ಪುತ್ತೂರು : ಪುರುಷರಕಟ್ಟೆಯ ಸರಸ್ವತಿ ವಿದ್ಯಾ ಮಂದಿರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ ಇವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ಭಾರತ ಸ್ವಾತಂತ್ರ್ಯಗಳಿಸುವಲ್ಲಿ ಹೋರಾಡಿದ ಮಹಾತ್ಮರ ಬಗ್ಗೆ ಸ್ಫೂರ್ತಿಯ ಮಾತುಗಳನ್ನಾಡುತ್ತಾ ಸ್ವತಂತ್ರ ಭಾರತದಲ್ಲಿ ಸ್ವಾವಲಂಬನೆಯ ಬದುಕು ಅಗತ್ಯ ಎಂದರು.
ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತೀಯ ಸೇನೆಯ ನಿವೃತ್ತ ಯೋಧರಾದ ರೋಶ್ನಿ ದಾಮೋದರ್ ಪ್ರತಿಯೊಬ್ಬ ಪ್ರಜೆಯೂ ದೇಶದಲ್ಲಿ ಬಡತನ ಹಾಗೂ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ತೀರ್ಥರಾಮ ಸವಣೂರು ಮಾತನಾಡಿ ಆತ್ಮ ಸಾಕ್ಷಿಯಾಗಿ ಕೆಲಸ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಶಾಲಾ ಆಡಳಿತಾಧಿಕಾರಿ ಶುಭಾ ಅವಿನಾಶ್, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಆಶಾ ರೈ ಸವಣೂರು, ವಿದ್ಯಾರ್ಥಿಗಳ ಸುರಕ್ಷತಾ ಸಮಿತಿಯ ಅಧ್ಯಕ್ಷರಾದ ಸಚಿನ್ ಕಂಪ, ಸುರೇಶ್ ಭಟ್ ಸೂರ್ಡೇಲು, ಶಿಕ್ಷಣ ಸಂಯೋಜಕರಾದ ಶ್ರೀಲಕ್ಷ್ಮೀ ಮೊಳೆಯಾರ್ ಮತ್ತು ದಿವ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಅಖಿಲಾ ಕೆ. ಬಿ. ಸ್ವಾಗತಿಸಿ ವಿದ್ಯಾರ್ಥಿ ನಾಯಕ ಜೀವಿತ್ ಪಿ ಎಸ್ ವಂದಿಸಿದರು. ಶಿಕ್ಷಕಿ ಶೈಲಜಾ ಕಾರ್ಯಕ್ರಮ ನಿರ್ವಹಿಸಿದರು.
ನಂತರ ವೇದಿಕೆಯಲ್ಲಿ ಶಿಶು ಮಂದಿರದ ವಿದ್ಯಾರ್ಥಿಗಳಿಂದ ಕೃಷ್ಣ ವೇಷ ಪ್ರದರ್ಶನ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಗ್ಗ ಜಗ್ಗಾಟ ಮತ್ತು ಮಡಿಕೆ ಒಡೆಯುವ ಸ್ಪರ್ಧೆ ನಡೆಸಲಾಯಿತು. ರಕ್ಷಕ-ಶಿಕ್ಷಕ ಸಂಘದ ವತಿಯಿಂದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.