ಪುತ್ತೂರು: ಇಲ್ಲಿನ ಕೊಂಬೆಟ್ಟು ಮೈದಾನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಅಶೋಕ ಜನಮನ ಕಾರ್ಯಕ್ರಮದ ವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿದ್ದು, ಇತಿಹಾಸ ನಿರ್ಮಾಣವಾಗಿದೆ.
ಈ ಮಧ್ಯೆ ಸಂಜೆ ವೇಳೆಗೆ ಧಾರಾಕಾರ ಮಳೆ ಸುರಿದ ಪರಿಣಾಮ ವಸ್ತ್ರ ಪಡೆದುಕೊಳ್ಳುವ ತರಾತುರಿಯಲ್ಲಿ ನೂಕುನುಗ್ಗಲು ಉಂಟಾಗಿ ಕೆಲವರು ಅಸ್ವಸ್ಥಗೊಂಡ ಘಟನೆಯೂ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಂಘಟಕರು ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ಸೇರಿಸಿ,ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ನಿರೀಕ್ಷೆಗಿಂತ ಹೆಚ್ಚು ಜನರು ಕಾರ್ಯಕ್ರಮಕ್ಕೆ ಬಂದಿದ್ದು ಒಂದೆಡೆಯಾದ್ರೆ ಸಿಎಂ ಆಗಮನ ತುಸು ವಿಳಂಬವಾದುದರಿಂದ ವಸ್ತ್ರ ವಿತರಣೆ ಮತ್ತು ಅನ್ನದಾನವೂ ವಿಳಂಬವಾಗಿತ್ತು. ಸಂಜೆ ವೇಳೆ ಗುಡುಗು ಸಹಿತ ಧಾರಾಕಾರ ಮಳೆಯೂ ಸುರಿದ ಪರಿಣಾಮ ಕಾರ್ಯಕ್ರಮಕ್ಕೆ ಬಂದವರು ಮನೆ ಸೇರುವ ಧಾವಂತದಲ್ಲಿ ನೂಕುನುಗ್ಗಲು ಉಂಟಾಗಲು ಕಾರಣವಾಯಿತು.
ಸಿಎಂ ಸಿದ್ಧರಾಮಯ್ಯ ತೆರಳಿದ ನಂತರ ಏಕಾಏಕಿ ಧಾರಾಕಾರ ಮಳೆ ಬಂದು,ಗೊಂದಲ ಉಂಟಾಗಿತ್ತು. ಸಂಘಟಕರು,ಸ್ವಯಂಸೇವಕರು ಯಾರಿಗೂ ತೊಂದರೆಯಾಗದಂತೆ ಕೂಡಲೇ ಕಾರ್ಯಪ್ರವೃತ್ತರಾಗಿ ಅಪಾಯವನ್ನು ತಪ್ಪಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ ರದ್ದು:
ಮಧ್ಯಾಹ್ನದ ನಂತರ ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಳೆಯ ಕಾರಣ ರದ್ದುಪಡಿಸಲಾಯಿತು. ಕೆಲಮಕ್ಕಳು ಪೋಷಕರಿಂದ ತಪ್ಪಿಸಿಕೊಂಡಿದ್ದು ಮಕ್ಕಳನ್ನು ಅವರ ಮನೆಯವರಿಗೆ ಸೇರಿಸುವ ಕಾರ್ಯದಲ್ಲಿ ಸಂಘಟಕರು ತೊಡಗಿದ್ದಾರೆ.
10 ಮಹಿಳೆಯರು ಅಸ್ವಸ್ಥ:
ಆಹಾರ ಮತ್ತು ಗಿಫ್ಟ್ ವಿಳಂಬವಾಗಿ ನೀಡಿದ ಕಾರಣ ಹೈಪೊಗ್ಲೇಸಮೀಯ ಅಥವಾ ಡಿಹೈಡ್ರೇಷನ್ ಉಂಟಾಗಿದೆ, 3ಮಹಿಳೆಯರಿಗೆ ಐ.ವಿ. ಫ್ಲೂಯಿಡ್ಸ್ ನೀಡಲಾಗಿದ್ದು 7 ಜನ ಮಹಿಳೆಯರು ಈಗಾಗಲೇ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿರುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.