ಸವಣೂರು: ಪುತ್ತೂರು-ಸವಣೂರು -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹಾದು ಹೋಗುವ ಸರ್ವೆ ಗೌರಿ ಹೊಳೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಗೌರಿಹೊಳೆಯಲ್ಲಿ ನೀರಿನ ನಡುವೆ ಇರುವ ಮರಳಿನ ರಾಶಿಯ ಮೇಲೆ ಮೊಸಳೆ ಇರುವುದನ್ನು ಸ್ಥಳೀಯ ಕೃಷಿಕರಾದ ಕೇಶವಚಂದ್ರ ಅವರು ನೋಡಿದ್ದು,ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಗೌರಿಹೊಳೆಯಲ್ಲಿ ಮೊಸಳೆ ಕಾಣಸಿಕ್ಕಿರುವುದರಿಂದ ಸ್ಥಳೀಯ ರೈತರು ಹೊಳೆ ಸಮೀಪದ ಜಮೀನುಗಳಿಗೆ ಓಡಾಡಲು ಭಯ ಪಡುವಂತಾಗಿದೆ. ಅಲ್ಲದೇ ಇದು ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಯಾವ ಸಮಯದಲ್ಲಿ ರಸ್ತೆ ಬದಿಗೆ ಬರಬಹುದೆಂಬ ಆತಂಕ ಶುರುವಾಗಿದೆ.
ಕಳೆದ ವರ್ಷದ 2024ರ ಡಿಸೆಂಬರ್‌ನಲ್ಲಿಯೂ ಈ ಹೊಳೆಯಲ್ಲಿ ಮೊಸಳೆ ಕಾಣ ಸಿಕ್ಕಿತ್ತು. ಈಗಾಗಲೇ ಈ ಭಾಗದ ಜನರು ಹಾಗೂ ಸಾರ್ವಜನಿಕರು ಕಾಡಾನೆ ಸಂಚಾರದಿಂದ ಭಯಭೀತರಾಗಿದ್ದು,ಇದರ ಮಧ್ಯೆ ಮೊಸಳೆ ಕಾಣಿಸಿದ್ದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಸರ್ವೆಯ ಗೌರಿಹೊಳೆಯ ಮೇಲಿಂದ ಕೆಲವರು ತ್ಯಾಜ್ಯ ಎಸೆಯುತ್ತಿದ್ದು ,ಇದರಿಂದಾಗಿ ಮೊಸಳೆ ಕೆಲ ಸಮಯಗಳಿಂದ ಗೌರಿಹೊಳೆಯ ಸರ್ವೆ ಸೇತುವೆ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಇದೀಗ ಗೌರಿಹೊಳೆಯಲ್ಲಿ ಮೊಸಳೆ ಕಾಣಸಿಕ್ಕಿರುವುದರಿಂದ ರೈತರಲ್ಲಿ ಜೀವ ಭಯ ಕಾಡುತ್ತಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಸೆರೆ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.