ಮಹೇಶ್ ಶೆಟ್ಟಿ ತಿಮರೋಡಿಗೆ ಶೀಘ್ರ ಜಾಮೀನಿಗಾಗಿ ಅಭಿಮಾನಿಗಳಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

0

ಸಂತೋಷ್ ಬಿ.ಎಲ್, ಹರೀಶ್ ಪೂಂಜಾ ಅವರ ಮೇಲೂ ಕೇಸ್ ಆಗಬೇಕಾಗಿತ್ತು – ಅಭಿನವ ಭಾರತ ಮಿತ್ರಮಂಡಳಿ

ಪುತ್ತೂರು: ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಬಂಧನದಿಂದ ಶೀಘ್ರ ಜಾಮೀನು ಸಿಗುವಂತೆ ಅವರ ಅಭಿಮಾನಿ ಬಳಗ ಮತ್ತು ಅಭಿನವ ಭಾರತ ಮಿತ್ರಮಂಡಳಿಯಿಂದ ಆ.22ರಂದು ಬೆಳಗ್ಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮತ್ತು ರುದ್ರಾಭಿಷೇಕ ಸೇವೆ ಮಾಡಲಾಯಿತು.


ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದಲ್ಲಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬಂಧನವಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದಾಗ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇದೀಗ ಪುತ್ತೂರಿನಲ್ಲಿ ಅವರ ಅಭಿಮಾನಿ ಬಳಗ ಮತ್ತು ಅಭಿನವ ಭಾರತ ಮಿತ್ರಮಂಡಳಿಯಿಂದ ದೇವಳದಲ್ಲಿ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭ ಅಭಿನವ ಭಾರತ ಮಿತ್ರ ಮಂಡಳಿಯ ಧನ್ಯ ಕುಮಾರ್ ಬೆಳಂದೂರು, ನವೀನ್ ಕುಲಾಲ್ ಮತ್ತಿತರರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಲಾಯಿತು. ಅರ್ಚಕ ಉದಯ ಭಟ್ ಪ್ರಾರ್ಥನೆ ನೆರವೇರಿಸಿದರು.


ಕ್ಷೇತ್ರಕ್ಕೆ ಅಪಪ್ರಚಾರ ತಪ್ಪು ಅಭಿಪ್ರಾಯ
ಮಾಧ್ಯಮದ ಮುಂದೆ ನವೀನ್ ಕುಲಾಲ್ ಅವರು ಮಾತನಾಡಿ ಧರ್ಮಸ್ಥಳದಲ್ಲಿ ಕಳೆದ ಹಲವಾರು ವರ್ಷಗಳಿಂದ ಆಗುತ್ತಿರುವ ಅತ್ಯಾಚಾರ, ಹತ್ಯೆ ಇರಬಹುದು. ಈ ವಿಚಾರವಾಗಿ ಸೌಜನ್ಯನ ಹತ್ಯೆಯಾದ ಬಳಿಕ ಆಕೆಯ ಕುಟುಂಬಕ್ಕೆ ನ್ಯಾಯಾಕ್ಕಾಗಿ ಮತ್ತು ಅಲ್ಲಿ ಆದಂತಹ ಇತರ ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ನಿಜವಾದ ಹಿಂದು ಕಾರ್ಯಕರ್ತರನಾಗಿ ಹೋರಾಟ ಮಾಡುತ್ತಿದ್ದಾರೆ. ಈ ಸಂದರ್ಭ ಹಿಂದು ಸಮಾಜ ಅವರ ಹಿಂದೆ ನಿಂತಿದೆ. ಆದರೆ ಅದನ್ನು ಧರ್ಮಸ್ಥಳ ಕ್ಷೇತ್ರಕ್ಕೆ ಅಪಮಾನ ಎಸಗುತ್ತಿದ್ದಾರೆಂಬ ರೀತಿಯಲ್ಲಿ ಗೊಂದಲವನ್ನು ಜನರಲ್ಲಿ ತಪ್ಪು ಅಭಿಪ್ರಾಯವನ್ನು ಸೃಷ್ಟಿಸುವ ಕೆಲಸ ಒಂದು ಹಂತದಲ್ಲಿ ನಡೆಯುತ್ತಿದೆ. ಅದರ ವಿರುದ್ಧವಾಗಿ ನಿಜವಾದ ಹಿಂದು ಹೋರಾಟಗಾರರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಮಾನ ಆಗದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಕೂಡಾ ಎಸ್.ಐ.ಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ಈ ನಡುವೆ ವಿಘ್ನಸಂತೋಷಿಗಳು ಇದರಲ್ಲಿ ರಾಜಕೀಯ ಮಾಡುವ ಮೂಲಕ ತಿಮರೋಡಿಯವರ ನಿಜವಾದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಬಿ.ಎಲ್.ಸಂತೋಷ್ ಅವರ ಮೇಲೆ ಹೇಳಿಕೆ ಆಧಾರದಲ್ಲಿ ಕ್ಷುಲಕ ಕಾರಣಕ್ಕೆ ತಿಮರೋಡಿಯವರನ್ನು ಬಂಧಿಸಿದ್ದಾರೆ. ಈ ಬಂಧನದಿಂದ ಅವರು ಶೀಘ್ರ ಬಿಡುಗಡೆಗೊಳ್ಳಬೇಕು. ಹಿಂದು ಸಮಾಜಕ್ಕೆ ಮತ್ತೆ ಅವರು ಶಕ್ತಿ ತುಂಬಬೇಕು. ಇಡೀ ಹಿಂದು ಸಮಾಜ ಅವರ ಜೊತೆಗಿದೆ ಎಂದು ತೋರಿಸುವ ನಿಟ್ಟಿನಲ್ಲಿ ನಾವು ಇವತ್ತು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


ಬಿಎಲ್ ಸಂತೋಷ್ ಅವರು ಹಲವು ವೇದಿಕೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಕ್ಕಿಂತಲೂ ಹೆಚ್ಚಿನ ಶಬ್ದಗಳನ್ನು ಪ್ರಯೋಗ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಮೇಲೂ ಕೇಸ್ ಆಗಬೇಕಾಗಿತ್ತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೂ ಕೇಸ್ ಆಗಬೇಕಾಗಿತ್ತು. ಕಾನೂನು ಎಲ್ಲರಿಗೂ ಒಂದೆ ಅಲ್ವಾ ಎಂದು ಅಭಿಮಾನಿಗಳು ಮತ್ತು ಅಭಿನವ ಭಾರತ ಮಿತ್ರಮಂಡಳಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

LEAVE A REPLY

Please enter your comment!
Please enter your name here