ಖಾಯಂ ಪಿಡಿಒ * ಕುಂಬ್ರಕ್ಕೆ ಸಿಟಿ ಬಸ್ಸು * ಪದವಿ ಕಾಲೇಜು * ಆಂಬುಲೆನ್ಸ್ : ಗ್ರಾಮಸ್ಥರ ಬೇಡಿಕೆ
ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸುವ ಮೂಲಕ ಗ್ರಾಮಸ್ಥರ ಬೇಕು ಬೇಡಿಕೆಗಳಿಗೆ ಉತ್ತಮ ಸ್ಪಂದನೆ ನೀಡಿದೆ. ಗ್ರಾಮದ ಅಭಿವೃದ್ಧಿಯಲ್ಲೂ ಉತ್ತಮವಾಗಿ ಕೆಲಸ ನಿರ್ವಹಿಸಿದೆ. ಪಂಚಾಯತ್ ಅಧಿಕಾರಿ ವರ್ಗ ಹಾಗೇ ಸಿಬ್ಬಂದಿ ವರ್ಗ ಮತ್ತು ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂಬ ಪ್ರಶಂಸನೀಯ ಮಾತುಗಳ ಮೂಲಕ ಗ್ರಾಮಸ್ಥರು ಪಂಚಾಯತ್ನ ಭ್ರಷ್ಟಚಾರ ರಹಿತ ಆಡಳಿತಕ್ಕೆ ಗ್ರಾಮಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು. ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಆ.20ರಂದು ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ನಡೆಯಿತು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ರವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು.

ನೆರೆಯ ಪಂಚಾಯತ್ಗಳಿಗೆ ಹೋಲಿಸಿದರೆ ಒಳಮೊಗ್ರು ಗ್ರಾಪಂ ಅಭಿವೃದ್ಧಿ ಕೆಲಸಗಳಲ್ಲಿ ಹಿನ್ನೆಡೆಯಾದಂತೆ ಕಾಣುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಕೆ.ಎ ಅಡ್ಕರವರು ಹೇಳಿದ ಮಾತಿಗೆ ಪ್ರತಿಯಾಗಿ ನಿತೀಶ್ ಕುಮಾರ್ ಶಾಂತಿವನರವರು ಮಾತನಾಡಿ, ಅನುದಾನದ ಆಧಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಕಳೆದ 5 ವರ್ಷಗಳಲ್ಲಿ ಪಂಚಾಯತ್ ಕಛೇರಿ ಕಟ್ಟಡ, ಘನ ತ್ಯಾಜ್ಯ ನಿರ್ವಹಣಾ ಘಟಕ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನಡೆದಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಎಲ್ಲೂ ಭ್ರಷ್ಟಾಚಾರ ಆಗದಂತೆ ಪಂಚಾಯತ್ ನಡೆದುಕೊಂಡಿರುವುದು, ಭ್ರಷ್ಟಚಾರ ರಹಿತ ಆಡಳಿತವನ್ನು ಪಂಚಾಯತ್ ಕೊಟ್ಟಿದೆ ಇದಕ್ಕಾಗಿ ಪಂಚಾಯತ್ಗೆ ಅಭಿನಂದನೆ ಸಲ್ಲಿಸಬೇಕಾಗಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಮಹಮ್ಮದ್ ಅಡ್ಕರವರು ಕೂಡ ಭ್ರಷ್ಟಾಚಾರ ರಹಿತ ಆಡಳಿತ ನಮಗೂ ಖುಷಿ ಕೊಟ್ಟಿದೆ ಎಂದರು.
ಸ್ವಚ್ಛತೆ ಕಾಪಾಡದವರ ವಿರುದ್ಧ ಪ್ರಕರಣ ದಾಖಲಿಸಿ
ಒಳಮೊಗ್ರು ಗ್ರಾಮ ಪಂಚಾಯತ್ ಸ್ವಚ್ಚತಾ ಅಭಿಯಾನದಲ್ಲಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುವುದು ಶ್ಲಾಘನೀಯ ಆದರೆ ಸ್ವಚ್ಚತೆ ಕಾಪಾಡದವರ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ. ಎಷ್ಟು ದಂಡ ವಸೂಲಿ ಆಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ, ಪಂಚಾಯತ್ ಏನು ಕ್ರಮ ಕೈಗೊಂಡಿದೆ ಎಂದು ತಾಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ ಪ್ರಶ್ನಿಸಿದರು.ದಂಡ ವಿಧಿಸುವ ಕೆಲಸವನ್ನು ಪಂಚಾಯತ್ ಮಾಡಬೇಕು ಎಂದು ತಾಪಂ ಎ.ಡಿ ವಿಲ್ಪ್ರೆಡ್ರವರು ತಿಳಿಸಿದರು. ಇದಕ್ಕೆ ಉತ್ತರಿಸಿದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಈಗಾಗಲೇ ೨ ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು. ನಿತೀಶ್ ಕುಮಾರ್ ಶಾಂತಿವನ ಮಾತನಾಡಿ, ಗ್ರಾಮದಲ್ಲಿ ಎಷ್ಟು ಮನೆ, ಅಂಗಡಿ, ಮುಂಗಟ್ಟುಗಳಿವೆ ಎಂಬುದನ್ನು ಪಟ್ಟಿ ಮಾಡಬೇಕು ಇದರಲ್ಲಿ ಎಷ್ಟು ಮನೆ, ವಾಣಿಜ್ಯ ಸಂಕೀರ್ಣಗಳಿಂದ ಕಸ ಸಂಗ್ರಹವಾಗುತ್ತಿದೆ ಮತ್ತು ಎಷ್ಟು ಮನೆ, ವಾಣಿಜ್ಯ ಸಂಕೀರ್ಣಗಳಿಂದ ಕಸ ಸಂಗ್ರಹವಾಗುತ್ತಿಲ್ಲ, ಕಸ ಕೊಡದ ಮನೆಯವರು, ವಾಣಿಜ್ಯ ಸಂಕೀರ್ಣದವರು ಕಸವನ್ನು ಹೇಗೆ ವಿಲೇವಾರಿ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು. ಇದಲ್ಲದೆ ಬಹುತೇಕ ಕೋಳಿ ಅಂಗಡಿಗಳಲ್ಲಿ ಸ್ವಚ್ಚತೆ ಕಂಡುಬರುತ್ತಿಲ್ಲ ಈ ಬಗ್ಗೆ ಆರೋಗ್ಯ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಸ್ವಚ್ಚತೆ ಕಾಪಾಡದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿ ಎಂದು ಗ್ರಾಮಸ್ಥರು ಸೂಚಿಸಿದರು.
ಶಾಲೆ, ಪಂಚಾಯತ್ನಲ್ಲಿ ಕಳ್ಳತನ, ಇನ್ನೂ ಪತ್ತೆಯಾಗದ ಕಳ್ಳರು, ಎಸ್ಪಿ ಬರೆಯಲು ನಿರ್ಣಯ
ಕುಂಬ್ರ ಸರಕಾರಿ ಶಾಲೆ ಹಾಗೇ ಪಂಚಾಯತ್ನಲ್ಲಿ ಕಳ್ಳತನ ನಡೆದು 2 ವರ್ಷಗಳು ಕಳೆಯುತ್ತಾ ಬಂದಿದೆ ಕಳ್ಳರನ್ನು ಹಿಡಿಯುವ ಕೆಲಸ ಆಗಿದೆಯಾ ಎಂದು ಯೂಸುಫ್ ಮೈದಾನಿಮೂಲೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಆರ್ಪಿ ಶಶಿಕಲಾರವರು ಈ ಬಗ್ಗೆ ಪೊಲೀಸ್ ಇಲಾಖೆ ಉತ್ತರಿಸಬೇಕಾಗಿದೆ ಎಂದರು. ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು ಮಾತನಾಡಿ, ಕಳ್ಳತನದ ಬಗ್ಗೆ ಶಾಲೆಯಿಂದ ಡಿವಿಆರ್ ಇತ್ಯಾದಿಗಳನ್ನು ಪೊಲೀಸರು ಪರಿಶೀಲನೆ ಪಡೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮುಂದಿನ ಕ್ರಮಕ್ಕೆ ಶಾಸಕರ ಗಮನಕ್ಕೂ ತಂದಿದ್ದೇವೆ ಎಂದರು. ಕಳ್ಳತನ ನಡೆದು 2 ವರ್ಷ ಆದರೂ ಕಳ್ಳರ ಸುಳಿವು ಸಿಕ್ಕಿಲ್ಲ ಎಂದಾದರೆ ಈ ಬಗ್ಗೆ ಎಸ್.ಪಿ ಗೆ ಬರೆಯಿರಿ ಈ ಬಗ್ಗೆ ನಿರ್ಣಯ ಕೈಗೊಳ್ಳಿ ಎಂದು ಯೂಸುಫ್ ಮೈದಾನಿಮೂಲೆ ತಿಳಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.
ಕುಂಬ್ರಕ್ಕೊಂದು ಆಂಬುಲೆನ್ಸ್ ಸೇವೆಯ ಅಗತ್ಯತೆ ಇದೆ
ಕುಂಬ್ರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪೇಟೆ ಇದಲ್ಲದೆ ಎನ್.ಎಚ್-275 ಹಾದು ಹೋಗಿರುವ ಪ್ರದೇಶವಾಗಿದೆ. ಇಲ್ಲಿ ಪ್ರತಿ ನಿತ್ಯ ರಸ್ತೆ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ. ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಾದರೆ ಇಲ್ಲಿ ಆಂಬುಲೆನ್ಸ್ ಸೇವೆ ಇಲ್ಲದಂತಾಗಿದೆ. ಬೆಳ್ಳಾರೆ ಅಥವಾ ಪುತ್ತೂರಿನಿಂದ ಆಂಬುಲೆನ್ಸ್ ಬರಬೇಕಾಗುತ್ತದೆ ಎಂದು ವರ್ತಕರ ಸಂಘದ ಶ್ಯಾಮ್ಸುಂದರ ರೈ ಕೊಪ್ಪಳ, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಮಹಮ್ಮದ್ ಅಡ್ಕ ತಿಳಿಸಿದರು. ಇದಕ್ಕೆ ಉತ್ತರಿಸಿದ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭವ್ಯರವರು, ಆಂಬುಲೆನ್ಸ್ ಬರಬೇಕಾದ ಆ ಪ್ರದೇಶದ ಜನಸಂಖ್ಯೆ 50 ಸಾವಿರಕ್ಕಿಂತ ಹೆಚ್ಚು ಇರಬೇಕಾಗಿದೆ. ಕುಂಬ್ರದ ಜನಸಂಖ್ಯೆ 37 ಸಾವಿರದಷ್ಟಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದುಕೊಳ್ಳುವ ಎಂದು ತಿಳಿಸಿದರು.
ಬೀದಿ ನಾಯಿಗಳ ಉಪಟಳ ಜಾಸ್ತಿಯಾಗುತ್ತಿದೆ…!
ಗ್ರಾಮದಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗುತ್ತಿದೆ. ದಾರಿಯಲ್ಲಿ ನಡೆದುಕೊಂಡು ಹೋಗಲು ಕೂಡ ಹೆದರಿಕೆಯಾಗುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಕೂಡ ಭಯವಾಗುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಧ್ವನಿಗೂಡಿಸಿದ ನಿತೀಶ್ ಕುಮಾರ್ ಶಾಂತಿವನರವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಬೀದಿ ನಾಯಿಗಳು ಹೆಚ್ಚಾಗಲು ಗ್ರಾಮಸ್ಥರೇ ಕಾರಣರಾಗಿದ್ದಾರೆ ನಮ್ಮ ಮನೆಯಲ್ಲಿ ನಾಯಿ ಮರಿ ಹಾಕಿದಾಗ ಅದರಲ್ಲಿರುವ ಹೆಣ್ಣು ಮರಿಗಳನ್ನು ಬೀದಿಗೆ ತಂದು ಬಿಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು. ಸಾಕು ನಾಯಿಗಳು ಮನೆಯ ಅಂಗಳಕ್ಕೆ, ಜಗುಲಿಗೆ ಬಂದು ಗಲೀಜು ಮಾಡಿ ಹಾಕುತ್ತವೆ ಎಂದು ಬದ್ರುನ್ನೀಸಾ ಪರ್ಪುಂಜ ತಿಳಿಸಿದರು. ಇದಕ್ಕೆ ಉತ್ತರಿಸಿದ ತಾಪಂ ಎ.ಡಿ ವಿಲ್ಪ್ರೆಡ್ರವರು, ಸಾಕು ನಾಯಿಗಳ ಉಪದ್ರ ಕಂಡು ಬಂದರೆ ಪಂಚಾಯತ್ಗೆ ದೂರು ಕೊಡಿ ಎಂದು ತಿಳಿಸಿದರು. ಇದಕ್ಕೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ದೂರು ಕೊಡುವಾಗ ನಾಯಿಯ ಯಜಮಾನರ ಹೆಸರು ಬರೆದು ಕೊಡಿ ಎಂದು ತಿಳಿಸಿದರು. ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಬಗ್ಗೆ ಪಶು ವೈದ್ಯಾಧಿಕಾರಿ ಮಾಹಿತಿ ನೀಡಿದರು.
ಶಾಲಾ ವಿದ್ಯಾರ್ಥಿನಿಯರಿಗೆ ಬೈಕ್ ಸವಾರರಿಂದ ಉಪದ್ರ…!
ಕುಟ್ಟಿನೋಪಿನಡ್ಕ ರಸ್ತೆಯಲ್ಲಿ ಸಂಜೆ ಶಾಲಾ ಬಿಟ್ಟು ಮನೆಗೆ ತೆರಳುವ ವಿದ್ಯಾರ್ಥಿನಿಯರಿಗೆ ಬೈಕ್ನಲ್ಲಿ ಹೆಲ್ಮೆಟ್ ಹಾಕಿಕೊಂಡು ಬರುವ ಅಪರಿಚತರು ಕಿರುಕುಳ ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸುವಂತೆ ಯೂಸುಫ್ ಮೈದಾನಿಮೂಲೆ ತಿಳಿಸಿದರು. ಈ ಬಗ್ಗೆ ಧ್ವನಿಗೂಡಿಸಿದ ರಾಜೇಶ್ ರೈ ಪರ್ಪುಂಜರವರು, ಬೀಟ್ ಪೊಲೀಸ್ ಅಧಿಕಾರಿಯವರು ಈ ರಸ್ತೆಯಲ್ಲಿ ಗಸ್ತು ಹೋಗುತ್ತಿದ್ದಾರೆ ಎಂದು ತಿಳಿಸಿದರು. ಈ ಬಗ್ಗ ತನಿಖೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಕಣಿ ದುರಸ್ತಿ ಇಲ್ಲದೆ ರಸ್ತೆಗಳು ಹಾಳಾಗುತ್ತಿವೆ..
ಗ್ರಾಮದ ಕೆಲವೊಂದು ಕಡೆಗಳಲ್ಲಿ ರಸ್ತೆ ಬದಿಯ ಕಣಿ ದುರಸ್ತಿ ಇಲ್ಲದೆ ರಸ್ತೆಗಳು ಹಾಳಾಗುತ್ತಿವೆ ಎಂದು ರಕ್ಷಿತ್ ರೈ ಮುಗೇರು, ಯೂಸುಫ್ ಮೈದಾನಿಮೂಲೆ ತಿಳಿಸಿದರು. ಈ ಹಿಂದೆ ಒಂದು ರಸ್ತೆಯ ಕಣಿ ದುರಸ್ತಿಗೆ ರೂ.೫ ಸಾವಿರ ನೀಡಲಾಗುತ್ತಿತ್ತು ಆದರೆ ಈಗ ಒಬ್ಬನೇ ಗುತ್ತಿಗೆದಾರರಿಗೆ ಗ್ರಾಮದ ಎಲ್ಲಾ ರಸ್ತೆಯ ಕಣಿ ದುರಸ್ತಿಗೆ ಟೆಂಡರ್ ನೀಡಲಾಗುತ್ತಿದೆ. ಇದರಿಂದ ಎಲ್ಲಾ ಕಡೆಯ ಕಣಿ ದುರಸ್ತಿ ಆಗುತ್ತಿಲ್ಲ ಎಂದು ರಕ್ಷಿತ್ ರೈ ತಿಳಿಸಿದರು. ಸರಕಾರದಿಂದ ಈ ವರ್ಷ ಏನಾದರೂ ಅನುದಾನ ಬಂದಿದೆಯಾ ಎಂದು ಹರೀಶ್ ಬಿಜತ್ರೆ ಪ್ರಶ್ನಿಸಿದರು. ಇದಕ್ಕೆ ಗ್ರಾಪಂ ಅಧ್ಯಕ್ಷರು ಉತ್ತರಿಸಿ 30 ಸಾವಿರ ರೂಪಾಯಿ ಅನುದಾನ ಬಂದಿದೆ. ಎಲ್ಲಾ ವಾರ್ಡ್ಗಳಲ್ಲಿಯೂ ವಾರ್ಡ್ ಸದಸ್ಯರ ಸೂಚನೆಯಂತೆ ಕಣಿ ದುರಸ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಟಾರ್ಪಲ್ ಗುಣಮಟ್ಟ ಚೆನ್ನಾಗಿಲ್ಲ
ಕೃಷಿ ಇಲಾಖೆಯಿಂದ ರೈತರಿಗೆ ಕೊಡುವ ಟಾರ್ಪಲ್ನ ಗುಣಮಟ್ಟ ಚೆನ್ನಾಗಿಲ್ಲ ಬಿಸಿಲಿಗೆ ಬೇಗ ಹರಿದು ಹುಡಿ ಹುಡಿಯಾಗುತ್ತದೆ ಎಂದು ಉದ್ಯಮಿ ಅಶೋಕ್ ಪೂಜಾರಿ ಬೊಳ್ಳಾಡಿ ತಿಳಿಸಿದರು. ಈ ಬಗ್ಗೆ ಇಲಾಖೆಗೆ ಬರೆದುಕೊಳ್ಳಬೇಕು ಎಂದು ತಿಳಿಸಿದರು.
ಮೆಸ್ಕಾಂ ಜೆಇ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು
ಕುಂಬ್ರ ಮೆಸ್ಕಾಂನ ಜ್ಯೂನಿಯರ್ ಇಂಜಿನಿಯರ್ ರವೀಂದ್ರ ಹಾಗೂ ಅವರ ತಂಡದವರು ಈ ವರ್ಷದ ಮಳೆಗಾಲದಲ್ಲಿ ಗ್ರಾಹಕರಿಗೆ ವಿದ್ಯುತ್ ಕೊರತೆ ಆಗದಂತೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದಾರೆ. ಯಾವುದೇ ಸಮಯದಲ್ಲಿ ಕರೆ ಮಾಡಿದರೆ ತಕ್ಷಣವೇ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಿಕೊಟ್ಟಿದ್ದಾರೆ ಅದಕ್ಕಾಗಿ ಜೆಇ ರವೀಂದ್ರರವರಿಗೆ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದರು.ರಾಜೇಶ್ ರೈ ಪರ್ಪುಂಜ, ನಿತೀಶ್ ಕುಮಾರ್ ಶಾಂತಿವನ, ಹರೀಶ್ ಬಿಜತ್ರೆ ಸೇರಿದಂತೆ ಗ್ರಾಮಸ್ಥರು ಮಾತಿನ ಮೂಲಕ ಅಭಿನಂದಿಸಿದರು. ಜೆ.ಇ ರವೀಂದ್ರರವರನ್ನು ಪಂಚಾಯತ್ನಿಂದ ಸನ್ಮಾನಿಸುವ ಕೆಲಸ ಆಗಬೇಕು ಎಂದು ಮಹಮ್ಮದ್ ಅಡ್ಕ ತಿಳಿಸಿದರು. ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಶಾಸಕರಿಗೆ ಹಾಗೂ ಮೇಲಾಧಿಕಾರಿಗಳಿಗೆ ಬರೆದುಕೊಳ್ಳುವಂತೆ ಯೂಸುಫ್ ಮೈದಾನಿಮೂಲೆ ತಿಳಿಸಿದರು.
ಮರಳು, ಕೆಂಪು ಕಲ್ಲು ನಿಯಮ ಸಡಿಲಿಕೆ ಆಗಬೇಕು, 9/11 ಪಂಚಾಯತ್ನಲ್ಲೇ ಸಿಗಬೇಕು
ಮರಳು ಮತ್ತು ಕೆಂಪು ಕಲ್ಲಿನ ಮೇಲೆ ಸರಕಾರ ಹೇರಿದ್ದ ನಿಯಮಗಳಿಂದ ಬಡ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ದುಪ್ಪಟ್ಟು ಹಣ ಕೊಟ್ಟು ಕಲ್ಲು, ಮರಳು ಖರೀದಿಸಬೇಕಾದ ಪ್ರಸಂಗ ಬಂದಿದೆ. ಇದರಿಂದ ಬಡವರಿಗೆ ಕಷ್ಟ ಆಗಿದೆ. ಆದ್ದರಿಂದ ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ನಿಯಮಗಳನ್ನು ಸಡಿಲಿಕೆ ಮಾಡಬೇಕು ಹಾಗೇ 9/11 ಪಂಚಾಯತ್ ಮಟ್ಟದಲ್ಲೆ ಸಿಗುವಂತಾಗಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ನಿತೀಶ್ ಕುಮಾರ್ ಶಾಂತಿವನ ಆಗ್ರಹಿಸಿದರು. ಅದರಂತೆ ನಿರ್ಣಯಿಸಲಾಯಿತು.
ದರ್ಬೆತ್ತಡ್ಕ ಶಾಲೆಯಲ್ಲಿ ಪೊಲೀಸ್ ಸೂಚನಾ ಫಲಕ ಹಾಕಿದ್ದಕ್ಕೆ ವಿರೋಧ
ದರ್ಬೆತ್ತಡ್ಕ ಶಾಲೆಯಲ್ಲಿ ಶಾಲಾ ವಠಾರದಲ್ಲಿ ಪೊಲೀಸ್ ಸೂಚನಾ ಫಲಕ ಹಾಕಿದ್ದಕ್ಕೆ ಕೆಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಹಳೆ ವಿದ್ಯಾರ್ಥಿ ಸಂಘದವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ವಾಟ್ಸಫ್ ಗ್ರೂಪ್ನಲ್ಲಿ ವಿರೋಧದ ರೀತಿಯಲ್ಲಿ ಬರಹಗಳನ್ನು ಬರೆದು ಹಾಕಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶುಭಕರ ನಾಯಕ್ರವರು ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ಅಧಿಕಾರಿ ನೀವು ಈ ಬಗ್ಗೆ ಲಿಖಿತವಾಗಿ ಠಾಣೆಗೆ ದೂರು ಕೊಡಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು. ಇದಕ್ಕೆ ಶುಭಕರ ನಾಯಕ್ರವರು ನಾವು ಎಸ್ಡಿಎಂಸಿ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಪೊಲೀಸ್ ಇಲಾಖೆಯ ಸಹಕಾರ ಕೂಡ ನಮಗೆ ಬೇಕು ಎಂದು ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಮಹೇಶ್ ರೈ ಕೇರಿ, ವಿನೋದ್ ಶೆಟ್ಟಿ ಮುಡಾಲ, ಲತೀಫ್ ಕುಂಬ್ರ, ಸಿರಾಜುದ್ದೀನ್, ಸುಂದರಿ, ನಳಿನಾಕ್ಷಿ, ರೇಖಾ ಯತೀಶ್, ಶಾರದಾ ಆಚಾರ್ಯ, ನಿಮಿತಾ ರೈ ಉಪಸ್ಥಿತರಿದ್ದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಕೆ. ಸ್ವಾಗತಿಸಿ, ಪಂಚಾಯತ್ ಮಾಹಿತಿ ನೀಡಿದರು ಹಾಗೂ ನಿರ್ಣಯಗಳನ್ನು ದಾಖಲಿಸಿಕೊಂಡರು. ಕಾರ್ಯದರ್ಶಿ ಜಯಂತಿ ಗತ ಸಭೆಯ ವರದಿ ಹಾಗೂ ವಾರ್ಡ್ ಸಭೆಯ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು. ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ, ಲೋಕನಾಥ, ಸಿರಿನಾ, ಮೋಹನ್ ಕೆ.ಪಿ ಸಹಕರಿಸಿದ್ದರು.
ಕುಂಬ್ರಕ್ಕೆ ಸಿಟಿ ಬಸ್ಸು ಬರಲಿ
ಈ ಹಿಂದೆ ಕುಂಬ್ರಕ್ಕೆ ಸಿಟಿ ಬಸ್ಸಿನ ವ್ಯವಸ್ಥೆ ಇತ್ತು ಆದರೆ ಈಗ ಬರ್ತಾ ಇಲ್ಲ ಇದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಬೆಳಗ್ಗಿನ ಜಾವ ಎಲ್ಲಾ ಬಸ್ಸುಗಳು ರಷ್ ಇರುವುದರಿಂದ ಬಸ್ಸು ನಿಲ್ಲಿಸದೆ ಹೋಗುವುದರಿಂದ ಕುಂಬ್ರ, ಪರ್ಪುಂಜ, ಸಂಟ್ಯಾರು ಈ ಭಾಗದಿಂದ ಪುತ್ತೂರಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕುಂಬ್ರಕ್ಕೆ ಸಿಟಿ ಬಸ್ಸಿನ ವ್ಯವಸ್ಥೆಯನ್ನು ಮಾಡಿಕೊಡುವಂತೆ ಮಹಮ್ಮದ್ ಕೆ.ಎ ಅಡ್ಕ, ಯೂಸುಫ್ ಮೈದಾನಿಮೂಲೆ ಮತ್ತಿತರರು ಮನವಿ ಮಾಡಿಕೊಂಡರು. ಈ ಬಗ್ಗೆ ಸಾರಿಗೆ ಇಲಾಖೆಗೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.
ಒಳ್ಳೆಯ ಅಧಿಕಾರಿಗೆ ನೆಲೆ ಇಲ್ಲವೇ…?! ಒಳಮೊಗ್ರು ಗ್ರಾಪಂಗೆ ಖಾಯಂ ಪಿಡಿಒ ಬೇಕು
ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಅವಿನಾಶ್ ಬಿ.ಆರ್.ರವರು ಒಬ್ಬ ಒಳ್ಳೆಯ ಅಧಿಕಾರಿಯಾಗಿದ್ದರು ಆದರೆ ಅವರು ಇಲ್ಲಿಂದ ವರ್ಗಾವಣೆಯಾಗಿ ಹೋದದ್ದೆ ನಮಗೆ ಗೊತ್ತಿಲ್ಲ ಹಾಗಾದರೆ ಒಬ್ಬ ಒಳ್ಳೆಯ ಅಧಿಕಾರಿಗೆ ನೆಲೆಯೇ ಇಲ್ಲವೇ ಎಂದು ಮಹಮ್ಮದ್ ಕೆ.ಎ ಅಡ್ಕ, ಮಹಮ್ಮದ್ ಬೊಳ್ಳಾಡಿ ಸಹಿತ ಹಲವು ಮಂದಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾಪಂ ಎ.ಡಿ ವಿಲ್ಪ್ರೆಡ್ರವರು, ಇದು ಸರಕಾರದ ಆದೇಶವಾಗಿದೆ. ಅವರನ್ನು ಎಂಎಲ್ಸಿಯವರ ಆಪ್ತ ಕಾರ್ಯದರ್ಶಿಯಾಗಿ ಸರಕಾರ ನೇಮಕಗೊಳಿಸಿ ಆದೇಶ ನೀಡಿತ್ತು ಅದರಂತೆ ಅವರು ಹೋಗಿದ್ದಾರೆ ಎಂದು ತಿಳಿಸಿದರು. ಪಂಚಾಯತ್ಗೆ ಅವರನ್ನು ಉಳಿಸಿಕೊಳ್ಳಬಹುದಿತ್ತಲ್ವಾ, ಈ ಹಿಂದೆ ಕೂಡ ಒಮ್ಮೆ ಹೋಗಿದ್ದರು ಮತ್ತೆ ಬಂದರು ಇದೀಗ ಮತ್ತೆ ಹೋಗಿದ್ದಾರೆ ಸಭೆಯಲ್ಲಿ ಅವರೇ ಬೇಕು ಎಂದು ನಿರ್ಣಯ ಮಾಡಿ ಉಳಿಸಿಕೊಳ್ಳಲು ಯಾಕೆ ಆಗಿಲ್ಲ, ಪಂಚಾಯತ್ಗೆ ಬಂದ ಪಿಡಿಒಗಳನ್ನು ಮೂರು ತಿಂಗಳಿಗೊಮ್ಮೆ ವರ್ಗಾವಣೆ ಮಾಡಲಾಗುತ್ತಿದೆ. ಇದು ಸರಿಯಾ ಎಂದು ಮಹಮ್ಮದ್ ಅಡ್ಕ ಪ್ರಶ್ನಿಸಿದರು. ಈ ರೀತಿಯಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಾ ಇದ್ದರೆ ಅಭಿವೃದ್ಧಿ ಕೆಲಸಗಳು ಹೇಗೆ ಆಗೋದು, ಇದರಿಂದ ಗ್ರಾಮಸ್ಥರಿಗೆ ತೊಂದರೆ ಆಗುತ್ತದೆ ತಕ್ಷಣವೇ ಗ್ರಾಪಂಗೆ ಖಾಯಂ ಪಿಡಿಒ ನೇಮಕ ಮಾಡುವಂತೆ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಯೂಸುಫ್ ಮೈದಾನಿಮೂಲೆಯವರು, ನಮಗೆ ಅವರೇ ಆಗಬೇಕೆಂದಿಲ್ಲ ಯಾರೇ ಪಿಡಿಒ ಬಂದರು ಸರಿಯೇ ಆದರೆ ಬಂದವರನ್ನು ಮೂರು ತಿಂಗಳಿಗೊಮ್ಮೆ ವರ್ಗಾವಣೆ ಮಾಡುವುದು ಸರಿಯಲ್ಲ, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.
ಪರ್ಪುಂಜದಲ್ಲಿ ಸ್ನೇಹ ಯುವಕ ಮಂಡಲದಿಂದ ಬಸ್ಸು ತಂಗುದಾಣ ನಿರ್ಮಿಸಲು ಅವಕಾಶ ಕೊಡಿ :ರಾಜೇಶ್ ರೈ ಪರ್ಪುಂಜ ಕೋರಿಕೆ
ಪರ್ಪುಂಜದಲ್ಲಿ ಪ್ರಯಾಣಿಕರ ಬಸ್ಸು ತಂಗುದಾಣಬೇಕು ಎಂದು ಕಳೆದ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದೇವೆ, ಆದರೆ ಇದುವರೆಗೆ ಬಸ್ಸು ತಂಗುದಾಣ ಆಗಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಸಾರಥ್ಯದಲ್ಲಿ ಬಸ್ಸು ತಂಗುದಾಣ ನಿರ್ಮಿಸುತ್ತೇವೆ. ಇದಕ್ಕೆ ಅನುಮತಿ ಕೊಡ್ತೀರಾ ಎಂದು ಸ್ನೇಹ ಯುವಕ ಮಂಡಲ, ಮಹಿಳಾ ಮಂಡಲದ ಗೌರವ ಸಲಹೆಗಾರ, ಸಾಮಾಜಿಕ ಕಾರ್ಯಕರ್ತ ರಾಜೇಶ್ ರೈ ಪರ್ಪುಂಜ ಕೇಳಿದರು. ಇದಕ್ಕೆ ಉತ್ತರಿಸಿದ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು, ಯುವಕ ಮಂಡಲದವರು ಪಂಚಾಯತ್ನೊಂದಿಗೆ ಕೈ ಜೋಡಿಸಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
“5 ವರ್ಷದ ಅವಧಿಯಲ್ಲಿ ಒಳಮೊಗ್ರು ಒಂದು ಮಾದರಿ ಗ್ರಾಮ ಪಂಚಾಯತ್ಗೆ ಆಗಿ ಮೂಡಿಬಂದಿದ್ದು ಸುಮಾರು 50 ಕೋಟಿ ರೂಪಾಯಿಗಿಂತಲೂ ಅಧಿಕ ಅನುದಾನಗಳನ್ನು ವಿವಿಧ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗಿದೆ. ಗಾಂಧಿ ಗ್ರಾಮ ಪುರಸ್ಕಾರ, ಸ್ವಚ್ಛತಾ ಸ್ಲೋಗನ್ ಜಿಲ್ಲಾ ಮಟ್ಟದ ಪ್ರಶಸ್ತಿ, ಸ್ವಚ್ಛ ಸಂಸ್ಕೃತಿ ನಮ್ಮ ಸಂಸ್ಕೃತಿಯಲ್ಲಿ ತಾಲೂಕಿನಲ್ಲಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ನಮ್ಮ ಅವಧಿಯಲ್ಲಿ ಗ್ರಾಪಂ ಕಛೇರಿ ಕಟ್ಟಡ, ಸ್ವಚ್ಛ ಸಂಕೀರ್ಣ ಘಟಕ, ಕೆರೆ ಅಭಿವೃದ್ಧಿ ಇತ್ಯಾದಿ ಆಗಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಮೇಲ್ಛಾವಣಿಯಲ್ಲಿ ಸಭಾಂಗಣ ನಿರ್ಮಾಣ ಹಾಗೂ ಗ್ರಂಥಾಲಯ ಕಟ್ಟಡ ಕೆಲಸ ಆಗಲಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರ ಸಹಕಾರ ಅತೀ ಅಗತ್ಯ. ತಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳೊಂದಿಗೆ ಮುಂದೆಯೂ ಸಹಕಾರ ಬಯಸುತ್ತೇವೆ.”
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಮ ಪಂಚಾಯತ್
