ಪುತ್ತೂರು: ಆರ್ಯಾಪು ಇಂಟಿಕಲ್ ನಿವಾಸಿ, ಟೈಲ್ಸ್ ಕೆಲಸಗಾರರೊಬ್ಬರು ನಾಪತ್ತೆಯಾಗಿರುವ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಯಾಪು ಗ್ರಾಮದ ಇಂಟಿಕಲ್ ಪರಮೇಶ್ವರ ಮಡಿವಾಳ ಎಂಬವರ ಪುತ್ರ ಚಿಂತನ್ ಅವರು ನಾಪತ್ತೆಯಾದವರು. ಅವರು ಕೆಲವು ದಿನಗಳಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದು ಆ.16ರಂದು ಮೋಹನ್ ಎಂಬವರ ಜೊತೆ ಟೈಲ್ಸ್ ಕೆಲಸಕ್ಕೆ ಹೋಗಿದ್ದರು. ಅಂದು ರಾತ್ರಿ ಮನೆಗೆ ಬಾರದೇ ಇದ್ದು ಆ.18ರಂದು ಪರಮೇಶ್ವರ ಅವರ ಮಗನ ಕುರಿತು ಮೋಹನ್ ಅವರಿಗೆ ವಿಚಾರಿಸಿದಾಗ ಚಿಂತನ್ ಅವರು ಆ.16ರಂದು ಬೆಳಂದೂರಿನಲ್ಲಿ ಕೆಲಸ ಮುಗಿಸಿ ಬಂದಾಗ ಅವರಿಗೆ ರೂ. 1,500 ಕೂಲಿ ನೀಡಿ ಸಂಜೆ ಮುಂಕ್ರಪಾಡಿ ಪೆಟ್ರೋಲ್ ಪಂಪ್ ಬಳಿ ರಿಕ್ಷಾದಿಂದ ಇಳಿಸಿ ಹೋಗಿರುವುದಾಗಿ ಮೋಹನ್ ತಿಳಿಸಿದ್ದರು. ಆದರೆ ಚಿಂತನ್ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಪರಮೇಶ್ವರ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.