ಕಡಬ: ಕಾರ್ಯಕ್ರಮಗಳಲ್ಲಿ ಡಿ.ಜೆ.ಬಳಕೆಗೆ ಅವಕಾಶ ನಿರಾಕರಣೆ ಹಿನ್ನಲೆಯಲ್ಲಿ ಧ್ವನಿವರ್ಧಕ ಮಾಲಕರ ಜಿಲ್ಲಾ ಸಂಘ ಆ.21ರಿಂದ ಕಾರ್ಯಕ್ರಮಗಳಿಗೆ ಧ್ವನಿವರ್ಧಕ ನೀಡದಿರಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಈಗಾಗಲೇ ಕಾರ್ಯಕ್ರಮ ಆಯೋಜಿಸಿರುವ ಆಯೋಜಕರು ಕಂಗಲಾಗಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಆ.22ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಟ್ಟಿ ಮಡಿಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದೀಗ ಸೌಂಡ್ಸ್ ಮಾಲಕರ ಈ ನಿರ್ಧಾರದಿಂದ ಆಯೋಜಕರು ಕಂಗಲಾಗಿದ್ದಾರೆ. ಈ ಬಗ್ಗೆ ವಿನೋದ್ ಪಾಂಡ್ಯನ್ ಮಾತನಾಡಿ, ಈ ವಿಶೇಷ ಕಾರ್ಯಕ್ರಮಕ್ಕಾಗಿ ನಾವು ಕಳೆದ ಮೂರು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದೇವೆ. ಧ್ವನಿವರ್ಧಕ ಕೂಡ ಎರಡು ತಿಂಗಳ ಮುಂಚಿತವಾಗಿ ಬುಕ್ಕಿಂಗ್ ಮಾಡಿದ್ದೇವೆ. ನಾಳೆ ವಿವಿಧ ಸ್ಪರ್ಧೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಿದ್ದೇವೆ. ಆದರೆ ಇದೀಗ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಕಠಿಣ ಆದೇಶದ ಹಿನ್ನೆಲೆಯಲ್ಲಿ ಧ್ವನಿವರ್ಧಕ (ಡಿಜೆ, ಸೌಂಡ್ ) ಬಳಸಲು ಅವಕಾಶ ನೀಡಲಾಗುತ್ತಿಲ್ಲ. ಇದರಿಂದ ನಮಗೆ ನಷ್ಟ ಹಾಗೂ ಪರಿಶ್ರಮ ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಿತಿಯವರು, ಮಾಧ್ಯಮದ ಮುಂದೆ ಮನವಿ ಮಾಡಿಕೊಂಡು ನಾವು ಕಾರ್ಯಕ್ರಮ ಮಾಡಬೇಕಾದರೆ ಧ್ವನಿವರ್ಧಕ ಬೇಕು. ಇದಕ್ಕೆ ಅಧಿಕಾರಿಗಳು ಹಾಗೂ ಧ್ವನಿವರ್ಧಕ ಮಾಲಕರು ಸಹಕಾರ ನೀಡಬೇಕೆಂದು ಅವರು ತಿಳಿಸಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಧ್ವನಿವರ್ಧಕ ಸಂಘ ಕೂಡ ಪ್ರತಿಕ್ರಿಯೆ ನೀಡಿದ್ದು, ನಾವು ಯಾವುದೇ ಸರಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಧ್ವನಿವರ್ಧಕಗಳನ್ನು ಒದಗಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಡಿಜೆ ಹಾಗೂ ಧ್ವನಿವರ್ಧಕಗಳ ವಿರುದ್ಧದ ಕಟ್ಟುನಿಟ್ಟಿನ ಕ್ರಮ ತೆರವು ಮಾಡದಿದ್ದರೆ ನಮ್ಮ ಬದುಕು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.