ಪುತ್ತೂರು: ಕೆ.ಸಿ.ಪ್ರಭು ಸಂಗ್ರಹಿಸಿ ಬರೆದ ’ಮಹಾಪೂರ್ಣ ಕುಂಭಮೇಳ-2025’ ಕೃತಿಯನ್ನು ಆ.23 ರಂದು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಅವರು ಲೋಕಾರ್ಪಣೆಗೊಳಿಸಿದರು.
ಕೆಸಿಪಿ ಪಬ್ಲಿಕೇಶನ್ಸ್ ಮತ್ತು ರಾಮಕೃಷ್ಣ ಮಿಶನ್ ಸಹಯೋಗದೊಂದಿಗೆ ರಾಮಕೃಷ್ಣ ಮಿಶನ್ನ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಈ ಪುಸ್ತಕ ಬಿಡುಗಡೆಗೊಳಿಸಲಾಗಿದ್ದು, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಪುತ್ತೂರಿನ ಆನಂದಾಶ್ರಮದ ಅಧ್ಯಕ್ಷೆ ಡಾ.ಪಿ.ಗೌರಿ ಪೈ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ತೇಜಸ್ವಿನಿ ಆಸ್ಪತ್ರೆಯ ಚೇರ್ಮೆನ್ ಪ್ರೊ.ಡಾ.ಎಂ.ಶಾಂತರಾಮ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಕೆಸಿ ಪ್ರಭುರವರ ಪತ್ನಿ ಕೆ.ಶಾಂತೇರಿ ಪ್ರಭು ಉಪಸ್ಥಿತರಿದ್ದರು.
ಕೆಸಿ ಪ್ರಭು ಪರಿಚಯ:
ಪುತ್ತೂರಿನವರಾದ ಕಾಸರಗೋಡು ಚಂದ್ರಶೇಖರ ಪ್ರಭು (ಕೆಸಿ ಪ್ರಭು) ಅವರು ಗೌಡಸಾರಸ್ವತ ಬ್ರಾಹ್ಮಣ ಕುಟುಂಬದ ಕೆ.ಪ್ರಭಾಕರ ಪ್ರಭು ಮತ್ತು ಕೆ.ಶಾಂತಾ ಪ್ರಭು ದಂಪತಿ ಪುತ್ರನಾಗಿ 1989ರ ಮೇ 27 ರಂದು ಜನಿಸಿದರು. ಕಳೆದ 50 ವರ್ಷಗಳಿಂದ ಭಾರತದ ಭ್ರಮಣವನ್ನು ಮಾಡುತ್ತಾ ಬಂದಿರುವ ಇವರು ತನ್ನ ಹೆತ್ತವರೊಂದಿಗೆ ಮತ್ತು ಕುಟುಂಬಸ್ಥರೊಂದಿಗೆ ದೇಶದ ಅನೇಕ ತೀರ್ಥಯಾತ್ರೆಗಳನ್ನು ಮಾಡಿದ್ದಾರೆ.
ಭಾರತದ ನಾಲ್ಕು ಪವಿತ್ರ ಕ್ಷೇತ್ರಗಳಾದ ಪ್ರಯಾಗರಾಜ್, ನಾಸಿಕ್, ಉಜ್ಜೈನಿ ಮತ್ತು ಹರಿದ್ವಾರದಲ್ಲಿ ನಡೆಯುವ ಕುಂಭಮೇಳಗಳಲ್ಲಿ ಭಾಗಿಯಾದ ಅಪರೂಪದ ಸುಯೋಗ ಇವರದ್ದಾಗಿದೆ. ಅರ್ಧಕುಂಭಮೇಳ, 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳಗಳಲ್ಲಿ ಭಾಗಿಯಾಗಿದ್ದ ಇವರು ಒಂದು ಪುಸ್ತಕವನ್ನೇಕೆ ಬರೆಯಬಾರದೆಂದು ಯೋಚಿಸುತ್ತಿದ್ದಾಗ 144 ವರ್ಷಗಳಿಗೊಮ್ಮೆ ಬರುವ ಮಹಾಪೂರ್ಣ ಕುಂಭಮೇಳದ ಸುದ್ದಿ ಕಿವಿಗೆ ಬಿದ್ದಿದೆ. ಇಲ್ಲಿಗೆ ಭೇಟಿ ನೀಡುವ ದೃಢ ನಿರ್ಧಾರ ಮಾಡಿದ ಪ್ರಭುರವರು ಕುಂಭಮೇಳಗಳ ಬಗ್ಗೆ ವಿವರಗಳನ್ನು, ಕಥಾನಕಗಳನ್ನು ಹಾಗೂ ಉಲ್ಲೇಖಗಳನ್ನು ಸಂಗ್ರಹಿಸಿದರು.
ಬಳಿಕ 1 ವಾರ ಮಹಾಪೂರ್ಣ ಕುಂಭಮೇಳದಲ್ಲಿ ಭಾಗಿಯಾಗಿ ಪವಿತ್ರ ಗಂಗೆಯಲ್ಲಿ ಮಿಂದೆದ್ದು ಪಾವನರಾದರು. ಅಲ್ಲದೆ, ಅನೇಕ ಫೋಟೋಗಳನ್ನು ಸಂಗ್ರಹಿಸಿ ಪುತ್ತೂರಿಗೆ ಹಿಂದಿರುಗಿ ಪುಸ್ತಕವನ್ನೂ ರಚಿಸಿ ಬಿಡುಗಡೆಗೊಳಿಸಿದ್ದಾರೆ. ಓದಗರಿಗಾಗಿ 500 ಪ್ರತಿಗಳನ್ನು ಮುದ್ರಿಸಲಾಗಿದೆ ಎಂದು ಕೆಸಿ ಪ್ರಭುರವರು ಹೇಳಿದ್ದಾರೆ.