ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಮಜಲು ಇಲ್ಲಿ 79ನೇ ಯ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.
ಈ ದಿನದ ರಾಷ್ಟ್ರಧ್ವಜಾರೋಹಣವನ್ನು ನಿವೃತ್ತ ಸೈನಿಕರಾದ ಚಂದ್ರಶೇಖರ್ ಕೆದುಮೂಲೆ ಇವರು ಊರಿನ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸಿದರು. ಮಕ್ಕಳಿಂದ ಬ್ಯಾಂಡ್ ವಾದ್ಯಗಳೊಂದಿಗೆ ಆಕರ್ಷಕ ಪುರ ಮೆರವಣಿಗೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ದೇಶ ಸೇವೆ ಮಾಡಿದ ನಿವೃತ್ತ ಸೈನಿಕರಾದ ಚಂದ್ರಶೇಖರ್ ಕೆದುಮೂಲೆ ಇವರನ್ನು ಶಾಲು ಹೊದೆಸಿ ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುಂದರ ಕುಲಾಲ್ ಪಳನೀರು ಹಾಗೂ ನರ್ಸಪ್ಪ ಬಾಳೆಕಲ್ಲು ಇವರು ತಮ್ಮ 3ನೇಯ ಕೊಡುಗೆಯಾಗಿ ನಲಿಕಲಿ ತರಗತಿಗೆ ಸುಮಾರು 12000 ರೂ. ಬೆಲೆ ಬಾಳುವ 4 ರೌಂಡ್ ಟೇಬಲ್ ಹಾಗೂ 16 ಕುರ್ಚಿಗಳನ್ನು ಶಾಲಾ ಮುಖ್ಯ ಗುರುಗಳಿಗೆ ಹಸ್ತಾಂತರಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಎಂ ಕೆ ಕುಕ್ಕಾಜೆ ಇವರು ಮಾತನಾಡುತ್ತಾ ಸ್ವಾತಂತ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಹಾಗೂ ಭಾರತೀಯರಾದ ನಾವೆಲ್ಲರೂ ಸ್ವಾತಂತ್ರ್ಯದ ಮಹತ್ವವನ್ನು ಅರಿತು ಮುನ್ನಡೆಯೋಣ ಎಂದು ತಿಳಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಧಾ ಸಂದೇಶ್ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಸುಂದರ ಕುಲಾಲ್ ಪಳನೀರು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ ಕೆ ಕುಕ್ಕಾಜೆ, ಕಾಳಿಕಾ ಕಲಾ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಹಾಗೂ ವೀರಾಂಜನೇಯ ವುಡ್ ವರ್ಕ್ಸ್ ನ ಮಾಲಕ ಕೃಷ್ಣಪ್ಪ ಟಿ, ಕೆ ಎಫ್ ಸಿ(ರಿ) ಮಾಣಿಲ ಇದರ ಅಧ್ಯಕ್ಷ ಹರೀಶ್ ಕಾಮಜಲು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿಕ್ರಂ ಮುರುವ, ಶಾಲಾ ರಜತ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀಧರ್ ಪಿ ಕೆ, ಸೌಹಾರ್ದ ಫ್ರೆಂಡ್ಸ್ ಕ್ಲಬ್ ನ ಸದಸ್ಯರಾದ ಮಹೇಶ್ ಕಾಮಜಲು,ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಮೋಹನ್ ಕುಲಾಲ್ ಇವರುಗಳು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಸರಿತಾ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಶಿಕ್ಷಕಿ ಮಾಲತಿ ಎನ್ ಸರ್ವರನ್ನೂ ಸ್ವಾಗತಿಸಿ, ಶಿಕ್ಷಕಿ ಕುಮಾರಿ ಸುಶ್ಮಿತಾ ಧನ್ಯವಾದಗೈದರು. ಶಿಕ್ಷಕಿ ಮಾಲತಿ ಡಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು. ನಂತರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ನೆರೆದವರೆಲ್ಲರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶಾಲಾ ಎಸ್ ಡಿಎಂಸಿ ಸದಸ್ಯರು, ಪೋಷಕರು, ವಿವಿದ ಸಂಘ ಸಂಸ್ಥೆಗಳ ಸದಸ್ಯರು, ಅಡುಗೆ ಸಿಬ್ಬಂದಿಗಳು, ಹಾಗೂ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.