@ ಸಿಶೇ ಕಜೆಮಾರ್
“ ನಾವು ಆರಿಸಿ ಕಳುಹಿಸಿದ ಜನನಾಯಕರು ಎಂದು ನಮ್ಮಿಂದ ಕರೆಸಿಕೊಂಡಿರುವವರು ಜನಸೇವಕರು ಎಂಬುದನ್ನು ಮರೆತಂತೆ ಕಾಣುತ್ತಿದೆ. ಸ್ವತಂತ್ರ ದೊರೆತು 79 ವರ್ಷವಾದರೂ ರಾಜಕೀಯ ವ್ಯವಸ್ಥೆಯಡಿಯಲ್ಲಿ ಪ್ರಜೆಗಳು ಇಂದಿಗೂ ಗುಲಾಮರಾಗಿಯೆ ಇರಬೇಕಾಗಿದೆ ಎಂಬುದು ಮಾತ್ರ ವಾಸ್ತವ ಸತ್ಯ. ಇಂದಿಗೂ ಒಂದು ಇಲಾಖಾಧಿಕಾರಿಯನ್ನು ಒಬ್ಬ ಜನಸಾಮಾನ್ಯನಿಗೆ ಮಾಮುಲಿನಂತೆ ಸಂದರ್ಶಿಸಲು ಸಾಧ್ಯವಾಗುತ್ತಿಲ್ಲ, ಅರ್ಜಿ ಹಿಡಿದು ಕಾಯುತ್ತಿರುವ ಒಬ್ಬ ಸಾಮಾನ್ಯ ಪ್ರಜೆಯ ಕಷ್ಟ ಸುಖ ವಿಚಾರಿಸಲು ಕೂಡ ನಮ್ಮ ಜನಸೇವಕರಿಗೆ ಸಮಯ ಇಲ್ಲದಾಗಿದೆ.”
ಬ್ರಿಟೀಷರ ಕಪಿ ಮುಷ್ಠಿಯಿಂದ ಭಾರತ ಬಿಡುಗಡೆಗೊಂಡು ಇಂದಿಗೆ ಬರೋಬ್ಬರಿ 79 ವರ್ಷಗಳು ಕಳೆದು ಹೋಯಿತು. 79 ವರ್ಷಗಳ ಹಿಂದೆ ನಮ್ಮ ದೇಶ ಬ್ರಿಟೀಷ್ ರಾಜರ ಅಧೀನದಲ್ಲಿತ್ತು. ನಾವು ನಮ್ಮದೇ ನಾಡಿನಲ್ಲಿ ಪರದೇಶಿಗಳಂತೆ ಬದುಕುತ್ತಿದ್ದೆವು. ನಮ್ಮದೇ ಮನೆಯಲ್ಲಿ ಅಪರಿಚಿತರಂತೆ, ಅಸಹಾಯಕರ ಹಾಗೆ ದಿನ ದೂಡುತ್ತಿದ್ದೆವು. ಕೊನೆಗೂ ನಮಗೆ ಬದುಕುವುದು ಹೀಗಲ್ಲ ಎಂದು ಮನದಟ್ಟಾಯಿತು. ನಮ್ಮ ಸುತ್ತಲೂ ಕಟ್ಟಿದ್ದ ಸೆರೆಮನೆಯ ಸಲಾಕೆಗಳನ್ನು ಮುರಿಯುವಷ್ಟರ ಮಟ್ಟಿಗೆ ನಮ್ಮೊಳಗೆ ಒಂದು ಕಿಚ್ಚು ಹುಟ್ಟಿಕೊಂಡಿತು. ದೇಶದ ಕೋಟಿ ಕೋಟಿ ಹೃದಯಗಳು ಆಗ ತುಡಿಯುತ್ತಿದ್ದದ್ದು ಒಂದೇ ಒಂದು ಗುರಿಯನ್ನು ಮುಟ್ಟಲು, ಅಹಿಂಸವಾದಿಗಳು, ಕ್ರಾಂತಿಕಾರಿಗಳು, ಹಿರಿಯರು, ಯುವಕರು, ಹೆಂಗಸರು, ಮಕ್ಕಳು, ಧನಿಕರು, ಬಡವರು, ಶ್ರೀಮಂತರು, ಕಾರ್ಮಿಕರು, ಸಾಹುಕಾರರು ಎಲ್ಲರಿಗೂ ಬೇಕಾಗಿದ್ದು ಅದೊಂದೇ ಒಂದು ನಮ್ಮ ದೇಶ ಸ್ವಾತಂತ್ರ್ಯ ದೇಶವಾಗುವುದು. ಆ ಬಳಿಕದ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳು ನಮಗೆ ತಿಳಿದಿದೆ. ಅಂತೂ ಸ್ವಾತಂತ್ರ್ಯ ಸಿಕ್ಕಿ 79 ವರ್ಷಗಳಾದರೂ ನಾವೆಷ್ಟು ಸ್ವತಂತ್ರರಾಗಿದ್ದೇವೆ? ದೇಶದ ಜನ ಸಾಮಾನ್ಯರಿಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಎಂಬ ಪ್ರಶ್ನೆ ಪ್ರತಿ ವರ್ಷ ಮೂಡುತ್ತಲೇ ಇದೆ. ಭ್ರಷ್ಟಚಾರ, ಭಯೋತ್ಪಾದನೆ, ದೌರ್ಜನ್ಯ, ಅತ್ಯಾಚಾರ ಒಂದೆಡೆಯಾದರೆ, ಲಂಚಾವತಾರ ತಾಂಡವಾಡುತ್ತಿರುವುದು ಜನ ಸಾಮಾನ್ಯರನ್ನು ಕಂಗೆಡಿಸಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಲಂಚ ಸ್ವೀಕರಿಸದೆ ಇರುವ ಇಲಾಖೆಗಳೇ ಇಲ್ಲ ಎಂಬಂತೆ ಕಾಣುತ್ತಿದೆ ಎಲ್ಲಿ ನೋಡಿದರೂ ಲಂಚ, ಭ್ರಷ್ಟಚಾರ. ಪ್ರಜಾಪ್ರಭುತ್ವದಲ್ಲಿ ಜನಸೇವೆ ಮಾಡಲು ಜನಪ್ರತಿನಿಧಿಗಳು ಇರಬೇಕು ನಿಜ ಆದರೆ ಜನಪ್ರತಿನಿಧಿಗಳೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೈಜಾಕ್ ಮಾಡಿ ತಮಗೆ ಇಷ್ಟ ಬಂದಂತೆ ರಾಜಕಾರಣ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂದಿನ ವ್ಯವಸ್ಥೆಯಲ್ಲಿ ನ್ಯಾಯಯುತ ಮಾರ್ಗದಲ್ಲಿ ಬದುಕುವುದೆಂದರೆ ಸವಾಲಿನಿ ಸ್ಥಿತಿಯಾಗಿದೆ ಎನ್ನಬಹುದು.

ನಾವೆಷ್ಟು ಸ್ವತಂತ್ರರು? ಎಂಬ ಪ್ರಶ್ನೆ ಮೂಲಭೂತವಾಗಿ ನೋಡಿದರೆ ಇದೊಂದು ಆಧ್ಯಾತ್ಮದ ಜಿಜ್ಞಾಸೆಯಾಗಿದೆ. ಆದರೆ ಇದೇ ಪ್ರಶ್ನೆಯನ್ನು ಸಾಮಾಜಿಕವಾಗಿ ಮತ್ತು ರಾಜಕೀಯದ ಹಿನ್ನೆಲೆಯಲ್ಲಿಟ್ಟು ನೋಡಿದರೆ ನಾವೆಷ್ಟು ಅಸಹಾಯಕರು ಎಂಬುದು ಅರಿವಾಗುತ್ತದೆ. ಒಬ್ಬ ಮಾನವನ ನೆಲೆಯಲ್ಲಿ ನಿಂತು ಸ್ವಾತಂತ್ರ್ಯದ ಬಗ್ಗೆ ಯೋಚಿಸಿದಾಗ ವ್ಯಕ್ತಿಯೊಬ್ಬನಿಗೆ ಮೂರು ರೀತಿಯ ಸ್ವಾತಂತ್ರ್ಯದ ಆಪೇಕ್ಷೆ ಇರುತ್ತದೆ. ಅವುಗಳೆಂದರೆ ವೈಯುಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂತ್ರ್ಯ. ಏಕೆಂದರೆ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅವಲಂಭಿತರೇ ಆಗಿದ್ದೇವೆ. ನಾವೆಲ್ಲರೂ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡವರು. ರಾಜಕೀಯ ಸ್ವಾತಂತ್ರ್ಯದ ಮಾತು ಬಂದಾಗ ನಾವು ಎಲ್ಲಕ್ಕಿಂತ ಹೆಚ್ಚಾಗಿ ಗೊಂದಲಕ್ಕೆ ಈಡಾಗುತ್ತೇವೆ. ಪ್ರಜಾಪ್ರಭುತ್ವವಾದ ನಮ್ಮ ದೇಶದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಗಮನಿಸಬೇಕಾಗಿದ್ದು ಎಂತಹ ಪ್ರಜೆಗಳು? ಎಂತಹ ಪ್ರಭುಗಳು? ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ನಮ್ಮ ದೇಶದ ರಾಜಕೀಯ ಡೊಂಬರಾಟಗಳನ್ನು, ಇದಕ್ಕೆ ರಾಜಕಾರಣಿಗಳನ್ನು ದೂರಿ ಯಾವುದೇ ಪ್ರಯೋಜನವಿಲ್ಲ ಏಕೆಂದರೆ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದವರು ನಾವುಗಳೆ ಆಗಿದ್ದೇವೆ. ಅವರು ತಪ್ಪು ಕಾರ್ಯ ಎಸಗಿದಾಗ ಅದರಲ್ಲಿ ನೈತಿಕವಾಗಿ ನಾವುಗಳು ಕೂಡ ಪಾಲುದಾರರೇ ಆಗಿದ್ದೇವೆ ಎಂಬುದು ನೆನಪಿರಲಿ. ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಹೇಗಿರಬೇಕು? ಹೇಗೆ ಕೆಲಸ ಕಾರ್ಯ ಮಾಡಬೇಕು ಎಂಬ ಕನಿಷ್ಠ ಯೋಚನೆಯನ್ನು ಮಾಡಿಕೊಂಡಿದ್ದರೆ ಒಂದಷ್ಟು ತಪ್ಪುಗಳನ್ನು ಸರಿ ಪಡಿಸಬಹುದು ಅಲ್ಲವೇ? ಆದರೆ ನಾವು ಕೇವಲ ಓಟು ಹಾಕಿ ಆರಿಸಿ ಕಳುಹಿಸಲು ಮಾತ್ರ ಸೀಮಿತವಾಗುತ್ತಿದ್ದೇವಾ ಎಂಬ ಆತಂಕ ಮೂಡುತ್ತಿದೆ. ಇಲ್ಲಿ ಪ್ರಜೆಗಳು ಪ್ರಭುಗಳು ಎನ್ನುವುದು ಕೇವಲ ಓಟಿಗೆ ಮಾತ್ರ ಸೀಮಿತವಾಗಿರುವುದು ದುರಂತ. ಶಾಸಕರಿಂದ ಹಿಡಿದು ಪ್ರಧಾನಿಯವರೇಗೆ ನೋಡಿದರೆ ಅವರೆಲ್ಲರೂ ಜನಸಾಮಾನ್ಯರ ಪಾಲಿಗೆ ರಾಜರುಗಳೇ ಆಗಿ ಹೋಗಿದ್ದಾರೆ. ಬ್ರಿಟೀಷರ ಕಾಲದಲ್ಲೂ ಆಗಿದ್ದು ಇದೆ. ಶಾಸಕರ ಕಛೇರಿಗೆ ಹೋಗಿ ನಮ್ಮ ಗ್ರಾಮದ ಸಮಸ್ಯೆ ಹೇಳಿಕೊಳ್ಳಲು ನಮಗೆ ಭಯ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಕೂಡ ಸಾಧ್ಯವಿಲ್ಲ. ಓಟಿಗೆ ನಿಂತು ಗೆದ್ದು ರಾಜಕಾರಣಿಯಾದ ಮೇಲೆ ಆತನ ವರಸೆಯೇ ಬದಲಾಗಿ ಬಿಡುತ್ತದೆ. ಈಗ ಹೇಳಿ ಜನಸಾಮಾನ್ಯನಿಗೆ ಸ್ವಾತಂತ್ರ್ಯ ಸಿಕ್ಕಿದೆಯಾ?
ಪ್ರಜಾಪ್ರಭುತ್ವ ಭಾರತ ದೇಶ ಇಂದು ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ದೇಶ ಎಂಬಿತ್ಯಾದಿ ತರ್ಕಗಳ ನಡುವೆಯೂ ಸ್ವತಂತ್ರ ಭಾರತವಾಗಿ ಸಾಧಿಸಿದ್ದು ಬಹಳಷ್ಟಿದೆ, ಉಳಿದಿರುವುದರ ಪಟ್ಟಿ ಇಂದಿಗೂ ಬೆಳೆಯುತ್ತಲೇ ಇದೆ. ಪ್ರಜಾಪ್ರಭುತ್ವವಾಗಿ ನಾವೆಷ್ಟು ಪ್ರಬುದ್ಧರಾಗಿದ್ದೇವೆ ಎಂಬುದಕ್ಕಿಂತಲೂ ನಾವು ಸಾಧಿಸಿದ್ದೆಷ್ಟು, ಏನು ಮತ್ತು ನಾವು ಹೇಗೆ ಬದುಕುತ್ತಿದ್ದೇವೆ, ಹೀಗೆ ಏಕೆ ಬದುಕುತ್ತಿದ್ದೇವೆ ಎಂಬುದು ಬಹುಮುಖ್ಯ ಪ್ರಶ್ನೆಯಾಗಿ ಕಾಡುತ್ತದೆ. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳಿಗಾಗಿ ಎಂಬ ಪ್ರಜಾಪ್ರಭುತ್ವದ ತತ್ವದನ್ವಯ ಇಲ್ಲಿ ಎಲ್ಲವೂ ನಡೆಯುತ್ತಿದೆಯಾ? ನಮ್ಮ ರಾಜಕೀಯ ವ್ಯವಸ್ಥೆ ಯಾವ ಕಡೆ ವಾಲುತ್ತಿದೆ ಎಂಬುದನ್ನು ಗಮನಿಸಬೇಕಾಗಿದೆ. ನಾವು ಆರಿಸಿ ಕಳುಹಿಸಿದ ಜನನಾಯಕರು ಎಂದು ನಮ್ಮಿಂದ ಕರೆಸಿಕೊಂಡಿರುವವರು ಜನಸೇವಕರು ಎಂಬುದನ್ನು ಮರೆತಂತೆ ಕಾಣುತ್ತಿದೆ. ಸ್ವತಂತ್ರ ದೊರೆತು 79 ವರ್ಷವಾದರೂ ರಾಜಕೀಯ ವ್ಯವಸ್ಥೆಯಡಿಯಲ್ಲಿ ಪ್ರಜೆಗಳು ಇಂದಿಗೂ ಗುಲಾಮರಾಗಿಯೆ ಇರಬೇಕಾಗಿದೆ ಎಂಬುದು ಮಾತ್ರ ವಾಸ್ತವ ಸತ್ಯ. ಇಂದಿಗೂ ಒಂದು ಇಲಾಖಾಧಿಕಾರಿಯನ್ನು ಒಬ್ಬ ಜನಸಾಮಾನ್ಯನಿಗೆ ಮಾಮುಲಿನಂತೆ ಸಂದರ್ಶಿಸಲು ಸಾಧ್ಯವಾಗುತ್ತಿಲ್ಲ, ಅರ್ಜಿ ಹಿಡಿದು ಕಾಯುತ್ತಿರುವ ಒಬ್ಬ ಸಾಮಾನ್ಯ ಪ್ರಜೆಯ ಕಷ್ಟ ಸುಖ ವಿಚಾರಿಸಲು ಕೂಡ ನಮ್ಮ ಜನಸೇವಕರಿಗೆ ಸಮಯ ಇಲ್ಲದಾಗಿದೆ. ನಮಗೆ ದಿಢೀರ್ ಜನಪ್ರಿಯತೆ ಬೇಕು, ನಮ್ಮನ್ನು ನಾವು ಎತ್ತರದ ಸ್ಥಾನದಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ನಾವು ದಿನನಿತ್ಯ ಹೆಣಗಾಡುತ್ತೇವೆಯೇ ಹೊರತು ಬೇರೆ ಯಾರ ಹಿತ ಅಹಿತದ ಗಣನೆಯೇ ನಮಗೆ ಬರುವುದಿಲ್ಲ.ಒಂದು ಮನೆಯಲ್ಲಿ ಒಂದು ಆಮೆಯನ್ನು ಸಾಕಲಾಗುತ್ತದೆ. ಆ ಆಮೆ ಮನೆಯ ಸದಸ್ಯನಂತೆ ಬಹಳ ಅನ್ಯೋನ್ಯಯಿಂದ ಜೀವಿಸುತ್ತದೆ. ಆ ಮನೆಯಲ್ಲಿ ಒಂದು ಮಗು ಹುಟ್ಟುತ್ತದೆ. ಮಗುವಿಗೂ ಆಮೆಗೂ ಒಂದು ರೀತಿಯ ಪ್ರೀತಿ ಬೆಳೆಯುತ್ತದೆ. ಆಮೆ ಮತ್ತು ಮಗು ಅದೆಷ್ಟೋ ಸ್ನೇಹದಿಂದ ಜೀವಿಸುತ್ತಾರೆ ಎಂದರೆ ಅದನ್ನು ಯಾರಿಗೂ ಊಹಿಸಲು ಸಾಧ್ಯವಾಗಲಿಲ್ಲ. ಮಗು ಬೆಳದು ದೊಡ್ಡವನಾಗುತ್ತಾನೆ. ಒಂದು ದಿನ ಇದ್ದಕ್ಕಿದ್ದಂತೆ ಆಮೆ ತನ್ನ ನಾಲ್ಕು ಕಾಲುಗಳನ್ನು ಮೇಲಕ್ಕೆ ಎತ್ತಿ ಅಂಗಾತ ಬಿದ್ದುಕೊಂಡಿರುವುದನ್ನು ನೋಡಿದ ಬಾಲಕ ಬಿಕ್ಕಿ ಬಿಕ್ಕಿ ಅಳುತ್ತಾನೆ. ಮನೆಯ ಸದಸ್ಯರು ಆಮೆಯನ್ನು ನೋಡಿ ಇದು ಸತ್ತಿದೆ ಎಂದು ತಿಳಿದು ಬಾಲಕನಿಗೆ ಸಮಾಧಾನ ಹೇಳುತ್ತಾರೆ. ಆದರೂ ಬಾಲಕ ಅಳುವುದನ್ನು ನಿಲ್ಲಿಸಲಿಲ್ಲ. ಕೊನೆಗೆ ಆಮೆಯನ್ನು ಸಮಾಧಿ ಮಾಡಿ ಅದಕ್ಕೊಂದು ಗುಡಿ ಕಟ್ಟೋಣ, ಅಲ್ಲಿ ಪೂಜೆ ನಡೆಸೋಣ ಹೀಗೆ ಮಾಡಿದರೆ ಆಮೆಯೊಂದಿಗೆ ನಿನ್ನ ಹೆಸರು ಕೂಡ ದೈವತ್ವಕ್ಕೆ ಏರುತ್ತದೆ. ನಿನಗೂ ಪ್ರಸಿದ್ಧಿ ಸಿಗುತ್ತದೆ ಎಂದು ಹೇಳಿದರು. ಬಾಲಕನಿಗೆ ಇದು ಸರಿ ಅನ್ನಿಸಿತು. ಯಾರೋ ಒಬ್ಬ ಆಮೆಯನ್ನು ಸಮಾಧಿ ಮಾಡಲು ಎತ್ತಿಕೊಳ್ಳುತ್ತಾನೆ. ಆದರೆ ಆಮೆ ಸತ್ತಿರಲಿಲ್ಲ. ಆಮೆಯನ್ನು ಮಗುಚಿದ ಕೂಡಲೇ ಆಮೆ ಓಡುತ್ತದೆ. ಆಗ ಬಾಲಕ ಆಮೆ ಸತ್ತಿಲ್ಲ ಅದನ್ನು ಹಿಡಿಯಿರಿ, ಸಾಯಿಸಿರಿ, ಅದಕ್ಕೆ ಗುಡಿ ಕಟ್ಟಿಬಿಡಿ, ಅದರ ಹೆಸರಿನೊಂದಿಗೆ ನನ್ನ ಹೆಸರೂ ಎಲ್ಲೆಡೆ ಪಸರಿಸಬೇಕು ಎಂದು ಬೊಬ್ಬೆ ಹೊಡೆಯುತ್ತಾನೆ. ಇದು ಮನುಜ ಸ್ವಭಾವದ ಒಂದು ಮುಖವನ್ನು ಈ ಕಥೆ ಬಿಚ್ಚಿಡುತ್ತದೆ.ಸ್ವತಂತ್ರ್ಯಾನಂತರದ ನಮ್ಮ ದೇಶದ ವ್ಯವಸ್ಥೆಗೆ- ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತೆ ಇದನ್ನು ನಾವು ಅರ್ಥ ಮಾಡಿಕೊಳ್ಳಬಹುದು.
‘ ಮೇಲಾಧಿಕಾರಿಗಳು ಮಾತ್ರ ಮಾತನಾಡುತ್ತಿದ್ದರೆ ಅದು ಸರಕಾರಿ ಕಛೇರಿಯ ಸಭೆ, ಯಾರು ಮತನಾಡದೆ ತಲೆ ತಗ್ಗಿಸಿ ನಿಂತಿದ್ದರೆ ಅದು ಶೋಕಸಭೆ, ಎಲ್ಲರೂ ಮಾತನಾಡುತ್ತಾ ಕಿರುಚಾಡುತ್ತಾ ಇದ್ದರೆ ಅದು ಲೋಕಸಭೆ’. ಇದು ಪ್ರಸಿದ್ಧ ಹನಿಗವಿ ಡುಂಡಿರಾಜ್ರವರ ಹನಿಗವನ. ಇಲ್ಲಿ ರಾಜಕಾರಣಿಗಳನ್ನು ಕವಿ ಯಾವ ರೀತಿ ಚುಚ್ಚುತ್ತಾರೆ ನೋಡಿ. ಪ್ರಜೆಗಳೇ ನಡೆಸುವ ಆಡಳಿತ ಎಂಬುದು ಪ್ರಜಾಪ್ರಭುತ್ವಕ್ಕೆ ನಾವು ಕೊಡುವ ವ್ಯಾಖ್ಯೆ. ಆದರೆ ಇಂದಿನ ಪ್ರಜಾಪ್ರಭುತ್ವ ಜನರಿಂದ ಜನರಿಗಾಗಿ, ಜನರಿಂದ ನಡೆಸಲ್ಪಡುತ್ತಿದೆಯೇ? ಎಂಬುದನ್ನು ಚಿಂತನೆ ಮಾಡಬೇಕಾಗಿದೆ. ನಮ್ಮನ್ನು ಅಂದು ಆಳಿ, ಸ್ವಾತಂತ್ರ್ಯ ಹೋರಾಟದಂತ ದೊಡ್ಡ ಕ್ರಾಂತಿಗೆ ಕಾರಣರಾಗಿ, ಕೊನೆಗೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಕಾಯಕಲ್ಪವನ್ನು ನಿರ್ಮಿಸಿಕೊಳ್ಳುವಂತೆ ಮಾಡಿದವರು ಬ್ರಿಟೀಷರು. ಇಂದಿನ ದಿನಗಳಲ್ಲಿ ಇದೇ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ನಮ್ಮ ಅರಿವೆಗೆ ಬಾರದೆ ಅಪಾಯಕಾರಿ ಬೆಳವಣಿಗೆಯೊಂದು ಆಗುತ್ತಿದೆ ಎಂಬುದನ್ನು ನಮ್ಮ ಅರಿವಿಗೆ ತಂದಿಡುವ ಪ್ರಯತ್ನವನ್ನು ಒಬ್ಬ ಬ್ರಿಟೀಷ್ ಬರಹಗಾರ ಮಾಡಿದ್ದಾರೆ ಅವರೇ ಪ್ಯಾಟ್ರಿಕ್ ಫ್ರೆಂಚ್. ಜನತಂತ್ರ ಎಂಬುದು ಖಾಸಗಿ ದರ್ಬಾರಿನತ್ತ ಹೊರಳುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಅವರು ನಮ್ಮ ಮುಂದಿಟ್ಟಿದ್ದಾರೆ. ನಮ್ಮ ಇಡೀ ರಾಜಕೀಯ ವ್ಯವಸ್ಥೆಯಲ್ಲಿ ವಂಶಪಾರಂಪರ್ಯವನ್ನು ನಾವು ನೋಡುತ್ತಿದ್ದೇವೆ.ಕುಟುಂಬ ರಾಜಕಾರಣ ತುಂಬಿ ಹೋಗಿದೆ. ಪಂಚಾಯತ್ ಮಟ್ಟದಿಂದಲೇ ಈ ಕುಟುಂಬ ರಾಜಕಾರಣ ಚಾಪೆ ಹಾಸಿ ಮಲಗಿಬಿಟ್ಟಿದೆ. ಯಾವ ಪಕ್ಷವನ್ನು ನೋಡಿದರೂ ಅಲ್ಲಿ ಕುಟುಂಬ ರಾಜಕಾರಣ ಎದ್ದು ಕಾಣುತ್ತಿದೆ. ಇದು ಬದಲಾವಣೆಯಾಗಲು ಸಾಧ್ಯವೇ? ಯುವಕರು ರಾಜಕೀಯದಿಂದ ವಿಮುಕ್ತರಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.ರಾಜಕಾರಣದಲ್ಲಿ ತುಂಬಿಕೊಂಡಿರುವ ಮಿತಿಮೀರಿದ ಕೊಳಕು, ಆದರ್ಶಗಳಿಗೆ ಜಾಗವೇ ಇಲ್ಲದಂತಿರುವ ವ್ಯವಸ್ಥೆಗೆ ಯುವಕರು ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಪ್ರಜಾತಂತ್ರ ವ್ಯವಸ್ಥೆ ಮತ್ತೆ ಚಕ್ರವರ್ತಿಗಳು, ರಾಜರು, ಸಾಮಂತರಿಂದೊಡಗೂಡಿ ರಾಜಾಧಿಪತ್ವವೇ ಆಗಿಬಿಡುವ ಅಪಾಯದ ಘಂಟೆ ಎದುರಿದೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ.ಎಲ್ಲಿ ನೋಡಿದರೂ ಭ್ರಷ್ಟಾಚಾರ, ಭಯದ ವಾತಾವರಣ,ಇದೆಲ್ಲವೂ ಯಾಕಾಯ್ತು ಎಂದೇನಾದರೂ ನಾವು ಯೋಚಿಸಿದರೆ ಸಿಗುವ ಉತ್ತರ ಬಹುಶಃ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯದ ದುರುಪಯೋಗ ಅನಿಸುತ್ತಿದೆ. ಗಣತಂತ್ರ ವ್ಯವಸ್ಥೆಗೆ ಎಲ್ಲವೂ ಮಾರಕವಾಗುತ್ತಿದೆ ಎಂಬ ಭಯ ಕಾಡುತ್ತದೆ.
ಈ ಎಲ್ಲದರ ನಡುವೆ ಆಶಾವಾದವನ್ನು ಸೃಷ್ಟಿಸುವ ಕೆಲವು ವ್ಯವಸ್ಥೆಗಳಿಗೆ ನಾವು ಶರಣಾಗಲೇಬೇಕಾಗಿದೆ. ಹಗಲಿರುಳು ಹೊಲದಲ್ಲಿ ದುಡಿಯುತ್ತಾ ದೇಶದ ಕಟ್ಟ ಕಡೆಯ ವ್ಯಕ್ತಿಯ ಹಸಿವನ್ನು ನೀಗಿಸುವ ಸಂಕಲ್ಪದೊಂದಿಗೆ ಇನ್ನೂ ಆಶಾವಾದಿಯಾಗಿಯೇ ಬದುಕುತ್ತಿರುವ ರೈತ. ಯಾವ ರಾಜಕಾರಣದ ಹಂಗಿಲ್ಲದೆ ತಾನಾಯ್ತು ತನ್ನ ಬೇಸಾಯವಾಯ್ತ ಎಂದುಕೊಂಡು ಪ್ರತಿದಿನ ಬೆವರು ಸುರಿಸುತ್ತಿರುವ ರೈತನಿಗೊಂದು ಸಲಾಂ ಹೇಳಲೇಬೇಕು. ಇನ್ನೂ ಸೈನಿಕ. ಹಿಮಚ್ಛಾದಿತ ಪ್ರದೇಶಗಳಲ್ಲಿ ಬಂದೂಕಿನ ಗುಂಡಿಗೆ ಎದೆಯೊಡ್ಡಿ ನಿಂತು. ತನ್ನ ಕುಟುಂಬ, ಜೀವನವನ್ನೆಲ್ಲಾ ಪಣಕ್ಕಿಟ್ಟು ಹೋರಾಡುವ ಸೈನಿಕನಿಂದಾಗಿ ನಾವು ಬೆಚ್ಚನೆಯ ಸೂರಿನಡಿ ಸುಖ ನಿದ್ದೆಯಲ್ಲಿರುತ್ತೇವೆ. ನಮ್ಮ ನಾಯಕರು ಯಾವುದೇ ಮಟ್ಟದ ರಾಜಕೀಯದಲ್ಲಿ ತಲ್ಲೀನರಾಗಲಿ, ಕರ್ತವ್ಯವೇ ದೇವರೆಂದು ಬಲಿದಾನ ಮಾಡುವ ಈ ಸೈನಿಕ ವರ್ಗವನ್ನು ನಾವು ಪ್ರತಿ ಮುಂಜಾನೆಯಲ್ಲಿ ಸ್ಮರಿಸಿಕೊಳ್ಳದಿದ್ದರೆ ಅದು ದೊಡ್ಡ ಅಪರಾಧವೇ ಸರಿ. ಈ ಮಟ್ಟಿಗೆ ಭಾರತೀಯರಾದ ನಾವು ಹೆಮ್ಮೆ ಪಡಲೇಬೇಕು. ಹನಿಗವಿ ಡುಂಡಿರಾಜರ ಈ ಕವನದೊಂದಿಗೆ ಈ ಲೇಖನ ಮುಗಿಸುತ್ತಿದ್ದೇನೆ. ‘ ಲೋಕಸಭೆಯಲ್ಲಿ ಕೆಲವು ಎಂಪಿಗಳು ಬಾಯಿ ತೆರೆದದ್ದು ಕೇವಲ ಆಕಳಿಸಲು, ಮಾತಾಡದ ಸಂಸದರು ನಿಜಕ್ಕೂ ಬುದ್ದಿವಂತರು, ಬಾಯಿಬಿಟ್ಟು ಬಣ್ಣಗೇಡು ಆಗುವುದೇಕೆ ವೃಥಾ?, ಆದ್ದರಿಂದಲೇ ಐದು ವರ್ಷ ಆಚರಿಸಿದರು ಮೌನವೃತ.’ ಎಲ್ಲರಿಗೂ 79 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು…