ಪುತ್ತೂರು: ವೀರಮಂಗಲದ ಶ್ರೀಕೃಷ್ಣ ಕಲಾ ಕೇಂದ್ರದ ೨೨ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆ.24ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಮನೋರಂಜನಾ ಸ್ಪರ್ಧೆಗಳೊಂದಿಗೆ ನಡೆದ 5ನೇ ವರ್ಷದ ಶ್ರೀಕೃಷ್ಣ ಲೀಲೋತ್ಸವವು ಮೇಳೈಸಿತು.
ಬೆಳಿಗ್ಗೆ ಶ್ರೀವಿಷ್ಣು ಸಹಸ್ರನಾಮಾರ್ಚನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.ನಂತರ ವೀರಮಂಗಲ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ ನಡೆದ ಬಳಿಕ ಸಾರ್ವಜನಿಕರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬೆಳಿಯಪ್ಪ ಗೌಡ ಪೆಲತ್ತಡಿ ಉದ್ಘಾಟಿಸಿದರು. ಬಳಿಕ ಅಂಗನವಾಡಿ ಪುಟಾಣಿಗಳು, ಕಿರಿಯ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆದವು. ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ನೂರಾರು ಮಂದಿ ಉತ್ಸಾಹದಲ್ಲಿ ಭಾಗವಹಿಸಿ ಸ್ಪರ್ಧೆಯ ಜೊತೆಗೆ ಮನೋರಂಜನೆಯು ದೊರೆಯಿತು. ಸಂಜೆ ಶ್ರೀಕೃಷ್ಣ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ನೃತ್ಯಾರ್ಚನೆ ನೆರವೇರಿತು.
ಧಾರ್ಮಿಕ ಸಭೆ:
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ದ.ಕ ಜಿಲ್ಲಾ ಸಂಸ್ಕಾರ ಭಾರತಿಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಪರಂಗಿಪೇಟೆ ಕಲೆಗೆ ವಿಶೇಷ ಶಕ್ತಿಯಿದೆ. ಅದು ಮನಸ್ಸನ್ನು ಅರಳಿಸುತ್ತದೆ. ನೃತ್ಯದಲ್ಲಿ ಭಾಗವಹಿಸಿದ ಮಗುವಿನ ಭಾವನೆಯಲ್ಲಿ ಭಗವಂತನ ಸ್ವರೂಪ ಕಾಣಲಾಗುತ್ತದೆ. ಕಲೆಯ ಮೂಲಕ ಮಾನಸಿಕ, ದೈಹಿಕ ವಿಕಸನವಾಗುತ್ತದೆ. ಕಲೆಯಲ್ಲಿ ತೊಡಗಿಸಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದ ಉದಾಹರಣೆಯೇ ಇಲ್ಲ. ಅವರು ಎಲ್ಲಾ ಕ್ಷೇತ್ರದಲ್ಲಿಯೂ ಮಕ್ಕಳು ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ವೀರಮಂಗಲ ಪಿಎಂಶ್ರೀ ಶಾಲಾ ಸಹಶಿಕ್ಷಕಿ ಶ್ರೀಲತಾ ಸುಹಾಸ್ ಹೆಬ್ಬಾರ್ ಶಾಂತಿಗೋಡು ಮಾತನಾಡಿ, ಶ್ರೀಕೃಷ್ಣ ಲೀಲೋತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸುವ ಜೊತೆಗೆ ಶ್ರೀಕೃಷ್ಣನ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಮಾತನಾಡಿ, ಸಂಗೀತ, ನೃತ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಭಗವಂತನ ಆರಾಧನೆಯ ಜೊತೆಗೆ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗಲಿದೆ. ವಿದ್ಯಾರ್ಥಿಗಳ ಜೀವನದ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಭಕ್ತಕೋಡಿ ಎಸ್.ಜಿ.ಎಂ ಪ್ರೌಢಶಾಲಾ ಸಹಶಿಕ್ಷಕ ಮೋಹನ ಕುಮಾರ್ ಎನ್ ಹಾಗೂ ಕಾಣಿಯೂರು ರಾಶಿ ಕಾಂಪ್ಲೆಕ್ಸ್‌ನ ಮ್ಹಾಲಕ ಚಂದ್ರಶೇಖರ ಗೌಡ ಮಾತನಾಡಿ, ಶುಭಹಾರೈಸಿದರು. ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬೆಳಿಯಪ್ಪ ಗೌಡ ಪೆಲತ್ತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರಿರಾಮಾವತಾರ ಸಾಹಿತ್ಯ ಬಿಡುಗಡೆ:
ಶ್ರೀಕೃಷ್ಣ ಕಲಾ ಕೇಂದ್ರದ ನೃತ್ಯಗುರು ವಿದ್ವಾನ್ ಗೋಪಾಲಕೃಷ್ಣ ವೀರಮಂಗಳ ರಚಿಸಿ, ನಿರ್ದೇಶಿಸಿದ ನೃತ್ಯರೂಪಕ ‘ಶ್ರೀರಾಮವಾತಾರ’ದ ಸಾಹಿತ್ಯವನ್ನು ಪುತ್ತೂರು ಶಾರದಾ ಕಲಾ ಕೇಂದ್ರ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ.ಎಲ್ ಭಟ್ ಬಿಡುಗಡೆ ಮಾಡಿದರು.
ಸನ್ಮಾನ:
ಭರತನಾಟ್ಯದಲ್ಲಿ ಅಗ್ನಿಸಾಹಸ ನೃತ್ಯದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ನೃತ್ಯಗುರು ವಿದುಷಿ ಸಂಧ್ಯಾಗಣೇಶ್ ಗೌಡ ಕೈಂತಿಲ ವಿಟ್ಲರವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸರಕಾರದ ಗಂಗೂಬಾಯಿ ಹಾನಗಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ೨೦೨೪ರಲ್ಲಿ ನಡೆದ ಭರತನಾಟ್ಯ ಸೀನಿಯರ್ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರಿಯಶ್ರೀ ಆಕಾಶ್ ಸೂತ್ರಬೆಟ್ಟು, ನವ್ಯ ಸವಣೂರು, ದಿವ್ಯಾ ಸವಣೂರು, ಮಧುಶ್ರೀ ಭಕ್ತಕೋಡಿ, ಸ್ವಾತಿ ಆಚಾರ್ಯ ಪುರುಷರಕಟ್ಟೆ, ಜೂನಿಯರ್ ವಿಭಾಗದಲ್ಲಿ ಸಿಂಚನಾ ಆಚಾರ್ಯ ಆನಾಜೆ, ಕೃತಿಕಾ ಆಚಾರ್ಯ ಕೆದ್ಕಾರ್, ಕೃಪಾ ಎಲ್.ಎಸ್ ಸರ್ವೆ, ಕೃಪಾಲಿ ಸವಣೂರು, ಸುವಿಜ್ಞಾ ರೆಂಜಲಾಡಿ, ಸಿಂಚನಾ ಭಕ್ತಕೋಡಿ, ಚಿಂತನಾ ಪುರುಷರಕಟ್ಟೆ ಇವರನ್ನು ಗೌರವಿಸಲಾಯಿತು.
ಶ್ರೀಕೃಷ್ಣ ಕಲಾಕೇಂದ್ರದ ಅಧ್ಯಕ್ಷ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ಸ್ವಾಗತಿಸಿದರು. ಕಲಾ ಕೇಂದ್ರದ ಪೋಷಕರಾದ ಹರೀಶ್ ಮಣ್ಣುಗುಂಡಿ, ಪೋಷಕಿ ಸ್ಮಿತಾ, ವಿಶ್ಚಸ್ಥ ಮಂಡಳಿ ಆಧ್ಯಕ್ಷ ಹರ್ಷ ಗುತ್ತು ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಹರೀಶ್ ಆಚಾರ್ಯ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ರಚಿಸಿ, ನಿರ್ದೇಶಿಸಿದ ‘ಶ್ರೀರಾಮಾವತಾರ’ ಎಂಬ ನೃತ್ಯ ರೂಪಕ ಪ್ರದರ್ಶನಗೊಂಡಿತು. ಶ್ರೀಕೃಷ್ಣ ಕಲಾಕೇಂದ್ರ ವೀರಂಗಲ, ಭಕ್ತಕೋಡಿ ಹಾಗೂ ಕಾಣಿಯೂರು ಇದರ ವಿದ್ಯಾರ್ಥಿಗಳು ಭರತನಾಟ್ಯ, ಜಾನಪದ ನೃತ್ಯದಲ್ಲಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಶ್ರೀಕೃಷ್ಣ ಕಲಾ ಕೇಂದ್ರದ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಮೂಲಕ ಭಾರತೀಯ ಸಂಸ್ಕೃತಿಯಾದ ಭರತನಾಟ್ಯ ತರಬೇತಿ ನೀಡಲಾಗುತ್ತಿದೆ. ಕಲಾ ಕೇಂದ್ರವು ಎಲ್ಲರ ಸಹಕಾರದಿಂದ ಕಳೆದ ೨೨ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಕಳೆದ ೫ ವರ್ಷಗಳಿಂದ ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ನೀಡಲಾಗುತ್ತಿದೆ. ಶ್ರೀಕೃಷ್ಣ ಲೀಲೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದ್ದು ಇದಕ್ಕೆ ಸಂಘ ಸಂಸ್ಥೆಗಳು ಹಾಗೂ ಊರವರ ಸಹಕಾರ ದೊರೆತಿದೆ.
-ಗೋಪಾಲಕೃಷ್ಣ ವೀರಮಂಗಲ
ಅಧ್ಯಕ್ಷರು ಶ್ರೀಕೃಷ್ಣ ಕಲಾ ಕೇಂದ್ರ