ಸಹ ನೀಡಿದ್ದರು ಎಂದು ಹೇಳಲಾಗಿದೆ. ಮೃತರು ಇಬ್ಬರು ಪತ್ನಿಯರು, ಮೂವರು ಪುತ್ರರು, ನಾಲ್ವರು ಪುತ್ರಿಯರು, ಮೂವರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.