ವಿವೇಕಾನಂದ ಪಾಲಿಟೆಕ್ನಿಕ್‌ನ ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ ಸಿದ್ದಮೂಲೆಯವರ ತಂತ್ರಸಮುಚ್ಚಯ-ಶಿಲ್ಪಭಾಗ ಪುಸ್ತಕ ಲೋಕಾರ್ಪಣೆ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ ಸಿದ್ದಮೂಲೆ ಅವರು ಬರೆದ ತಂತ್ರಸಮುಚ್ಚಯ-ಶಿಲ್ಪಭಾಗ ಪುಸ್ತಕವು ಆ.10ರಂದು ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು.


ಪುಸ್ತಕ ಲೋಕಾರ್ಪಣೆಗೊಳಿಸಿದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಾತನಾಡಿ, ತಂತ್ರಸಮುಚ್ಛಯ ಶಿಲ್ಪಭಾಗ ಪುಸ್ತಕವು ಮುಖ್ಯವಾಗಿ ದೇವಸ್ಥಾನ ವಾಸ್ತು ಶಿಲ್ಪದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದು, ಕಬ್ಬಿಣದ ಕಡಲೆಯಂತಿರುವ ವಿಷಯವನ್ನು ಲೇಖಕರು ಬಹು ಸರಳವಾಗಿ ಸರ್ವರಿಗೂ ಅರ್ಥವಾಗುವಂತಹ ರೀತಿಯಲ್ಲಿ ಬರೆದಿರುತ್ತಾರೆ. ವಾಸ್ತು ಶಾಸ್ತ್ರವು ಮನುಷ್ಯನ ಜೀವನವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನುಜ ಸಮಾಜವು ತನ್ನ ಸುಖ,ಶಾಂತಿ ನೆಮ್ಮದಿಗಳಿಗೋಸ್ಕರವಾಗಿ ಭಾರತೀಯ ವಾಸ್ತು ಶಾಸ್ತ್ರದ ಬಗ್ಗೆ ಅರಿತು ತಮ್ಮ ತಮ್ಮ ವಾಸಸ್ಥಳಗಳಲ್ಲಿ ಅಳವಡಿಸಿಕೊಂಡು ಉನ್ನತಿಯ ದಾರಿಗೆ ಸಾಗಬೇಕು. ಇಂತಹ ಅಪೂರ್ವ ಪುಸ್ತಕಗಳು ಕನ್ನಡದಲ್ಲಿ ಹೊರಬರಲು ಲೇಖಕರ ಕುಟುಂಬವು ಬಹಳ ಶ್ರಮವಹಿಸಿದೆ ಎಂದರು.


ಪುಸ್ತಕದ ಲೇಖಕ ರವಿರಾಮ ಸಿದ್ದಮೂಲೆ ಮತ್ತು ಮನೆಯವರು, ವಾಸ್ತು ಶಿಲ್ಪಿ ಮುನಿಯಂಗಳ ಮಹೇಶ್ ಮತ್ತು ಮನೆಯವರು, ಬದಿಯಡ್ಕದ ಇಂಜಿನೀಯರ್ ನಾರಾಯಣ ಭಟ್ ಹಾಗೂ ವಿದ್ಯಾರಣ್ಯ ಶರ್ಮಾ ಉಂಡೆಮನೆ ಉಪಸ್ಥಿತರಿದ್ದರು.


ಈ ಪುಸ್ತಕ ತಂತ್ರಸಮುಚ್ಛಯ ಶಿಲ್ಪ, 1927 ನೇ ಇಸವಿಯಲ್ಲಿ ಕೇರಳದ ಕಾಣಿಪಯ್ಯೂರು ದಾಮೋದರನ್ ನಂಬೂದರಿಪ್ಪಾಡ್ ರವರು ಸಂಗ್ರಹಿಸಿ ಪ್ರಕಾಶಿಸಿದ ದೇವಾಲಯ ನಿರ್ಮಾಣದ ಕುರಿತು ಇರುವ ಸಮಗ್ರ ವಿವರಗಳನ್ನು ಹೊಂದಿರುವ ಗ್ರಂಥ. ಈ ಗ್ರಂಥದಲ್ಲಿ ಭೂ ಲಕ್ಷಣ, ಪರಿಗ್ರಹ, ದಿಕ್ ನಿರ್ಣಯ, ದೇವಾಲಯದ ಕಟ್ಟಡಗಳ ವಿವಿಧ ಅಂಗಗಳ ಪ್ರಮಾಣ ಬದ್ಧವಾದ ರಚನಾ ಕ್ರಮ, ವಿಗ್ರಹ ರಚನೆ, ಶಿವಲಿಂಗದ ನಿರ್ಮಾಣ, ದೀಪ ಶಾಲೆ, ಧ್ವಜ ಸ್ತಂಭ ನಿರ್ಮಾಣ, ಗೋಪುರಗಳ ನಿರ್ಮಾಣ ಇತ್ಯಾದಿಗಳ ಕುರಿತು ಮಾತ್ರವಲ್ಲ ದೇವಾಲಯ ಪುನರ್ನಿರ್ಮಾಣದ ಕಾಲದಲ್ಲಿ ಅನುಸರಿಸಬೇಕಾದ ನಿಯಮ, ಕಡುಶರ್ಕರಾದಿ ಬಿಂಬ ರಚನೆ, ಅಷ್ಟಬಂಧ , ಶ್ರೀಚಕ್ರ ರಚನೆಯ ಕುರಿತು ವಿವರಣೆಗಳನ್ನು ಹೊಂದಿರುತ್ತದೆ.
ಪುಸ್ತಕವನ್ನು ಲಸ್ಕ್ರಿ-ದೇಲಂತಮಜಲು ಕುಟುಂಬದ ಸಿದ್ಧಮೂಲೆ ಡಾ|| ಸುಬ್ರಾಯ ಭಟ್ಟ ಇವರ ಪುತ್ರ ಪ್ರಸ್ತುತ ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಗೋವಿಂದೂರಿನಲ್ಲಿರುವ, ವಿವೇಕಾನಂದ ಪಾಲಿಟೆಕ್ನಿಕ್ ಸಿವಿಲ್ ವಿಭಾಗ ಮುಖ್ಯಸ್ಥರಾಗಿರುವ ರವಿರಾಮ ಸಿದ್ಧಮೂಲೆ, ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುತ್ತಾರೆ.

LEAVE A REPLY

Please enter your comment!
Please enter your name here