30 ಸಾವಿರ ಮೋದಕ ಸಮರ್ಪಣೆಗೆ ಸಿದ್ದತೆ
ನೆಲ್ಯಾಡಿ: ಬಯಲು ಆಲಯದಲ್ಲಿರುವ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಆ.27ರಂದು ಭಕ್ತ ಮಹಾಜನರ ಸಹಕಾರದೊಂದಿಗೆ 108 ಕಾಯಿ ಗಣಹೋಮ, ರಂಗಪೂಜೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೆ.ತಿಳಿಸಿದ್ದಾರೆ.
ಬೆಳಿಗ್ಗೆ 8 ರಿಂದ 108 ಕಾಯಿ ಗಣಹೋಮ, ರಂಗಪೂಜೆ ಸಹಿತ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಮೋದಕ ತಯಾರಿ;
ಗಣೇಶ ಚತುರ್ಥಿ ಪ್ರಯುಕ್ತ ಇಲ್ಲಿನ ಶ್ರೀ ಮಹಾಗಣಪತಿಗೆ 30 ಸಾವಿರ ಮೋದಕ ಸಮರ್ಪಣೆಗೆ ಸಿದ್ಧತೆ ಮಾಡಲಾಗುತ್ತಿದೆ. ದಿನೇಶ್ ಮೆಹಂದಳೆ ಅವರ ನೇತೃತ್ವದಲ್ಲಿ 100 ಬಾಣಸಿಗರ ತಂಡ ಸೋಮವಾರ ಬೆಳಿಗ್ಗೆ 6 ರಿಂದ ಸಂಜೆ 8ರವರೆಗೆ ಶ್ರಮಿಸಿ 30 ಸಾವಿರ ಮೋದಕ ತಯಾರಿಸಿದೆ. ಇದಕ್ಕೆ 6೦೦ ತೆಂಗಿನ ಕಾಯಿ, 23೦ ಕೆಜಿ ಬೆಲ್ಲ, 5೦ ಲೀಟರ್ ತುಪ್ಪ ಹಾಗೂ 2.5 ಕ್ವಿಂಟಾಲ್ ಮೈದಾ ಬಳಸಿಕೊಳ್ಳಲಾಗಿದೆ. 30ಸಾವಿರ ಮೋದಕಗಳನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಸಮರ್ಪಿಸಲಾಗುತ್ತದೆ.
ಅಪ್ಪ ಕಜ್ಜಾಯಕ್ಕೆ ಸಿದ್ಧತೆ;
60 ಸಾವಿರ ಅಪ್ಪ ಕಜ್ಜಾಯ ತಯಾರಿಯೂ ನಡೆಯುತ್ತಿದೆ. ಇದಕ್ಕಾಗಿ 5 ಕ್ವಿಂಟಾಲ್ ಗೋಧಿ ಹಿಟ್ಟು, 5 ಕ್ವಿಂಟಾಲ್ ಬೆಲ್ಲ, 1 ಕ್ವಿಂಟಾಲು ಸಕ್ಕರೆ, 7೦೦ ತೆಂಗಿನಕಾಯಿ, 275 ಲೀಟರ್ ತುಪ್ಪ ಬಳಸಿಕೊಳ್ಳಲಾಗುತ್ತಿದೆ. ಸುಮಾರು 15 ಮಂದಿ ಇದರ ತಯಾರಿಯಲ್ಲಿ ತೊಡಗಿದ್ದಾರೆ. ಇದಲ್ಲದೆ ಹಬ್ಬದ ದಿನದಂದು ವಿಶೇಷ ಪ್ರಸಾದವಾಗಿ 12 ಸಾವಿರ ಅವಲಕ್ಕಿ ಪಂಚಕಜ್ಜಾಯ ತಯಾರಿಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 5,೦೦೦ ತೆಂಗಿನಕಾಯಿ, 3,6೦೦ ಕೆಜಿ ಅವಲಕ್ಕಿ ಹಾಗೂ 1,2೦೦ ಕೆಜಿ ಬೆಲ್ಲ ಬಳಸಲಾಗುತ್ತಿದೆ. ಜೊತೆಗೆ 4 ಕ್ವಿಂಟಾಲ್ ಕಡಲೆ ಪಂಚಕಜ್ಜಾಯ ಮತ್ತು 5,೦೦೦ ಲಾಡುಗಳ ತಯಾರಿಯೂ ಮಾಡಿಕೊಳ್ಳಲಾಗಿದೆ. ಸುಮಾರು 7 ಸಾವಿರ ಭಕ್ತರಿಗೆ ಅನ್ನಸಂತರ್ಪಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಕ್ತರ ದಂಡೇ ಆಗಮನ;
ಗಣೇಶ ಚತುರ್ಥಿಯಂದು ಶ್ರೀ ಕ್ಷೇತ್ರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ಲೋಪವಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವ್ಯವಸ್ಥಾಪನಾ ಸಮಿತಿ ಕಾರ್ಯಪ್ರವೃತ್ತವಾಗಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಶಬರಾಯ ಕೆ, ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ವಿಶ್ವನಾಥ ಕೆ ಕೊಲ್ಲಾಜೆ, ಪ್ರಮೋದ್ ಕುಮಾರ್ ಶೆಟ್ಟಿ, ಗಣೇಶ್ ಕಾಶಿ, ಪ್ರಶಾಂತ್ ಮಚ್ಚಿನ, ಹರಿಶ್ಚಂದ್ರ ಜಿ, ಲೋಕೇಶ್ವರಿ ವಿನಯಚಂದ್ರ, ಸಿನಿಗುರುದೇವನ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಿದ್ಧತೆಗಳನ್ನು ಮಾಡಲಾಗಿದೆ.